ಭಾರತದ ಕೋವಿಡ್‌ ದುಸ್ಥಿತಿ ಕುರಿತ ʼಲ್ಯಾನ್ಸೆಟ್‌ ಸಂಪಾದಕೀಯʼ ವಿರೋಧಿಸಿ ಬರೆದ ಲೇಖನದಲ್ಲಿರುವ ವಾದಗಳಿಗೆ ಪ್ರತಿಕ್ರಿಯೆ

Update: 2021-05-20 16:05 GMT

ಲ್ಯಾನ್ಸೆಟ್ ಮೆಡಿಕಲ್ ಜರ್ನಲ್ ತನ್ನ 2021,ಮೇ 8ರ ಸಂಚಿಕೆಯಲ್ಲಿ ಭಾರತವು ಕೋವಿಡ್-19 ಬಿಕ್ಕಟ್ಟನ್ನು ನಿರ್ವಹಿಸುತ್ತಿರುವ ರೀತಿಯನ್ನು ಟೀಕಿಸಿ ಸಂಪಾದಕೀಯವನ್ನು ಪ್ರಕಟಿಸಿತ್ತು. ಲ್ಯಾನ್ಸೆಟ್ನ ಸಂಪಾದಕೀಯವು ಅಲ್ಲಿಯವರೆಗೆ ಭಾರತೀಯ ವೃತ್ತಪತ್ರಿಕೆಗಳು ಮತ್ತು ಮ್ಯಾಗಝಿನ್ಗಳಲ್ಲಿ ಪ್ರಕಟಗೊಂಡಿದ್ದ ಟೀಕಾತ್ಮಕ ಲೇಖನಗಳಿಗೆ ಅನುಗುಣವಾಗಿತ್ತು. ಅದರೆ ಇತರ ಯಾವುದೇ ಲೇಖನಗಳಿಗಿಂತ ಹೆಚ್ಚು ಮತ್ತು ಚುರುಕಾಗಿ ಪ್ರತಿಕ್ರಿಯೆಗಳು ಈ ಸಂಪಾದಕೀಯಕ್ಕೆ ವ್ಯಕ್ತವಾಗಿದ್ದವು.
  
ಸಂಪಾದಕೀಯ ಪ್ರಕಟಗೊಂಡ ಬೆನ್ನಲ್ಲೇ ಕೇಂದ್ರ ಸಚಿವ ಹರ್ಷವರ್ಧನ ಅವರ ನೇತೃತ್ವದಲ್ಲಿ ಹಲವಾರು ಸಚಿವರು ಮತ್ತು ಬಿಜೆಪಿ ನಾಯಕರು ಬ್ಲಾಗ್ ಪೋಸ್ಟ್ವೊಂದರ ಲಿಂಕ್ ಅನ್ನು ಶೇರ್ ಮಾಡಲು ಆರಂಭಿಸಿದ್ದರು. ಮುಂಬೈನ ಟಾಟಾ ಮೆಮೋರಿಯಲ್ ಸೆಂಟರ್ನ ಸೆಂಟರ್ ಫಾರ್ ಕ್ಯಾನ್ಸರ್ ಎಪಿಡಮಾಲಜಿಯ ಉಪ ನಿರ್ದೇಶಕ ಪಂಕಜ ಚತುರ್ವೇದಿ ಅವರು ಬರೆದಿದ್ದ ಈ ಪೋಸ್ಟ್ ಮೇ 17ರಂದು ಪ್ರಕಟಗೊಂಡಿತ್ತು. ಬ್ಲಾಗ್ನಲ್ಲಿಯ ವಿಷಯಗಳು ‘ನ್ಯಾಯೋಚಿತವಾಗಿವೆ’ ಎಂದು ಪ್ರಶಂಸಿಸಿದ್ದ ಹರ್ಷವರ್ಧನ,ಲ್ಯಾನ್ಸೆಟ್ ಸಂಪಾದಕೀಯವನ್ನು ‘ಅಸಮತೋಲಿತ ’ವಾಗಿದೆ ಮತ್ತು ರಾಜಕೀಯ ಪಕ್ಷಪಾತದಿಂದ ಕೂಡಿದೆ ಎಂದು ಜರಿದಿದ್ದರು.
  
ಸಂಪಾದಕೀಯಕ್ಕೆ ಉತ್ತರವಾಗಿ ಇತರ ಮೂವರು ಲೇಖನಗಳನ್ನು ಬರೆದಿದ್ದರು. ಈ ಪೈಕಿ ಮುಂಬೈನ ಕಪೇಶ ಗಾಜಿವಾಲಾ ಅವರ ಎರಡು ಲೇಖನಗಳು ಮತ್ತು ಕರ್ನಾಟಕದ ವಸಂತ ಕಾಮತ ಅವರ ಒಂದು ಲೇಖನ ವೈಜ್ಞಾನಿಕ ಜರ್ನಲ್ಗಳಲ್ಲಿ ಪ್ರಕಟಗೊಂಡಿಲ್ಲ. ಕರ್ನಾಟಕದ ಸತೀಶ ಭಟ್ ಮತ್ತು ಇತರರು ಬರೆದಿರುವ ಲೇಖನವು ಸಹಲೇಖಕರೋರ್ವರು ಹೇಳಿಕೊಂಡಿರುವಂತೆ ಜರ್ನಲ್ವೊಂದರಲ್ಲಿ ಪ್ರಕಟಗೊಳ್ಳಲಿದೆ.

ಆದರೆ ಈ ಎಲ್ಲ ನಾಲ್ಕೂ ಪ್ರತಿವಾದಗಳು ದೋಷಪೂರಿತವಾಗಿವೆ. ಹೇಗೆ ಎನ್ನುವುದು ಇಲ್ಲಿದೆ....
 
* ವಾದ: ಭಾರತದ ಜನಸಂಖ್ಯೆಯು ಅಮೆರಿಕ,ಯುರೋಪ್ ಮತ್ತು ಬ್ರಝಿಲ್ಗಳ ಒಟ್ಟು ಜನಸಂಖ್ಯೆಗಿಂತ ಹೆಚ್ಚಿದೆ. ಇಂದಿಗೂ ಭಾರತದಲ್ಲಿ ಪ್ರತಿ ಮಿಲಿಯನ್ ಜನಸಂಖ್ಯೆಗೆ ಕೋವಿಡ್ ಸಾವುಗಳ ಸಂಖ್ಯೆ ಈ ಮೂರೂ ದೇಶಗಳಲ್ಲಿಯ ಸಾವುಗಳ ಶೇ.10ಕ್ಕೂ ಕಡಿಮೆಯಿದೆ.
 
-ಭಾರತದಲ್ಲಿಯ ಕೋವಿಡ್-19 ಪ್ರಕರಣಗಳು ಮತ್ತು ಸಾವಿನ ಸಂಖ್ಯೆಗಳನ್ನು ನಾವು ಇತರ ರಾಷ್ಟ್ರಗಳೊಂದಿಗೆ ಹೋಲಿಸುವಂತಿಲ್ಲ. ಭಾರತದಲ್ಲಿ ಎರಡು ರೀತಿಗಳಲ್ಲಿ ಪ್ರಕರಣಗಳು ಕಡಿಮೆ ವರದಿಯಾಗಿವೆ:ಮೂಲಸೌಕರ್ಯಗಳ ಕೊರತೆ ಮತ್ತು ಸರಕಾರದ ಮಟ್ಟದಲ್ಲಿ ಲೋಪಗಳಿಂದಾಗಿ ಇಲ್ಲಿ ಪರೀಕ್ಷೆಗಳ ಸಂಖ್ಯೆ ಕಡಿಮೆಯಿದೆ. ಸಾವುಗಳ ಸಂಖ್ಯೆಯನ್ನೂ ಎರಡು ಕಾರಣಗಳಿಂದಾಗಿ ನಾವು ಹೋಲಿಸುವಂತಿಲ್ಲ. ಆರ್ಥಿಕವಾಗಿ ಮುಂದುವರಿದಿರುವ ದೇಶಗಳಲ್ಲಿ ಉತ್ತಮ ಆರೋಗ್ಯ ಮತ್ತು ನೈರ್ಮಲ್ಯ ಸೌಲಭ್ಯಗಳಿಂದಾಗಿ 65 ವರ್ಷಕ್ಕಿಂತ ಹೆಚ್ಚಿನ ವಯೋಮಾನದ ಜನರ ಸಂಖ್ಯೆ ಹೆಚ್ಚಿದೆ. 

ಅವರು ಇತರ ಕಾಯಿಲೆಗಳಿಂದಲೂ ಬಳಲುತ್ತಿದ್ದು,ಸಹಜವಾಗಿಯೇ ಇದು ಸಾವುಗಳ ಸಂಖ್ಯೆಯನ್ನು ಹೆಚ್ಚಿಸಿದೆ. ಅಲ್ಲದೆ ಭಾರತದಲ್ಲಿ ಸಾವುಗಳ ಸಂಖ್ಯೆ ಕಡಿಮೆಯಾಗಿ ದಾಖಲಾಗಿದ್ದು,ನ್ಯಾಯಾಲಯಗಳು ಮತ್ತು ಮಾಧ್ಯಮ ವರದಿಗಳೂ ಈ ಮಾತಿಗೆ ಪುಷ್ಟಿ ನೀಡಿವೆ. ಪಾಟ್ನಾ ಉಚ್ಚ ನ್ಯಾಯಾಲಯವು ಬಿಹಾರದ ಅಧಿಕೃತ ಕೋವಿಡ್-19 ಅಂಕಿಅಂಶಗಳಲ್ಲಿ ಗಂಭೀರ ಲೋಪಗಳನ್ನು ಬೆಟ್ಟು ಮಾಡಿದೆ. ಗುಜರಾತ ಸರಕಾರದ ಅಧಿಕೃತ ದಾಖಲೆಗಳಂತೆ 2021,ಮಾ.1 ಮತ್ತು 2021,ಮೇ 10ರ ನಡುವೆ 4,218 ಕೋವಿಡ್ ಸಾವುಗಳು ಸಂಭವಿಸಿದ್ದರೆ ಇದೇ ಅವಧಿಯಲ್ಲಿ ರಾಜ್ಯದಲ್ಲಿ 1.23 ಲಕ್ಷ ಮರಣ ಪ್ರಮಾಣಪತ್ರಗಳನ್ನು ವಿತರಿಸಲಾಗಿದೆ ಎಂದು ಮಾಧ್ಯಮಗಳು ಬಹಿರಂಗಗೊಳಿಸಿವೆ.

* ವಾದ: ಭಾರತದಲ್ಲಿ ಕೋವಿಡ್ ಎರಡನೇ ಅಲೆಗೆ ರೈತರ ಪ್ರತಿಭಟನೆಯೂ ಚುನಾವಣಾ ರ್ಯಾಲಿಗಳು ಮತ್ತು ಕುಂಭಮೇಳದಷ್ಟೇ ಹೊಣೆಯಾಗಿದೆ.
 
-ಅಬ್ಬಬ್ಬಾ ಎಂದರೂ ಪ್ರತಿಭಟನೆಗಳಲ್ಲಿ ಪಾಲ್ಗೊಂಡವರ ಸಂಖ್ಯೆ ಎರಡು ಲಕ್ಷವನ್ನು ಮೀರುವುದಿಲ್ಲ ಮತ್ತು ಇವರಲ್ಲಿ ಉತ್ತರ ಭಾರತದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕುಂಭಮೇಳದಲ್ಲಿ ದೇಶಾದ್ಯಂತದಿಂದ 91 ಲಕ್ಷ ಜನರು ಭಾಗಿಯಾಗಿದ್ದರು. ಹೊಸ ಸೋಂಕು ಪ್ರಕರಣಗಳಿಗೆ ಕಾರಣವಾಗುವಲ್ಲಿ ಇವೆರಡೂ ವಿದ್ಯಮಾನಗಳ ಹೊಣೆಗಾರಿಕೆಯನ್ನು ಪರಸ್ಪರ ಹೋಲಿಸುವಂತೆಯೇ ಇಲ್ಲ. ಮಹತ್ವದ್ದೆಂದರೆ ಲ್ಯಾನ್ಸೆಟ್ ಅನ್ನು ವಿರೋಧಿಸುತ್ತಿರುವ ಜನರು ರೈತರ ಪ್ರತಿಭಟನೆಯನ್ನು ಎಳೆದು ತರುವ ಮೂಲಕ ಜರ್ನಲ್ ನ ಪ್ರತಿಪಾದನೆಯ ತಿರುಳನ್ನೇ ಕಡೆಗಣಿಸುತ್ತಿದ್ದಾರೆ. ರೈತರ ಪ್ರತಿಭಟನೆಯು ಸರಕಾರವು ಯಾರೊಂದಿಗೂ ಸಮಾಲೋಚಿಸದೆ ಅಂಗೀಕರಿಸಿದ ಕೃಷಿ ಕಾಯ್ದೆಗಳ ವಿರುದ್ಧ ದಿಢೀರ್ ಬೆಳವಣಿಗೆಯಾಗಿತ್ತು. 

ಕುಂಭಮೇಳ ಮತ್ತು ಚುನಾವಣಾ ರ್ಯಾಲಿಗಳಿಗೆ ಹಲವು ತಿಂಗಳುಗಳಿಂದ ಯೋಜನೆಗಳನ್ನು ರೂಪಿಸಲಾಗಿತ್ತು. ಕೇಂದ್ರವಾಗಲಿ ಚುನಾವಣಾ ಆಯೋಗವಾಗಲೀ ಅದನ್ನು ಹಿಂದೆಗೆದುಕೊಳ್ಳಬಹುದಿತ್ತು,ಆದರೆ ಅವು ಹಾಗೆ ಮಾಡಲಿಲ್ಲ ಮತ್ತು ‘ಸೂಪರ್ಸ್ಪ್ರೆಡರ್’ ಘಟನಾವಳಿಗಳು ನಡೆದುಹೋದವು. ಕುಂಭಮೇಳವನ್ನು 2022ರಲ್ಲಿ ನಡೆಸಲು ಮೊದಲು ನಿರ್ಧರಿಸಲಾಗಿತ್ತು, ಆದರೆ ಜೋತಿಷಿಗಳ ಮಾತುಗಳನ್ನು ನಂಬಿದ ರಾಷ್ಟ್ರೀಯ ಬಿಜೆಪಿ ನಾಯಕತ್ವವು ಅದನ್ನು ಒಂದು ವರ್ಷ ಹಿಂದೂಡಿತ್ತು.

* ವಾದ: ಕೋವಿಡ್ ಕುರಿತು ವರದಿಗಳು ಜನರ ಮನಸ್ಸಿನಲ್ಲಿ ಭೀತಿಯನ್ನು ಹುಟ್ಟಿಸಿದೆ ಮತ್ತು ಇದರಿಂದಾಗಿ ಅವರು ಔಷಧಿಗಳು ಮತ್ತು ಆಮ್ಲಜನಕ ಉಪಕರಣಗಳನ್ನು ದಾಸ್ತಾನಿಟ್ಟುಕೊಳ್ಳುತ್ತಿದ್ದಾರೆ. ಇದು ಇವುಗಳ ಕಾಳಸಂತೆಗೆ ಕಾರಣವಾಗಿದೆ. ಮಾಧ್ಯಮ ವರದಿಗಳೂ ಜನರು ತಮ್ಮಲ್ಲಿ ಕಂಡುಬಂದಿರುವ ಲಕ್ಷಣಗಳು ಕೋವಿಡ್ನದ್ದೇ ಆಗಿರಬಹುದು ಎಂದು ಅನ್ಯಥಾ ಭಾವಿಸುವಂತೆ ಮಾಡಿವೆ.

- ಉದ್ಯಮವು ಭೀತಿಯ ಲಾಭವನ್ನು ಪಡೆದುಕೊಳ್ಳಲು ಮುಂದಾದಾಗ ಕಾಳಸಂತೆಯು ಸೃಷ್ಟಿಯಾಗುತ್ತದೆಯೇ ಹೊರತು ಭೀತಿಯಿಂದಲ್ಲ. ಭೀತಿ ಮತ್ತು ಗೊಂದಲದ ಮಾತುಗಳನ್ನು ಬಿಡಿ,ಮೊದಲು ಚಿಕಿತ್ಸಾ ಶಿಷ್ಟಾಚಾರಗಳನ್ನು ತರ್ಕಬದ್ಧಗೊಳಿಸಿ ಹಾಗೂ ಔಷಧಿಗಳ ಬೆಲೆ ಮತ್ತು ವಿತರಣೆಯನ್ನು ನಿಯಂತ್ರಿಸಿ. ಕಾಳಸಂತೆಯು ತಾನಾಗಿಯೇ ಮಾಯವಾಗುತ್ತದೆ.

ಎರಡನೆಯದಾಗಿ ಸ್ವಲ್ಪವೇ ಲಕ್ಷಣಗಳು ಕಂಡುಬಂದರೂ ಜನರು ಆಸ್ಪತ್ರೆಗಳಿಗೆ ಧವಿಸುತ್ತಾರೆ ಎನ್ನುವುದು ನಿಜಕ್ಕೂ ವಿಶೇಷ ವೈದ್ಯಕೀಯ ಕಾಳಜಿ ಅಗತ್ಯವಾಗಿರುವ ಜನರಿಂದ ಆಸ್ಪತ್ರೆಗಳು ಕಿಕ್ಕಿರಿದಿವೆ ಎನ್ನುವ ವಾಸ್ತವವನ್ನು ಬಚ್ಚಿಡಲು ಅನುಕೂಲಕರವಾಗಿ ಬಳಕೆಯಾಗುತ್ತಿರುವ ಉತ್ಪ್ರೇಕ್ಷೆಯಾಗಿದೆ. ಹೆಚ್ಚಿನ ಜನರು ಮೊದಲು ತಮ್ಮ ವೈದ್ಯರ ಸಲಹೆ ಪಡೆದುಕೊಳ್ಳದೆ ಆಸ್ಪತ್ರೆಗಳಿಗೆ ದಾಖಲಾಗುವುದಿಲ್ಲ ಮತ್ತು ಸಾಮಾನ್ಯವಾಗಿ ವೈದ್ಯರು ಸೌಮ್ಯ ಕೋವಿಡ್-19 ಲಕ್ಷಣಗಳಿರುವ ರೋಗಿಗಳಿಗೆ ಮನೆಗಳಲ್ಲಿಯೇ ಕ್ವಾರಂಟೈನ್ನಲ್ಲಿರುವಂತೆ ಸೂಚಿಸುತ್ತಾರೆ. ಅಲ್ಲದೆ ದೇಶದ ಹಲವು ಭಾಗಗಳಲ್ಲಿಯ ಆಸ್ಪತ್ರೆಗಳಲ್ಲಿ ಆಮ್ಲಜನಕ ಮತ್ತು ಜೀವರಕ್ಷಕ ಉಪಕರಣಗಳಿಂದ ಸುಸಜ್ಜಿತ ಹಾಸಿಗೆಗಳ ಲಭ್ಯತೆ ಕಷ್ಟವಾಗಿದೆ ಎನ್ನುವುದು ಮಾಧ್ಯಮಗಳ ಮೂಲಕ ನಮಗೆ ತಿಳಿದಿದೆ. ಗ್ರಾಮೀಣ ಭಾರತದಲ್ಲಿ ವೈದ್ಯಕೀಯ ಸೌಲಭ್ಯಗಳ ತೀವ್ರ ಕೊರತೆಯಿದೆ ಎನ್ನುವುದು ನಮಗೆ ಗೊತ್ತಿದೆ.
 
* ವಾದ: ಸಾಮಾಜಿಕ ಮಾಧ್ಯಮಗಳಲ್ಲಿ ಉರಿಯುತ್ತಿರುವ ಚಿತೆಗಳ ಚಿತ್ರಗಳನ್ನು ಶೇರ್ ಮಾಡಿಕೊಳ್ಳುವುದು ಜನರ ಮಾನಸಿಕ ಆರೋಗ್ಯಕ್ಕ ಹಾನಿಯನ್ನುಂಟು ಮಾಡುತ್ತದೆ

- ಜನರಿಗೆ ಸಾಮಾಜಿಕ ಮಾಧ್ಯಮಗಳಿಂದ ದೂರವಿರಲು ಸಾಧ್ಯವಿಲ್ಲ ಮತ್ತು ಇಂತಹ ಕಥನಗಳನ್ನು ನೋಡುವಂತೆ ಅವರನ್ನು ಬಲವಂತಗೊಳಿಸಲಾಗುತ್ತಿದೆ ಅಥವಾ ಅವರು ಚೆನ್ನಾಗಿ ತಿಳಿದುಕೊಂಡಿಲ್ಲ ಎಂಬ ಗ್ರಹಿಕೆಯನ್ನು ಈ ವಾದವು ಅವಲಂಬಿಸಿದೆ. ಇವೆರಡೂ ತಪ್ಪು ಮತ್ತು ವಾಸ್ತವದಲ್ಲಿ ಕೀಳರಿಮೆ ಮೂಡಿಸುವಂಥದ್ದಾಗಿವೆ. ಹೆಚ್ಚಿನ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ತಮಗೇನನ್ನು ನೋಡಬೇಕೋ ಅದನ್ನೇ ನೋಡುತ್ತಾರೆ. ಇದರ ಜೊತೆಗೆ ವೃತ್ತಪತ್ರಿಕೆಗಳು ಮತ್ತು ಸಾಮಾಜಿಕ ಮಾಧ್ಯಮಗಳು ತಾವುಪ್ರಕಟಿಸುತ್ತಿರುವ ಅಥವಾ ತೋರಿಸುತ್ತಿರುವ ವಿಷಯಗಳ ಬಗ್ಗೆ ‘ವಾರ್ನಿಂಗ್’ಗಳನ್ನು ಪ್ರದರ್ಶಿಸತೊಡಗಿವೆ. ಇದು ಬಳಕೆದಾರರು ತಾವು ಹೇಗೆ ಮುಂದುವರಿಯಬೇಕು ಎಂಬ ನಿರ್ಧಾರ ಕೈಗೊಳ್ಳಲು ನೆರವಾಗುತ್ತಿವೆ.

* ವಾದ: ತಮ್ಮ ದೇಶಗಳಲ್ಲಿ ಕೋವಿಡ್-19 ಸಾಂಕ್ರಾಮಿಕವು ಉತ್ತುಂಗದಲ್ಲಿದ್ದಾಗಲೂ ಪಾಶ್ಚಾತ್ಯ ಮಾಧ್ಯಮಗಳು ಭೀತಿಯನ್ನು ಹುಟ್ಟಿಸುವ ದೃಶ್ಯಗಳನ್ನು ತೋರಿಸಿರಲಿಲ್ಲ.

-ಕಳೆದ ವರ್ಷ ನ್ಯೂಯಾರ್ಕ್ನಲ್ಲಿ ಕೋವಿಡ್ ಸಾವುಗಳ ಸಂಖ್ಯೆ ಹೆಚ್ಚಿದಾಗ ರೂಟರ್ಸ್,ವಾಷಿಂಗ್ಟನ್ ಪೋಸ್ಟ್, ಸಿಎನ್ಎನ್,ನ್ಯೂಯಾರ್ಕ್ ಟೈಮ್ಸ್,ಬಿಬಿಸಿ ಮತ್ತು ದಿ ಟೆಲಿಗ್ರಾಫ್ ಕೋವಿಡ್ ರೋಗಿಗಳನ್ನು ಸಾಮೂಹಿಕವಾಗಿ ದಫನ ಮಾಡುತ್ತಿರುವ ದೃಶ್ಯಗಳನ್ನು ಡ್ರೋನ್ ಮೂಲಕ ಸೆರೆಹಿಡಿದು ತಮ್ಮ ವೀಕ್ಷಕರಿಗೆ ತೋರಿಸಿದ್ದವು. ಬ್ರಝಿಲ್,ಇಟಲಿ ಮತ್ತು ಬ್ರಿಟನ್ಗಳಲ್ಲಿಯ ದಫನಭೂಮಿಗಳಿಂದಲೂ ಇಂತಹ ವರದಿಗಳು ಪ್ರಕಟಗೊಂಡಿದ್ದವು.

* ವಾದ: 2021ರ ಆರಂಭದಲ್ಲಿ ಕೋವಿಡ್-19 ಲಸಿಕೆಗಳ 66 ಮಿಲಿಯನ್ ಡೋಸ್ಗಳನ್ನು ರಫ್ತು ಮಾಡಿದ್ದ ಭಾರತದ ಮಾನವೀಯತೆಯನ್ನು ಲ್ಯಾನ್ಸೆಟ್ ಕಡೆಗಣಿಸಿದೆ.
     
-ಭಾರೀ ಪ್ರಮಾಣದಲ್ಲಿ ಡೋಸ್ಗಳನ್ನು ರಫ್ತು ಮಾಡುವ ಮತ್ತು ದೇಶದಲ್ಲಿ ಲಸಿಕೆ ತಯಾರಿಗೆ ಸಾಮರ್ಥ್ಯವನ್ನು ಸರಿಯಾಗಿ ಅಂದಾಜಿಸದ ಮೂಲಕ ಲಸಿಕೆ ಕೊರತೆಯು ತನ್ನದೇ ಪ್ರಜೆಗಳನ್ನು ಬಾಧಿಸುವಂತೆ ಮಾಡಿರುವುದು ಮಾನವೀಯತೆಯಲ್ಲ. ಸರಕಾರವು ಲಸಿಕೆ ಕೊರತೆಯನ್ನು ಮೊದಲೇ ಅಂದಾಜಿಸಬೇಕಿತ್ತು ಮತ್ತು 18ರಿಂದ 44 ವರ್ಷ ವಯೋಮಾನದ ಗುಂಪಿನಲ್ಲಿ ಸಾಕಷ್ಟು ಜನರಿಗೆ ಲಸಿಕೆ ನೀಡುವವರೆಗೆ ರಫ್ತುಗಳನ್ನು ವಿಳಂಬಗೊಳಿಸಬೇಕಿತ್ತು. ಅದು ಇತರ ಲಸಿಕೆ ತಯಾರಕರಿಗೆ ಮುಂಗಡ ಖರೀದಿ ಬೇಡಿಕೆಯನ್ನು ಸಲ್ಲಿಸುವ ಮೂಲಕ ದೇಶದ ಜನತೆಗೆ ಹೆಚ್ಚಿನ ಲಸಿಕೆಗಳು ಲಭ್ಯವಾಗುವಂತೆ ಮಾಡಬಹುದಿತ್ತು. ಆದರೆ ದೇಶವು ಬಹುಬೇಗನೆ ತಾನು ಕೋವಿಡ್ ವಿರುದ್ಧ ಜಯವನ್ನು ಸಾಧಿಸಿದ್ದೇನೆ ಎಂದು ಘೋಷಿಸಿತ್ತು ಮತ್ತು ನೆಮ್ಮದಿಯಿಂದಿತ್ತು.

* ವಾದ: ಯಾವುದೇ ಬೆಳವಣಿಗೆ ನಡೆದುಹೋದ ಮೇಲೆ ಸರಕಾರವನ್ನು ಟೀಕಿಸುವುದು ಮಾತ್ರ ನಮಗೆ ಗೊತ್ತು.
 
-ಇದೊಂದು ಚರ್ವಿತ ಚರ್ವಿಣ ವಾದವಾಗಿದೆ. ಮಾರ್ಚ್ನಲ್ಲಿ ಕುಂಭಮೇಳ ನಡೆಸದಂತೆ ಮತ್ತು ಅದೇ ತಿಂಗಳಲ್ಲಿ ಕೊರೋನವೈರಸ್ನ ಹೊಸ ಮಾರಣಾಂತಿಕ ಪ್ರಭೇದ ಭುಗಿಲೇಳುವ ಬಗ್ಗೆ ಹಾಗೂ ಸಂಭಾವ್ಯ ವೈದ್ಯಕೀಯ ಆಮ್ಲಜನಕದ ಕೊರತೆ ಕುರಿತು 2020, ನವೆಂಬರ್ನಲ್ಲಿಯೇ ಭಾರತ ಸರಕಾರಕ್ಕೆ ಎಚ್ಚರಿಕೆಗಳನ್ನು ನೀಡಲಾಗಿತ್ತು. ಸರಕಾರವು ಈ ಎಲ್ಲ ಎಚ್ಚರಿಕೆಗಳನ್ನು ಕಡೆಗಣಿಸಿತ್ತು ಅಥವಾ ಅವುಗಳನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಈ ಎಲ್ಲ ಎಚ್ಚರಿಕೆಗಳು ಏನನ್ನು ಹೇಳಿದ್ದವೋ ಅವೆಲ್ಲ ಈಗ ಸಾಕಾರಗೊಂಡಿವೆ ಮತ್ತು ಜನರು ಅವುಗಳನ್ನು ಅನುಭವಿಸುತ್ತಿದ್ದಾರೆ.

ತನ್ನ ತಪ್ಪುಗಳನ್ನು ಯಾರೂ ಬೆಟ್ಟು ಮಾಡಕೂಡದು ಎಂದು ಸರಕಾರವು ಬಯಸುತ್ತಿದ್ದರೆ ಅದು ತಪ್ಪುಗಳನ್ನು ಮಾಡುವುದನ್ನು ನಿಲ್ಲಿಸಬೇಕು.

ಕೃಪೆ: thewire.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News