ಕೋವಿಡ್-19:ಸಿಬ್ಬಂದಿಗಳ ಹಾಜರಾತಿ ಕುರಿತು ಕೇಂದ್ರದಿಂದ ಹೊಸ ಮಾರ್ಗಸೂಚಿ ಪ್ರಕಟ

Update: 2021-05-07 18:05 GMT

ಹೊಸದಿಲ್ಲಿ,ಮೇ 7: ಕಚೇರಿಯಲ್ಲಿ ಕೋವಿಡ್-19 ಸ್ಥಿತಿ ಮತ್ತು ನೌಕರರ ಅಗತ್ಯವನ್ನು ಪರಿಗಣಿಸಿ ತಮ್ಮ ಕಚೇರಿಗಳ ಉದ್ಯೋಗಿಗಳ ಹಾಜರಾತಿಯನ್ನು ನಿಯಂತ್ರಿಸುವಂತೆ ಸಿಬ್ಬಂದಿ ಸಚಿವಾಲಯವು ಕೇಂದ್ರ ಸರಕಾರದ ಎಲ್ಲ ಇಲಾಖೆಗಳ ಕಾರ್ಯದರ್ಶಿಗಳಿಗೆ ಆದೇಶವನ್ನು ಹೊರಡಿಸಿದೆ. ಅಂಗವಿಕಲ ಮತ್ತು ಗರ್ಭಿಣಿ ಉದ್ಯೋಗಿಗಳಿಗೆ ಕಚೇರಿಗೆ ಹಾಜರಾಗುವುದರಿಂದ ವಿನಾಯಿತಿಯನ್ನು ನೀಡಬಹುದು,ಆದರೆ ಅವರು ಮನೆಯಿಂದಲೇ ಕೆಲಸವನ್ನು ಮುಂದುವರಿಸಬೇಕು ಎಂದು ಅದು ತಿಳಿಸಿದೆ.

ಎಲ್ಲ ಸ್ತರಗಳಲ್ಲಿ ತಮ್ಮ ಕಚೇರಿಗಳಲ್ಲಿಯ ಉದ್ಯೋಗಿಗಳ ಹಾಜರಾತಿಯನ್ನು ನಿಯಂತ್ರಿಸುವಂತೆ ಎಲ್ಲ ಸಚಿವಾಲಯಗಳು/ಇಲಾಖೆಗಳ ಕಾರ್ಯದರ್ಶಿಗಳು ಮತ್ತು ಸಂಬಂಧಿತ ಇಲಾಖೆಗಳು ಮತ್ತು ಕಚೇರಿಗಳ ಮುಖ್ಯಸ್ಥರಿಗೆ ಆದೇಶಿಸಲಾಗಿದೆ, ಕಚೇರಿಗಳು/ಕೆಲಸದ ಸ್ಥಳಗಳಲ್ಲಿ ಉದ್ಯೋಗಿಗಳ ದಟ್ಟಣೆಯನ್ನು ನಿವಾರಿಸಲು ಅವರಿಗೆ ವಿಭಿನ್ನ ಸಮಯವನ್ನು ನಿಗದಿಗೊಳಿಸಬೇಕು ಎಂದಿದೆ. ಕಂಟೈನ್ಮೆಂಟ್ ವಲಯಗಳಲ್ಲಿ ವಾಸವಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅಧಿಸೂಚನೆಯನ್ನು ವಾಪಸ್ ಪಡೆಯುವವರೆಗೆ ಕಚೇರಿಗಳಿಗೆ ಹಾಜರಾಗುವುದರಿಂದ ವಿನಾಯಿತಿ ನೀಡಲಾಗಿದೆ. ಈ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮನೆಯಿಂದಲೇ ಕಚೇರಿ ಕಾರ್ಯವನ್ನು ನಿರ್ವಹಿಸಬೇಕು ಮತ್ತು ದೂರವಾಣಿ ಹಾಗು ಇತರ ವಿದ್ಯುನ್ಮಾನ ಸಂವಹನ ಮಾರ್ಗಗಳಲ್ಲಿ ಸಂಪರ್ಕಕ್ಕೆ ಲಭ್ಯರಿರಬೇಕು ಎಂದು ತಿಳಿಸಿರುವ ಸಚಿವಾಲಯವು ಕಚೇರಿಗೆ ಹಾಜರಾಗುವ ಎಲ್ಲ ಸಿಬ್ಬಂದಿಗಳು ಮಾಸ್ಕ್ ಧರಿಸುವಿಕೆ,ಸುರಕ್ಷಿತ ಅಂತರ ಸೇರಿದಂತೆ ಎಲ್ಲ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದಿದೆ.

ಸಭೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕವೇ ನಡೆಸಬೇಕು ಮತ್ತು ಅಗತ್ಯವಲ್ಲದಿದ್ದರೆ ಸಂದರ್ಶಕರೊಂದಿಗೆ ಭೇಟಿಯನ್ನು ನಿವಾರಿಸಬೇಕು. 18 ವರ್ಷ ಮೇಲ್ಪಟ್ಟ ಎಲ್ಲ ಉದ್ಯೋಗಿಗಳು ಲಸಿಕೆಗಳನ್ನು ಹಾಕಿಸಿಕೊಳ್ಳಬೇಕು. ಮುಂದಿನ ಆದೇಶದವರೆಗೆ ಬಯೊಮೆಟ್ರಿಕ್ ಹಾಜರಾತಿ ಚಾಲ್ತಿಯಲ್ಲಿರುವುದಿಲ್ಲ ಎಂದಿರುವ ಸಚಿವಾಲಯವು,ನೂತನ ಮಾರ್ಗಸೂಚಿ ಮೇ 31ರವರೆಗೆ ಜಾರಿಯಲ್ಲಿರುತ್ತದೆ ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News