ವಿಕೃತ ಮನಸ್ಸಿನವರು

Update: 2021-05-14 19:30 GMT

ಮಾನ್ಯರೇ,

ಎಚ್. ಎಸ್. ದೊರೆಸ್ವಾಮಿಯವರು ತಮ್ಮ ಜೀವಮಾನದುದ್ದಕ್ಕೂ ನಿಸ್ವಾರ್ಥವಾಗಿ ಜನಪರ ಹೋರಾಟಗಳನ್ನು ಮಾಡಿಕೊಂಡು ಬಂದವರು. ಈಗಷ್ಟೇ ಅವರು ತಮ್ಮ 104ನೇ ವಯಸ್ಸಿನಲ್ಲಿ ಕೊರೋನ ಮಹಾಮಾರಿಯೊಂದಿಗೆ ಯಶಸ್ವಿ ಹೋರಾಟ ನಡೆಸಿ ಆಸ್ಪತ್ರೆಯಿಂದ ಮನೆಗೆ ಹಿಂದಿರುಗಿದ್ದಾರೆ. ಇದು ಸಂತಸದ ವಿಚಾರ.

ಕರ್ನಾಟಕದಲ್ಲಿ ಹೆಚ್ಚು ಗೌರವಿಸಲ್ಪಡುವ ಸ್ವಾತಂತ್ರ್ಯ ಹೋರಾಟಗಾರರಾಗಿರುವ ದೊರೆಸ್ವಾಮಿಯವರು ಬಹುಶಃ ನಮ್ಮ ನಡುವಿನ ಕೊನೆಯ ಕೊಂಡಿ. ತಮ್ಮ ಇಳಿವಯಸ್ಸಿನಲ್ಲೂ ನಿಸ್ವಾರ್ಥ ಸಾರ್ವಜನಿಕ ಜನಪರ ಹೋರಾಟಗಳನ್ನು ಮುಂದುವರಿಸಿಕೊಂಡು ಬಂದಿದ್ದಾರೆ.
ಬಡವರ ಬಗ್ಗೆ ವಿಶೇಷ ಕಾಳಜಿ ಹೊಂದಿರುವ, ಕರ್ನಾಟಕದಲ್ಲಿ ಭೂಮಿ ಮತ್ತು ವಸತಿ ವಂಚಿತರಿಗೆ ನಿವೇಶನ ಕೊಡಿಸುವ ಕಾರ್ಯದಲ್ಲಿ ಮಗ್ನರಾಗಿರುವ ದೊರೆಸ್ವಾಮಿಯವರು, ಕೊಡಗು ಜಿಲ್ಲೆಯಲ್ಲಿ ಎ.ಕೆ.ಸುಬ್ಬಯ್ಯರ ಜೊತೆ ಸೇರಿ ಕರ್ನಾಟಕದಲ್ಲಿಯೇ ಇತ್ತೀಚಿನ ದಿನಗಳಲ್ಲಿ ನಡೆದ ಯಶಸ್ವಿ ಹೋರಾಟವಾದ ‘ದಿಡ್ಡಳ್ಳಿ ಹೋರಾಟ’ ನಡೆಸಿ ಸುಮಾರು 550 ಮನೆಗಳನ್ನು ಕರ್ನಾಟಕ ರಾಜ್ಯ ಸರಕಾರದವತಿಯಿಂದ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು.
ಆದಿವಾಸಿಗಳಿಗೆ ಹಾಗೂ ಪರಿಶಿಷ್ಟ ಜಾತಿ ಪಂಗಡದವರಿಗೆ ನಿವೇಶನ ಸೇರಿದಂತೆ ಇತರ ಸೌಲಭ್ಯಗಳು ಸಿಗುವುದೆಂದರೆ ಗೋಡ್ಸೆ ಸಂತತಿಯವರಿಗೆ ಸಹಿಸಲು ಸಾಧ್ಯವಿಲ್ಲದ ವಿಚಾರ. ಕರ್ನಾಟಕ ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರ ಇದ್ದ ಕಾರಣ ದಿಡ್ಡಳ್ಳಿ ನಿರಾಶ್ರಿತರಿಗೆ ಮನೆಗಳು ದೊರೆತಿತ್ತು.

ಇದು ಮಾತ್ರವಲ್ಲ ಕರ್ನಾಟಕದಲ್ಲಿ ಇದ್ದಂತಹ ಶಂಕಿತ ನಕ್ಸಲರ ಶರಣಾಗತಿ ಪ್ರಕ್ರಿಯೆಗಳು ಅತ್ಯಂತ ಯಶಸ್ವಿಯಾಗಿ ನಡೆದಿತ್ತು. ಇದಕ್ಕೂ ಕಾರಣಕರ್ತರಾಗಿದ್ದವರು ಇದೇ ಮನುಷ್ಯ ಸ್ನೇಹಿಗಳಾದ ದೊರೆಸ್ವಾಮಿ, ಎ. ಕೆ. ಸುಬ್ಬಯ್ಯ ಹಾಗೂ ಗೌರಿ ಲಂಕೇಶ್ ತ್ರಿಮೂರ್ತಿಗಳು. ಸೂಕ್ಷ್ಮ ಸಂವೇದಿಯಾಗಿದ್ದ ಸಿದ್ದರಾಮಯ್ಯ ನೇತೃತ್ವದ ಸರಕಾರವಿದ್ದ ಕಾರಣ ಅವರು ಮುಖ್ಯವಾಹಿನಿಗೆ ಬರಲು ಕಾರಣವಾಯಿತು. ಈಗ ನಮ್ಮ ನಡುವೆ ಇರುವವರು ದೊರೆಸ್ವಾಮಿಯವರು ಮಾತ್ರ. ಅವರು ಗುಣಮುಖರಾದದ್ದು ಕೆಲವರಿಗೆ ಹೊಟ್ಟೆಯಲ್ಲಿ ಏನೋ ಕಿವುಚಿದಂತೆ ಆಗುತ್ತಿದೆ. ಆದ್ದರಿಂದ ಸಾಮಾಜಿಕ ಜಾಲತಾಣದಲ್ಲಿ ದೊರೆಸ್ವಾಮಿಯವರು ‘ನಕಲಿ ಹೋರಾಟಗಾರ’, ‘ಬಾಡಿಗೆ ಹೋರಾಟಗಾರ’, ‘ಅರ್ಬನ್ ನಕ್ಸಲ್’, ‘ಸಾಯಬಾರದಿತ್ತೇ’ ಎಂದೆಲ್ಲ ಕೆಟ್ಟದಾಗಿ ಬರೆದು ತಮ್ಮ ತೀಟೆ ತೀರಿಸಿಕೊಂಡಿದ್ದಾರೆ. ಎಂತಹ ವಿಕೃತ ಮನಸ್ಸುಗಳು ಇವರದ್ದು.

ಇವರಿಗೆ ನಿಜವಾಗಿಯೂ ಸ್ವಾತಂತ್ರ್ಯ ಹೋರಾಟದ ಬೆಲೆ ಏನಾದರೂ ತಿಳಿದಿದೆಯೇ?. ಅವರ ಸ್ವಾತಂತ್ರ್ಯ ಹೋರಾಟದ ಫಲವಾಗಿ ತಾವು ಕೂಡ ಇಷ್ಟು ಸ್ವತಂತ್ರವಾಗಿ ಮಾತಾಡಲು ಸಾಧ್ಯವಾಗಿದೆ ಎಂಬ ಅರಿವು ಇದ್ದಿದ್ದರೆ ಖಂಡಿತವಾಗಿಯೂ ಇಂತಹ ಪ್ರತಿಕ್ರಿಯೆಗಳು ಬರುತ್ತಿರಲಿಲ್ಲ. ಎಚ್.ಎಸ್.ದೊರೆಸ್ವಾಮಿ ಅಯ್ಯಂಗಾರ್‌ರವರು ಮತ್ತಷ್ಟು ಕಾಲ ನಮ್ಮಾಂದಿಗೆ ಆರೋಗ್ಯವಂತರಾಗಿ ಬಾಳಲಿ.

Writer - -ಬಿ. ಎನ್. ಮನು ಶೆಣೈ

contributor

Editor - -ಬಿ. ಎನ್. ಮನು ಶೆಣೈ

contributor

Similar News