ಉ.ಪ್ರದೇಶ ಪಂಚಾಯತ್ ಚುನಾವಣೆ: ಸೋತ ಅಭ್ಯರ್ಥಿಗೆ ಗೆಲುವಿನ ಪ್ರಮಾಣಪತ್ರ ನೀಡಿದ ಅಧಿಕಾರಿಯ ವಿರುದ್ಧ ಎಫ್‌ಐಆರ್

Update: 2021-05-07 17:50 GMT

ಲಕ್ನೊ, ಮೇ 7: ಸೋತ ಅಭ್ಯರ್ಥಿಗೆ ಗೆದ್ದಿರುವ ಅಭ್ಯರ್ಥಿಯೆಂದು ಪ್ರಮಾಣ ಪತ್ರ ನೀಡಿದ ಆರೋಪದಲ್ಲಿ ಉತ್ತರಪ್ರದೇಶದ ಸರಕಾರಿ ಸಿಬ್ಬಂದಿ

ಯೊಬ್ಬರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಇತ್ತೀಚೆಗೆ ನಡೆದ ಗ್ರಾಮಪಂಚಾಯತ್ ಚುನಾವಣೆಯಲ್ಲಿ ಈ ಸಿಬ್ಬಂದಿ

 ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು.

ವಾರ್ಡ್ ಸಂಖ್ಯೆ 60ರಲ್ಲಿ ಸ್ಪರ್ಧಿಸಿದ್ದ ರವಿ ನಿಶಾದ್ ಮತ್ತು ವಾರ್ಡ್ ಸಂಖ್ಯೆ 61ರಲ್ಲಿ ಸ್ಪರ್ಧಿಸಿದ್ದ ಕೊಡಾಯ್ ನಿಶಾದ್ ತಾವು 2,000ಕ್ಕೂ ಅಧಿಕ 

ಮತಗಳ ಅಂತರದಿಂದ ಗೆದ್ದಿದ್ದರೂ ಗೆಲುವಿನ ಪ್ರಮಾಣಪತ್ರವನ್ನು ವಾರ್ಡ್ ಸಂಖ್ಯೆ 60ರಲ್ಲಿ ಗೋಪಾಲ್ ಯಾದವ್ ಮತ್ತು 61ರಲ್ಲಿ ರಮೇಶ್ 

ಎಂಬವರಿಗೆ ನೀಡಲಾಗಿದೆ ಎಂದು ದೂರಿದ್ದರು. ಬಳಿಕ ನಿಶಾದ್ ಬೆಂಬಲಿಗರು ನಾಯ್ ಬಝಾರ್ ರಸ್ತೆಯಲ್ಲಿ ಪ್ರತಿಭಟನೆ ನಡೆಸಿ ಕಲ್ಲು ತೂರಾಟ

 ನಡೆಸಿದ್ದರು ಮತ್ತು ಪೊಲೀಸ್ ಠಾಣೆಯೊಂದಕ್ಕೆ ಬೆಂಕಿ ಹಚ್ಚಿದ್ದರು ಎಂದು ಸುದ್ಧಿಸಂಸ್ಥೆ ವರದಿ ಮಾಡಿದೆ.

ಈ ಹಿನ್ನೆಲೆಯಲ್ಲಿ ಎರಡೂ ವಾರ್ಡ್ಗಳಲ್ಲಿ ಮರು ಮತ ಎಣಿಕೆ ನಡೆಸುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶಿಸಿದ್ದರು. ಅದರಂತೆ ಗುರುವಾರ ನಡೆದ 

ಮರುಮತ ಎಣಿಕೆಯಲ್ಲಿ ರವಿ ನಿಶಾದ್ ಮತ್ತು ಕೊಡಾಯ್ ನಿಶಾದ್ ಗೆದ್ದಿದ್ದರು. ಈ ಕುರಿತಾದಂತೆ, ಪ್ರಮಾಣಪತ್ರ ನೀಡಿದ್ದ ಸಿಬಂದಿ ವೀರೇಂದ್ರ

 ಕುಮಾರ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಜಲಸಂಪನ್ಮೂಲ ಇಲಾಖೆಯಲ್ಲಿ ಅವರು ಕಾರ್ಯನಿರ್ವಹಿಸುತ್ತಿದ್ದು ಅವರ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಲಾಗಿದೆ 

ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಳಿದ್ದಾರೆ. ಜೊತೆಗೆ ಗಲಭೆ , ಕಲ್ಲೆಸೆತ ಮತ್ತು ಠಾಣೆಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ 60 ಮಂದಿಯ ವಿರುದ್ಧ 

ಹಾಗೂ ಗುರುತಿಸಲಾಗದ 500 ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News