ಭಾರತದ ಪೌರತ್ವ ಕಾಯ್ದೆ, ಅಲ್ಪಸಂಖ್ಯಾತರ ತಾರತಮ್ಯ ಕುರಿತು ಅಮೆರಿಕಾದ ಧಾರ್ಮಿಕ ಸ್ವಾತಂತ್ರ್ಯ ವರದಿಯಲ್ಲಿ ಉಲ್ಲೇಖ

Update: 2021-05-14 13:02 GMT

ಹೊಸದಿಲ್ಲಿ: ಭಾರತದಲ್ಲಿ ಅಲ್ಪಸಂಖ್ಯಾತರು ಎದುರಿಸುತ್ತಿರುವ ತಾರತಮ್ಯ ಮತ್ತು ಹಿಂಸೆಯ ಕುರಿತು ಅಮೆರಿಕಾ ತನ್ನ 2020 ʼಅಂತರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ವರದಿ'ಯಲ್ಲಿ ಉಲ್ಲೇಖಿಸಲಾಗಿದೆ.

ಭಾರತದ ಪೌರತ್ವ ತಿದ್ದುಪಡಿ ಕಾಯಿದೆ, ದೇಶದಲ್ಲಿ ಕೋವಿಡ್ ಹರಡಲು ಮುಸ್ಲಿಮರು ಕಾರಣವೆಂಬ ಆರೋಪ ಹಾಗೂ ಧರ್ಮಾಧರಿತ ಸಂಘಟನೆಗಳನ್ನು ಬಾಧಿಸುವ  ವಿದೇಶಿ ದೇಣಿಗೆ (ನಿಯಂತ್ರಣ) ಕಾಯಿದೆಗೆ ತಿದ್ದುಪಡಿ ಕುರಿತು ವರದಿ ಉಲ್ಲೇಖಿಸಿದೆ.

ಕಳೆದ ವರ್ಷದ ಫೆಬ್ರವರಿಯಲ್ಲಿ ರಾಜಧಾನಿ ದಿಲ್ಲಿಯಲ್ಲಿ ನಡೆದ ಕೋಮು ಹಿಂಸಾಚಾರ  ವಿಚಾರವೂ ವರದಿಯಲ್ಲಿದೆ. "ದಿಲ್ಲಿ ಹಿಂಸಾಚಾರ ಕುರಿತಂತೆ ಅಲ್ಲಿನ ಪೊಲೀಸರು ನಡೆಸಿದ ತನಿಖೆಯಲ್ಲಿ ಮುಸ್ಲಿಮರ ವಿರುದ್ಧ ತಾರತಮ್ಯವೆಸಗಲಾಗಿದೆ ಎಂದು ಮುಸ್ಲಿಂ ಶಿಕ್ಷಣ ತಜ್ಞರು, ಮಾನವ ಹಕ್ಕು ಕಾರ್ಯಕರ್ತರು, ಮಾಜಿ ಪೊಲೀಸ್ ಅಧಿಕಾರಿಗಳು  ಹಾಗೂ ಪತ್ರಕರ್ತರು ಆರೋಪಿಸಿದ್ದರು. ವರ್ಷಾಂತ್ಯದ ತನಕವೂ ತನಿಖೆ ಮುಂದುವರಿದಿತ್ತು, ಆದರೆ ಸರಿಸುಮಾರು ಸಮಾನ ಸಂಖ್ಯೆಯ ಹಿಂದುಗಳು ಹಾಗೂ ಮುಸ್ಲಿಮರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದರು" ಎಂದು ವರದಿ ಹೇಳಿದೆ.

ಕಳೆದ ವರ್ಷ ದೇಶದಲ್ಲಿ ಕೋವಿಡ್ ವ್ಯಾಪಕವಾಗುತ್ತಿದ್ದಂತೆಯೇ ಅದಕ್ಕೆ ಮಾರ್ಚ್ ತಿಂಗಳಲ್ಲಿ ತಬ್ಲೀಗಿ ಜಮಾತ್ ಸಮಾವೇಶ ಕಾರಣ ಎಂಬರ್ಥದ ಹೇಳಿಕೆಗಳನ್ನು ಭಾರತ ಸರಕಾರ ಮತ್ತು ಮಾಧ್ಯಮಗಳು ವರದಿ ಮಾಡಿರುವ ಕುರಿತೂ ಅಮೆರಿಕಾದ ವರದಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News