ಕೋಲ್ಕತಾವನ್ನು ಆವರಿಸಿದ ‘ಮೆಸ್ಸಿ’ ಉನ್ಮಾದ!
ಫುಟ್ಬಾಲ್ ಮಾಂತ್ರಿಕನನ್ನು ಸ್ವಾಗತಿಸಲು ಮುಂಜಾನೆ 2:30ಕ್ಕೆ ನೆರೆದ ಸಾವಿರಾರು ಅಭಿಮಾನಿಗಳು
ಲಿಯೊನೆಲ್ ಮೆಸ್ಸಿ | Photo Credit : PTI
ಕೋಲ್ಕತಾ, ಡಿ. 13: ಫುಟ್ಬಾಲ್ ದಂತಕತೆ ಲಿಯೊನೆಲ್ ಮೆಸ್ಸಿ ಉನ್ಮಾದ ಕೋಲ್ಕತವನ್ನು ಆವರಿಸಿದೆ. ಮೂರು ದಿನಗಳ ಭಾರತದ ‘GOAT’ (ಸಾರ್ವಕಾಲಿಕ ಶ್ರೇಷ್ಠ) ಪ್ರವಾಸ- 2025ಕ್ಕಾಗಿ ಕೋಲ್ಕತಾಕ್ಕೆ ಶನಿವಾರ ಮುಂಜಾನೆ ಆಗಮಿಸಿದ ಅರ್ಜೆಂಟೀನ ಸೂಪರ್ ಸ್ಟಾರನ್ನು ಸ್ವಾಗತಿಸಲು ಸಾವಿರಾರು ಅಭಿಮಾನಿಗಳು ಡಿಸೆಂಬರ್ ಚಳಿಯನ್ನೂ ಲೆಕ್ಕಿಸದೆ ಅಭಿಮಾನಿಗಳು ಕಾದರು.
ಅವರು ಮುಂಜಾನೆ 2:26ಕ್ಕೆ ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಿದರು.
ರೋಮಾಂಚನಗೊಂಡ ಫುಟ್ಬಾಲ್ ಅಭಿಮಾನಿಗಳು ಫುಟ್ಬಾಲ್ ಮಾಂತ್ರಿಕನ ದರ್ಶನಕ್ಕಾಗಿ ಮುಗಿಬಿದ್ದರು. ಬ್ಯಾರಿಕೇಡ್ ಗಳು, ಭಾರೀ ಸಂಖ್ಯೆಯಲ್ಲಿ ಪೊಲೀಸರ ನಿಯೋಜನೆ, ನಿರಂತರ ಮೆಸ್ಸಿ ಹೆಸರು ಘೋಷಣೆಯ ಮೂಲಕ ನಗರವು ಮೆಸ್ಸಿ ಉನ್ಮಾದಕ್ಕೆ ಒಳಗಾಯಿತು.
ಮೆಸ್ಸಿಯೊಂದಿಗೆ ಅವರ ದೀರ್ಘಕಾಲೀನ ಸಹ ಆಟಗಾರ ಲೂಯಿಸ್ ಸುವರೆಝ್ ಮತ್ತು ಅರ್ಜೆಂಟೀನ ತಂಡದ ಸಹ ಆಟಗಾರ ರೋಡ್ರಿಗೊ ಡಿ ಪೌಲ್ ಕೂಡಾ ಆಗಮಿಸಿದ್ದಾರೆ.
ಮುಂದಿನ 72 ಗಂಟೆಗಳಲ್ಲಿ ಅವರು ಕೋಲ್ಕತ, ಹೈದರಾಬಾದ್, ಮುಂಬೈ ಮತ್ತು ದಿಲ್ಲಿಯಲ್ಲಿ ಕ್ಷಿಪ್ರ ಸಂಚಾರ ಮಾಡಲಿದ್ದಾರೆ. ಈ ಅವಧಿಯಲ್ಲಿ ಅವರು ಮುಖ್ಯಮಂತ್ರಿಗಳು, ಉದ್ಯಮಪತಿಗಳು, ಬಾಲಿವುಡ್ ನಟರು ಮತ್ತು ಸೋಮವಾರ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಲಿದ್ದಾರೆ.
ಮೆಸ್ಸಿ ಭೇಟಿಗೆ ಭಾರೀ ಭದ್ರತೆಯನ್ನು ಏರ್ಪಡಿಸಲಾಗಿತ್ತು. ಅವರನ್ನು ಶನಿವಾರ ಮುಂಜಾನೆ ಸುಮಾರು 3:30ಕ್ಕೆ ಕೋಲ್ಕತಾ ವಿಮಾನ ನಿಲ್ದಾಣದ ಹಿಂಬಾಗಿಲ ಮೂಲಕ ಅವರ ಹೊಟೇಲ್‌ಗೆ ಕರೆದೊಯ್ಯಲಾಯಿತು. ಅವರನ್ನು ನೋಡುವುದಕ್ಕಾಗಿ ವಿಮಾನ ನಿಲ್ದಾಣದ ಎದುರು ಸೇರಿದ್ದ ನೂರಾರು ಅಭಿಮಾನಿಗಳಿಗೆ ನಿರಾಶೆಯಾಯಿತು.