ದುಬಾರಿಯಾದ ಪಲ್ಸ್ ಆಕ್ಸಿಮೀಟರ್

Update: 2021-05-17 17:58 GMT

ಮಾನ್ಯರೇ,

ಕಳೆದ ವರ್ಷ ಕೊರೋನ ಸೋಂಕು ಬಂದಾಗಿನಿಂದ ಇಲ್ಲಿಯವರೆಗೂ ಪಲ್ಸ್ ಆಕ್ಸಿಮೀಟರ್‌ನ ಬೆಲೆ ಒಂದೇ ಸಮನೆ ಹೆಚ್ಚಾಗುತ್ತಲೇ ಇದೆ. ವರ್ಷದ ಹಿಂದೆ ಒಂದು ಪಲ್ಸ್ ಆಕ್ಸಿಮೀಟರ್‌ನ ಬೆಲೆ ರೂ. 600ರಿಂದ 1,000 ವರೆಗೆ ಇತ್ತು. ಆದರೆ ಬೇಡಿಕೆ ಹೆಚ್ಚಾದಂತೆಲ್ಲ ಅದನ್ನೇ ದುರುಪಯೋಗಪಡಿಸಿಕೊಂಡ ಕೆಲವರು ರೂ. 2,000ದಿಂದ 3,000 ವರೆಗೂ ಮಾರಾಟ ಮಾಡುತ್ತಿದ್ದಾರೆ. ಕೊರೋನ ಸೋಂಕು ಇದ್ದಕ್ಕಿದ್ದಂತೆಯೇ ದಿಢೀರನೆ ಏರಿದ ಗತಿಯಲ್ಲಿಯೇ ಪಲ್ಸ್ ಆಕ್ಸಿಮೀಟರ್‌ನ ಬೆಲೆಯು ಏರಿಕೆಯಾಗಿರುವುದು ಕೂಡಾ ದುರಂತ.

ಅದರಲ್ಲೂ ಕೆಲವೆಡೆ ಪಲ್ಸ್ ಆಕ್ಸಿಮೀಟರ್‌ಗೆ ಮುಂಗಡ ಹಣ ನೀಡಿದರಷ್ಟೇ 4-5 ದಿನ ಬಿಟ್ಟು ಮೆಡಿಕಲ್ ಶಾಪ್‌ನವರು ತರಿಸಿಕೊಡುತ್ತಾರೆ. ಕೊರೋನ ಸೋಂಕಿತರ ರಕ್ತದಲ್ಲಿನ ಆಮ್ಲಜನಕದ ಪ್ರಮಾಣ ಕಡಿಮೆಯಾಗುತ್ತಿದ್ದರೆ ಮುಂಜಾಗ್ರತಾ ಕ್ರಮವಾಗಿ ಪಲ್ಸ್ ಆಕ್ಸಿಮೀಟರ್‌ನಿಂದ ಮನೆಯಲ್ಲಿಯೇ ಪರಿಶೀಲಿಸಿ ಆನಂತರ ಆಸ್ಪತ್ರೆಗೆ ಬರಲು ಅನುಕೂಲವಾಗಲಿ ಎಂಬ ದೃಷ್ಟಿಯಲ್ಲಿ ವೈದ್ಯರು ನೀಡಿದ ಸಲಹೆಯಿಂದಲೇ ಬೇಡಿಕೆ ಹೆಚ್ಚಾಗಿ ಬೆಲೆ ಏರಿಕೆಗೆ ಕಾರಣವಾಗಿದೆ. ಅಥವಾ ಮೆಡಿಕಲ್ ಮಾಫಿಯಾ ಕೃತಕ ಬೇಡಿಕೆ ಸೃಷ್ಟಿಸಿರುವುದನ್ನು ಕೂಡಾ ಅಲ್ಲಗಳೆಯಲಾಗುವುದಿಲ್ಲ. ಪಲ್ಸ್ ಆಕ್ಸಿಮೀಟರ್ ಅತಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅವಶ್ಯಕತೆ ಇದ್ದು ಅಂತಹವರ ಅಂಗಡಿಗಳ ಪರವಾನಿಗೆಯನ್ನೇ ರದ್ದುಗೊಳಿಸಬೇಕಾಗಿದೆ. ಕಳೆದ ವರ್ಷ ಕೊರೋನ ಭಾರತಕ್ಕೆ ಕಾಲಿಟ್ಟಿದ್ದ ಸಮಯದಲ್ಲೂ ಮಾಸ್ಕ್ ಮತ್ತು ಸ್ಯಾನಿಟೈಸರ್‌ನ ಬೆಲೆಯಲ್ಲಿ ಇದೇ ರೀತಿ ಏರಿಕೆಯಾಗಿತ್ತು. ಈಗ ಎಲ್ಲೆಡೆ ಅವು ಲಭ್ಯವಾಗುತ್ತಿರುವುದರಿಂದಾಗಿ ಅವುಗಳ ಬೆಲೆ ಹೆಚ್ಚಾಗಿಲ್ಲ.

ರಾಜ್ಯ ಮತ್ತು ಕೇಂದ್ರ ಸರಕಾರಗಳು ಪರ್ಯಾಯ ಮಾರ್ಗ ಹುಡುಕಿ ಪಲ್ಸ್ ಆಕ್ಸಿಮೀಟರ್ ಬೆಲೆಯೇರಿಕೆಗೆ ಕಡಿವಾಣ ಹಾಕಬೇಕಾಗಿದೆ. ಇಲ್ಲವೇ ಜನೌಷಧಿ ಮಳಿಗೆಗಳ ಮೂಲಕ ಸರಕಾರದ ವತಿಯಿಂದಲೇ ರಿಯಾಯಿತಿ ದರದಲ್ಲಿ ವಿತರಿಸಬೇಕಾಗಿದೆ.

Writer - ಮುರುಗೇಶ್ ಡಿ., ದಾವಣಗೆರೆ

contributor

Editor - ಮುರುಗೇಶ್ ಡಿ., ದಾವಣಗೆರೆ

contributor

Similar News