×
Ad

ಸದ್ಯವೇ ಅರಬಿ ಸಮುದ್ರದಲ್ಲಿ ‘ತೌಕ್ತೇ’ ಚಂಡಮಾರುತ ಏಳುವ ಸಾಧ್ಯತೆ‌

Update: 2021-05-12 21:01 IST

ಮುಂಬೈ,ಮೇ 12: ಪೂರ್ವ ಮಧ್ಯ ಅರಬಿ ಸಮುದ್ರದಲ್ಲಿ ಸದ್ಯವೇ ಚಂಡಮಾರುತವೊಂದು ರೂಪುಗೊಳ್ಳುವ ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯು ತಿಳಿಸಿದೆ. ಚಂಡಮಾರುತವು ನಿಜಕ್ಕೂ ರೂಪುಗೊಂಡರೆ ಅದು ಈ ವರ್ಷದ ಮೊದಲ ಚಂಡಮಾರುತವಾಗಲಿದೆ ಮತ್ತು ಅದಕ್ಕೆ ಮಯನ್ಮಾರ್ ನೀಡಿರುವ ‘ತೌಕ್ತೇ’ ಹೆಸರನ್ನಿಡಲಾಗುವುದು.

ಮೇ 16ರ ವೇಳೆಗೆ ಚಂಡಮಾರುತವು ಭಾರತದ ಪಶ್ಚಿಮ ಕರಾವಳಿಯನ್ನು ಅಪ್ಪಳಿಸಬಹುದು ಮತ್ತು ವಾಸ್ತವದಲ್ಲಿ ಮೇ 15-16ರೊಳಗೆ ಲಕ್ಷದ್ವೀಪದ ತಗ್ಗು ಪ್ರದೇಶಗಳು ಮುಳುಗಡೆಯಾಗಬಹುದು ಎಂದು ಐಎಂಡಿ ಅಂದಾಜಿಸಿದೆ.
  
ಮೇ 14ರಂದು ಆಗ್ನೇಯ ಅರಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆಯಿದೆ ಮತ್ತು ಉತ್ತರ ಹಾಗೂ ಈಶಾನ್ಯದತ್ತ ಸಾಗಿ ಮೇ 15ರ ವೇಳೆಗೆ ಲಕ್ಷದ್ವೀಪ ಪ್ರದೇಶಕ್ಕೆ ಹೊಂದಿಕೊಂಡಿರುವ ಸಮುದ್ರವನ್ನು ತಲುಪಲಿದೆ. ಮೇ 16ರ ವೇಳೆಗೆ ಅದು ಪೂರ್ವ ಮಧ್ಯ ಅರಬಿ ಸಮುದ್ರದಲ್ಲಿ ಚಂಡಮಾರುತವಾಗಿ ರೂಪುಗೊಳ್ಳುವ ಸಾಧ್ಯತೆಯಿದೆ. 

ಅಲ್ಲಿಂದ ಅದು ಇನ್ನಷ್ಟು ತೀವ್ರತೆಯೊಂದಿಗೆ ಉತ್ತರ-ಈಶಾನ್ಯದತ್ತ ಸಾಗುವ ಸಾಧ್ಯತೆಯಿದ್ದು,ಲಕ್ಷದ್ವೀಪದ ಜೊತೆಗೆ ಕೇರಳ,ಕರ್ನಾಟಕ,ಗೋವಾ ಮತ್ತು ಮಹಾರಾಷ್ಟ್ರಗಳ ತೀರಪ್ರದೇಶಗಳು ಚಂಡಮಾರುತದ ಪರಿಣಾಮಗಳನ್ನು ಎದುರಿಸುವ ನಿರೀಕ್ಷೆಯಿದೆ ಎಂದು ಅದು ಹೇಳಿದೆ. ಚಂಡಮಾರುತವು ಕಛ್ ಮತ್ತು ದಕ್ಷಿಣ ಪಾಕಿಸ್ತಾನದತ್ತ ತನ್ನ ದಿಕ್ಕನ್ನು ಬದಲಿಸುವ ಸಾಧ್ಯತೆಯಿದೆ ಮತ್ತು ಅಂತಹ ಸಂದರ್ಭದಲ್ಲಿ ಅದು ಮೇ 17 ಅಥವಾ ಮೇ 18ರಂದು ಗುಜರಾತ್ ಕರಾವಳಿಗೆ ಅಪ್ಪಳಿಸಲಿದೆ ಎದು ವರದಿಗಳು ತಿಳಿಸಿವೆ.
ಒಂದೆರಡು ದಿನಗಳಲ್ಲಿ ಚಂಡಮಾರುತ ರೂಪುಗೊಳ್ಳುವ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದೂ ಐಎಂಡಿ ಹೇಳಿದೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News