ವೈದ್ಯರ ಕುರಿತು ಅವಹೇಳನಕಾರಿ ಹೇಳಿಕೆ: ಕಾಮಿಡಿಯನ್ ಸುನಿಲ್ ಪಾಲ್ ವಿರುದ್ಧ ಎಫ್ ಐಆರ್

Update: 2021-05-05 18:17 GMT

ಹೊಸದಿಲ್ಲಿ: ವೈದ್ಯರುಗಳ ವಿರುದ್ಧ ಕಳೆದ ತಿಂಗಳು ಅವಹೇಳನಕಾರಿ ಹೇಳಿಕೆ ಇರುವ ವೀಡಿಯೊವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದ  ಕಾಮಿಡಿಯನ್ ಸುನಿಲ್ ಪಾಲ್ ವಿರುದ್ಧ ಅಂಧೇರಿ ಪೊಲೀಸರು ಮಂಗಳವಾರ ಎಫ್‌ಐಆರ್ ದಾಖಲಿಸಿದ್ದಾರೆ.

ಈ ಕುರಿತು ‘The Indian Express’ನೊಂದಿಗೆ ಮಾತನಾಡಿದ ಪಾಲ್ “ನನ್ನ ಹೇಳಿಕೆಯಿಂದ ಘಾಸಿಯಾದ ವೈದ್ಯರಲ್ಲಿ ನಾನು ಕ್ಷಮೆಯಾಚಿಸಿದ್ದೇನೆ. ನ್ಯಾಯಾಲಯಕ್ಕೂ ಕ್ಷಮೆಯಾಚಿಸಲು ನಾನು ಸಿದ್ಧ. ನನ್ನ ಸುತ್ತಲಿನ ಜನರಿಂದ ನಾನು ಕೇಳಿದ್ದನ್ನು ಮಾತ್ರ ನಾನು ವೀಡಿಯೊದಲ್ಲಿ ಹೇಳಿದ್ದೆ ಎಂದರು.

 “ಕೋವಿಡ್ 19 ಕ್ಕೆ ಚಿಕಿತ್ಸೆ ನೀಡುವ ಶೇಕಡಾ 90 ರಷ್ಟು ವೈದ್ಯರು ವಂಚಕರು  ಮತ್ತು ದುಷ್ಟರು. ಅವರು ಭಾರಿ ಶುಲ್ಕ ವಿಧಿಸುವ ಮೂಲಕ ರೋಗಿಗಳನ್ನು ಲೂಟಿ ಮಾಡುತ್ತಿದ್ದಾರೆ. ಅವರು ರೋಗಿಗಳಿಂದ ಅಂಗಾಂಗಗಳನ್ನು ಕದ್ದು ನಂತರ ಕೊಲ್ಲುತ್ತಾರೆ ಎಂದು ನಾನು ಕೇಳಿದ್ದೇನೆ. ಕೋವಿಡ್ -19 ಸೋಂಕು ಇರದ ಜನರಿಗೂ ಪಾಸಿಟಿವ್  ವರದಿಗಳನ್ನು ನೀಡಲಾಗುತ್ತದೆ. ಇದು ದೊಡ್ಡ ಹಗರಣ. ಈ ಎಲ್ಲ ವಿಷಯಗಳನ್ನು ತನಿಖೆ ನಡೆಸಬೇಕಾಗಿದೆ ದಯವಿಟ್ಟು ವೀಡಿಯೊವನ್ನು ಹಂಚಿಕೊಳ್ಳಿ’’ ಎಂದು  ವೀಡಿಯೊದಲ್ಲಿ ಪಾಲ್ ಹೇಳುತ್ತಾರೆ.

ಅಂಧೇರಿ ಪೊಲೀಸರ ಪ್ರಕಾರ, ಪಾಲ್ ವಿರುದ್ಧ ಐಪಿಸಿಯ ಸೆಕ್ಷನ್ 500 (ಮಾನಹಾನಿ) ಮತ್ತು 505 (2) (ಸಾರ್ವಜನಿಕ ಕಿಡಿಗೇಡಿತನ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಮುಂಬೈನ ವೈದ್ಯಕೀಯ ಸಲಹೆಗಾರರ ​​ಸಂಘದ ಅಧ್ಯಕ್ಷ ಡಾ.ಸುಶ್ಮಿತಾ ಭಟ್ನಾಗರ್ ಅವರು ಎಫ್ಐಆರ್ ದಾಖಲಿಸಿದ್ದಾರೆ.

 “ಅವರು ವೈದ್ಯರನ್ನು ನಿಂದಿಸಿದ್ದಕ್ಕೆ ಹಾಗೂ  ಅವರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಕ್ಕೆ ಮಾತ್ರವಲ್ಲ ಸೋಂಕಿಲ್ಲದವರಿಗೂ ಕೋವಿಡ್ -19 ಪಾಸಿಟಿವ್ ವರದಿಗಳನ್ನು ವೈದ್ಯರು ನೀಡುತ್ತಿದ್ದಾರೆ ಎಂಬ ವದಂತಿಗಳನ್ನು ಹರಡುತ್ತಿರುವುದಕ್ಕೆ ನಾವು ಎಫ್‌ಐಆರ್ ದಾಖಲಿಸಿದ್ದೇವೆ  ಸಾಮಾನ್ಯ ಜನರು ಈಗಾಗಲೇ ಭಯಭೀತರಾಗಿದ್ದಾರೆ ಮತ್ತು ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳುತ್ತಿವೆ  ಇಂತಹ ದಾರಿತಪ್ಪಿಸುವ ವೀಡಿಯೊಗಳಿಂದಾಗಿ, ಜನರು ಇನ್ನಷ್ಟು ಭಯಭೀತರಾಗುತ್ತಾರೆ ಮತ್ತು ರೋಗಿಗಳಿಂದ ಹಣವನ್ನು ಲೂಟಿ ಮಾಡಲು ಪ್ರಯತ್ನಿಸುತ್ತಾರೆಂದು ಭಾವಿಸಿ ಅವರು ವೈದ್ಯರ ಬಳಿಗೆ ಹೋಗುವುದಿಲ್ಲ’’ ಎಂದು ಡಾ.ಸುಶ್ಮಿತಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News