ಪ್ರಧಾನ ಮಂತ್ರಿಗಳೇ, ದಯವಿಟ್ಟು ಕೆಳಗಿಳಿಯಿರಿ. ನಮಗೆ ತುರ್ತಾಗಿ ಒಂದು ಸರಕಾರ ಬೇಕು: ಅರುಂಧತಿ ರಾಯ್

Update: 2021-05-04 11:03 GMT
ಫೋಟೋ ಕೃಪೆ: PTI

ನಮಗೊಂದು ಸರಕಾರ ಬೇಕು. ಬಹಳ ತುರ್ತಾಗಿ. ಈಗ ಅದು ಇಲ್ಲ. ನಾವು ಉಸಿರುಗಟ್ಟುತ್ತಿದ್ದೇವೆ. ನಾವು ಸಾಯುತ್ತಿದ್ದೇವೆ. ನಮಗೆ ನೆರವು ಸಿಗುತ್ತಿದ್ದರೂ  ಅದನ್ನು ಹೇಗೆ ಬಳಸಿಕೊಳ್ಳಬೇಕು ಎಂದು ತಿಳಿಸುವ ವ್ಯವಸ್ಥೆ ನಮ್ಮಲ್ಲಿಲ್ಲ. 

ತುರ್ತಾಗಿ ಈಗೇನು ಮಾಡಬಹುದು ? 

ನಾವು 2024 ರವರೆಗೆ ಕಾಯಲು ಸಾಧ್ಯವಿಲ್ಲ. ನಮ್ಮಂತಹವರು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಯಾವುದಾದರೂ ಸಹಾಯ ಕೇಳುವ ದಿನವೂ ಬರಬಹುದು ಎಂದು ನಾವೆಂದೂ ಊಹಿಸಿರಲಿಲ್ಲ. ವೈಯಕ್ತಿಕವಾಗಿ ನಾನಂತೂ ಜೈಲಿಗೆ ಹೋದರೂ ಅವರಲ್ಲಿ ಯಾವುದೇ ಮನವಿ ಮಾಡುತ್ತಿರಲಿಲ್ಲ. ಆದರೆ ಇವತ್ತಿನ ಸ್ಥಿತಿಯೇ ಬೇರೆ. ನಾವು ಮನೆಗಳಲ್ಲಿ, ಬೀದಿಗಳಲ್ಲಿ, ಆಸ್ಪತ್ರೆಯ ಕಾರ್ ಪಾರ್ಕಿಂಗ್ ಗಳಲ್ಲಿ, ನಗರಗಳಲ್ಲಿ, ಸಣ್ಣ ನಗರಗಳಲ್ಲಿ, ಗ್ರಾಮಗಳಲ್ಲಿ, ಕಾಡುಗಳಲ್ಲಿ, ಗದ್ದೆಗಳಲ್ಲಿ ಸಾಯುತ್ತಿದ್ದೇವೆ. ಇವತ್ತು ನಾನು ಈ ದೇಶದ ಒಬ್ಬ ಸಾಮಾನ್ಯ ನಾಗರೀಕ ಪ್ರಜೆಯಾಗಿ, ನನ್ನ ಅಹಂ ಅನ್ನು ನುಂಗಿಕೊಂಡು ಈ ದೇಶದ ಕೋಟ್ಯಂತರ ನಾಗರೀಕರ ಜೊತೆ ಸೇರಿ ಪ್ರಧಾನಿಯವರಲ್ಲಿ ಮನವಿ ಮಾಡುತ್ತಿದ್ದೇನೆ. ಸರ್, ಪ್ಲೀಸ್, ನಿಮ್ಮ ಹುದ್ದೆಯಿಂದ ಕೆಳಗಿಳಿಯಿರಿ. ಕನಿಷ್ಠ ಈಗಕ್ಕಾದರೂ ಸರಿ, ನಾನು ನಿಮ್ಮಲ್ಲಿ ಬೇಡಿಕೊಳ್ಳುತ್ತೇನೆ, ನೀವು ರಾಜೀನಾಮೆ ಕೊಡಿ. 

ಈ ಸಂಕಷ್ಟವನ್ನು ನೀವೇ ನಿರ್ಮಿಸಿದ್ದೀರಿ. ನೀವಿದನ್ನು ಪರಿಹರಿಸಲಾರಿರಿ. ನೀವಿದನ್ನು ಕೇವಲ ಇನ್ನಷ್ಟು ಕೆಡಿಸಬಲ್ಲಿರಿ. ಈ ಭಯ, ದ್ವೇಷ ಹಾಗು ಅಜ್ಞಾನದ ವಾತಾವರಣದಲ್ಲಿ ವೈರಸ್ ಇನ್ನಷ್ಟು ಬೆಳೆಯುತ್ತದೆ. ಇದ್ದಿದ್ದನ್ನು ಇದ್ದ ಹಾಗೆ ಹೇಳಿದವರ ಮೇಲೆ ನೀವು ಮುಗಿಬೀಳುವಾಗ ಅದು ಮತ್ತಷ್ಟು ಬೆಳೆಯುತ್ತದೆ. ನೀವು ಇಲ್ಲಿನ ಮಾಧ್ಯಮಗಳನ್ನೆಲ್ಲಾ ನಿಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ಕೇವಲ ಅಂತರ್ ರಾಷ್ಟ್ರೀಯ ಮಾಧ್ಯಮಗಳು ಮಾತ್ರ ವಾಸ್ತವ ಚಿತ್ರಣ ನೀಡುವಂತಹ ಪರಿಸ್ಥಿತಿಯಲ್ಲಿ ವೈರಸ್ ಇನ್ನಷ್ಟು ವ್ಯಾಪಿಸುತ್ತದೆ. ಅಧಿಕಾರಕ್ಕೆ ಬಂದ ಇಷ್ಟು ವರ್ಷಗಳಲ್ಲಿ ಒಂದೂ ಪತ್ರಿಕಾ ಗೋಷ್ಠಿ ಮಾಡದ, ಈ ಭಯಾನಕ ಪರಿಸ್ಥಿತಿಯಲ್ಲೂ  ಪ್ರಶ್ನೆಗಳನ್ನು ಎದುರಿಸುವ ಸಾಮರ್ಥ್ಯವಿಲ್ಲದ ಪ್ರಧಾನ ಮಂತ್ರಿ ಇದ್ದರೆ ವೈರಸ್ ಬೆಳೆಯುತ್ತಲೇ ಹೋಗುತ್ತದೆ. 

ನೀವೀಗ ಕೆಳಗಿಳಿಯದಿದ್ದರೆ ಈ ದೇಶದ ಸಾವಿರಾರು ಮಂದಿ ಅನಗತ್ಯವಾಗಿ ಪ್ರಾಣ ಕಳಕೊಳ್ಳುತ್ತಾರೆ. ಹಾಗಾಗಿ, ದಯವಿಟ್ಟು ಹೋಗಿ. ನಿಮ್ಮ ಜೋಲಾ ತೆಗೆದುಕೊಂಡು ಹೋಗಿಬಿಡಿ. ನಿಮ್ಮ ಗೌರವ ಉಳಿಯುತ್ತದೆ. ಧ್ಯಾನ ಮಾಡಿಕೊಂಡು ಏಕಾಂತದಲ್ಲಿ ನೀವು ಆರಾಮವಾಗಿ ಜೀವನ ಕಳೆಯಬಹುದು. ನಿಮಗೆ ಅದೇ ಬೇಕಾಗಿದೆ ಎಂದು ನೀವೇ ಹೇಳಿದ್ದೀರಿ. ಇಲ್ಲಿ ಹೀಗೆ ಸಾಮೂಹಿಕ ಸಾವು ಮುಂದುವರಿಯಲು ಬಿಟ್ಟರೆ ನಿಮಗದು ಸಿಗುವುದು ಸಾಧ್ಯವಿಲ್ಲ. 

ಸದ್ಯಕ್ಕೆ ನಿಮ್ಮ ಸ್ಥಾನ ತುಂಬಬಲ್ಲ ಹಲವರು ನಿಮ್ಮ ಪಕ್ಷದಲ್ಲಿದ್ದಾರೆ. ಈ ಸಂಕಷ್ಟದ ಸಂದರ್ಭದಲ್ಲಿ ರಾಜಕೀಯ ಪ್ರತಿಸ್ಪರ್ಧಿಗಳೊಂದಿಗೂ ಹೊಂದಾಣಿಕೆ ಮಾಡಿಕೊಂಡು ಮುಂದುವರಿಯಬೇಕು ಎಂಬ ಅರಿವು ಇರುವವರು ನಿಮ್ಮ ಪಕ್ಷದಲ್ಲಿದ್ದಾರೆ. ನಿಮ್ಮ ಪಕ್ಷದ ಮತ್ತು ಆರೆಸ್ಸೆಸ್ ನಿಂದ ಅನುಮೋದನೆ ಪಡೆದ ಅವರು ಯಾರೇ ಆಗಬಹುದು. ಅವರು ಈಗ ಸರಕಾರ ಮತ್ತು ಈ ಸಂಕಟ ನಿಭಾಯಿಸುವ ಸಮಿತಿಯ ನೇತೃತ್ವ ವಹಿಸಲಿ.  

ರಾಜ್ಯಗಳ ಮುಖ್ಯಮಂತ್ರಿಗಳು ಕೆಲವು ಪ್ರತಿನಿಧಿಗಳನ್ನು ನೇಮಿಸಲಿ. ಆಗ ಎಲ್ಲ ಪಕ್ಷಗಳಿಗೂ ಪ್ರಾತಿನಿಧ್ಯ ಸಿಕ್ಕಂತಾಗುತ್ತದೆ. ರಾಷ್ಟ್ರೀಯ ಪಕ್ಷ ಎಂಬ ನೆಲೆಯಲ್ಲಿ ಕಾಂಗ್ರೆಸ್ ಕೂಡ ಸಮಿತಿಯಲ್ಲಿರಲಿ. ಮತ್ತೆ ವಿಜ್ಞಾನಿಗಳು, ಸಾರ್ವಜನಿಕ ಅರೋಗ್ಯ ತಜ್ಞರು, ವೈದ್ಯರು, ಅನುಭವಿ ಅಧಿಕಾರಿಗಳು ಇರಲಿ. ನಿಮಗಿದು ಅರ್ಥವಾಗುವುದಿಲ್ಲ. ಇದೇ ಪ್ರಜಾಪ್ರಭುತ್ವ. ವಿಪಕ್ಷ ಮುಕ್ತ ಪ್ರಜಾಪ್ರಭುತ್ವ ಇರಲು ಅಸಾಧ್ಯ. ಅದಕ್ಕೆ ಸರ್ವಾಧಿಕಾರ ಎನ್ನುತ್ತಾರೆ. ಸರ್ವಾಧಿಕಾರ ಎಂದರೆ ಈ ವೈರಸ್ ಗೆ ಬಹಳ ಪ್ರೀತಿ. 

ನೀವು ಈಗಲೇ ಇದನ್ನು ಮಾಡದಿದ್ದರೆ ಈಗ ಹರಡುತ್ತಿರುವ ಸೋಂಕಿನ ಪ್ರಮಾಣ ಬೃಹತ್ ಅಂತರ್ ರಾಷ್ಟ್ರೀಯ ಸಮಸ್ಯೆಯಾಗಿ ಪರಿಣಮಿಸುತ್ತದೆ. ಇಡೀ ವಿಶ್ವಕ್ಕೆ ಬೆದರಿಕೆಯಾಗುತ್ತದೆ. ಆಗ ನಿಮ್ಮ ಈ ದೌರ್ಬಲ್ಯ ಹಾಗು ಅದಕ್ಷತೆ ಬೇರೆ ದೇಶಗಳಿಗೆ ನಮ್ಮ ದೇಶದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಿ ಅದನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಆಹ್ವಾನ ನೀಡಿದಂತಾಗುತ್ತದೆ. ಆಗ ನಾವೆಲ್ಲರೂ ಕಷ್ಟಪಟ್ಟು ಹೋರಾಡಿ ಸಂಪಾದಿಸಿರುವ ನಮ್ಮ ದೇಶದ ಸಾರ್ವ ಭೌಮತೆಗೆ ಧಕ್ಕೆ ಬರುತ್ತದೆ. ನಾವು ಮತ್ತೆ ಬೇರೆ ದೇಶಗಳ ಕಾಲನಿಯಾಗಿಬಿಡುತ್ತೇವೆ. ಇದನ್ನು ನಿರ್ಲಕ್ಷಿಸಬೇಡಿ. ಇದು ಖಂಡಿತ ಆಗಬಹುದಾದ ಆಪಾಯ.  

ಹಾಗಾಗಿ ನೀವು ದಯವಿಟ್ಟು ಹೋಗಿ. ಈ ಕ್ಷಣಕ್ಕೆ ನೀವು ಮಾಡಬಹುದಾದ ಅತ್ಯಂತ ಜವಾಬ್ದಾರಿಯುತ ನಡೆ ಇದು. ನಮ್ಮ ದೇಶದ ಪ್ರಧಾನ ಮಂತ್ರಿಯಾಗಿ ಮುಂದುವರೆಯುವ ನೈತಿಕ ಹಕ್ಕನ್ನು ನೀವು ಕಳಕೊಂಡಿದ್ದೀರಿ. 

ಕೃಪೆ: https://scroll.in/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News