ಗಾಝಾ ನಗರದ ಮೇಲೆ ಮತ್ತೆ ಇಸ್ರೇಲ್ ದಾಳಿ: ಕನಿಷ್ಠ 37 ಸಾವು; 50 ಮಂದಿಗೆ ಗಾಯ

Update: 2021-05-16 18:11 GMT

ರಮಲ್ಲಾ (ಫೆಲೆಸ್ತೀನ್), ಮೇ 16: ಫೆಲೆಸ್ತೀನ್ಗೆ ಸೇರಿದ ಗಾಝಾಪಟ್ಟಿಯ ಮೇಲೆ ಇಸ್ರೇಲ್ ನಡೆಸುತ್ತಿರುವ ವಾಯು ದಾಳಿಯು ರವಿವಾರ ಏಳನೇ ದಿನವನ್ನು ಪ್ರವೇಶಿಸಿದೆ. ರವಿವಾರ ಮುಂಜಾನೆ ಅದು ನಡೆಸಿದ ಬಾಂಬ್ ದಾಳಿಯಲ್ಲಿ ಕನಿಷ್ಠ ಎರಡು ವಸತಿ ಕಟ್ಟಡಗಳು ಧ್ವಂಸಗೊಂಡಿದ್ದು, ಕನಿಷ್ಠ 37 ಫೆಲೆಸ್ತೀನೀಯರು ಹತರಾಗಿದ್ದಾರೆ ಹಾಗೂ ಕನಿಷ್ಠ 50 ಮಂದಿ ಗಾಯಗೊಂಡಿದ್ದಾರೆ.

ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿರುವವರಿಗಾಗಿ ರಕ್ಷಣಾ ಸಿಬ್ಬಂದಿ ಬೆಳಗ್ಗೆ ತೀವ್ರ ಶೋಧ ನಡೆಸಿದ್ದಾರೆ.
 
ರವಿವಾರ ಮುಂಜಾನೆ ಒಂದು ಗಂಟೆ ಕಾಲ ಗಾಝಾ ಪಟ್ಟಿಯ ಮೇಲೆ ಸುಮಾರು 150 ರಾಕೆಟ್ಗಳನ್ನು ಹಾರಿಸಲಾಯಿತು ಎಂದು ಫೆಲೆಸ್ತೀನ್ ಅಧಿಕಾರಿಗಳು ಹೇಳಿದ್ದಾರೆ ಎಂದು ಅಲ್-ಜಝೀರ ವರದಿ ಮಾಡಿದೆ. ಇದು 2000ದಲ್ಲಿ ಆರಂಭಗೊಂಡ ಎರಡನೇ ಇಂಟಿಫಾಡ (ಬಂಡಾಯ)ದ ನಂತರ ನಡೆಯುತ್ತಿರುವ ಅತ್ಯಂತ ಭೀಕರ ಶೆಲ್ ದಾಳಿಯಾಗಿದೆ ಎಂದು ಮೂಲವೊಂದು ಹೇಳಿದೆ. ಹೊಗೆಯಾಡುತ್ತಿರುವ ಅವಶೇಷಗಳ ಬೃಹತ್ ರಾಶಿ ಮತ್ತು ಉರುಳಿದ ಕಟ್ಟಡಗಳ ಅಡಿಯಿಂದ ರಕ್ಷಣಾ ಸಿಬ್ಬಂದಿ ಮೃತದೇಹಗಳನ್ನು ಹೊರಗೆಳೆದರು.

ಸುಮಾರು ಅರ್ಧದಷ್ಟು ರಾಕೆಟ್ಗಳನ್ನು ಗಾಝಾ ನಗರದ ಅಲ್-ವೆಹ್ದಾ ಜಿಲ್ಲೆಯತ್ತ ಹಾರಿಸಲಾಗಿತ್ತು. ಅಲ್ಲಿನ ಜನವಸತಿ ಕಟ್ಟಡಗಳು, ಮೂಲಸೌಕರ್ಯಗಳು ಮತ್ತು ರಸ್ತೆಗಳು ಸಂಪೂರ್ಣವಾಗಿ ಅಥವಾ ಆಂಶಿಕವಾಗಿ ನಾಶವಾಗಿವೆ. ರವಿವಾರ ಮುಂಜಾನೆ ನಡೆದ ದಾಳಿಯಲ್ಲಿ 26 ಮಂದಿ ಮೃತಪಟ್ಟಿರುವುದನ್ನು ಫೆಲೆಸ್ತೀನ್ ಆರೋಗ್ಯ ಸಚಿವಾಲಯ ಖಚಿತಪಡಿಸಿದೆ. ಅವಶೇಷವೊಂದರ ಅಡಿಯಲ್ಲಿ ಐವರು ಮಕ್ಕಳು ಜೀವಂತವಾಗಿ ಪತ್ತೆಯಾದರು.
 
ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿರುವ ಜನರು ಬೊಬ್ಬೆ ಹಾಕುವುದು ಈಗಲೂ ನಮಗೆ ಕೇಳಿಸುತ್ತಿದೆ ಎಂದು 11 ಗಂಟೆಗಳ ಕಾಲ ನಿರಂತರವಾಗಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡ ನಾಗರಿಕ ರಕ್ಷಣಾ ಕಾರ್ಯಕರ್ತರೊಬ್ಬರು ಹೇಳಿದರು.

ಕಳೆದ ಒಂದು ವಾರದಲ್ಲಿ ಗಾಝಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸಿರುವ ದಾಳಿಯಲ್ಲಿ 170ಕ್ಕೂ ಅಧಿಕ ಫೆಲೆಸ್ತೀನೀಯರು ಮೃತಪಟ್ಟಿದ್ದಾರೆ. ಈ ಪೈಕಿ ಕನಿಷ್ಠ 41 ಮಕ್ಕಳು. 1,000ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಅದೇ ವೇಳೆ, ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಇಸ್ರೇಲ್ ಸೈನಿಕರು ನಡೆಸಿದ ದಾಳಿಯಲ್ಲಿ ಕನಿಷ್ಠ 13 ಫೆಲೆಸ್ತೀನೀಯರು ಮೃತಪಟ್ಟಿದ್ದಾರೆ.

ಇದೇ ಅವಧಿಯಲ್ಲಿ, ಇಸ್ರೇಲ್ನತ್ತ ಹಮಾಸ್ ನಡೆಸಿದ ದಾಳಿಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ 10 ಮಂದಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News