ಲಸಿಕೆ ಪಡೆಯುವ ವಯೋವರ್ಗದ ವಿಸ್ತರಣೆಯೇ ಲಸಿಕೆಯ ಕೊರತೆಗೆ ಕಾರಣ: ಕೋವಿಡ್ ಕಾರ್ಯಪಡೆಯ ಅಧ್ಯಕ್ಷರ ಅನಿಸಿಕೆ

Update: 2021-05-15 17:56 GMT

ಹೊಸದಿಲ್ಲಿ, ಮೇ 15: ದೇಶದಲ್ಲಿ ಕೊರೋನ ಸೋಂಕಿನಿಂದ ಸಂಭವಿಸುವ ಮರಣದ ಪ್ರಮಾಣವನ್ನು ಕಡಿಮೆಗೊಳಿಸುವ ಮೂಲ ಉದ್ದೇಶದಿಂದ ಲಸಿಕೆ ಪಡೆಯುವವರ ವಯೋವರ್ಗವನ್ನು ಕೇಂದ್ರ ಸರಕಾರ ನಿಗದಿಗೊಳಿಸಿದೆ. ಆದರೆ ಈಗ ಈ ಮಾನದಂಡದ ವಿಸ್ತರಣೆ ಲಸಿಕೆಯ ಕೊರತೆ ಸಮಸ್ಯೆಗೆ ಕಾರಣವಾಗಿದೆ ಎಂದು ಕೇಂದ್ರ ಸರಕಾರದ ಕೋವಿಡ್-19 ಕಾರ್ಯಪಡೆಯ ಮುಖ್ಯಸ್ಥ ಡಾ. ಎನ್.ಕೆ. ಅರೋರಾ ಹೇಳಿದ್ದಾರೆ.

ಲಸಿಕೆ ಲಭ್ಯವಿಲ್ಲದಿದ್ದರೂ 18ರಿಂದ 45 ವರ್ಷದವರಿಗೆ ಲಸಿಕೆ ಹಾಕುವ ಘೋಷಣೆ ಮಾಡಲಾಗಿದೆ. ಆದರೆ ಈ ಹಿಂದೆ ನಿರ್ಧರಿಸಿದ್ದ 45 ವರ್ಷ ಮೇಲ್ಪಟ್ಟ ವಯೋಮಾನದ ವರ್ಗಕ್ಕೆ ನಿಗದಿಯಾಗಿರುವ ಲಸಿಕೆ ಇನ್ನೂ ಸಾಕಷ್ಟು ಪ್ರಮಾಣದಲ್ಲಿದೆ. ಆದ್ದರಿಂದ ಲಸಿಕೆ ಪಡೆಯುವ ವಯೋವರ್ಗದ ವಿಸ್ತರಣೆಯನ್ನು ಇನ್ನೂ ಕೆಲ ಕಾಲ ಮುಂದೂಡಬೇಕಿತ್ತು ಎಂದು ಡಾ. ಅರೋರಾ ಹೇಳಿರುವುದಾಗಿ ‘ಎನ್ಡಿ ಟಿವಿ’ ವರದಿ ಮಾಡಿದೆ.

ಕಳೆದ ಸೆಪ್ಟಂಬರ್-ಅಕ್ಟೋಬರ್ನಲ್ಲಿ ಆದ್ಯತೆಯ ಮೇರೆಗೆ ವರ್ಗೀಕರಣ ಪ್ರಕ್ರಿಯೆ ನಡೆದಿತ್ತು. ಲಸಿಕೆಯ ಲಭ್ಯತೆ ಮತ್ತು ಸೋಂಕಿಗೆ ಸುಲಭದಲ್ಲಿ ತುತ್ತಾಗುವ ಸಾಧ್ಯತೆಯಿರುವ ವಯೋವರ್ಗಕ್ಕೆ ಮೊದಲ ಆದ್ಯತೆ ನೀಡಲಾಗಿತ್ತು. ಆದ್ದರಿಂದ ಮುಂಚೂಣಿ ಕಾರ್ಯಕರ್ತರು, 45 ವರ್ಷ ಮೀರಿದವರನ್ನು ಆಯ್ಕೆ ಮಾಡಲಾಗಿತ್ತು. ಈಗಲೂ ಈ ವಯೋವರ್ಗದವರಿಗೆ ಮೀಸಲಾಗಿರುವ ಸುಮಾರು 55 ಕೋಟಿ ಡೋಸ್ ಲಸಿಕೆ ಉಳಿದಿದೆ ಮತ್ತು ಜುಲೈ ತಿಂಗಳಿನವರೆಗೆ ಇದು ಸಾಕಾಗಬಹುದು’ ಎಂದವರು ಹೇಳಿದ್ದಾರೆ.

ಎಲ್ಲಕ್ಕಿಂತ ಮುಖ್ಯವಾಗಿ ಈಗ ವಿದೇಶದಲ್ಲೂ ಲಸಿಕೆ ಲಭ್ಯವಿಲ್ಲ. ಸರಕಾರ ಟೆಂಡರ್ ಪ್ರಕಟಿಸಿದರೆ ವಿದೇಶದ ಸಂಸ್ಥೆಗಳಿಂದ ಲಸಿಕೆ ಪೂರೈಕೆಯಾಗುತ್ತದೆ ಎಂದು ಹಲವರು ಭಾವಿಸಿದ್ದಾರೆ. ಆದರೆ ಜಾಗತಿಕವಾಗಿ ಲಸಿಕೆಯ ಪೂರೈಕೆ ಕಷ್ಟಸಾಧ್ಯ. ಯಾಕೆಂದರೆ ಕೆಲವು ಶ್ರೀಮಂತ ದೇಶಗಳು ಈಗಾಗಲೇ ಲಸಿಕೆಗೆ ಬೇಡಿಕೆ ಸಲ್ಲಿಸಿವೆ ಎಂದವರು ಹೇಳಿದ್ದಾರೆ. ಈ ವರ್ಷದ ಆಗಸ್ಟ್ನಿಂದ ಡಿಸೆಂಬರ್ ಅವಧಿಯಲ್ಲಿ ದೇಶದಲ್ಲಿ 200 ಕೋಟಿ ಡೋಸ್ಗೂ ಅಧಿಕ ಲಸಿಕೆ ಲಭ್ಯವಿರುವ ನಿರೀಕ್ಷೆಯಿದೆ ಎಂದು ಕೇಂದ್ರ ಸರಕಾರ ಇತ್ತೀಚೆಗೆ ಹೇಳಿತ್ತು. ಭಾರತ ವಿಶ್ವದ ಅತ್ಯಧಿಕ ಲಸಿಕೆ ಉತ್ಪಾದಿಸುವ ದೇಶಗಳಲ್ಲಿ ಒಂದಾಗಿದ್ದರೂ ಮಾರ್ಚ್ನಲ್ಲಿ ಉಲ್ಬಣಗೊಂಡಿರುವ ಸೋಂಕಿನ ಎರಡನೇ ಅಲೆಯಿಂದಾಗಿ ಲಸಿಕೀಕರಣ ಅಭಿಯಾನ ಮಂದಗತಿಯಲ್ಲಿ ಸಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News