ತೌಕ್ತೆ ಚಂಡಮಾರುತದ ಪ್ರಭಾವ: ಕೇರಳದಲ್ಲಿ ಭಾರೀ ಮಳೆ, ಗಾಳಿ: ಹಲವು ಮನೆಗಳಿಗೆ ಹಾನಿ

Update: 2021-05-15 18:18 GMT

ಕೇರಳ, ಮೇ 15: ಅರಬಿ ಸಮುದ್ರದಲ್ಲಿ ರೂಪುಗೊಂಡ ತೌಕ್ತೆ ಚಂಡಮಾರುತದ ಪ್ರಭಾವದಿಂದ ಕೇರಳದಲ್ಲಿ ಮುಖ್ಯವಾಗಿ ಕರಾವಳಿಯಲ್ಲಿ ಭಾರೀ ಮಳೆ ಸುರಿಯುತ್ತಿದೆ ಹಾಗೂ ರಭಸವಾದ ಗಾಳಿ ಬೀಸುತ್ತಿದೆ. ಇದರಿಂದ ಹಲವು ಪ್ರದೇಶಗಳು ಜಲಾವೃತವಾಗಿದೆ ಹಾಗೂ ಮನೆಗಳಿಗೆ ಹಾನಿ ಉಂಟಾಗಿವೆ. ರೆಡ್ ಅಲರ್ಟ್ ಘೋಷಿಸಲಾದ ಉತ್ತರ ಕೇರಳದ ಐದು ಜಿಲ್ಲೆಗಳಾದ ಮಲಪ್ಪುರಂ, ಕೋಝಿಕ್ಕೋಡ್, ವಯನಾಡ್, ಕಣ್ಣೂರು ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. 

ಆಲಪ್ಪುಳ, ಕೋಟ್ಟಯಂ, ಇಡುಕ್ಕಿ, ಎರ್ನಾಕುಳಂ, ತ್ರಿಶೂರು, ಪಾಲಕ್ಕಾಡ್, ಮಲಪ್ಪುರಂ ಕೋಝಿಕ್ಕೋಡ್, ವಯನಾಡ್, ಕಣ್ಣೂರು ಹಾಗೂ ಕಾಸರಗೋಡು ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಗುಡುಗಿನಿಂದ ಕೂಡಿದ ಲಘು ಮಳೆ ಹಾಗೂ ಗಂಟೆಗೆ 40 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣದ ತಿರುವನಂತಪುರದಿಂದ ಉತ್ತರದ ಕಾಸರಗೋಡಿನ ವರೆಗಿನ ಕರಾವಳಿ ತೀರದಲ್ಲಿ ವಾಸಿಸುತ್ತಿದ್ದ ಕುಟುಂಬಗಳು ತಮ್ಮ ಮನೆಗಳನ್ನು ತ್ಯಜಸಿ ಕೇಂದ್ರ ಸರಕಾರ ಆರಂಭಿಸಿರುವ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದುಕೊಂಡಿವೆ. 

ಕೇರಳ-ಕರ್ನಾಟಕ ಕರಾವಳಿಯುದ್ದಕ್ಕೂ ಕಡಲು ಶನಿವಾರ ಪ್ರಕ್ಷುಬ್ದವಾದೆ. ಕಾಸರಗೋಡು, ಕಣ್ಣೂರು, ಕೋಝಿಕೋಡ್, ತ್ರಿಶೂರ್, ಎರ್ನಾಕುಳಂ ಹಾಗೂ ಅಲಪ್ಪುಳ ಜಿಲ್ಲೆಯ ಸಮುದ್ರ ತೀರದಲ್ಲಿರುವ ಹಲವು ಮನೆಗಳು ಸಂಪೂರ್ಣವಾಗಿ ಹಾನಿಗೀಡಾಗಿದೆ. ತಡೆಗೋಡೆಯ ಇಲ್ಲದೇ ಇರುವುದರಿಂದ ದೀರ್ಘಕಾಲದಿಂದ ಕಡಲ್ಕೊರೆತ ಸಂಭವಿಸುತ್ತಿರುವ ಎರ್ನಾಕುಳಂ ಜಿಲ್ಲೆಯ ಚೆಲ್ಲನಮ್ ಗ್ರಾಮದಲ್ಲಿ ಹಲವು ಮನೆಗಳು ಜಲಾವೃತವಾಗಿವೆ. ಇದರಿಂದ ನಿವಾಸಿಗಳು ಮನೆ ತ್ಯಜಿಸಿ ತಮ್ಮ ಸಂಬಂಧಿಕರ ಮನೆ ಅಥವಾ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.

ಕಡಲ್ಕೊರೆತದಿಂದಾಗಿ ಕೋಝಿಕ್ಕೋಡ್ ಜಿಲ್ಲೆಯ ಬೈಪ್ಪೊರೆ, ಕೊಯಿಲಾಂಡಿ, ಕಡಲುಂಡಿ ಹಾಗೂ ವಡಗರದ ನಿವಾಸಿಗಳು ಪರಿಹಾರ ಕೇಂದ್ರಗಳಿಗೆ ಅಥವಾ ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ. ಮಣಿಮಾಲ ಹಾಗೂ ಅಚ್ಚನ್ಕೋವಿಲ್ ನದಿಯಲ್ಲಿ ಪ್ರವಾಹ ಸಂಭವಿಸುವ ಸಾಧ್ಯತೆ ಇರುವುದರಿಂದ ದಂಡೆಗಳಲ್ಲಿ ವಾಸಿಸುವ ಜನರಿಗೆ ಕೇಂದ್ರ ಜಲ ಆಯೋಗ ಎಚ್ಚರಿಕೆ ನೀಡಿದೆ. 

ಸಿಡಬ್ಲುಸಿಯ ಕಲ್ಲೂಪಾರ ಹಾಗೂ ತುಂಬಾಮೋನ್ ಸ್ಟೇಷನ್ಗಳಲ್ಲಿ ನೀರು ಅಪಾಯ ಮಟ್ಟ ಮೀರಿ ಹರಿಯುತ್ತಿರುವುದು ಬೆಳಕಿಗೆ ಬಂದ ಬಳಿಕ ಈ ಎಚ್ಚರಿಕೆ ನೀಡಲಾಗಿದೆ. ಚರಂಡಿ ಹಾಗೂ ಕಾಲುವೆಗಳು ನೀರು ಉಕ್ಕಿ ಹರಿದ ಪರಿಣಾಮ ಕೊಚ್ಚಿ, ಕೋಝಿಕೋಡ್ ಹಾಗೂ ತಿರುವನಂತಪುರದಂತಹ ನಗರಗಳು ಜಲಾವೃತವಾಗಿವೆ. ಮರಗಳು ಹಾಗೂ ವಿದ್ಯುತ್ ಕಂಬಗಳು ಧರಾಶಾಹಿಯಾದ ಪರಿಣಾಮ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಕೆಲವು ವಾಹನಗಳಿಗೆ ಹಾನಿ ಉಂಟಾಗಿದೆ. ಮರಗಳನ್ನು ತೆರವುಗೊಳಿಸಲು ಹಾಗೂ ವಿದ್ಯುತ್ ಸಂಪರ್ಕವನ್ನು ಮರು ಸ್ಥಾಪಿಸಲು ಕೇರಳ ಅಗ್ನಿಶಾಮಕ ಹಾಗೂ ರಕ್ಷಣಾ ಸೇವೆಗಳು, ಕೇರಳ ರಾಜ್ಯ ವಿದ್ಯುತ್ ಮಂಡಳಿ ಪ್ರಯತ್ನಿಸುತ್ತಿದೆ. 

ಇಡುಕ್ಕಿ ಜಿಲ್ಲೆಯಲ್ಲಿರುವ ಕಲ್ವರಿ ವೌಂಟ್ ಕಿರಿಯ ಪ್ರಾಥಮಿಕ ಶಾಲೆಯ ಮಾಡು ಹಾರಿ ಹೋಗಿದೆ. ಮಲಪ್ಪುರಂ ಜಿಲ್ಲೆಯ ನೀಲಂಬೂರು ಸಮೀಪದ ಕೈಪನಿಯಲ್ಲಿರುವ ತಾತ್ಕಾಲಿಕ ಸೇತುವೆ ನೆರೆಯಲ್ಲಿ ಕೊಚ್ಚಿ ಹೋಗಿದೆ. ಜಲಾಶಯದ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಲು ಭೂತಥಂಕೆಟ್ಟು, ಕಲ್ಲಾರ್ಕುಟ್ಟಿ ಹಾಗೂ ಮಲಂಕರದಲ್ಲಿರುವ ಅಣೆಕಟ್ಟಿನ ಗೇಟುಗಳನ್ನು ತೆರೆಯಲಾಗಿದೆ. ಬಾಕ್ಸ್ ವಲಿಯುಥುರಾ ಸಮುದ್ರ ಸೇತುವೆಯಲ್ಲಿ ಬಿರುಕು ರಾಜ್ಯದ ಅತ್ಯಂತ ಹಳೆಯ ಸಮುದ್ರ ಸೇತುವೆಗಳಲ್ಲಿ ಒಂದಾದ ವಲಿಯಪರ ಸೇತುವೆಯಲ್ಲಿ ಶುಕ್ರವಾರ ರಾತ್ರಿ ಬಿರುಕು ಕಾಣಿಸಿಕೊಂಡಿದೆ. ಜನರ ಸುರಕ್ಷಿತತೆಯ ಉದ್ದೇಶದಿಂದ ಸೇತುವೆಯ ದ್ವಾರ ಮುಚ್ಚಲಾಗಿದೆ. ಅಲ್ಲದೆ, ಪೊಲೀಸ್ ಭದ್ರತೆ ಒದಗಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News