ಮೃತರ ಘನತೆ ಎತ್ತಿಹಿಡಿಯುವ ವಿಶೇಷ ಕಾನೂನು ರೂಪಿಸಿ: ಎನ್ಎಚ್ಆರ್ ಸಿ ಸಲಹೆ

Update: 2021-05-15 17:03 GMT

ಹೊಸದಿಲ್ಲಿ, ಮೇ 15: ಗಂಗಾನದಿಯಲ್ಲಿ ಮೃತದೇಹಗಳನ್ನು ತೇಲಿಬಿಡುವ ಅಥವಾ ನದಿ ತೀರದಲ್ಲಿ ಮೃತದೇಹಗಳನ್ನು ದಫನ ಮಾಡುತ್ತಿರುವ ಪ್ರಕರಣಗಳ ಹಿನ್ನೆಲೆಯಲ್ಲಿ, ಮೃತ ವ್ಯಕ್ತಿಗಳ ಘನತೆಯನ್ನು ಎತ್ತಿಹಿಡಿಯುವ ವಿಶೇಷ ಕಾನೂನು ರೂಪಿಸುವಂತೆ ರಾಷ್ಟ್ರೀಯ ಮಾನವಹಕ್ಕುಗಳ ಆಯೋಗ(ಎನ್ಎಚ್ಆರ್ ಸಿ) ಶನಿವಾರ ಎಲ್ಲಾ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಿದೆ. ಕಳೆದ ವಾರ ಉತ್ತರಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶದಲ್ಲಿ ಹರಿಯುವ ಗಂಗಾನದಿಯ ತೀರದಲ್ಲಿ ಸಾವಿರಾರು ಮೃತದೇಹಗಳು ತೇಲಿಬಂದು ಬಿದ್ದಿರುವ ಅಥವಾ ಅವುಗಳನ್ನು ನದಿ ತೀರದಲ್ಲಿ ದಫನ ಮಾಡಿರುವ ಪ್ರಕರಣ ವರದಿಯಾಗಿದೆ. 

ಈ ಹಿನ್ನೆಲೆಯಲ್ಲಿ ಸಲಹೆ ನೀಡಿರುವ ಎನ್ಎಚ್ಆರ್ಸಿ, ಸಲಹೆಯ ಪ್ರತಿಯನ್ನು ಗೃಹ ವ್ಯವಹಾರಗಳ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೂ ರವಾನಿಸಿದೆ ಎಂದು ವರದಿಯಾಗಿದೆ. ಮೃತರ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದ ಯಾವುದೇ ವಿಶೇಷ ಕಾನೂನು ಭಾರತದಲ್ಲಿಲ್ಲ. ಆದರೆ ಹಲವು ಅಂತರಾಷ್ಟ್ರೀಯ ಒಡಂಬಡಿಕೆ, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳ ಆದೇಶ ಮತ್ತು ಹಲವು ಸರಕಾರಗಳು ಜಾರಿಗೊಳಿಸಿದ ಮಾರ್ಗಸೂಚಿಗಳಲ್ಲಿ ಕೊರೋನ ವೈರಸ್ಗೆ ಸಂಬಂಧಿಸಿದ ಶಿಷ್ಟಾಚಾರ ಮತ್ತು ನಿಯಮಾವಳಿಗಳನ್ನು ಪಾಲಿಸಲು ಹಾಗೂ ಮೃತ ವ್ಯಕ್ತಿಗಳಿಗೆ ಅವರ ಧಾರ್ಮಿಕ ವಿಧಿವಿಧಾನಗಳಂತೆ ಯೋಗ್ಯರೀತಿಯಲ್ಲಿ ಅಂತ್ಯಸಂಸ್ಕಾರ ನಡೆಸುವ ಅಗತ್ಯವನ್ನು ಒತ್ತಿಹೇಳಲಾಗಿದೆ. 

ಸಾಗಣೆ ಸಂದರ್ಭ ಅಥವಾ ಇತರೆಡೆ ಮೃತದೇಹಗಳನ್ನು ರಾಶಿ ಹಾಕುವುದಕ್ಕೆ ಅವಕಾಶ ನೀಡಬಾರದು. ವಿದ್ಯುತ್ ಚಿತಾಗಾರಗಳ ಬಳಕೆಯನ್ನು ಪ್ರೋತ್ಸಾಹಿಸಬೇಕು. ಸಾಮೂಹಿಕ ಅಂತ್ಯಸಂಸ್ಕಾರ ಅಥವಾ ದಫನ ಮಾಡುವುದು ಮೃತರ ಘನತೆಯ ಹಕ್ಕನ್ನು ಉಲ್ಲಂಘಿಸಿವುದರಿಂದ ಇದಕ್ಕೆ ಅವಕಾಶ ನೀಡಬಾರದು. ಮೃತರ ಘನತೆಯನ್ನು ರಕ್ಷಿಸುವುದು ರಾಜ್ಯಗಳ ಜವಾಬ್ದಾರಿಯಾಗಿದ್ದು ಈ ನಿಟ್ಟಿನಲ್ಲಿ ಸಂಬಂಧಿಸಿದವರ ಜತೆ ಸಮಾಲೋಚಿಸಿ ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು ರೂಪಿಸಬೇಕು ಎಂದು ಎನ್ಎಚ್ಆರ್ಸಿ ಹೇಳಿದೆ. ಜೊತೆಗೆ, ಕೊರೋನ ಸೋಂಕಿನಿಂದಾಗಿ ಬೃಹತ್ ಪ್ರಮಾಣದಲ್ಲಿ ಸಾವಿನ ಪ್ರಕರಣ ವರದಿಯಾಗುತ್ತಿರುವುದರಿಂದ ಸ್ಮಶಾನಗಳಲ್ಲಿ ಅಂತ್ಯಸಂಸ್ಕಾರ ನೆರವೇರಿಸಲು ಮಾರುದ್ದದ ಸರತಿ ಸಾಲುಗಳು ಕಂಡುಬರುತ್ತಿವೆ. ಆದ್ದರಿಂದ ತಕ್ಷಣವೇ ತಾತ್ಕಾಲಿಕ ಚಿತಾಗಾರಗಳ ವ್ಯವಸ್ಥೆ ಮಾಡುವಂತೆಯೂ ಅಧಿಕಾರಿಗಳಿಗೆ ಸೂಚಿಸಿದೆ. ದೇಶದಲ್ಲಿ ಇದುವರೆಗೆ ಕೊರೋನ ಸೋಂಕಿನಿಂದಾಗಿ 2.6 ಲಕ್ಷಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

ಮೃತದೇಹಗಳನ್ನು ಸುಡುವ ಸಂದರ್ಭ ಏಳುವ ಹೊಗೆ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿರುವುದರಿಂದ ವಿದ್ಯುತ್ ಚಿತಾಗಾರಗಳ ಬಳಕೆ ಸೂಕ್ತವಾಗಿದೆ. ಅಲ್ಲದೆ, ಮೃತದೇಹಗಳನ್ನು ಗೌರವಯುತವಾಗಿ ನಿರ್ವಹಿಸುವ ಬಗ್ಗೆ ಸ್ಮಶಾನದ ಸಿಬಂದಿಗೆ ಮನವರಿಕೆ ಮಾಡಿಕೊಡಬೇಕು. ಅಲ್ಲದೆ ಸಿಬಂದಿಗಳು ಯಾವುದೇ ಹಿಂಜರಿಕೆ, ಭೀತಿಯಿಲ್ಲದೆ ತಮ್ಮ ಕರ್ತವ್ಯ ನಿರ್ವಹಿಸಲು ಅಗತ್ಯವಾದ ಸುರಕ್ಷಾ ಸಾಧನಗಳನ್ನು ಒದಗಿಸಬೇಕು. ಕೊರೋನ ಸೋಂಕು ಹರಡುವ ಭೀತಿಯಿಂದ ಮೃತರ ಕುಟುಂಬದವರು ಅಂತ್ಯಸಂಸ್ಕಾರ ನಡೆಸಲು ಸಾಧ್ಯವಾಗದಿದ್ದ ಸಂದರ್ಭದಲ್ಲಿ, ರಾಜ್ಯ ಸರಕಾರ ಅಥವಾ ಸ್ಥಳೀಯ ಆಡಳಿತಗಳು ಸಂಬಂಧಿಸಿದ ಧಾರ್ಮಿಕ ವಿಧಿವಿಧಾನಗಳನ್ನು ಗಮನಿಸಿ ಅಂತ್ಯಸಂಸ್ಕಾರ ನಡೆಸಬಹುದು ಎಂದು ಸಲಹೆ ನೀಡಿದೆ.

ಎಲ್ಲಾ ಮೃತಪ್ರಕರಣಗಳ ಬಗ್ಗೆ ಕೇಂದ್ರ ಮತ್ತು ರಾಜ್ಯಸರಕಾರಗಳು ಡಿಜಿಟಲ್ ಅಂಕಿಅಂಶ ದಾಖಲೆಯನ್ನು ಹೊಂದಿರಬೇಕು ಮತ್ತು ಇದಕ್ಕಾಗಿ ಆನ್ಲೈನ್ ಪೋರ್ಟಲ್ ಆರಂಭಿಸುವಂತೆ ಮತ್ತು ಕೋವಿಡ್ ಅಥವಾ ಕೋವಿಡೇತರ ಸಾವಿನ ಪ್ರಕರಣಗಳ ಅಂಕಿಅಂಶ(ಆಧಾರ್ ಕಾರ್ಡ್ ವಿವರ, ಬ್ಯಾಂಕ್ ಖಾತೆ , ವಿಮೆಯ ವಿವರ)ಗಳನ್ನು ಅಪ್ಲೋಡ್ ಮಾಡುವಂತೆ ಎನ್ಎಚ್ಆರ್ಸಿ ಸಲಹೆ ನೀಡಿದೆ. ಉತ್ತರಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶದಲ್ಲಿ ಗಂಗಾ ನದಿಯಲ್ಲಿ ಕೊರೋನ ರೋಗಿಗಳದ್ದು ಎಂದು ಶಂಕಿಸಲಾದ ಸಾವಿರಾರು ಮೃತದೇಹಗಳು ತೇಲಿಬಂದಿರುವ ಪ್ರಕರಣದ ಹಿನ್ನೆಲೆಯಲ್ಲಿ ಎನ್ಎಚ್ಆರ್ಸಿಗೆ ದೂರು ನೀಡಲಾಗಿತ್ತು. ರವಿವಾರ ಉತ್ತರಪ್ರದೇಶದ ಯಮುನಾ ನದಿಯಲ್ಲೂ ಹಲವು ಮೃತದೇಹಗಳು ತೇಲಿಬಂದಿದ್ದವು. 

ಈ ಬಗ್ಗೆ ಮಾಹಿತಿ ನೀಡುವಂತೆ ಎನ್ಎಚ್ಆರ್ಸಿ ಕೇಂದ್ರ ಸರಕಾರ ಹಾಗೂ ಮೂರು ರಾಜ್ಯ ಸರಕಾರಗಳಿಗೆ ನೋಟಿಸ್ ನೀಡಿತ್ತು. ಜೊತೆಗೆ, ಈ ಪ್ರಕರಣದ ಬಗ್ಗೆ ಗುರುವಾರ ಸುಪ್ರೀಂಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದು ಪ್ರಕರಣದ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸುವಂತೆ ಕೋರಲಾಗಿದೆ. ಗಂಗಾನದಿ ಹರಿಯುವ ಉತ್ತರಪ್ರದೇಶದ 1,140 ಕಿ.ಮೀ ವ್ಯಾಪ್ತಿಯ ತೀರದಲ್ಲಿ 2000ಕ್ಕೂ ಅಧಿಕ ಮೃತದೇಹಗಳು ತೇಲಿಬಂದಿವೆ ಅಥವಾ ಹೂಳಲಾಗಿದೆ . ಉನ್ನಾವೊ ಜಿಲ್ಲೆಯ ಶುಕ್ಲಗುಂಜ್ ಘಾಟ್ನ ಬಳಿ ಮತ್ತು ಬಕ್ಸಾರ್ ಘಾಟ್ನ ಬಳಿ 900ಕ್ಕೂ ಅಧಿಕ ಮೃತದೇಹಗಳನ್ನು ಹೂಳಲಾಗಿದೆ . ಕಾನ್ಪುರದ ಸೆರೇಶ್ವರ ಘಾಟ್ ಬಳಿ 400 ಮೃತದೇಹಗಳನ್ನು ಹೂಳಲಾಗಿದೆ. ಕನೌಜ್ನ ಮಹಾದೇವಿ ಘಾಟ್ ಬಳಿ 350ಕ್ಕೂ ಅಧಿಕ ಮೃತದೇಹಗಳನ್ನು ಹೂಳಲಾಗಿದೆ. ಸ್ಥಳೀಯರು ಮೃತದೇಹಗಳ ಬಗ್ಗೆ ಮಾಹಿತಿ ನೀಡಿದ ಬಳಿಕ ಪೊಲೀಸರು ದಫನ ಮಾಡಿದ್ದಾರೆ ಎಂದು "ದೈನಿಕ್ ಭಾಸ್ಕರ್’ ವರದಿ ಮಾಡಿದೆ.

ನದಿಯಲ್ಲಿ ಉಬ್ಬರ ಕಂಡುಬಂದಾಗ ತೀರದಲ್ಲಿ ಹೂಳಲಾದ ಮೃತದೇಹಗಳು ನದಿನೀರನ್ನು ಸೇರಿ ಅಲ್ಲಿಂದ ಇತರ ಪ್ರದೇಶಗಳಿಗೆ ತೇಲಿಕೊಂಡು ಸಾಗುತ್ತವೆ ಎಂದು ಸ್ಥಳೀಯರು ಹೇಳಿರುವುದಾಗಿ "ದೈನಿಕ್ ಭಾಸ್ಕರ್’ ವರದಿ ಮಾಡಿದೆ. ನದಿ ತೀರದಲ್ಲಿ ಮೃತದೇಹ ವಿಲೇವಾರಿ ಮಾಡುವುದನ್ನು ತಡೆಯಲು ಭದ್ರತಾ ಪಡೆಗಳ ಗಸ್ತು ತಂಡ ರಚಿಸುವುದಾಗಿ ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಶುಕ್ರವಾರ ಘೋಷಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News