ಶ್ರೀಲಂಕಾ ಪ್ರವಾಸದಲ್ಲಿ ಟೀಮ್ ಇಂಡಿಯಾಕ್ಕೆ ರಾಹುಲ್ ದ್ರಾವಿಡ್ ಕೋಚ್: ವರದಿ

Update: 2021-05-20 09:30 GMT

ಹೊಸದಿಲ್ಲಿ: ಭಾರತದ ಮಾಜಿ ನಾಯಕ ಹಾಗೂ  ರಾಷ್ಟ್ರೀಯ  ಕ್ರಿಕೆಟ್ ಅಕಾಡೆಮಿಯ  (ಎನ್‌ಸಿಎ) ಹಾಲಿ ಮುಖ್ಯಸ್ಥ ರಾಹುಲ್ ದ್ರಾವಿಡ್ ಅವರು ಜುಲೈನಲ್ಲಿ ಶ್ರೀಲಂಕಾ ವಿರುದ್ಧ ಆರು ಪಂದ್ಯಗಳ ಸರಣಿಯನ್ನು ಆಡುವ ಭಾರತದ ಸೀಮಿತ ಓವರ್‌ಗಳ ತಂಡಕ್ಕೆ ತರಬೇತು ನೀಡಲಿದ್ದಾರೆ.

 2014 ರಲ್ಲಿ ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ಟೀಮ್ ಇಂಡಿಯಾಕ್ಕೆ ಬ್ಯಾಟಿಂಗ್ ಸಲಹೆಗಾರರಾಗಿ ಕೆಲಸ ಮಾಡಿದ ನಂತರ ಇದೀಗ ಎರಡನೇ ಬಾರಿ  ಭಾರತೀಯ ತಂಡದೊಂದಿಗೆ ದ್ರಾವಿಡ್ ಅವರು ಕೆಲಸ ಮಾಡಲಿದ್ದಾರೆ.

ಈ ಬೆಳವಣಿಗೆಗಳ ಬಗ್ಗೆ ಎಎನ್‌ಐ ಜೊತೆ ಮಾತನಾಡಿದ ಬಿಸಿಸಿಐ ಅಧಿಕಾರಿಯೊಬ್ಬರು, ರವಿ ಶಾಸ್ತ್ರಿ, ಭಾರತ್ ಅರುಣ್ ಹಾಗೂ  ವಿಕ್ರಮ್ ರಾಥೋರ್ ಅವರು ಜುಲೈನಲ್ಲಿ ಟೆಸ್ಟ್ ತಂಡದೊಂದಿಗೆ ಇಂಗ್ಲೆಂಡ್ ನಲ್ಲಿರುವ ಕಾರಣ  ಎನ್‌ಸಿಎ ಮುಖ್ಯಸ್ಥ ದ್ರಾವಿಡ್  ತಂಡದ ಕೋಚ್ ಆಗಿರುತ್ತಾರೆ ಎಂದು ದೃಢಪಡಿಸಿದರು.

" ಜುಲೈನಲ್ಲಿ ಟೀಮ್ ಇಂಡಿಯಾ ಕೋಚಿಂಗ್ ಸಿಬ್ಬಂದಿ ಬ್ರಿಟನ್ ನಲ್ಲಿರುತ್ತದೆ ಹಾಗೂ ಈಗಾಗಲೇ ಭಾರತದ ಬಹುತೇಕ 'ಎ' ತಂಡದ ಆಟಗಾರರೊಂದಿಗೆ ಕೆಲಸ ಮಾಡಿರುವ ದ್ರಾವಿಡ್  ಮಾರ್ಗದರ್ಶನ ನೀಡುವುದು ಉತ್ತಮ" ಎಂದು ಅಧಿಕಾರಿಯೊಬ್ಬರು ಹೇಳಿದರು.

2019 ರಲ್ಲಿ ಎನ್‌ಸಿಎ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು, ದ್ರಾವಿಡ್ ಅಂಡರ್ -19 ಮಟ್ಟದ ಭಾರತೀಯ ತಂಡದಲ್ಲಿ ಹಾಗೂ ಭಾರತದ 'ಎ' ತಂಡದಲ್ಲಿ ಈಗಿನ  ಯುವ ಆಟಗಾರರೊಂದಿಗೆ  ನಿಕಟವಾಗಿ ಕೆಲಸ ಮಾಡಿದ್ದರು.

ಭಾರತ ಹಾಗೂ ಶ್ರೀಲಂಕಾ ನಡುವೆ ಮೂರು ಏಕದಿನ ಪಂದ್ಯಗಳು ಜುಲೈ 13, 16, 19 ರಂದು ನಡೆಯಲಿದ್ದು, ಟ್ವೆಂಟಿ- 20  ಪಂದ್ಯಗಳು ಜುಲೈ 22ರಿಂದ 27ರವರೆಗೆ ನಡೆಯುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News