ಮುಂಬೈ ನೆಲದಲ್ಲಿ ಕನ್ನಡದ ಸಾಧಕರ ಗುರುತುಗಳು

Update: 2021-05-06 19:30 GMT

ಮುಂಬೈ ಮಹಾನಗರದ ಬೆಳವಣಿಗೆಯಲ್ಲಿ ಕನ್ನಡಿಗರ ಪಾಲು ಗಮನಾರ್ಹವಾದುದು. ಅದಕ್ಕಾಗಿ ಇಲ್ಲಿನ ಕನ್ನಡಿಗರ ಹೋರಾಟ, ತ್ಯಾಗ, ಪರಿಶ್ರಮ, ಎಲ್ಲವೂ ದಾಖಲಾರ್ಹ. ಮುಂಬೈಯ ಇತಿಹಾಸವನ್ನು ದಾಖಲಿಸುವಾಗ, ಇಲ್ಲಿನ ಕನ್ನಡಿಗರನ್ನು ಪರಿಗಣಿಸದೆ ಇದ್ದಲ್ಲಿ ಆ ಇತಿಹಾಸ ಅಪೂರ್ಣ. ಅಂತಹ ಕನ್ನಡಿಗರ ಹೆಸರನ್ನು ಇಲ್ಲಿನ ಜನತೆ ಒಂದಲ್ಲ ಒಂದು ರೀತಿಯಿಂದ ಸ್ಮರಿಸುತ್ತ ಬಂದಿದ್ದಾರೆ; ಬರುತ್ತಿದ್ದಾರೆ. ಮುಂಬೈಯ ಹೆದ್ದಾರಿಗಳು, ಒಳದಾರಿಗಳು ಕನ್ನಡದ ಹಿರಿಮೆಯನ್ನು ಸಾರುವ ಹತ್ತು ಹಲವು ಕುರುಹುಗಳನ್ನು ಬಚ್ಚಿಟ್ಟುಕೊಂಡಿವೆ.


ಕನ್ನಡಿಗರು ಕರ್ಮಭೂಮಿ ಮುಂಬೈಗೆ ಆಗಮಿಸಿದಾಗ ತಮ್ಮಂದಿಗೆ ತಮ್ಮ ಪರಂಪರೆ, ಸಂಸ್ಕೃತಿ, ಭಾಷೆ, ಸಾಹಿತ್ಯ, ಚಿಂತನೆಗಳು, ತಾವು ನಂಬಿದ ದೈವ ದೇವರು, ತಮ್ಮ ಗುರುಗಳ ತತ್ವಾದರ್ಶ ಹೀಗೆ ಎಲ್ಲವನ್ನು ಬೆನ್ನಿಗಂಟಿಸಿಕೊಂಡು ಬಂದರು. ಈ ಮಹಾನಗರದ ಬೆಳವಣಿಗೆಯಲ್ಲಿ ಕನ್ನಡಿಗರ ಪಾಲು ಗಮನಾರ್ಹವಾದುದು. ಅದಕ್ಕಾಗಿ ಇಲ್ಲಿನ ಕನ್ನಡಿಗರ ಹೋರಾಟ, ತ್ಯಾಗ, ಪರಿಶ್ರಮ, ಎಲ್ಲವೂ ದಾಖಲಾರ್ಹ. ಮುಂಬೈಯ ಇತಿಹಾಸವನ್ನು ದಾಖಲಿಸುವಾಗ, ಇಲ್ಲಿನ ಕನ್ನಡಿಗರನ್ನು ಪರಿಗಣಿಸದೆ ಇದ್ದಲ್ಲಿ ಆ ಇತಿಹಾಸ ಅಪೂರ್ಣ. ಅಂತಹ ಕನ್ನಡಿಗರ ಹೆಸರನ್ನು ಇಲ್ಲಿನ ಜನತೆ ಒಂದಲ್ಲ ಒಂದು ರೀತಿಯಿಂದ ಸ್ಮರಿಸುತ್ತ ಬಂದಿದ್ದಾರೆ; ಬರುತ್ತಿದ್ದಾರೆ. (ಇದಕ್ಕೆ ಕೆಲವೊಂದು ಅಪವಾದಗಳೂ ಇದ್ದೇ ಇವೆ) ಮುಂಬೈಯ ಹೆದ್ದಾರಿಗಳು, ಒಳದಾರಿಗಳು ಕನ್ನಡದ ಹಿರಿಮೆಯನ್ನು ಸಾರುವ ಹತ್ತು ಹಲವು ಕುರುಹುಗಳನ್ನು ಬಚ್ಚಿಟ್ಟುಕೊಂಡಿವೆ. ಮುಂಬೈ ಪ್ರತಿಷ್ಠಿತ ಪೋರ್ಟ್ ಟ್ರಸ್ಟ್ ಹಾಗೂ ಕೆಲಸಗಾರ (ಬಂದರು) ರನ್ನು ಪ್ರಥಮವಾಗಿ ಸಂಘಟಿಸಿ ಅವರಿಗಾಗುತ್ತಿದ್ದ ಅನ್ಯಾಯವನ್ನು ಬಯಲಿಗೆಳೆದು ನ್ಯಾಯ ಒದಗಿಸಿದ ಕೀರ್ತಿ ಪಿ. ಡಿ’ಮೆಲ್ಲೋ ಅವರಿಗೆ ಸಲ್ಲುತ್ತದೆ.

ಈ ಮೂಲಕ ಮುಂಬೈಯಲ್ಲಿ ಕೆಲಸಗಾರರ ಸಂಘಟನೆ ರೂಪುಗೊಳ್ಳಲು ಕಾರಣರಾದವರೇ ಪಿ. ಡಿ’ಮೆಲ್ಲೋ. ಅವರು ಮೂಲತಃ ಮಂಗಳೂರಿನವರು. ಮುಂಬೈಯುದ್ದಕ್ಕೂ ಕಾರ್ಮಿಕರ ಮೇಲಾಗುತ್ತಿದ್ದ ದಮನಕಾರಿ ಪ್ರವೃತ್ತಿಯನ್ನು; ಅದರ ಆಳವನ್ನು ಶೋಧಿಸಿ ಭೂಗತ ಜಗತ್ತು ಕೂಡಾ ಅದರಲ್ಲಿ ತೊಡಗಿಸಿಕೊಂಡಿರುವುದನ್ನು ಮನಗಂಡ ಪಿ. ಡಿ’ಮೆಲ್ಲೋ ಯಾವುದಕ್ಕೂ ಹೆದರದೆ ಸಡ್ಡು ಹೊಡೆದು ಕಾರ್ಮಿಕರ ಶ್ರೇಯಕ್ಕಾಗಿ ಪಣತೊಟ್ಟರು. ರಾಜಕೀಯ ಷಡ್ಯಂತ್ರದ ನಡುವೆಯೂ ಕೇವಲ ಭಾರತದಲ್ಲಿ ಮಾತ್ರವಲ್ಲ, ಅಂತರ್ ರಾಷ್ಟ್ರೀಯ ಪೋರ್ಟ್ ಟ್ರಸ್ಟ್ ಸಂಘಟನೆಗಳ ಅಧ್ಯಕ್ಷರಾಗಿ ಅಂತರ್‌ರಾಷ್ಟ್ರೀಯ ಮನ್ನಣೆಗೆ ಭಾಜನರಾದರು. ‘ಬೃಹನ್ಮುಂಬೈ ಮುನ್ಸಿಪಲ್ ಮಜ್ದೂರ್ ಯೂನಿಯನ್’ನ ಸ್ಥಾಪಕರಾದ ಡಿ’ಮೆಲ್ಲೋ ಅವರು ‘ಬೆಸ್ಟ್ ವರ್ಕರ್ಸ್ ಯೂನಿಯನ್’, ‘ಟ್ಯಾಕ್ಸಿಮೆನ್ಸ್ ಯೂನಿಯನ್’, ‘ಟ್ರಾನ್ಸ್‌ಪೋರ್ಟ್ ಮತ್ತು ಡಾಕ್ ವರ್ಕರ್ಸ್ ಫೆಡರೇಷನ್’ ಮೊದಲಾದವುಗಳ ಸ್ಥಾಪಕಾಧ್ಯಕ್ಷರಾಗಿ ಅಸಹಾಯಕರ ಬಂಧು ಅನಿಸಿಕೊಂಡವರು.

ತಮ್ಮ ತೀಕ್ಷ್ಣ ಹಾಗೂ ಅಸ್ಖಲಿತ ಮಾತಿನಿಂದ ಸಮಾಜಘಾತಕ ಶಕ್ತಿಗಳನ್ನು ಹಿಮ್ಮೆಟ್ಟಿಸಿದ ಪಿ. ಡಿ’ಮೆಲ್ಲೋ ಮುಂಬೈ ಕಂಡ ಅಪರೂಪದ ಸಮಾಜವಾದಿ ಚಿಂತಕ ಹಾಗೂ ಕಾರ್ಮಿಕ ಹೋರಾಟಗಾರ, ದೇಶದ ಮಾಜಿ ರಕ್ಷಣಾ ಮಂತ್ರಿ ಜಾರ್ಜ್ ಫೆರ್ನಾಂಡಿಸ್‌ಗೆ ಗುರು. ಮುಂಬೈ ಬಂದರು ಕಾರ್ಮಿಕರ ಜೀವನ ಶೈಲಿಯನ್ನೇ ಬದಲಾಯಿಸಿದ ಮನ್ನಣೆಗೆ ಪಾತ್ರರಾದ ಪಿ. ಡಿ’ಮೆಲ್ಲೋ ಅವರನ್ನು ಕೊನೆಗೆ ಮುಂಬೈಯಿಂದ ಗಡಿಪಾರು ಮಾಡಲು ರಾಜಕೀಯ ಕುತಂತ್ರಿಗಳು, ಭೂಗತ ದೊರೆಗಳು ಯಶಸ್ವಿಯಾದರು. ಆಗ ಮತ್ತೆ ತಮ್ಮ ತಾಯ್ನೆಲ ಸೇರಿದ ಡಿ’ಮೆಲ್ಲೋ ಮಾರ್ಚ್ 20, 1958ರಂದು ಕೋಲ್ಕತಾದಲ್ಲಿನ ಫೆಡರೇಶನ್‌ನ ಸಭೆಗೆಂದು ಹೋದವರು ಅಲ್ಲಿ ಹೃದಯಾಘಾತದಿಂದ ಇನ್ನಿಲ್ಲವಾದರು. ಕರ್ನಾಟಕದ ಕುವರ ಮುಂಬೈ ಕಾರ್ಮಿಕ ಜಗತ್ತಿನಲ್ಲಿ ಗೈದ ಕ್ರಾಂತಿ, ಸಾಧನೆಯನ್ನು ಇಂದಿಗೂ ಮುಂಬೈ ಸ್ಮರಿಸುತ್ತಿದೆ. ಅವರ ಮರಣದ ಬಳಿಕ, ‘ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್’ ಕೊಲಾಬಾ ಕಾಸ್ ವೇ ಪೋರ್ಟ್‌ನಿಂದ ದಾನಾ ಬಂದರ್‌ವರೆಗಿನ ರಸ್ತೆಗೆ ಪಿ. ಡಿ’ಮೆಲ್ಲೋ ರೋಡ್ ಎಂದು ನಾಮಕರಣ ಮಾಡಿ ಆ ಮಹಾನ್ ಶಕ್ತಿಗೆ ಗೌರವ ಸೂಚಿಸಿತ್ತು. ಈಗಿರುವ ಕನ್ನಡಿಗರ ಹೆಸರನ್ನೊಳಗೊಂಡ ರಸ್ತೆಗಳಲ್ಲಿ ಪಿ. ಡಿ’ಮೆಲ್ಲೋ ರೋಡ್ ಅತ್ಯಂತ ಹಳೆಯದು.

ಕೊಲಬಾದಲ್ಲಿರುವ ಇನ್ನೊಂದು ಮಹತ್ವದ ಹಾಗೂ ಹಳೆಯ ಕನ್ನಡಿಗರ ಹೆಸರನ್ನೊಳಗೊಂಡ ರಸ್ತೆ ‘ಆಳ್ವಾಸ್ ರೋಡ್’. ಪತ್ರಕರ್ತರಾಗಿ, ನ್ಯಾಯವಾದಿಯಾಗಿ ಹೆಸರು ಮಾಡಿದ ಜೊಕಿಂ ಇಗ್ನೀಶಿಯಸ್ ಆಳ್ವ ಭಾರತ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಹೆಸರು ಮಾಡಿದವರು. ಮುಂಬೈಯ ‘ಶರೀಫ್’ ಆಗಿದ್ದ ಇವರು ಮುಂದೆ ರಾಜ್ಯ ಹಾಗೂ ರಾಷ್ಟ್ರ ನಾಯಕರಾಗಿ ಮಿಂಚಿದ್ದಾರೆ. ಇವರು ಹಾಗೂ ಇವರ ಪತ್ನಿ ವಾಯ್ಲೆಟ್ ಇಬ್ಬರೂ ಪ್ರಥಮ ಜೋಡಿಯಾಗಿ ಸಂಸತ್‌ಗೆ ಆಯ್ಕೆಯಾದವರು. ಮಾರ್ಗರೆಟ್ ಆಳ್ವರ ಅತ್ತೆ ಮಾವ-ವಾಯ್ಲೆಟ್ ಜೊಕಿಂ ಇಗ್ನೀಶಿಯಸ್ ಆಳ್ವ ಅವರ ಹೆಸರಿನಲ್ಲಿ ಇರುವುದು ‘ಆಳ್ವಾಸ್ ರೋಡ್’.

ಮುಂಬೈ ಕಂಡ ಅಪರೂಪದ ಶಿಕ್ಷಣ ತಜ್ಞ ಸಮಾಜ ಸೇವಕ ರಾಮ್‌ದಾಸ್ ನಾಯಕ್ ಅವರ ಹೆಸರಿನಲ್ಲಿ ಬಾಂದ್ರಾದಲ್ಲಿ ‘ರಾಮ್‌ದಾಸ್ ನಾಯಕ್ ರೋಡ್’, ಸಮಾಜ ಸೇವಕ ಎಸ್. ಎಸ್. ರಾವ್ ಹೆಸರಲ್ಲಿ ಪರೇಲ್‌ನಲ್ಲಿ ಹಾಗೂ ಎಂ.ಪಿ. ಹಾಗೂ ಎಂ.ಎಲ್.ಎ. ಆಗಿದ್ದ ಸಮಾಜಸೇವಕ ರಾಜಕಾರಣಿ ಸೆಲ್ವಿಂ ಡಿ’ಸಿಲ್ವಾ ಅವರ ಹೆಸರಿನಲ್ಲಿ ಘಾಟ್ಕೋಪರ್‌ನಲ್ಲಿ ರಸ್ತೆಗೆ ಹೆಸರನ್ನಿಟ್ಟು ಮುಂಬೈ ಕೃತಜ್ಞತೆ ತೋರಿಸಿದೆ.

ಕನ್ನಡಿಗರು ತಮಗೆ ಸದಾ ಮಾರ್ಗದರ್ಶಕರೆನಿಸಿರುವ ಗುರುಗಳ, ಸಂತರ ಸ್ಮರಣೆಯನ್ನು ಈ ಮುಂಬಾಪುರಿಯಲ್ಲೂ ಹತ್ತು ಹಲವು ವಿಧಗಳಲ್ಲಿ ಜೀವಂತವಾಗಿರಿಸುವ ಪ್ರಯತ್ನಗಳನ್ನು ಮಾಡುತ್ತಾ ಬಂದಿದ್ದಾರೆ. ಕೇರಳದಲ್ಲಿ ಜಾತಿಯ ಪಿಡುಗು ಪೈಶಾಚಿಕ ರೂಪವನ್ನು ಪಡೆದಿದ್ದ ಸಂದರ್ಭದಲ್ಲಿ, ಕೆಳವರ್ಗದಿಂದ ಬಂದ ನಾಣು ಎಂಬ ಹುಡುಗ ನಾರಾಯಣ ಗುರುವಾಗಿ ಸಮಸ್ತ ಮಾನವರಿಗೆ ದಾರಿದೀಪವಾದವರು. ನಾರಾಯಣ ಗುರುವಿನ ಹೆಸರಿನಲ್ಲಿ ಮುಂಬೈಯಲ್ಲಿ ಒಂದಲ್ಲ, ಎರಡಲ್ಲ ಹತ್ತು ಹಲವು ರಸ್ತೆಗಳು, ಚೌಕಗಳು, ಚಾಳ್‌ಗಳು ಇರುವುದನ್ನು ಕಾಣಬಹುದು. ‘ಬಿಲ್ಲವರ ಅಸೋಸಿಯೇಶನ್’ ತನ್ನ ಭವನ ಹೊಂದಿರುವ ಸಾಂತಕ್ರೂಸ್ ಪೂರ್ವದಲ್ಲಿನ ಒಂದು ರಸ್ತೆಗೆ ‘ನಾರಾಯಣಗುರು ಮಾರ್ಗ’ ಎಂದು ನಾಮಕರಣ ಮಾಡಿಸಿದೆ. ಕಾಂದಿವಿಲಿ ಪಾರಿಖ್ ನಗರದಲ್ಲಿರುವ ರಸ್ತೆಯೊಂದಕ್ಕೆ ‘ಬ್ರಹ್ಮಶ್ರೀ ನಾರಾಯಣಗುರು ರೋಡ್’ ಎಂದೂ, ಬೈಂದರ್ ನಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಕೊಂಡಿಯಾಗಿರುವ ಸೇತುವೆಯೊಂದಕ್ಕೆ ‘ಬ್ರಹ್ಮಶ್ರೀ ನಾರಾಯಣಗುರು ಬ್ರಿಡ್ಜ್’ ಎಂದೂ ಹೆಸರಿಸಿದೆ. ಇವು ಎರಡೂ ಸಮಾಜ ಸೇವಕ ರೋಹಿತ್ ಸುವರ್ಣ ಅವರ ಪರಿಶ್ರಮದ ಕೊಡುಗೆ.

ಹನ್ನೆರಡನೇ ಶತಮಾನದ ಕ್ರಾಂತಿಕಾರಿ ಸಮಾಜ ಸುಧಾರಕ ಬಸವಣ್ಣನನ್ನು ಮುಂಬೈ ಜನತೆ ಮರೆತಿಲ್ಲ. ಅಂಬರನಾಥ್ ನಲ್ಲಿ ಕನ್ನಡಿಗರ ಪ್ರತಿಷ್ಠಿತ ಹೆಸರುಗಳಲ್ಲಿ ಹೆಬ್ಬಳ್ಳಿ ಅವರದೂ ಒಂದು. ಅವರ ಹಾಗೂ ಅವರ ಬಳಗದ ಪರಿಶ್ರಮದ ಫಲವಾಗಿ ಮುಂಬೈ ಉಪನಗರ ಅಂಬರ್‌ನಾಥ್ ಪೂರ್ವದಲ್ಲಿ ‘ಬಸವೇಶ್ವರ ಸರ್ಕಲ್’ ಎಂಬ ಹೆಸರುಳ್ಳ ಚೌಕವೊಂದನ್ನು ನಾವು ಗಮನಿಸಬಹುದು. ಧಾರಾವಿಯ ಒಡಲಲ್ಲಿ ಹರಿದಾಡುವ ‘ಸಂತ ಚೆನ್ನಯ್ಯ ಮಾರ್ಗ’ ಅಲ್ಲಿನ ಕನ್ನಡಿಗರ ಸಂಘಟನೆಗೆ ಸಾಕ್ಷಿ ಯಾಗಿದೆ.

 ಕನ್ನಡಿಗರ ಹಿರಿಮೆ ಮೇಧಾವಿ ಸರ್ ಎಂ. ವಿಶ್ವೇಶ್ವರಯ್ಯ ಅವರ ಹೆಸರಿನಲ್ಲಿ ಮಾಟುಂಗದ ಕರ್ನಾಟಕ ಸಂಘದ ಕಟ್ಟಡ ನಿರ್ಮಾಣವಾಯಿತು. ಇಲ್ಲಿರುವ ಸೇತುವೆ ಒಂದಕ್ಕೆ ‘ವಿಶ್ವೇಶ್ವರಯ್ಯ ಫ್ಲೈ ಓವರ್ ಬ್ರಿಡ್ಜ್’ ಎಂದು ಹೆಸರಾಯಿತು.

ಕನ್ನಡದ ಸಾಹಿತಿಗಳು ಮುಂಬೈ ಕನ್ನಡಿಗರಿಗೆ ಸ್ಫೂರ್ತಿಯ ಚಿಲುಮೆ ಯಾದವರು. ಅಂತಹ ಸಾಹಿತಿಗಳ ಕುರಿತು ಚಿಂತನ ಮಂಥನ, ಅವರ ಸಾಹಿತ್ಯದ ಚರ್ಚೆ, ವಿಚಾರ ವಿಮರ್ಶೆಗಳು ಈ ನಗರದಲ್ಲಿ ನಿರಂತರ ನಡೆಯುತ್ತಲೇ ಸಾಗಿದೆ. ಈ ನಗರದ ಜತೆ ಆತ್ಮೀಯ ಒಡನಾಟವನ್ನೂ, ತಮ್ಮ ಕೆಲವೊಂದು ಕೃತಿಗಳಿಗೆ ಈ ನಗರವನ್ನು ಸ್ಫೂರ್ತಿಯಾಗಿಸಿಕೊಂಡಿದ್ದ ಹಿರಿಯ ಸಾಹಿತಿ, ಜ್ಞಾನಪೀಠ ಪುರಸ್ಕೃತ ಶಿವರಾಮ ಕಾರಂತರ ಹೆಸರಿನಲ್ಲಿ ಚಾರ್‌ಕೋಪ್‌ನಲ್ಲಿ ‘ಚಾರ್‌ಕೋಪ್ ಕನ್ನಡಿಗರ ಬಳಗ’ವು ಮುತುವರ್ಜಿವಹಿಸಿ ಅಲ್ಲಿನ ಒಂದು ಚೌಕಕ್ಕೆ ‘ಡಾ. ಶಿವರಾಮ ಕಾರಂತ ಚೌಕ್’ ಎಂದು ಅಭಿಮಾನದಿಂದ ಹೆಸರನ್ನಿಟ್ಟಿದೆ.

 ಬ್ರಿಟಿಷರನ್ನು ದಿಟ್ಟತನದಿಂದ ಎದುರಿಸಿ ಮಣ್ಣಿನ ಋಣಕ್ಕಾಗಿ ದೇಹವನ್ನು ಅರ್ಪಿಸಿದ ಟಿಪ್ಪುಅಂತರ್‌ರಾಷ್ಟ್ರೀಯ ಮಟ್ಟದ ಚಾರಿತ್ರಿಕ ವ್ಯಕ್ತಿ. ಆತನ ನೆನಪಿನಲ್ಲಿ ‘ಮೈಸೂರು ಹುಲಿ ಟಿಪ್ಪುಸುಲ್ತಾನ್ ರೋಡ್’ ಎಂಬ ಮಾರ್ಗವು ಅಂಧೇರಿ ಪೂರ್ವಕ್ಕಿದೆ.
ಸ್ವಾತಂತ್ರ್ಯ ಹೋರಾಟಗಾರ ತಿಮ್ಮಪ್ಪ ಶೆಟ್ಟಿ ಅವರ ಹೆಸರಿನಲ್ಲಿ ‘ಸ್ವಾತಂತ್ರ್ಯ ಸೇನಾನಿ ಕೆ. ಪಿ. ತಿಮ್ಮಪ್ಪಶೆಟ್ಟಿ ಚೌಕ್’ ಎಂಬ ಸರ್ಕಲ್ ಒಂದು ನವಿಮುಂಬೈ ಸಿ.ಬಿ.ಡಿ.ಯಲ್ಲಿದೆ.

ಮುಂಬೈಯ ನಗರ, ಉಪನಗರಗಳಲ್ಲಿ ಕನ್ನಡಿಗರ ಮಂದಿರಗಳು ಸಾವಿರಾರು. ಊರಿನ ಮಂದಿರಗಳು ಹಾಗೂ ಇಲ್ಲಿನ ಮಂದಿರಗಳಿಗೆ ಮುಂಬೈ ಕನ್ನಡಿಗರು ಸುರಿದ ಹಣವನ್ನು ಒಟ್ಟುಗೂಡಿಸಿದರೆ ಬಹುಶಃ ಅವಿಭಜಿತ ದಕ್ಷಿಣ ಕನ್ನಡದಂತಹ ಒಂದು ಬೃಹತ್ ನಗರವನ್ನೇ ಕಟ್ಟಬಹುದಿತ್ತೋ ಏನೋ. ಆದರೆ ಮುಂಬೈಯ ಮಂದಿರಗಳು ಹಣಮಾಡುವ ಕೇಂದ್ರಗಳಾಗಿರಲಿಲ್ಲ. ಅವು ತಮ್ಮ ನಾಡು, ಭಾಷೆ, ಸಂಸ್ಕೃತಿಗೆ ಒತ್ತುಕೊಟ್ಟು ಕನ್ನಡಿಗರ ಬದುಕು ಕಟ್ಟುವಲ್ಲಿ ಬಹುಮುಖ್ಯ ಪಾತ್ರವಹಿಸಿವೆ; ವಹಿಸುತ್ತಿವೆ ಎಂಬುದು ತೃಪ್ತಿ ಹಾಗೂ ಆಶಾದಾಯಕವಾಗಿದೆ. ಈ ಮಂದಿರಗಳು ಕೆಲವೊಂದು ಸ್ಥಳೀಯ ನಾಯಕರ ಸಹಕಾರದಿಂದ ತಮ್ಮ ಮಂದಿರದ ಆಸುಪಾಸಿನ ರಸ್ತೆಗಳಿಗೆ ತಮ್ಮ ಹೆಸರನ್ನು ಪಡೆದುಕೊಂಡಿವೆ. ‘ಮೂಕಾಂಬಿಕ ಮಂದಿರ ರೋಡ್’ (ಘನ್ಸೋಲಿ), ‘ಮಹಿಷಮರ್ದಿನಿ ಟೆಂಪಲ್ ರೋಡ್’ (ಬೊರಿವಿಲಿ), ‘ಸೈಂಟ್ ಜೋಸೆಫ್ ಚರ್ಚ್ ರೋಡ್’ (ಮೀರಾರೋಡ್ ಪೂರ್ವ), ‘ಶಾಂತ ದುರ್ಗಾ ದೇವಸ್ಥಾನ ರಸ್ತೆ’ (ಗೋರೆಗಾಂವ್), ‘ಅಯ್ಯಪ್ಪಮಂದಿರ ರೋಡ್’(ನೆರೂಲ್ ಪೂರ್ವ), ‘ಶನೀಶ್ವರ ದ್ವಾರ’ (ನೆರೂಲ್ ಪೂರ್ವ), ‘ದತ್ತ ದುರ್ಗಾಂಬಿಕಾ ಮಾರ್ಗ್’ (ಘಾಟ್ ಕೋಪರ್ ಪಶ್ಚಿಮ) ಮೊದಲಾದವುಗಳನ್ನು ಗುರುತಿಸಬಹುದು. ಸಂತ ಕ್ರಾಸ್ ಪೂರ್ವದಲ್ಲಿ ಒಂದೆರಡು ವರ್ಷಗಳ ಹಿಂದೆ ನಾಮಕರಣಗೊಂಡ ‘ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಚೌಕ್’ ಕೂಡ ಉಲ್ಲೇಖನೀಯ.

 ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ‘ಬಂಟ್ಸ್ ಸಂಘ ಮುಂಬೈ’, ತನ್ನ ಭವನವನ್ನು ಹೊಂದಿರುವ ಕುರ್ಲಾ ಪೂರ್ವದ ರಸ್ತೆಯೊಂದಕ್ಕೆ ‘ಬಂಟರ ಭವನ ಮಾರ್ಗ್’ ಹೆಸರನ್ನಿಟ್ಟಿದೆ. ಹಾಗೆಯೇ ಬಿ.ಎಸ್.ಕೆ.ಬಿ. ಅಸೋಸಿಯೇಶನ್ ತನ್ನ ಕಟ್ಟಡ ಇರುವ ಗೋಕುಲ ಭವನದ ಎದುರಿಗಿರುವ ರಸ್ತೆಗೆ ‘ಗೋಕುಲ್ ರೋಡ್’ (ಸಯನ್) ಎಂದು ಇಟ್ಟುಕೊಂಡಿದೆ.

ನೂರು ವರ್ಷ ಇತಿಹಾಸವನ್ನು ಹೊಂದಿರುವ ಮೊಗವೀರ ವ್ಯವಸ್ಥಾಪಕ ಮಂಡಳಿಯು ಬೃಹತ್ ವಿದ್ಯಾ ಸಂಕುಲವನ್ನು ಅಂದೇರಿಯಲ್ಲಿ ಹೊಂದಿದೆ. ಆ ವಿದ್ಯಾಸಂಕುಲದ ಎದುರಿರುವ ಮಾರ್ಗಕ್ಕೆ ‘ಎಂ. ವಿ. ಎಂ. ಎಜುಕೇಶನ್ ಕ್ಯಾಂಪಸ್ ಮಾರ್ಗ’ವೆಂದು ಹೆಸರಿಟ್ಟಿದೆ.

ಮಾಟುಂಗದಲ್ಲಿರುವ ಗಂಗಾವಿಹಾರ್ ಹೊಟೇಲ್‌ನ ಎದುರಿಗಿರುವ ವೃತ್ತವನ್ನು ‘ಗಂಗಾವಿಹಾರ್ ಚೌಕ್’ ಎಂದು ಗುರುತಿಸಲಾಗುತ್ತಿದೆ. ಕೋಟೆ ಪರಿಸರದಲ್ಲಿ ಟಾಟಾ ಹೌಸ್‌ನ ಎದುರಿಗಿರುವ ರಸ್ತೆಯೇ ‘ಮುದ್ದಣ್ಣ ಶೆಟ್ಟಿ ರೋಡ್’. ಹಿಂದೊಮ್ಮೆ ‘ಪುಂಗಿ ಬಜಾವೋ ಲುಂಗಿ ಹಠಾವೋ’ ಎಂಬ ಘೋಷಣೆ ಉತ್ತುಂಗ ಸ್ಥಿತಿಯಲ್ಲಿದ್ದಾಗ ಘಾಟ್‌ಕೋಪರ್‌ನ ‘ವೆಲ್ಕಂ ಹೊಟೇಲ್’ ಮಾತ್ರ ತೆರೆದಿದ್ದು, ‘‘ಬರುವವರು ಬನ್ನಿ ನೋಡೋಣ’’ ಎನ್ನುತ್ತಾ ಬಿಸಿಯೆಣ್ಣೆ ಸ್ವಾಗತಕ್ಕಾಗಿ ನಿಂತಿತ್ತು. ಆ ಹೊಟೇಲ್‌ನ ಮಾಲಕರಾಗಿದ್ದವರು ಮುದ್ದಣ್ಣ ಶೆಟ್ಟಿ. ಅವಿಭಜಿತ ದಕ್ಷಿಣ ಕನ್ನಡದ ಶಿಬರೂರಿನ (ತಿಬರ್) ಮನೆಯವರಾದ ಮುದ್ದಣ್ಣ ಶೆಟ್ಟಿ ಧೀಮಂತ ವ್ಯಕ್ತಿತ್ವ ಹೊಂದಿದವರು. ಜೀವನಪರ್ಯಂತ ಬರಿಗಾಲಲ್ಲೇ ಬದುಕಿದ್ದ, ಗಾಂಧಿ ಚಿಂತನೆಯನ್ನು ಅಳವಡಿಸಿಕೊಂಡಿದ್ದ ಇವರು ನಿತ್ಯಾನಂದರ ಪರಮ ಭಕ್ತರು.

ಮುಂಬೈನಗರದ ಮೈಯನ್ನು ಸವರುತ್ತ ಒಂದು ಸುತ್ತು ಬಂದರೆ ಕನ್ನಡದ ಕಂಪು ಎಲ್ಲೆಂದರಲ್ಲಿ ಹರಡಿರುವುದು ನಮ್ಮ ಗಮನಕ್ಕೆ ಬರುತ್ತದೆ. ಇವು ಕೇವಲ ರಸ್ತೆಗಳ ಹೆಸರುಗಳಲ್ಲ, ಈ ನಾಡಿನಲ್ಲಿ ಕನ್ನಡವನ್ನು ಕಟ್ಟುವ, ಕಾಪಿಡುವ ಮಂತ್ರ; ಕನ್ನಡ ತೇರನೆಳೆವ ಕನ್ನಡದ ಕಂಪನ್ನು ಪಸರಿಸುವ ಮಂತ್ರ. ಮುಂಬೈ ಕನ್ನಡಿಗರು, ಅದರಲ್ಲೂ ಮುಖ್ಯವಾಗಿ ಆ ನಾಮಫಲಕಗಳು ರಾರಾಜಿಸುವಲ್ಲಿ ಶ್ರಮ ವಹಿಸಿದ್ದ ಸಂಘಟನೆಗಳು, ವ್ಯಕ್ತಿಗಳು ಆ ರಸ್ತೆಗಳಲ್ಲಿ, ವೃತ್ತಗಳಲ್ಲಿರುವ ನಾಮಫಲಕಗಳು ಈಗ ಯೋಗ್ಯ ಸ್ಥಿತಿಯಲ್ಲಿವೆಯೋ ಎನ್ನುವುದರ ಬಗ್ಗೆ ನಿಗಾ ವಹಿಸಬೇಕು. ಇಲ್ಲದಿದ್ದರೆ ಒಂದಿಷ್ಟು ಸಮಯದ ನಂತರ ನಾದುರಸ್ತಿಯಾಗಿರುವ ಆ ನಾಮ ಫಲಕಗಳ ಜಾಗದಲ್ಲಿ ಬೇರೆ ನಾಮಫಲಕಗಳು ರಾರಾಜಿಸಬಹುದು. ಈ ನಿಟ್ಟಿನಲ್ಲಿ ಬಿಎಂಸಿಯನ್ನು ಸದಾ ಸಂಪರ್ಕದಲ್ಲಿ ಇಟ್ಟುಕೊಳ್ಳುವುದು ಅವಶ್ಯಕವಾಗಿದೆ. ಏಕೆಂದರೆ, ಈ ನೆಲದಲ್ಲಿ ಆ ಹೆಸರುಗಳು ಜೀವಪಡೆದ ರಹಸ್ಯವೇ ಚೋದ್ಯವನ್ನುಂಟು ಮಾಡುವಂತಹದ್ದು, ಅಭಿಮಾನದ ಪೂರವನ್ನು ಹರಿಸುವಂತಹದ್ದು. ಅಂತಹ ಹೆಸರುಗಳಿಗೆ ತಲೆಬಾಗಿ ನಮನ.

Writer - ದಯಾನಂದ ಸಾಲ್ಯಾನ್

contributor

Editor - ದಯಾನಂದ ಸಾಲ್ಯಾನ್

contributor

Similar News