×
Ad

ಪಶ್ಚಿಮ ಬಂಗಾಳ: ಚುನಾವಣೋತ್ತರ ಹಿಂಸಾಚಾರಗಳಿಗೆ ಕೋಮುಬಣ್ಣ ನೀಡಲು ಬಿಜೆಪಿ ನಾಯಕರಿಂದ ಸುಳ್ಳುಸುದ್ದಿಗಳ ಬಳಕೆ

Update: 2021-05-06 21:40 IST

ಕೋಲ್ಕತಾ,ಮೇ 6: ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಹಿಂಸಾಚಾರಕ್ಕೆ 50ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ಈ ಸಲ ತೃಣಮೂಲ ಕಾಂಗ್ರೆಸ್ ರಾಜ್ಯ ವಿಧಾನಸಭೆಯ 292 ಸ್ಥಾನಗಳ ಪೈಕಿ 213 ಸ್ಥಾನಗಳನ್ನು ಗೆದ್ದ ಬೆನ್ನಿಗೇ ರಾಜ್ಯದ ವಿವಿಧೆಡೆಗಳಿಂದ ಹಿಂಸಾಚಾರದ ವರದಿಗಳು ಬರತೊಡಗಿವೆ.

ರವಿವಾರ ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕ ರಾಜಕೀಯ ಘರ್ಷಣೆಗಳಲ್ಲಿ ಕನಿಷ್ಠ 14 ಜನರು ಕೊಲ್ಲಲ್ಪಟ್ಟಿದ್ದಾರೆ. ತನ್ನ ಆರು ಕಾರ್ಯಕರ್ತರು ಕೊಲ್ಲಲ್ಪಟ್ಟಿದ್ದಾರೆಂದು ಬಿಜೆಪಿ ಮತ್ತು ತನ್ನ ನಾಲ್ವರು ಕಾರ್ಯಕರ್ತರು ಕೊಲ್ಲಲ್ಪಟ್ಟಿದ್ದಾರೆ ಎಂದು ಟಿಎಂಸಿ ಹೇಳಿಕೊಂಡಿವೆ.

ಇವೆಲ್ಲವುಗಳ ಮಧ್ಯೆ ಬಿಜೆಪಿ ನಾಯಕರು,ಅದರ ಐಟಿ ಘಟಕ ಮತ್ತು ಕಾರ್ಯಕರ್ತರು ನಕಲಿ ಫೋಟೊಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡುವ ಮೂಲಕ ಹಿಂಸಾಚಾರಗಳಿಗೆ ಕೋಮುಬಣ್ಣ ನೀಡಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರತೊಡಗಿವೆ.
  
ಈ ಎಲ್ಲ ಹಿಂಸಾಚಾರದ ಘಟನೆಗಳು ರಾಜಕೀಯ ಸ್ವರೂಪದ್ದಾಗಿವೆಯಾದರೂ,ಈ ಪೈಕಿ ಕೆಲವು ಕೋಮು ಘಟನೆಗಳಾಗಿವೆ ಎಂದು ಬಿಜೆಪಿ ಪ್ರತಿಪಾದಿಸಿದೆ. ಬೀರ್ಭೂಮಿಯಲ್ಲಿ ಬಿಜೆಪಿಯ ಮಹಿಳಾ ಕಾರ್ಯಕರ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಬಿಜೆಪಿ ಸಂಸದ ಸೌಮಿತ್ರ ಖಾನ್ ಅವರು ಮಂಗಳವಾರ ಟ್ವೀಟಿಸಿದ್ದು,ನಂತರ ಅದನ್ನು ಹಿಂದೆಗೆದುಕೊಂಡಿದ್ದರು.

ಬೀರ್ಭೂಮಿಯಲ್ಲಿ ಸಾಮೂಹಿಕ ಅತ್ಯಾಚಾರದ ವರದಿ ಸುಳ್ಳು ಎಂದು ಸುದ್ದಿಗೋಷ್ಠಿಯಲ್ಲಿ ದೃಢಪಡಿಸಿದ ಅಲ್ಲಿಯ ಪೊಲೀಸ್ ವರಿಷ್ಠ ಎನ್.ಎನ್.ತ್ರಿಪಾಠಿ ಅವರು,ಸಾಮಾಜಿಕ ಮಾಧ್ಯಮಗಳಲ್ಲಿ ಈ ಸುಳ್ಳುಸುದ್ದಿಗಳು ಎಲ್ಲಿಂದ ಹುಟ್ಟಿಕೊಂಡಿವೆ ಎನ್ನುವುದನ್ನು ಪತ್ತೆ ಹಚ್ಚಲು ನಾವು ಪ್ರಯತ್ನಿಸುತ್ತಿದ್ದೇವೆ ಮತ್ತು ಅವರ ವಿರುದ್ಧ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದರು.
  
ಬಂಗಾಳದಲ್ಲಿ ನಡೆದಿರುವ ಹಿಂಸಾಚಾರವು ಕೋಮು ಸ್ವರೂಪದ್ದಾಗಿದೆ ಎಂದು ಟ್ವೀಟಿಸಿರುವ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಅವರು ತೃಣಮೂಲ ಕಾಂಗ್ರೆಸ್ ಅನ್ನು ಜಿನ್ನಾರ ಮುಸ್ಲಿಂ ಲೀಗ್ ಗೆ ಹೋಲಿಸಿದ್ದಾರೆ. ಹಿರಿಯ ಪತ್ರಕರ್ತ ಅಭಿಜಿತ ಮುಜುಮ್ದಾರ್, ದಿಲ್ಲಿಯ ಬಿಜೆಪಿ ಸಂಸದ ಪರ್ವೇಶ ಸಿಂಗ್, ವಿಶ್ವ ಹಿಂದು ಪರಿಷತ್ ನ ಹಿರಿಯ ಪದಾಧಿಕಾರಿಗಳೂ ಹಿಂಸಾಚಾರಕ್ಕೆ ಕೋಮುಬಣ್ಣ ನೀಡಿದ್ದು,ಇವೆಲ್ಲ ಘಟನೆಗಳಲ್ಲಿ ಟಿಎಂಸಿಯಲ್ಲಿನ ‘ಜಿಹಾದಿ ’ಶಕ್ತಿಗಳು ಭಾಗಿಯಾಗಿವೆ ಎಂದು ಹೇಳಿದ್ದಾರೆ.

ಪ.ಬಂಗಾಳದಲ್ಲಿನ ಹಿಂಸೆಗೆ ನಿದರ್ಶನವಾಗಿ ಒಡಿಶಾದಲ್ಲಿ ಗುಂಪೊಂದು ಪೊಲೀಸರ ಮೇಲೆ ದಾಳಿ ಮಾಡುತ್ತಿರುವ ಹಳೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಡಲಾಗಿದೆ.

ಚುನಾವಣೆಯಲ್ಲಿ ಟಿಎಂಸಿ ವಿಜಯದ ಬಳಿಕ ಗುಂಪೊಂದು ಕೈಗಳಲ್ಲಿ ಖಡ್ಗಗಳನ್ನು ಜಳಪಿಸುತ್ತ,ಹಿನ್ನೆಲೆಯಲ್ಲಿ ಕೇಳಿ ಬರುತ್ತಿದ್ದ ಟಿಎಂಸಿಯ ‘ಖೇಲಾ ಹೋಬೆ ’ಪ್ರಚಾರ ಗೀತೆಗೆ ನರ್ತಿಸುತ್ತ ಸಂಭ್ರಮಾಚರಣೆಯಲ್ಲಿ ತೊಡಗಿರುವ ವೀಡಿಯೊವನ್ನು ಬಿಜೆಪಿಯ ರಾಷ್ಟ್ರೀಯ ಮಹಿಳಾ ಮೋರ್ಚಾದ ಮಖ್ಯಸ್ಥೆ ಪ್ರೀತಿ ಗಾಂಧಿ ಹಂಚಿಕೊಂಡಿದ್ದಾರೆ. ಆದರೆ ಇದು ನಕಲಿ ವೀಡಿಯೊ ಆಗಿದೆ ಎಂದು ರಾಜ್ಯದ ಸಿಐಡಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

2019ರಲ್ಲಿ ವಿದ್ಯಾಸಾಗರ ಕಾಲೇಜಿನಲ್ಲಿ ನಡೆದಿದ್ದ ಹಿಂಸಾಚಾರದ ಚಿತ್ರವನ್ನು ಪಶ್ಚಿಮ ಬಂಗಾಲದಲ್ಲಿಯ ಹಿಂಸಾಚಾರದ್ದೆಂದು ಬಣ್ಣಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಡಲಾಗಿದೆ.

ದಿ ಹಿಂದು ಬೀಟ್ಸ್ ಫೇಸ್ಬುಕ್ ಪೇಜ್ನಲ್ಲಿ ಬಾಂಗ್ಲಾದೇಶದ ರಾಜಧಾನಿ ಡಾಕಾದ ಚಿತ್ರಗಳನ್ನು ಪ.ಬಂಗಾಲದಲ್ಲಿಯ ಇತ್ತೀಚಿನ ಹಿಂಸಾಚಾರಗಳು ಎಂಬ ಹೆಸರಿನಲ್ಲಿ ಪೋಸ್ಟ್ ಮಾಡಲಾಗಿದೆ.
 
ಇನ್ಸ್ಟಾಗ್ರಾಮ್ನಲ್ಲಿಯ ಯುವಡೋಪ್ ಮತ್ತು ತತ್ವ ಇಂಡಿಯಾ ಎಂಬ 50,000ಕ್ಕೂ ಅಧಿಕ ಫಾಲೋವರ್ಗಳಿರುವ ಎರಡು ಖಾತೆಗಳು ಸುಳ್ಳು ಸುದ್ದಿಗಳನ್ನು ಮತ್ತು ಪ್ರಚೋದನಾತ್ಮಕ ಪೋಸ್ಟ್ ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ ಮಾಡಿಕೊಳ್ಳತೊಡಗಿವೆ. ಬಿಜೆಪಿಯ ಟ್ವಿಟರ್ ಹ್ಯಾಂಡಲ್ ಗಳ ಮೂಲಕ ಸುಳ್ಳುಮಾಹಿತಿಗಳು ಮತ್ತು ಸುಳ್ಳ್ಳುಸುದ್ದಿಗಳ ಮಹಾಪೂರವೇ ಸಾಮಾಜಿಕ ಜಾಲತಾಣಗಳಲ್ಲಿ ಹರಿಯುತ್ತಿದೆ ಎಂದು ಪ್ರಮುಖ ಸತ್ಯಶೋಧನೆ ಜಾಲತಾಣವೊಂದು ತಿಳಿಸಿದೆ.

ಕೃಪೆ: thewire.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News