ಮಹಾರಾಷ್ಟ್ರದಲ್ಲಿ ಒಂದೇ ದಿನ 960 ಮಂದಿ ಕೋವಿಡ್‌ಗೆ ಬಲಿ

Update: 2021-05-16 05:41 GMT

ಮುಂಬೈ: ಮಹಾರಾಷ್ಟ್ರದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದ್ದರೂ, ಸೋಂಕಿತರ ಸಾವಿನ ಸಂಖ್ಯೆ ಮಾತ್ರ ಆತಂಕಕಾರಿ ಪ್ರಮಾಣದಲ್ಲಿ ಮುಂದುವರಿದಿದೆ. ಶನಿವಾರ ದಾಖಲೆ ಸಂಖ್ಯೆಯ ಅಂದರೆ 960 ಮಂದಿ ಕೋವಿಡ್-19 ಸೋಂಕಿತರು ಮೃತಪಟ್ಟಿದ್ದಾರೆ.

ಕಳೆದ ತಿಂಗಳು ದಿನಕ್ಕೆ 60 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿದ್ದ ಮಹಾರಾಷ್ಟ್ರದಲ್ಲಿ ಶನಿವಾರ ದೈನಿಕ ಪ್ರಕರಣಗಳ ಸಂಖ್ಯೆ 34,898ಕ್ಕೆ ಇಳಿದಿದೆ. ಆದರೆ ಶುಕ್ರವಾರ 695 ಇದ್ದ ಸಾವಿನ ಸಂಖ್ಯೆ ಶನಿವಾರ 960ಕ್ಕೇರಿದೆ.

ಹೊಸದಿಲ್ಲಿ ವರದಿ: ದೇಶದಲ್ಲಿ ಕೊರೋನ ವೈರಸ್ ಎರಡನೇ ಅಲೆ ಅಬ್ಬರ ಕಡಿಮೆಯಾಗುತ್ತಿರುವ ಸ್ಪಷ್ಟ ಸೂಚನೆ ಕಂಡುಬಂದಿದ್ದು, ಸತತ ಏಳನೇ ದಿನ ಪ್ರಕರಣಗಳ ದೈನಿಕ ಸರಾಸರಿಯಲ್ಲಿ ಇಳಿಕೆ ಕಂಡುಬಂದಿದೆ. ಜತೆಗೆ ಧನಾತ್ಮಕತೆ ದರ ಕೂಡಾ ಶೇಕಡ 20ಕ್ಕಿಂತ ಕಡಿಮೆ ಇದ್ದು, ಒಂದು ವಾರದ ಅವಧಿಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1.5 ಲಕ್ಷದಷ್ಟು ಕಡಿಮೆಯಾಗಿದೆ.

ಆದಾಗ್ಯೂ ಸಾವಿನ ಸಂಖ್ಯೆ ಮಾತ್ರ ಆತಂಕಕಾರಿ ಪ್ರಮಾಣದಲ್ಲೇ ಮುಂದುವರಿದಿದ್ದು, ಶನಿವಾರ ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ಸೋಂಕಿತರು ಬಲಿಯಾಗಿದ್ದಾರೆ. ಪ್ರಕರಣಗಳ ಇಳಿಕೆ ವಿಚಾರದಲ್ಲಿ ಹಲವು ಧನಾತ್ಮಕ ಅಂಶಗಳು ಕಂಡುಬಂದಿದ್ದರೂ, ದೇಶದಲ್ಲಿ ಪ್ರಕರಣಗಳ ತಪಾಸಣೆ ಸಂಖ್ಯೆ ಇಳಿದಿರುವುದರಿಂದ ನಿಖರವಾಗಿ ಎರಡನೇ ಅಲೆ ಕಡಿಮೆಯಾಗುತ್ತಿದೆ ಎಂದು ಹೇಳುವಂತಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಏಳು ದಿನಗಳ ಸರಾಸರಿ ಪ್ರಕರಣಗಳ ಸಂಖ್ಯೆ ಮೇ 8ರಂದು ದಿನಕ್ಕೆ 3.91 ಲಕ್ಷ ಇದ್ದುದು ಇದೀಗ 3.54 ಲಕ್ಷಕ್ಕೆ ಇಳಿದಿದೆ. ಧನಾತ್ಮಕತೆ ದರ ಕೂಡಾ ಮೇ 8-14ರ ಅವಧಿಯಲ್ಲಿ 22.4% ದಿಂದ 19.5%ಕ್ಕೆ ಇಳಿದಿದೆ ಎಂದು ಅಂಕಿಅಂಶ ತಿಳಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News