ರವಿವಾರದಿಂದ ಬಿಗ್‍ಬಾಸ್ ರಿಯಾಲಿಟಿ ಶೋ ಸ್ಥಗಿತ

Update: 2021-05-08 15:11 GMT

ಬೆಂಗಳೂರು, ಮೇ 8: ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆಯು ಹೆಚ್ಚಾಗುತ್ತಿರುವ  ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬಿಗ್‍ಬಾಸ್ ರಿಯಾಲಿಟಿ ಶೋವನ್ನು ರವಿವಾರದಿಂದ ಸ್ಥಗಿತಗೊಳಿಸಲಾಗುತ್ತಿದೆ ಎಂದು ಬಿಗ್ ಬಾಸ್ ಶೋನ ನಿರ್ದೇಶಕ ಪರಮೇಶ್ವರ ಗುಂಡ್ಕಲ್ ತಿಳಿಸಿದ್ದಾರೆ. 

ಈ ಕುರಿತು ಮಾಹಿತಿ ನೀಡಿರುವ ಅವರು, ಬಿಗ್ ಬಾಸ್ ಪ್ರಾರಂಭವಾಗಿ ಇವತ್ತಿಗೆ (ಮೇ 8) ಎಪ್ಪತ್ತೊಂದನೇ ದಿನ. ಹೊರಗಡೆ ಎದುರಾಗಿರುವ ಕಷ್ಟದ ಸವಾಲು ಗೊತ್ತಿಲ್ಲದೇ ಒಳಗಡೆ ಇರುವವರೆಲ್ಲಾ ಖುಷಿಯಾಗಿದ್ದಾರೆ. ಐಸೊಲೇಷನ್‍ನಲ್ಲಿ ಇರುವುದರಿಂದ ಅವರೆಲ್ಲರೂ ಸುರಕ್ಷಿತವಾಗಿದ್ದಾರೆ. ಇವರೆಲ್ಲರಿಗೂ ಹೊರಗಡೆ ಕೋವಿಡ್ ಹಿನ್ನೆಲೆಯಲ್ಲಿ ಆಗುತ್ತಿರುವ  ಬೆಳವಣಿಗೆ ತಿಳಿಸಿ ನಾಳೆ(ರವಿವಾರ) ಹೊರಗಡೆ ಕರೆಯುತ್ತಿದ್ದೇವೆ. ಅನಂತರ ಅವರನ್ನು ಮತ್ತು ತಂಡವನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಲು ವ್ಯವಸ್ಥೆ ಮಾಡಲಾಗುವುದೆಂದು ಮಾಹಿತಿ ನೀಡಿದ್ದಾರೆ.

ಬಿಗ್‍ಬಾಸ್ ಶೋಗಾಗಿ ನೂರಾರು ದಿನಗಳವರೆಗೆ ನೂರಾರು ಜನರ ಕನಸು ಅರ್ಧಕ್ಕೇ ನಿಂತಿದೆ. ಮನಸ್ಸು ಭಾರವಾಗಿದೆ. ಈ ಶೋ ನಿಲ್ಲುತ್ತಿದೆ ಅಂತಲ್ಲ. ಹೊರಗಡೆ ಗಾಳಿಯಲ್ಲಿ ಓಡಾಡುತ್ತಿರುವ ಕಣ್ಣಿಗೆ ಕಾಣದ ಅನಿಶ್ಚಿತತೆಯಿಂದ ಇನ್ನಿಲ್ಲದ ಕಳವಳವಾಗಿದೆ. ಎಲ್ಲರಿಗೂ ಈ ಕಳವಳಕ್ಕೊಂದು ಉತ್ತರ ಬೇಗ ಸಿಗಲಿ. ಎಲ್ಲರೂ ಸುರಕ್ಷಿತವಾಗಿರಿ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News