ರಕ್ಷಣೆ ಕೋರಿದ್ದ ಲಿವ್-ಇನ್ ಜೋಡಿಯ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್

Update: 2021-05-14 17:26 GMT

ಚಂಡಿಗಡ,ಮೇ 14: ರಕ್ಷಣೆಯನ್ನು ಕೋರಿ ಲಿವ್-ಇನ್ ಜೋಡಿಯೊಂದು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯವು,‌ ಜೋಡಿಯು ಕೋರಿರುವಂತೆ ರಕ್ಷಣೆಯನ್ನು ಮಂಜೂರು ಮಾಡಿದರೆ ಅದು ಸಾಮಾಜಿಕ ಚೌಕಟ್ಟಿಗೆ ವ್ಯತ್ಯಯವನ್ನುಂಟು ಮಾಡುತ್ತದೆ ಎಂದು ಹೇಳಿದೆ.

ಹರ್ಯಾಣದ ಜಿಂದ್ ಜಿಲ್ಲೆಯ 21ರ ಹರೆಯದ ಯುವಕ ಮತ್ತು 18ರ ಹರೆಯದ ಯುವತಿ ತಮ್ಮ ಮನೆಗಳಿಂದ ಪರಾರಿಯಾದ ಬಳಿಕ ಯುವತಿಯ ಬಂಧುಗಳು ಬೆದರಿಕೆಯೊಡ್ಡಿರುವ ಹಿನ್ನೆಲೆಯಲ್ಲಿ ತಮ್ಮ ‘ಜೀವನ ಮತ್ತು ಸ್ವಾತಂತ್ರ’ವನ್ನು ರಕ್ಷಿಸುವಂತೆ ಕೋರಿ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿತ್ತು.

ಜೋಡಿಯು ಕೋರಿರುವಂತೆ ರಕ್ಷಣೆಯನ್ನು ಒದಗಿಸಿದರೆ ಅದು ಸಮಾಜದ ಇಡೀ ಸಾಮಾಜಿಕ ಚೌಕಟ್ಟಿಗೆ ವ್ಯತ್ಯಯವನ್ನುಂಟು ಮಾಡುತ್ತದೆ. ಹೀಗಾಗಿ ಅವರ ಕೋರಿಕೆಯನ್ನು ಈಡೇರಿಸಲು ಯಾವುದೇ ಕಾರಣವಿಲ್ಲ ಎಂದು ಏಕಸದಸ್ಯ ಪೀಠದ ನ್ಯಾ.ಅನಿಲ ಕ್ಷೇತ್ರಪಾಲ ಅವರು ಗುರುವಾರ ತನ್ನ ಆದೇಶದಲ್ಲಿ ಹೇಳಿದ್ದಾರೆ.

‘ಉಚ್ಚ ನ್ಯಾಯಾಲಯದ ತೀರ್ಪನ್ನು ನಾವು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ. ಲಿವ್-ಇನ್ ಸಂಬಂಧವು ಅಪರಾಧವಲ್ಲ ಮತ್ತು ವ್ಯಕ್ತಿಯ ಮೂಲಭೂತ ಹಕ್ಕುಗಳನ್ನು ಯಾವುದೇ ಸಂದರ್ಭದಲ್ಲಿಯೂ ಉಲ್ಲಂಘಿಸಲಾಗದು ಎಂಬ ಬಗ್ಗೆ ಸವೋಚ್ಚ ನ್ಯಾಯಾಲಯವು ಸಾಕಷ್ಟು ಸ್ಪಷ್ಟ ಅಭಿಪ್ರಾಯವನ್ನು ಹೊಂದಿದೆ ಎಂದು ಜೋಡಿಯ ಪರ ವಕೀಲ ವಿಶಾಲ ಮಿತ್ತಲ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಯುವತಿಯ ಬಂಧುಗಳು ತಮ್ಮ ಆಯ್ಕೆಯ ಯುವಕನೊಂದಿಗೆ ಆಕೆಯ ಮದುವೆಯನ್ನು ಮಾಡಲು ಬಯಸಿದ್ದರು ಮತ್ತು ಅವರು ಜೀವ ಬೆದರಿಕೆಯೊಡ್ಡಿದ ಹಿನ್ನೆಲೆಯಲ್ಲಿ ಇಬ್ಬರೂ ತಮ್ಮ ಮನೆಗಳಿಂದ ಪರಾರಿಯಾಗಿ ಜೊತೆಯಲ್ಲಿ ವಾಸವಾಗಿದ್ದಾರೆ. ಇದನ್ನು ಬಿಟ್ಟು ಅವರಿಗೆ ಅನ್ಯಮಾರ್ಗವಿರಲಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News