ಕಾಶ್ಮೀರ: 3 ಉಗ್ರರ ಹತ್ಯೆ

Update: 2021-05-11 18:07 GMT

ಶ್ರೀನಗರ, ಮೇ 11: ದಕ್ಷಿಣ ಕಾಶ್ಮೀರದ ಅನಂತ್ನಾಗ್ ಜಿಲ್ಲೆಯಲ್ಲಿ ಮಂಗಳವಾರ ನಡೆದ ಗುಂಡಿನ ಕಾಳಗದಲ್ಲಿ ಲಷ್ಕರೆ ತೈಯ್ಬಾ ಸಂಘಟನೆಯ 3 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅನಂತನಾಗ್ ಜಿಲ್ಲೆಯ ಶೇಖ್ಪೊರಾ ಗ್ರಾಮದಲ್ಲಿ ಉಗ್ರರ ಚಲನವಲನದ ಬಗ್ಗೆ ದೊರೆತ ಮಾಹಿತಿಯಂತೆ ಪೊಲೀಸ್, ಸಿಆರ್ಪಿಎಫ್ ಮತ್ತು ಸೇನಾಪಡೆ ಅಲ್ಲಿಗೆ ಧಾವಿಸಿ ಜಂಟಿ ಕಾರ್ಯಾಚರಣೆ ನಡೆಸಿವೆ. ಉಗ್ರರನ್ನು ಎಲ್ಲಾ ಕಡೆಯಿಂದ ಸುತ್ತುವರಿದ ಬಳಿಕ ಉಗ್ರರು ಮನೆಯೊಂದರ ಒಳಗೆ ಸೇರಿಕೊಂಡರು. ಅವರಿಗೆ ಶರಣಾಗಲು ಅವಕಾಶ ನೀಡಲಾಯಿತು. ಆದರೆ ಅವರು ನಿರಾಕರಿಸಿ ಗುಂಡಿನ ದಾಳಿ ಆರಂಭಿಸಿದರು.

ಸ್ಥಳೀಯರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ ಬಳಿಕ ಕಾರ್ಯಾಚರಣೆ ಮುಂದುವರಿಸಿ ಮೂರೂ ಉಗ್ರರನ್ನು ಹತ್ಯೆ ಮಾಡಲಾಗಿದೆ. ಮೃತಪಟ್ಟವರನ್ನು ಕೋಕರ್ನಾಗ್ ನಿವಾಸಿ ಇಲ್ಯಾಸ್ ಅಹ್ಮದ್ ದಾರ್, ಶ್ರೀನಗರ ನಿವಾಸಿ ಉಬೈದ್ ಶಾಫಿ ಮತ್ತು ಕುಲ್ಗಾಂವ್ ನಿವಾಸಿ ಆಕಿಬ್ ಅಹ್ಮದ್ ಲೋನೆ ಎಂದು ಗುರುತಿಸಲಾಗಿದೆ. ಮೃತರ ಬಳಿಯಿದ್ದ ಒಂದು ಎಕೆ-47 ರೈಫಲ್, ಎರಡು ಪಿಸ್ತೂಲ್ ಹಾಗೂ ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಮೃತ ಉಗ್ರರಲ್ಲಿ ಒಬ್ಬನಾದ ಉಬೈದ್ ಶಾಫಿ ಎಪ್ರಿಲ್ 1ರಂದು ಶ್ರೀನಗರದ ನೌಗಾಂವ್ ಪ್ರದೇಶದಲ್ಲಿ ಪೊಲೀಸ್ ಸಿಬಂದಿ ಸಾವನ್ನಪ್ಪಿದ್ದ  ಉಗ್ರರ ದಾಳಿಯಲ್ಲಿ ಪಾಲ್ಗೊಂಡಿದ್ದ ಎಂದು ಅಧಿಕಾರಿಗಳು ಹೇಳಿದ್ದರು.

ಸಂಬಂಧಿಸಿದ ವೈದ್ಯಕೀಯ ಹಾಗೂ ಕಾನೂನು ಪ್ರಕ್ರಿಯೆಯ ಬಳಿಕ ಮೃತಉಗ್ರರ ಅಂತ್ಯಸಂಸ್ಕಾರ ಅವರ ಕುಟುಂಬದವರ ಉಪಸ್ಥಿತಿಯಲ್ಲಿ ನಡೆಯಲಿದೆ . ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಈಗ ಉಗ್ರರ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸುತ್ತಿಲ್ಲ ಎಂದು ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News