×
Ad

ಬಿಹಾರದ ಬಳಿಕ ಇದೀಗ ಉತ್ತರಪ್ರದೇಶದ ಗಂಗಾ ನದಿಯಲ್ಲಿ ತೇಲಿ ಬಂದ ಮೃತದೇಹಗಳು

Update: 2021-05-11 15:26 IST

ಹೊಸದಿಲ್ಲಿ, ಮೇ 11: ಉತ್ತರಪ್ರದೇಶದ ಗಾಝಿಪುರದ ಗಂಗಾ ನದಿ ತೀರಕ್ಕೆ ಮಂಗಳವಾರ ಹಲವು ಮೃತದೇಹಗಳು ತೇಲಿ ಬಂದಿವೆ. ಸೋಮವಾರ 100ಕ್ಕೂ ಅಧಿಕ ಮೃತದೇಹಗಳು ತೇಲಿ ಬಂದ ಬಿಹಾರದ ಬಕ್ಸಾರ್ ನಿಂದ 55 ಕಿ.ಮೀ. ದೂರದಲ್ಲಿ ಈ ಮೃತದೇಹಗಳು ಕಂಡು ಬಂದಿವೆ. ಇದು ಜನರಲ್ಲಿ ಆತಂಕ ಉಂಟು ಮಾಡಿದೆ.

ಕೊರೋನ ಸೋಂಕು ಉತ್ತರಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಕೂಡ ಹರಡುತ್ತಿದ್ದು, ಗಂಗಾ ನದಿಯಲ್ಲಿ ತೇಲಿ ಬಂದ ಮೃತದೇಹಗಳು ಕೋವಿಡ್ ಸೋಂಕಿನಿಂದ ಮೃತಪಟ್ಟವರದ್ದೆಂದು ಶಂಕಿಸಲಾಗಿದೆ. ಗ್ರಾಮೀಣ ಪ್ರದೇಶದ ಚಿತಾಗಾರಗಳಲ್ಲಿ ಯಾವುದೇ ಕೋವಿಡ್ ಶಿಷ್ಟಾಚಾರ ಇಲ್ಲದೇ ಇರುವುದರಿಂದ ಸೋಂಕು ಹರಡುವ ಭೀತಿಯಿಂದ ಕುಟುಂಬಿಕರು ಮೃತದೇಹವನ್ನು ನದಿಯಲ್ಲಿ ತೇಲಿಬಿಟ್ಟಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಮೃತದೇಹಗಳಿಂದ ನದಿ ನೀರು ಮಲೀನಗೊಂಡಿದ್ದು, ಕೊರೋನ ಸೋಂಕು ತೀವ್ರವಾಗಿ ಹರಡುವ ಭೀತಿಯ ನಡುವೆ ಸ್ಥಳೀಯಾಡಳಿತ, ‘‘ಈ ಬಗ್ಗೆ ತನಿಖೆ ನಡೆಸಲಾಗುವುದು’’ ಎಂದು ಹೇಳಿದೆ.

‘‘ನಾವು ಮಾಹಿತಿ ಪಡೆದುಕೊಂಡಿದ್ದೇವೆ. ನಮ್ಮ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ತನಿಖೆ ನಡೆಯುತ್ತಿದೆ. ಮೃತದೇಹಗಳು ಎಲ್ಲಿಂದ ತೇಲಿ ಬಂದವು ಎಂದು ಶೋಧಿಸುತ್ತಿದ್ದೇವೆ.’’ ಎಂದು ಗಾಝಿಪುರದ ಜಿಲ್ಲಾ ದಂಡಾಧಿಕಾರಿ ಎಂ.ಪಿ. ಸಿಂಗ್ ಹೇಳಿದ್ದಾರೆ.

‘‘ಈ ವಿಷಯದ ಕುರಿತು ನಾವು ಆಡಳಿತಕ್ಕೆ ಮಾಹಿತಿ ನೀಡಿದ್ದೇವೆ. ಆದರೆ, ಅವರು ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಒಂದು ವೇಳೆ ಈ ಪರಿಸ್ಥಿತಿ ಮುಂದುವರಿದರೆ, ನಾವು ಕೂಡ ಕೊರೋನ ಸೋಂಕಿಗೆ ತುತ್ತಾಗುವ ಭೀತಿ ಎದುರಾಗಿದೆ’’ ಎಂದು ಇಲ್ಲಿನ ನಿವಾಸಿಯೊಬ್ಬರು ಹೇಳಿದ್ದಾರೆ.

ಬಕ್ಸಾರ್ ಘಟನೆ ಉಲ್ಲೇಖಿಸಿ ಟ್ವೀಟ್ ಮಾಡಿರುವ ಕೇಂದ್ರದ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಈ ಬಗ್ಗೆ ಕೂಡಲೇ ಗಮನ ಹರಿಸುವಂತೆ ಸಂಬಂಧಿತ ರಾಜ್ಯಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ಬಿಹಾರದ ಬಕ್ಸಾರ್ ನ ಗಂಗಾ ನದಿ ದಡಕ್ಕೆ ಸೋಮವಾರ 100ಕ್ಕೂ ಅಧಿಕ ಕೊಳೆತ ಮೃತದೇಹಗಳು ತೇಲಿ ಬಂದಿತ್ತು. ಇದು ಈ ಪ್ರದೇಶದಲ್ಲಿ ಕೋವಿಡ್ ಸೋಂಕು ಏರಿಕೆಯಾಗುವ ಬಗ್ಗೆ ಜನರಲ್ಲಿ ಆತಂಕ ಹುಟ್ಟಿ ಹಾಕಿತ್ತು. ಬಿಹಾರ್-ಉತ್ತರಪ್ರದೇಶ ಗಡಿಯ ಸಮೀಪ ಇರುವ ಚೌಸಾ ಪಟ್ಟಣದ ಸಮೀಪದ ನದಿಯಲ್ಲಿ ಕೂಡ 12ಕ್ಕೂ ಅಧಿಕ ಮೃತದೇಹಗಳು ತೇಲುತ್ತಿರುವುದು ಪತ್ತೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News