‘ಲಿವ್ ಇನ್ ರಿಲೇಷನ್‌ಶಿಪ್’ ಸಾಮಾಜಿಕವಾಗಿ, ನೈತಿಕವಾಗಿ ಸ್ವೀಕಾರಾರ್ಹವಲ್ಲ: ಹೈಕೋರ್ಟ್

Update: 2021-05-18 17:32 GMT

ಚಂಡೀಗಢ, ಮೇ 18: ಲಿವ್ ಇನ್ ರಿಲೇಷನ್‌ಶಿಪ್ ಸಾಮಾಜಿಕವಾಗಿ ಮತ್ತು ನೈತಿಕವಾಗಿ ಸ್ವೀಕಾರಾರ್ಹವಲ್ಲ ಎಂದು ಹೇಳಿರುವ ಪಂಜಾಬ್ ಮತ್ತು ಹರ್ಯಾನ ಹೈಕೋರ್ಟ್, ಮನೆಬಿಟ್ಟು ಓಡಿಬಂದಿರುವ ತಮಗೆ ರಕ್ಷಣೆ ನೀಡಬೇಕೆಂದು ಜೋಡಿಯೊಂದು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.

ತಾವಿಬ್ಬರೂ ಜತೆಯಾಗಿಯೇ ವಾಸಿಸುತ್ತಿದ್ದು ಶೀಘ್ರವೇ ವಿವಾಹವಾಗಲು ಬಯಸಿದ್ದೇವೆ. ಆದರೆ ಹೆತ್ತವರು ಇದನ್ನು ವಿರೋಧಿಸಿದ್ದು ತಮ್ಮ ಜೀವಕ್ಕೆ ಅಪಾಯವಿದೆ ಎಂದು 22 ವರ್ಷದ ಗುರ್ವಿಂದರ್ ಸಿಂಗ್ ಹಾಗೂ 19 ವರ್ಷದ ಗುಲ್‌ಝಾ ಕುಮಾರಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

ಹುಡುಗಿಯ ವಯಸ್ಸಿನ ಕುರಿತ ದಾಖಲೆ ಆಕೆಯ ಹೆತ್ತವರ ವಶದಲ್ಲಿರುವುದರಿಂದ ತಮಗೆ ಇದುವರೆಗೆ ವಿವಾಹವಾಗಲು ಸಾಧ್ಯವಾಗಿಲ್ಲ. ಆದರೆ ತಾವಿಬ್ಬರೂ ಜತೆಯಾಗಿಯೇ ಬದುಕುತ್ತಿದ್ದೇವೆ (ಲಿವ್ ಇನ್ ರಿಲೇಶನ್‌ಶಿಪ್). ವಯಸ್ಸು ದೃಢೀಕರಿಸುವ ದಾಖಲೆ ಕೈಸೇರಿದೊಡನೆ ವಿವಾಹವಾಗಲು ನಿರ್ಧರಿಸಿದ್ದೇವೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ರಕ್ಷಣೆ ಕೋರಿ ಅರ್ಜಿ ಸಲ್ಲಿಸುವ ನೆಪದಲ್ಲಿ ಅರ್ಜಿದಾರರು ತಮ್ಮ ಲಿವ್ ಇನ್ ರಿಲೇಶನ್‌ಶಿಪ್‌ಗೆ ನ್ಯಾಯಾಲಯದ ಅಂಗೀಕಾರದ ಮುದ್ರೆ ದಕ್ಕಿಸಿಕೊಳ್ಳುವ ಉದ್ದೇಶ ಹೊಂದಿದ್ದಾರೆ. ಆದರೆ ಲಿವ್‌ಇನ್ ರಿಲೇಶನ್‌ಶಿಪ್ (ಮದುವೆಯಾಗದಿದ್ದರೂ ವಯಸ್ಕ ಹುಡುಗ-ಹುಡುಗಿ ದಂಪತಿಯಂತೆಯೇ ಒಟ್ಟಿಗೆ ಬದುಕುತ್ತಿರುವುದು) ಸಾಮಾಜಿಕವಾಗಿ ಮತ್ತು ನೈತಿಕವಾಗಿ ಸ್ವೀಕಾರಾರ್ಹವಲ್ಲದ ಕಾರಣ ಈ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ನ್ಯಾಯಮೂರ್ತಿ ಎಚ್‌ಎಸ್ ಮದನ್ ಆದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News