ಮಾರ್‌ಥೋಮಾ ಚರ್ಚ್‌ನ ಮಾಜಿ ಮುಖ್ಯಸ್ಥ ಡಾ.ಫಿಲಿಪೋಸ್ ಮಾರ್ ಕ್ರಿಸೋಸ್ತಮ ನಿಧನ

Update: 2021-05-05 17:07 GMT
ಫೋಟೊ ಕೃಪೆ: twitter.com

ತಿರುವಳ್ಳ(ಕೇರಳ),ಮೇ 5: ಮಲಂಕರ್ ಮಾರ್‌ಥೋಮಾ ಸಿರಿಯನ್ ಚರ್ಚ್‌ನ ಮಾಜಿ ಮುಖ್ಯಸ್ಥ ಹಾಗು ಭಾರತದಲ್ಲಿ ಅತಿ ದೀರ್ಘ ಕಾಲ ಬಿಷಪ್ ಆಗಿ ಸೇವೆ ಸಲ್ಲಿಸಿದ್ದ ಡಾ.ಫಿಲಿಪೋಸ್ ಮಾರ್ ಕ್ರಿಸೋಸ್ತಮ್ (103) ಅವರು ವಯೋಸಂಬಂಧಿತ ಅನಾರೋಗ್ಯದಿಂದಾಗಿ ಗುರುವಾರ ನಿಧನರಾಗಿದ್ದಾರೆ ಎಂದು ಚರ್ಚ್ ವಕ್ತಾರರು ತಿಳಿಸಿದ್ದಾರೆ.

 ಕ್ರಿಸೋಸ್ತಮ್ ಅವರನ್ನು ಮಂಗಳವಾರ ತಿರುವಳ್ಳದ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿತ್ತು. ಬುಧವಾರ ನಸುಕಿನ 1:15ರ ಸುಮಾರಿಗೆ ಇಲ್ಲಿಗೆ ಸಮೀಪದ ಕುಂಬನಾಡ್‌ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಅವರು ಕೊನೆಯುಸಿರೆಳೆದರು.

ಮೇರು ಮಾನವತಾವಾದಿ,ಜಾಗತಿಕ ದೂರದೃಷ್ಟಿಯ ಆಧ್ಯಾತ್ಮಿಕ ನಾಯಕರಾಗಿದ್ದ ಅವರಿಗೆ 2018ರಲ್ಲಿ ಪದ್ಮಭೂಷಣ ಪ್ರಶಸ್ತಿಯೊಂದಿಗೆ ಗೌರವಿಸಲಾಗಿತ್ತು. ಬಡವರು ಮತ್ತು ಶೋಷಿತ ವರ್ಗಗಳ ಸಾಮಾಜಿಕ,ಆರ್ಥಿಕ ಮತ್ತು ಸಾಂಸ್ಕೃತಿಕ ಸ್ಥಿತಿಯನ್ನು ಉತ್ತಮಗೊಳಿಸಲು ಹಲವಾರು ಯೋಜನೆಗಳನ್ನು ರೂಪಿಸಿ,ಅನುಷ್ಠಾನಿಸಿದ್ದ ಹೆಗ್ಗಳಿಕೆ ಅವರದಾಗಿತ್ತು.

1918,ಎ.27ರಂದು ಕಾರ್ತಿಕಪಲ್ಲಿಯಲ್ಲಿ ಜನಿಸಿದ್ದ ಅವರು ತನ್ನ ತಂದೆಯಿಂದ ಕ್ರೈಸ್ತ ಧರ್ಮಪ್ರಚಾರದ ಪ್ರೇರಣೆಯನ್ನು ಪಡೆದಿದ್ದರು. ಆಲ್ವಾಯಿಯ ಯೂನಿಯನ್ ಕ್ರಿಶ್ಚಿಯನ್ ಕಾಲೇಜಿನಿಂದ ಪದವಿ ಪಡೆದ ಬಳಿಕ ಧರ್ಮ ಪ್ರಚಾರದಲ್ಲಿ ತೊಡಗಿಕೊಂಡಿದ್ದ ಅವರು 1944ರಲ್ಲಿ ಧರ್ಮಗುರುವಾಗಿ ದೀಕ್ಷೆಯನ್ನು ಪಡೆದಿದ್ದರು ಮತ್ತು ಒಂಭತ್ತು ವರ್ಷಗಳ ಬಳಿಕ 1953ರಲ್ಲಿ ಬಿಷಪ್‌ರಾಗಿ ಪದೋನ್ನತಿ ಪಡೆದಿದ್ದರು. 1999ರಲ್ಲಿ ಮಲಂಕರ್ ಮಾರ್‌ಥೋಮಾ ಸಿರಿಯನ್ ಚರ್ಚ್‌ನ ಮೆಟ್ರೊಪಾಲಿಟನ್ ಆಗಿ ನೇಮಕಗೊಂಡಿದ್ದರು. ಅವರು ಸುದೀರ್ಘ 68 ವರ್ಷಗಳ ಅವಧಿಗೆ ಬಿಷಪ್ ಆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News