ಜಿ-7 ಸಭೆಯಲ್ಲಿ ಭಾಗವಹಿಸಲು ತೆರಳಿದ ಭಾರತೀಯ ನಿಯೋಗದ ಇಬ್ಬರಿಗೆ ಕೊರೋನ ಸೋಂಕು

Update: 2021-05-06 04:49 GMT
ಫೋಟೊ: PTI

ಹೊಸದಿಲ್ಲಿ: ಎರಡು ವರ್ಷಗಳಿಗೊಮ್ಮೆ ನಡೆಯುವ ಜಿ-7 ಸಭೆಯಲ್ಲಿ ಭಾಗವಹಿಸಲು ಲಂಡನ್‌ಗೆ ತೆರಳಿದ ಭಾರತೀಯ ನಿಯೋಗದ ಇಬ್ಬರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ.

ನಿಯೋಗದ ಇಬ್ಬರಿಗೆ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಇಡೀ ತಂಡ ಸ್ವಯಂ ಐಸೊಲೇಶನ್ ಪಾಲಿಸಲಿದೆ ಎಂದು ವಿದೇಶಾಂಗ ಸಚಿವ ಜೈಶಂಕರ್ ಪ್ರಕಟಿಸಿದ್ದಾರೆ. ಲಂಡನ್‌ನಲ್ಲಿ ಜಿ-7 ದೇಶಗಳ ವಿದೇಶಾಂಗ ಸಚಿವಮಟ್ಟದ ಮೂರು ದಿನಗಳ ಸಭೆ ಆಯೋಜಿಸಲಾಗಿತ್ತು.

ಮುಖಾಮುಖಿ ರಾಜತಾಂತ್ರಿಕತೆಯ ಪುನರಾರಂಭಕ್ಕೆ ಮತ್ತು ಚೀನಾ ಹಾಗೂ ರಷ್ಯಾದಿಂದ ಎದುರಾಗಿರುವ ಅಪಾಯ ಸಾಧ್ಯತೆ ವಿರುದ್ಧ ಒಗ್ಗಟ್ಟು ಪ್ರದರ್ಶನಕ್ಕೆ ಪಾಶ್ಚಿಮಾತ್ಯ ದೇಶಗಳಿಗೆ ಈ ಉನ್ನತ ಮಟ್ಟದ ಸಭೆ ವೇದಿಕೆ ಎಂದು ವಿಶ್ಲೇಷಿಸಲಾಗಿತ್ತು. ಈ ಸಭೆಯಲ್ಲಿ ಅತಿಥಿಗಳಾಗಿ ಪಾಲ್ಗೊಂಡಿರುವ ಭಾರತೀಯ ನಿಯೋಗ ಮಂಗಳವಾರ ಹಾಗೂ ಬುಧವಾರ ಹಲವು ಚರ್ಚೆಗಳಲ್ಲಿ ಪಾಲ್ಗೊಳ್ಳಬೇಕಿತ್ತು.

ಕೊರೋನ ವೈರಸ್ ಸೋಂಕಿನ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಎಲ್ಲ ಮುಖಾಮುಖಿ ಭೇಟಿಯನ್ನು ರದ್ದುಪಡಿಸಿ, ವರ್ಚುವಲ್ ಸಭೆಗಳನ್ನು ನಡೆಸುವುದಾಗಿ ಹಾಗೂ ಜಿ-7 ಸಭೆಯಲ್ಲೂ ವರ್ಚುವಲ್ ವಿಧಾನದಲ್ಲಿ ಪಾಲ್ಗೊಳ್ಳುವುದಾಗಿ ಜೈಶಂಕರ್ ಹೇಳಿದ್ದಾರೆ. ಮುಂದಿನ ತಿಂಗಳು ನಡೆಯುವ ಜಿ-7 ಶೃಂಗದ ಹಿನ್ನೆಲೆಯಲ್ಲೂ ಈ ಸಭೆಗೆ ವಿಶೇಷ ಮಹತ್ವ ಕಲ್ಪಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News