ಪಕ್ಷದ ಅಲ್ಪಸಂಖ್ಯಾತರ ಘಟಕ ವಿಸರ್ಜಿಸಿದ ಅಸ್ಸಾಂ ಬಿಜೆಪಿ; ಕಾರಣ ಏನು ಗೊತ್ತೇ ?

Update: 2021-05-06 04:09 GMT

ಗುವಾಹತಿ: ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಟಿಕೆಟ್‌ನಿಂದ ಸ್ಪರ್ಧಿಸಿದ್ದ ಎಲ್ಲ ಮುಸ್ಲಿಂ ಅಭ್ಯರ್ಥಿಗಳು ಸೋತ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಅಲ್ಪಸಂಖ್ಯಾತರ ಘಟಕವನ್ನು ದಿಢೀರನೇ ವಿಸರ್ಜಿಸಲಾಗಿದೆ.

126 ಸದಸ್ಯ ಬಲದ ವಿಧಾನಸಭೆಯಲ್ಲಿ 75 ಸ್ಥಾನಗಳನ್ನು ಗೆದ್ದು ಸತತ ಎರಡನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದರೂ, "ಅನಿರ್ಧಿಷ್ಟ ಅವಧಿ ವರೆಗೆ ಅಲ್ಪಸಂಖ್ಯಾತರ ಘಟಕವನ್ನು ಅಮಾನತಿನಲ್ಲಿಡಲಾಗಿದೆ" ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ರಂಜಿತ್ ದಾಸ್ ಹೇಳಿದ್ದಾರೆ.

ರಾಜ್ಯದಲ್ಲಿ ಒಟ್ಟು 31-34 ಕ್ಷೇತ್ರಗಳಲ್ಲಿ ಮುಸ್ಲಿಂ ಪ್ರಾಬಲ್ಯವಿದ್ದು, ಈ ಪೈಕಿ ದಕ್ಷಿಣ ಅಸ್ಸಾಂನ ಬರಾಕ್ ಕಣಿವೆ ಕ್ಷೇತ್ರವನ್ನು ಮಾತ್ರ ಬಿಜೆಪಿ 2016ರಲ್ಲಿ ಗೆದ್ದಿತ್ತು. ಇಲ್ಲಿಂದ ಗೆದ್ದ ಆಭ್ಯರ್ಥಿ ಅಮೀನುಲ್ ಹಕ್ ಲಸ್ಕರ್, ರಾಜ್ಯ ವಿಧಾನಸಭೆಯ ಉಪಸ್ಪೀಕರ್ ಆಗಿದ್ದರು.

ಈ ಬಾರಿ ಅಮೀನುಲ್ ಹಕ್ ಅವರಲ್ಲದೇ ಇತರ ಎಂಟು ಮಂದಿ ಮುಸ್ಲಿಂ ಅಭ್ಯರ್ಥಿಗಳನ್ನು ಬಿಜೆಪಿ ಕಣಕ್ಕೆ ಇಳಿಸಿತ್ತು. ಐದು ಮಂದಿ ಪಶ್ಚಿಮ ಅಸ್ಸಾಂನಿಂದ, ಉತ್ತರ ಮತ್ತು ಕೇಂದ್ರ ಅಸ್ಸಾಂ ಹಾಗೂ ಗುಡ್ಡಗಾಡು ಜಿಲ್ಲೆಯಿಂದ ತಲಾ ಒಬ್ಬರು ಸ್ಪರ್ಧಿಸಿದ್ದರು. ಅಮೀನುಲ್ ಹಕ್ ಈ ಬಾರಿ ಎಐಯುಡಿಎಫ್ ಅಭ್ಯರ್ಥಿ ಕರೀಮುದ್ದೀನ್ ಬರ್‌ಭುಯಿಯಾ ವಿರುದ್ಧ 19,654 ಮತಗಳಿಂದ ಸೋತಿದ್ದರು. ಈ ಬಾರಿ ರಾಜ್ಯ ವಿಧಾನಸಭೆಯಲ್ಲಿ ಶೇಕಡ 24ರಷ್ಟು ಮುಸ್ಲಿಂ ಪ್ರತಿನಿಧಿಗಳಿದ್ದಾರೆ. 31 ಸದಸ್ಯರ ಪೈಕಿ 16 ಮಂದಿ ಕಾಂಗ್ರೆಸ್‌ನಿಂದ ಹಾಗೂ 15 ಮಂದಿ ಮಿತ್ರಪಕ್ಷವಾದ ಎಐಯುಡಿಎಫ್‌ನಿಂದ ಕಣಕ್ಕೆ ಇಳಿದಿದ್ದರು.

ಇವರೆಲ್ಲರೂ ಪಶ್ಚಿಮ ಅಸ್ಸಾಂ ಹಾಗು ಬಾಂಗ್ಲಾದೇಶದ ಗಡಿಗೆ ಹೊಂದಿಕೊಂಡಿರುವ ಬರಾಕ್ ಕಣಿವೆ ಪ್ರದೇಶದ ಮುಸ್ಲಿಂ ಬಾಹುಳ್ಯದ ಕ್ಷೇತ್ರಗಳಿಂದ ಗೆದ್ದವರು. ಈ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಎಲ್ಲ ಕಡೆ ಬಿಜೆಪಿ ಮೈತ್ರಿಕೂಟ ಉತ್ತಮ ಸಾಧನೆ ಪ್ರದರ್ಶಿಸಿತ್ತು ಎಂದು ಅವರು ವಿವರಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News