×
Ad

ಬಂಗಾಳ ಚುನಾವಣೋತ್ತರ ಹಿಂಸಾಚಾರದ ಕುರಿತು ನಕಲಿ ಸುದ್ದಿ ಹರಡಿದ ಇಬ್ಬರು ಎಬಿವಿಪಿ ಸದಸ್ಯರ ಬಂಧನ

Update: 2021-05-09 11:20 IST

ಕೋಲ್ಕತಾ: ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರಕ್ಕೆ ಸಂಬಂಧಿಸಿದ ನಕಲಿ ಸುದ್ದಿಗಳ ವೀಡಿಯೊಗಳನ್ನು ಹಂಚಿಕೊಂಡ ಆರೋಪದ ಮೇಲೆ ರಾಜ್ಯ  ಸಿಐಡಿ ಶುಕ್ರವಾರ ಇಬ್ಬರನ್ನು ಬಂಧಿಸಿದೆ ಎಂದು  telegraphindia.com ವರದಿ ಮಾಡಿದೆ. ಬಂಧಿಸಲ್ಪಟ್ಟಿರುವ ಇಬ್ಬರು ಆರ್ ಎಸ್ ಎಸ್ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಸದಸ್ಯರು ಎಂದು ತಿಳಿದುಬಂದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಹಲವಾರು ವೀಡಿಯೊಗಳು ವೈರಲ್ ಆದ ನಂತರ, ತಮ್ಮ ಗಮನಕ್ಕೆ ತಾರದೆ ಅಥವಾ ಅನುಮತಿಯಿಲ್ಲದೆ ತಮ್ಮ ಫೋಟೊಗಳನ್ನು ಬಳಸಿ ನಕಲಿ ಸುದ್ದಿಗಳನ್ನು ಪ್ರಸಾರ ಮಾಡಲಾಗುತ್ತಿದೆ ಎಂದು ನೆಟ್ಟಿಗರಿಂದ ದೂರುಗಳು ಬಂದ ಬಳಿಕ ಸಿಐಡಿ ಸ್ವಯಂ ಪ್ರೇರಿತ ಎಫ್‌ಐಆರ್ ದಾಖಲಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾವು  ಅಂತಹ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದ ಪ್ರೊಫೈಲ್‌ಗಳನ್ನು ಸ್ಕ್ಯಾನ್ ಮಾಡಲು ಆರಂಭಿಸಿದ್ದೆವು ಹಾಗೂ  ಅವರು ಹಂಚಿಕೊಂಡಿದ್ದ ಸಾಮಾಜಿಕ ಜಾಲತಾಣಗಳೊಂದಿಗೆ ಸಂಪರ್ಕದಲ್ಲಿದ್ದೆವು ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಂಧನಕ್ಕೊಳಗಾದ ಇಬ್ಬರನ್ನು  ಅರ್ಗಾ ಸಹಾ ಹಾಗೂ ಆಕಾಶ್ ಮೊಂಡಾಲ್ ಎಂದು ಗುರುತಿಸಲಾಗಿದ್ದು, ಇಬ್ಬರು  ವಿದ್ಯಾರ್ಥಿಗಳಾಗಿದ್ದಾರೆ, ತಮ್ಮ ಕಾಲೇಜಿನಲ್ಲಿ   ಆರ್‌ಎಸ್‌ಎಸ್‌ನ ವಿದ್ಯಾರ್ಥಿ ಸಂಘಟನೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸದಸ್ಯರಾಗಿದ್ದರು.

ಅಧಿಕಾರಿಯ ಪ್ರಕಾರ, ವೀಡಿಯೊಗಳನ್ನು ಹಂಚಿಕೊಳ್ಳಲು ಸಹಾ ತನ್ನದೇ ಆದ ಸಾಮಾಜಿಕ ಮಾಧ್ಯಮ ಪ್ರೊಫೈಲ್ ಅನ್ನು ಬಳಸಿದ್ದರೆ, ಮೊಂಡಾಲ್ ನಕಲಿ ಪ್ರೊಫೈಲ್ ಅನ್ನು ರಚಿಸಿದ್ದಾನೆ ಹಾಗೂ  ಮತದಾನದ ನಂತರದ ಹಿಂಸಾಚಾರಕ್ಕೆ ಸಂಬಂಧಿಸಿದ ಅನೇಕ ನಕಲಿ ಸುದ್ದಿಗಳನ್ನು ಹಂಚಿಕೊಂಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

"ಸಾಮಾಜಿಕ ಮಾಧ್ಯಮದಲ್ಲಿ ನಕಲಿ ವೀಡಿಯೊಗಳನ್ನು ಹಂಚಿಕೊಂಡಿದ್ದಕ್ಕಾಗಿ ಇಬ್ಬರನ್ನು ಬಂಧಿಸಲಾಗಿದೆ" ಎಂದು ಡಿಐಜಿ ಸಿಐಡಿ (ವಿಶೇಷ) ಕಲ್ಯಾಣ್ ಮುಖರ್ಜಿ ಹೇಳಿದ್ದಾರೆ.

ಸಿಐಡಿಯ ಎರಡು ತಂಡಗಳು ದಕ್ಷಿಣ 24-ಪರಗಣದ ಸೋನಾರ್‌ಪುರ್‌ ಹಾಗೂ  ಉತ್ತರ 24-ಪರಗಣದ ದೇಗಂಗಾಕ್ಕೆ ಆರೋಪಿಗಳನ್ನು ಹುಡುಕಿಕೊಂಡು ತೆರಳಿದ್ದವು. ಸಹಾನನ್ನು ಸೋನಾರ್‌ಪುರದಿಂದ ಬಂಧಿಸಲಾಗಿದ್ದು, ಮೊಂಡಾಲ್‌ನನ್ನು ದೇಗಂಗಾದಿಂದ ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ವೀಡಿಯೊಗಳನ್ನು ಹಂಚಿಕೊಳ್ಳಲು ಬಳಸಿದ್ದ ಸೆಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ಹೇಳಿದರು.

504 (ಶಾಂತಿ ಉಲ್ಲಂಘನೆಯನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ), 506 (ಕ್ರಿಮಿನಲ್ ಬೆದರಿಕೆ) ಹಾಗೂ  120 ಬಿ (ಕ್ರಿಮಿನಲ್ ಪಿತೂರಿ) ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ವಿಭಾಗಗಳ ಅಡಿಯಲ್ಲಿ ಇಬ್ಬರ ವಿರುದ್ಧ ಆರೋಪ ಹೊರಿಸಲಾಗಿದೆ. ಅಪರಾಧ ಸಾಬೀತಾದರೆ ಅವರನ್ನು ಎರಡು ವರ್ಷಗಳ ಕಾಲ ಜೈಲಿಗೆ ಕಳುಹಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News