​ಕೋವಿಡ್-19 ಕೇವಲ ಶ್ವಾಸಕೋಶ ರೋಗವಲ್ಲ; ತಜ್ಞರು ಹೇಳುವುದೇನು ?

Update: 2021-05-08 04:11 GMT

ಹೊಸದಿಲ್ಲಿ: ಆರಂಭದಲ್ಲಿ ಅಂದುಕೊಂಡಿದ್ದಂತೆ ಕೋವಿಡ್-19 ರೋಗ ಕೇವಲ ಶ್ವಾಸಕೋಶದ ಕಾಯಿಲೆಯಲ್ಲ; ಇದು ಅಪಾಯಕಾರಿ ರಕ್ತ ಹೆಪ್ಪುಗಟ್ಟುವಿಕೆಗೂ ಕಾರಣವಾಗಬಲ್ಲದು ಎನ್ನುವುದನ್ನು ಹಲವು ಅಂತರರಾಷ್ಟ್ರೀಯ ಅಧ್ಯಯನಗಳು ದೃಢಪಡಿಸಿವೆ.

ಹಲವು ಪ್ರಕರಣಗಳಲ್ಲಿ ಮೊಣಕಾಲುಗಳನ್ನು ಉಳಿಸಬೇಕಿದ್ದರೆ ತಕ್ಷಣ ಇಂಥ ರಕ್ತಹೆಪ್ಪುಗಟ್ಟುವಿಕೆಯನ್ನು ತಡೆಯಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಡೀಪ್ ವೈನ್ ಥ್ರೊಂಬೋಸಿಸ್ (ಡಿವಿಟಿ) ಎಂಬ ರಕ್ತಹೆಪ್ಪುಗಟ್ಟುವಿಕೆ ಸಮಸ್ಯೆ ಆಸ್ಪತ್ರೆಗೆ ದಾಖಲಾದ ಶೇಕಡ 28ರಷ್ಟು ಕೋವಿಡ್-19 ರೋಗಿಗಳಲ್ಲಿ ಕಂಡುಬಂದಿದೆ ಹಾಗೂ 2.5 ಶೇಕಡ ಮಂದಿಯಲ್ಲಿ ಏಟ್ರಿಯಲ್ ಥ್ರಂಬೋಸಿಸ್ ಸಮಸ್ಯೆ ಕಂಡುಬಂದಿದೆ ಎನ್ನುವುದನ್ನು ಜಾಗತಿಕ ಅಧ್ಯಯನಗಳು ದೃಢಪಡಿಸಿವೆ.

ಭಾರತದಲ್ಲಿ ಕೂಡಾ ಇಂಥದ್ದೇ ಪ್ರವೃತ್ತಿ ಕಂಡುಬಂದಿದ್ದು, ಈ ಸೋಂಕಿನಿಂದ ಶ್ವಾಸಕೋಶದ ಮೇಲಾಗುವಷ್ಟೇ ಪರಿಣಾಮ ರಕ್ತನಾಳಗಳ ಮೇಲೆ ಕೂಡಾ ಅಗುತ್ತದೆ ಎಂದು ತಜ್ಞರು ಹೇಳುತ್ತಾರೆ. "ಪ್ರತಿ ವಾರ ಐದರಿಂದ ಆರು ಇಂಥ ಪ್ರಕರಣಗಳನ್ನು ನಾವು ನಿಭಾಯಿಸುತ್ತಿದ್ದೇವೆ. ಈ ವಾರ ಪ್ರತಿದಿನ ಇಂಥ ಒಂದು ಸಂಕೀರ್ಣ ಸಮಸ್ಯೆಗಳು ಕಾಣಿಸಿಕೊಂಡಿವೆ" ಎಂದು ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಯ ಹೃದ್ರೋಗ ಶಸ್ತ್ರಚಿಕಿತ್ಸಕ ಡಾ.ಅಂಬರೀಶ್ ಸಾತ್ವಿಕ್ ಹೇಳುತ್ತಾರೆ.

ಟೈಪ್-2 ಮಧುಮೇಹ ಸಮಸ್ಯೆ ಇರುವ ರೋಗಿಗಳಲ್ಲಿ ರಕ್ತಹೆಪ್ಪುಗಟ್ಟುವಿಕೆ ಸಮಸ್ಯೆ ತೀವ್ರವಾಗಿ ಕಂಡುಬರುತ್ತದೆ. ಆದರೆ ಇದಕ್ಕೆ ನಿಖರವಾದ ಕಾರಣ ತಿಳಿಯುತ್ತಿಲ್ಲ ಎಂದು ದೆಹಲಿಯ ಮತ್ತೊಬ್ಬ ತಜ್ಞ ವೈದ್ಯ ಡಾ.ಅಮ್ರೀಶ್ ಕುಮಾರ್ ಅಭಿಪ್ರಾಯಪಡುತ್ತಾರೆ.

ಡಿವಿಟಿ ಎನ್ನುವುದು ಗಂಭೀರ ಸಮಸ್ಯೆಯಾಗಿದ್ದು, ದೇಹದ ಆಳದ ರಕ್ತನಾಳದಲ್ಲಿ ರಕ್ತಹೆಪ್ಪುಗಟ್ಟುತ್ತದೆ. ಏಟ್ರಿಯಲ್ ಥ್ರಂಬೋಸಿಸ್ ಅಪದಮನಿಯಲ್ಲಿ ಸಂಭವಿಸುತ್ತದೆ. ಅಪದಮನಿ ಎಂದರೆ ಆಮ್ಲಜನಕ ಸಮೃದ್ಧವಾದ ರಕ್ತವನ್ನು ಹೃದಯದಿಂದ ದೇಹಕ್ಕೆ ಸರಬರಾಜು ಮಾಡುವ ರಕ್ತನಾಳಗಳಾಗಿದ್ದು, ಇತರ ರಕ್ತನಾಳಗಳು ಕಡಿಮೆ ಆಮ್ಲಜನಕದ ರಕ್ತವನ್ನು ದೇಹದ ವಿವಿಧ ಭಾಗಗಳಿಂದ ಮತ್ತೆ ಹೃದಯಕ್ಕೆ ಪೂರೈಸುತ್ತವೆ.
"ಕೋವಿಡ್ ಸಂಬಂಧಿ ರಕ್ತ ಹೆಪ್ಪುಗಟ್ಟುವಿಕೆಯಿಂದ ಹೃದಯಾಘಾತ, ಪಾರ್ಶ್ವವಾಯು ಅಥವಾ ಮೊಣಕಾಲು ಕಳೆದುಕೊಂಡ ಪ್ರಕರಣಗಳು ಶೇಕಡ 2ರಿಂದ 5ರಷ್ಟಿವೆ" ಎಂದು ಸಾತ್ವಿಕ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News