ಪ್ರಧಾನಿ ನರೇಂದ್ರ ಮೋದಿಯನ್ನು ಬೆಂಬಲಿಸಿ ಟ್ವೀಟ್‌ ಮಾಡಿದ ಜಗನ್‌ ಮೋಹನ್‌ ರೆಡ್ಡಿ

Update: 2021-05-07 17:35 GMT

ಹೊಸದಿಲ್ಲಿ: ನನಗೆ ದೂರವಾಣಿ ಕರೆಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ವ್ಯಾಪಿಸಿರುವ ಕೋವಿಡ್-19 ಬಿಕ್ಕಟ್ಟಿನ ಪರಿಸ್ಥಿತಿಯ ಗಂಭೀರತೆ ಅರಿಯುವ ಬದಲಿಗೆ ತಮ್ಮ ಮನ್ ಕೀ ಬಾತ್ ಆಡುತ್ತಿದ್ದರು ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಹೇಳಿಕೆಯು ಪರ-ವಿರೋಧಕ್ಕೆ ಕಾರಣವಾಗಿದೆ. 

ಕೇಂದ್ರ ಸಚಿವರು ಹಾಗೂ ಬಿಜೆಪಿ ನಾಯಕರು ಪ್ರಧಾನಿಯವರನ್ನು ಸಮರ್ಥಿಸಿಕೊಂಡಿದ್ದು, ಇದೀಗ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ  ಕೂಡ ಪ್ರಧಾನಿ ಪರ ವಹಿಸಿ ಮಾತನಾಡಿದ್ದಾರೆ. 

ವೈಎಸ್ಆರ್ ಕಾಂಗ್ರೆಸ್ ಮುಖ್ಯಸ್ಥರಾಗಿರುವ ರೆಡ್ಡಿ ಅವರು "ನಮ್ಮ ರಾಷ್ಟ್ರವನ್ನು ದುರ್ಬಲಗೊಳಿಸುವ ರಾಜಕೀಯದಲ್ಲಿ ಪಾಲ್ಗೊಳ್ಳಬೇಡಿ" ಎಂದು ಸೊರೆನ್ ಅವರನ್ನು  ಒತ್ತಾಯಿಸಿದರು ಹಾಗೂ  ಕೇಂದ್ರ ಸರಕಾದ ಕೋವಿಡ್ ವಿರುದ್ದ ಹೋರಾಟದಲ್ಲಿ ಒಗ್ಗೂಡಿ ಬಲಪಡಿಸುವಂತೆ ಕೇಳಿಕೊಂಡರು.

"ಆತ್ಮೀಯ ಹೇಮಂತ್ ಸೊರೆನ್, ನನಗೆ ನಿಮ್ಮ ಬಗ್ಗೆ ಅಪಾರ ಗೌರವವಿದೆ ... ಆದರೆ ನಮ್ಮ ಭಿನ್ನಾಭಿಪ್ರಾಯಗಳು ಏನೇ ಇರಲಿ, ಅಂತಹ ರಾಜಕೀಯದಲ್ಲಿ ಪಾಲ್ಗೊಳ್ಳುವುದು ನಮ್ಮ ರಾಷ್ಟ್ರವನ್ನು ದುರ್ಬಲಗೊಳಿಸುತ್ತದೆ ಎಂದು ಸಹೋದರನಾಗಿ ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ಕೋವಿಡ್ ವಿರುದ್ಧದ ಈ ಯುದ್ಧದಲ್ಲಿ ಪರಸ್ಪರ ಬೆರಳುಗಳನ್ನು ತೋರಿಸುವ ಸಮಯ  ಇದಲ್ಲ., ಆದರೆ ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ಎದುರಿಸಲು ನಮ್ಮ ಪ್ರಧಾನ ಮಂತ್ರಿಯ ಕೈಗಳನ್ನು ಬಲಪಡಿಸಬೇಕು "ಎಂದು ಅವರು ಟ್ವೀಟ್ ಮಾಡಿದ್ದಾರೆ.

ಜಗನ್  ತಂದೆ, ದಿವಂಗತ ವೈ.ಎಸ್.ರಾಜಶೇಖರ ರೆಡ್ಡಿ ಅವರು ಮುಖ್ಯಮಂತ್ರಿಯಾಗಿದ್ದಾಗ ಫಾರ್ಮಾ ಸಂಸ್ಥೆಗಳಿಗೆ ಭೂ ಹಂಚಿಕೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಜಗನ್ ಗೆ ನೀಡಿರುವ ಜಾಮೀನು ರದ್ದುಗೊಳಿಸುವಂತೆ ಕೋರಿರುವ ಪ್ರಕರಣವನ್ನು ಸಿಬಿಐ ನ್ಯಾಯಾಲಯವು ವಿಚಾರಣೆ ನಡೆಸಲಿರುವ ಕೆಲವು ದಿನಗಳ ಮೊದಲು ರೆಡ್ಡಿ ಅವರು ಪ್ರಧಾನ ಮಂತ್ರಿಯನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ.

ಒಡಿಶಾದ ಕಾಂಗ್ರೆಸ್ ಲೋಕಸಭಾ ಸಂಸದ ಸಪ್ತಗಿರಿ ಉಲಕಾ ಅವರು  ಜಗನ್ ಅವರ ನಡೆಯನ್ನು ಟೀಕಿಸಿದ್ದಾರೆ. "ಕಾಂಗ್ರೆಸ್ಸಿನ ಅಂತಹ ಮಹಾನ್ ನಾಯಕ , ದಿವಂಗತ ವೈ.ಎಸ್. ರಾಜಶೇಖರ ರೆಡ್ಡಿಜೀ ಅವರ ಮಗ,  ಸಿಬಿಐ, ಈಡಿ ದಾಳಿಯ ಭಯದಿಂದ ಕ್ಷುಲ್ಲಕ ರಾಜಕೀಯ ಮಾಡುತ್ತಿದ್ದಾರೆ. ನೀವು ಬೆಳೆಯಿರಿ, ನೀವು ಈಗ ಸಿಎಂ ಆಗಿದ್ದೀರಿ" ಎಂದು ಸಪ್ತಗಿರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News