ದೇಶದಲ್ಲಿ ಒಂದೇ ದಿನ ನಾಲ್ಕು ಸಾವಿರಕ್ಕೂ ಹೆಚ್ಚು ಕೋವಿಡ್ ಸೋಂಕಿತರು ಮೃತ್ಯು

Update: 2021-05-08 03:51 GMT

ಹೊಸದಿಲ್ಲಿ: ಕೋವಿಡ್-19 ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಒಂದೇ ದಿನ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ನಾಲ್ಕು ಸಾವಿರದ ಗಡಿ ದಾಟಿದೆ. ಸತತ ಮೂರನೇ ದಿನವೂ ನಾಲ್ಕು ಲಕ್ಷಕ್ಕಿಂತ ಅಧಿಕ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.

ಶುಕ್ರವಾರ ದೇಶದಲ್ಲಿ 4187 ಸಾವು ಸಂಭವಿಸಿದ್ದು, ಬ್ರೆಝಿಲ್ ಮತ್ತು ಅಮೆರಿಕವನ್ನು ಹೊರತುಪಡಿಸಿದರೆ ಒಂದೇ ದಿನ ಇಷ್ಟೊಂದು ಸಂಖ್ಯೆಯ ಸಾವನ್ನು ದಾಖಲಿಸಿದ ಮೊದಲ ದೇಶ ಎನಿಸಿಕೊಂಡಿದೆ. ವಿಶ್ವದಲ್ಲಿ ಅತ್ಯಧಿಕ ಎಂದರೆ 4490 ಸಾವು ಜ. 12ರಂದು ಅಮೆರಿಕದಲ್ಲಿ ದಾಖಲಾಗಿತ್ತು.

ದೇಶದಲ್ಲಿ ಶುಕ್ರವಾರ 4,01,522 ಹೊಸ ಪ್ರಕರಣಗಳು ವರದಿಯಾಗಿದ್ದು, ಮೊದಲ ಅಲೆಯಲ್ಲಿ ಭಾರತದಲ್ಲಿ ದಾಖಲಾದ ಒಟ್ಟು ಪ್ರಕರಣಗಳಿಗಿಂತ ಅಧಿಕ ಪ್ರಕರಣಗಳು ಎರಡನೇ ಅಲೆಯ ಕೇವಲ 82 ದಿನಗಳ ಅವಧಿಯಲ್ಲಿ ಭಾರತದಲ್ಲಿ ದಾಖಲಾಗಿವೆ. ಮೊದಲ ಅಲೆಯಲ್ಲಿ 2020ರ ಜನವರಿ 30ರಿಂದ 2021ರ ಫೆಬ್ರುವರಿ 14ರವರೆಗೆ ಒಟ್ಟು 1,09,16,481 ಪ್ರಕರಣಗಳು ವರದಿಯಾಗಿದ್ದವು. ಆದರೆ ಎರಡನೇ ಅಲೆಯಲ್ಲಿ ಫೆಬ್ರುವರಿ 14ರ ಬಳಿಕ 82 ದಿನಗಳಲ್ಲಿ 1,09,69,039 ಪ್ರಕರಣಗಳು ದೃಢಪಟ್ಟಿವೆ.

ದೇಶದಲ್ಲಿ ಯಾವಾಗ ಎರಡನೇ ಅಲೆ ಆರಂಭವಾಗಿದೆ ಎಂದು ನಿರ್ದಿಷ್ಟ ದಿನವನ್ನು ಹೇಳುವಂತಿಲ್ಲವಾದರೂ ಫೆ. 14ರಂದು ಏಳು ದಿನಗಳ ಸರಾಸರಿ ಗಣನೀಯ ಏರಿಕೆಯನ್ನು ಕಂಡಿತ್ತು. ಇಡೀ ವಿಶ್ವದಲ್ಲೇ ಅತಿಕ್ಷಿಪ್ರವಾಗಿ ಅಂದರೆ 82 ದಿನಗಳಲ್ಲಿ ಹೊಸ ಪ್ರಕರಣಗಳು ವರದಿಯಾಗಿವೆ. ಮೊದಲ ಅಲೆಯಲ್ಲಿ ಕಂಡುಬಂದ ಪ್ರಕರಣಗಳ ನಾಲ್ಕುಪಟ್ಟು ಹೆಚ್ಚು ಪ್ರಕರಣಗಳು ಈ ಬಾರಿ ಪ್ರತಿದಿನ ವರದಿಯಾಗುತ್ತಿವೆ.

ಫೆಬ್ರುವರಿ 14ರಿಂದೀಚೆಗೆ ಭಾರತದಲ್ಲಿ 82 ಸಾವಿರ ಕೋವಿಡ್ ಸಾವಿನ ಪ್ರಕರಣಗಳು ವರದಿಯಾಗಿದ್ದು, ಇದು ಈ ಹಿಂದೆ ಸಂಭವಿಸಿದ ಒಟ್ಟು ಸಾವಿನ ಸಂಖ್ಯೆಯ ಅರ್ಧಕ್ಕಿಂತಲೂ ಅಧಿಕ. ಭಾರತದಲ್ಲಿ ಇದುವರೆಗೆ ಒಟ್ಟು 2,38,197 ಮಂದಿ ಕೋವಿಡ್-19 ಸೋಂಕಿಗೆ ಬಲಿಯಾಗಿದ್ದಾರೆ. ಕರ್ನಾಟಕದಲ್ಲಿ ಇದುವರೆಗಿನ ಗರಿಷ್ಠ ಅಂದರೆ 592 ಮಂದಿ ಒಂದೇ ದಿನ ವೈರಸ್‌ಗೆ ಬಲಿಯಾಗಿದ್ದು, ಉಳಿದಂತೆ ಒಟ್ಟು ಐದು ರಾಜ್ಯಗಳಲ್ಲಿ ಗರಿಷ್ಠ ಸಾವು ಸಂಭವಿಸಿದೆ.

ಮಹಾರಾಷ್ಟ್ರ 898 ಸಾವಿನೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಮೂರನೇ ಸ್ಥಾನದಲ್ಲಿರುವ ಉತ್ತರ ಪ್ರದೇಶದಲ್ಲಿ 372, ತಮಿಳುನಾಡು (197), ರಾಜಸ್ಥಾನ (164) ಮತ್ತು ಹಿಮಾಚಲ ಪ್ರದೇಶ (56) ಕೂಡಾ ಇದುವರೆಗಿನ ಗರಿಷ್ಠ ಸಾವಿನ ಪ್ರಕರಣಗಳನ್ನು ಕಂಡಿವೆ. ದೆಹಲಿ (341), ಛತ್ತೀಸ್‌ಗಢ (208), ಪಂಜಾಬ್ (165), ಹರ್ಯಾಣ (162), ಉತ್ತರಾಖಂಡ (137), ಜಾರ್ಖಂಡ್ (136) ಮತ್ತು ಬಂಗಾಳ (112) ಕೂಡಾ 100ಕ್ಕೂ ಅಧಿಕ ಸಾವನ್ನು ದಾಖಲಿಸಿವೆ.

ಪಂಜಾಬ್ ಹಾಗೂ ಛತ್ತೀಸ್‌ಗಢದಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 10 ಸಾವಿರದ ಗಡಿ ದಾಟಿದ್ದು, ಒಟ್ಟು ಎಂಟು ರಾಜ್ಯಗಳಲ್ಲಿ 10 ಸಾವಿರಕ್ಕಿಂತ ಅಧಿಕ ಮಂದಿ ವೈರಸ್‌ಗೆ ಬಲಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News