ಬಿಹಾರ: ಗಂಗಾ ನದಿಯಲ್ಲಿ ತೇಲಿಬಂದ ಮತ್ತಷ್ಟು ಮೃತದೇಹ; ಸ್ಥಳೀಯರಲ್ಲಿ ಆತಂಕ

Update: 2021-05-12 18:29 GMT

ಪಾಟ್ನ, ಮೇ 12: ಕೋವಿಡ್ ಸೋಂಕಿತದ್ದು ಎಂದು ಶಂಕಿಸಲಾಗಿರುವ ಇನ್ನಷ್ಟು ಮೃತದೇಹಗಳು ಬಿಹಾರದಲ್ಲಿ ಗಂಗಾ ನದಿಯಲ್ಲಿ ತೇಲಿಬಂದಿದ್ದು ಸ್ಥಳೀಯರಲ್ಲಿ ತೀವ್ರ ಆಕ್ರೋಶ ಮತ್ತು ಆಘಾತ ಉಂಟಾಗಿದೆ.

ಮೃತದೇಹದ ಅಂತ್ಯಸಂಸ್ಕಾರದ  ಬಗ್ಗೆ ಜವಾಬ್ದಾರಿ ತೆಗೆದುಕೊಳ್ಳಲು ಯಾರೊಬ್ಬರೂ ಸಿದ್ಧರಿಲ್ಲದ ಕಾರಣ ಬಿಹಾರದ ಗ್ರಾಮೀಣ ಭಾಗದಲ್ಲಿ ಗಂಗಾ ನದಿ ಪಾತ್ರದ ಬಳಿಯಿರುವ ಪ್ರದೇಶದಲ್ಲಿ ಆರೋಗ್ಯದ ಸಮಸ್ಯೆ ಬಿಗಡಾಯಿಸುವ ಭೀತಿ ನೆಲೆಸಿದೆ. ನೆರೆಯ ಉತ್ತರಪ್ರದೇಶದಲ್ಲೂ ಗಂಗಾ ನದಿ ಹರಿಯುವ ಪ್ರದೇಶದ ಜನತೆ ಅನಾರೋಗ್ಯದ ಸಮಸ್ಯೆಯ ಭೀತಿಗೆ ಒಳಗಾಗಿದ್ದಾರೆ.

ಕಳೆದ 2 ದಿನಗಳಲ್ಲಿ ಬಿಹಾರದ ಗಂಗಾನದಿ ತೀರದಲ್ಲಿರುವ ಬಕ್ಸರ್ ಹಾಗೂ ಬ್ರಹ್ಮಪುರ  ಪ್ರಾಂತ್ಯದಲ್ಲಿ 100ಕ್ಕೂ ಹೆಚ್ಚು ಕೊಳೆತ ಶವಗಳು ನದಿಯಲ್ಲಿ  ತೇಲಿಬಂದಿವೆ. ಆದರೆ ಈ ಮೃತದೇಹ ಪತ್ತೆಯಾದ ಸ್ಥಳ ಉತ್ತರಪ್ರದೇಶಕ್ಕೆ ಸೇರುತ್ತದೆ ಎಂದು ಹೇಳಿರುವ ಅಧಿಕಾರಿಗಳು ಮೃತದೇಹದ ಅಂತ್ಯಸಂಸ್ಕಾರದ ಜವಾಬ್ದಾರಿಯಿಂದ ನುಣುಚಿಕೊಂಡಿದ್ದಾರೆ ಎಂದು ವರದಿಯಾಗಿದೆ. ಇದರೊಂದಿಗೆ ಎರಡೂ ರಾಜ್ಯಗಳ ಅಧಿಕಾರಿಗಳು ಪರಸ್ಪರರ ಮೇಲೆ ದೋಷಾರೋಪಣೆಗೆ ಮುಂದಾಗಿದ್ದಾರೆ.

ಬಿಹಾರವನ್ನು ಉತ್ತರಪ್ರದೇಶದ ಬಲ್ಲಿಯಾ ಗ್ರಾಮಕ್ಕೆ ಸಂಪರ್ಕಿಸುವ ಜೈಪ್ರಭಾ ಸೇತುವೆಯಲ್ಲಿ ಆ್ಯಂಬುಲೆನ್ಸ್ ಮೂಲಕ ಈ ಮೃತದೇಹಗಳನ್ನು ನದಿಗೆ ಎಸೆಯಲಾಗಿದ್ದು ಅವು ಬಿಹಾರಕ್ಕೆ ತೇಲಿಬಂದಿವೆ ಎಂದು ಬಿಹಾರದ ಬಿಜೆಪಿ ಸಂಸದ ಜನಾರ್ದನ ಸಿಂಗ್ ಸಿಗ್ರಿವಾಲ್ ಆರೋಪಿಸಿದ್ದಾರೆ. ಅಂತ್ಯಸಂಸ್ಕಾರ ಸೂಕ್ತ ರೀತಿಯಲ್ಲಿ ನಡೆಸುವ ಬಗ್ಗೆ ಗಮನ ನೀಡುವಂತೆ ಅಧಿಕಾರಿಗಳಿಗೆ  ಸೂಚಿಸಿದ್ದೇನೆ ಎಂದವರು ಹೇಳಿದ್ದಾರೆ.

ಆದರೆ ಗ್ರಾಮಸ್ಥರ ಪ್ರಕಾರ, ಎರಡೂ ರಾಜ್ಯಗಳಲ್ಲಿ ಶವಗಳನ್ನು ಗಂಗಾ ನದಿಗೆ ಎಸೆಯಲಾಗುತ್ತಿದೆ. ಮಂಗಳವಾರ ಉತ್ತರಪ್ರದೇಶದ ಘಾಝಿಪುರದ ಗಂಗಾನದಿ ತೀರದಲ್ಲೂ ಮೃತದೇಹಗಳು ತೇಲಿಬಂದಿದೆ. ತಕ್ಷಣ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿದ್ದು ಮೃತದೇಹ ಎಲ್ಲಿಂದ ಬಂದಿದೆ ಎಂಬ ಬಗ್ಗೆ  ತನಿಖೆ ನಡೆಸಲಾಗುವುದು ಎಂದು ಗಾಝಿಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಎಂ.ಪಿ. ಸಿಂಗ್ ಹೇಳಿದ್ದಾರೆ.

ಮೃತದೇಹ ಸುಡಲು ಕಟ್ಟಿಗೆಯ ಕೊರತೆ ಇರುವುದರಿಂದ ಮೃತದೇಹಗಳನ್ನು ಈ ರೀತಿ ಗಂಗೆಯಲ್ಲಿ ತೇಲಿಬಿಟ್ಟಿರಬಹುದು. ಆದರೆ ತೇಲಿಬಂದ  ಮೃತದೇಹದ ಅಂತ್ಯಸಂಸ್ಕಾರಕ್ಕೆ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಸ್ಥಳದಲ್ಲಿ ಸೋಂಕು ರೋಗ ಹರಡುವ ಸಾಧ್ಯತೆಯಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಈ ಮಧ್ಯೆ, ಕೊರೋನ ಸೋಂಕಿನ ಅಧಿಕೃತ ಅಂಕಿಅಂಶವನ್ನು ಮುಚ್ಚಿಟ್ಟು, ಮೃತಪಟ್ಟವರ ಪ್ರಮಾಣವನ್ನು ಕಡಿಮೆ ಎಂದು ತೋರಿಸಿಕೊಳ್ಳುವ ಉದ್ದೇಶದಿಂದ ಸೋಂಕಿತರ ಮೃತದೇಹಗಳನ್ನು ಈ ರೀತಿ ವಿಲೇವಾರಿ ಮಾಡಿರುವ ಸಾಧ್ಯತೆಯಿದೆ ಎಂದೂ ಸ್ಥಳೀಯರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News