×
Ad

ಐಎನ್ಎಸ್ ರಜಪೂತ್ ಹಡಗನ್ನು ಸೇವೆಯಿಂದ ಹಿಂಪಡೆಯಲು ನಿರ್ಧಾರ

Update: 2021-05-20 23:48 IST

ಹೊಸದಿಲ್ಲಿ, ಮೇ 20: ನೌಕಾಪಡೆಯ ಪ್ರಥಮ ಘಾತಕ (ಡಿಸ್ಟ್ರಾಯರ್) ಯುದ್ಧನೌಕೆ ಐಎನ್ಎಸ್ ರಜಪೂತ್ 41 ವರ್ಷದ ಸುದೀರ್ಘ ಸೇವೆಯ ಬಳಿಕ ಮೇ 21ರಂದು ಸೇವೆಯಿಂದ ಹಿಂದಕ್ಕೆ ಸರಿಯಲಿದೆ ಎಂದು ರಕ್ಷಣಾ ಇಲಾಖೆ ಹೇಳಿದೆ. ಡಿಸ್ಟ್ರಾಯರ್ ನೌಕೆ ಎಂದರೆ ಯುದ್ಧದ ಸಮಯದಲ್ಲಿ ದೊಡ್ಡ ಹಡಗುಗಳಿಗೆ ಬೆಂಗಾವಲಾಗಿ ಅಥವಾ ಯುದ್ಧದ ಸಂದರ್ಭದಲ್ಲಿ ಹಡಗುಗಳಿಗೆ ರಕ್ಷಣೆ ಒದಗಿಸಲು ಬಳಸಬಹುದಾದ , ವೇಗವಾಗಿ ಚಲಿಸಬಲ್ಲ ನೌಕೆ. ಈ ಹಿಂದಿನ ಯುಎಸ್ಎಸ್ಆರ್ ಒಕ್ಕೂಟದ ಸಂದರ್ಭ ಉಕ್ರೇನ್ನಲ್ಲಿ ನಿರ್ಮಿಸಲ್ಪಟ್ಟಿರುವ ಈ ನೌಕೆ 1980ರ ಮೇ 4ರಂದು ಭಾರತದ ನೌಕಾಪಡೆಗೆ ನಿಯೋಜನೆಗೊಂಡಿತ್ತು. ‌

ಕಳೆದ 41 ವರ್ಷಗಳಲ್ಲಿ ನೌಕಾಸೇನೆಗೆ ಅಮೂಲ್ಯ ಸೇವೆ ಸಲ್ಲಿಸಿದೆ. ನೌಕಾಪಡೆಯ ಪೂರ್ವ ಮತ್ತು ಪಶ್ಚಿಮ ನೆಲೆಯಲ್ಲಿ ಈ ನೌಕೆ ಸೇವೆ ಸಲ್ಲಿಸಿದೆ. ಅಲ್ಲದೆ ಭಾರತದ ಸೇನಾ ತುಕಡಿಯೊಂದಿಗೆ ಸಂಯೋಜನೆಗೊಂಡಿರುವ ದೇಶದ ಪ್ರಥಮ ನೌಕೆ ಇದಾಗಿದೆ(ರಜಪೂತ್ ರೆಜಿಮೆಂಟ್).

ಶ್ರೀಲಂಕಾದಲ್ಲಿ ಕಾರ್ಯನಿರ್ವಹಿಸಿದ್ದ ಭಾರತೀಯ ಶಾಂತಿಪಾಲನಾ ಪಡೆ(ಐಪಿಕೆಎಫ್)ಗೆ ನೆರವಾಗುವ ಆಪರೇಷನ್ ಅಮನ್, ಶ್ರೀಲಂಕಾದ ಕಡಲತೀರದಲ್ಲಿ ಗಸ್ತು ತಿರುಗುವ ಆಪರೇಷನ್ ಪವನ್, ಮಾಲ್ದೀವ್ಸ್ನಲ್ಲಿ ಒತ್ತೆಯಾಳುಗಳ ರಕ್ಷಣೆಗೆ ಮಡೆದ ಆಪರೇಷನ್ ಕ್ಯಾಕ್ಟಸ್, ಲಕ್ಷದ್ವೀಪದಲ್ಲಿ ನಡೆದ ಆಪರೇಷನ್ ಕ್ರೋಸ್ನೆಸ್ಟ್ ಮುಂತಾದ ಕಾರ್ಯಾಚರಣೆಗಳಲ್ಲಿ ಐಎನ್ಎಸ್ ರಜಪೂತ್ ನಿರ್ಣಾಯಕ ಪಾತ್ರ ನಿರ್ವಹಿಸಿದೆ. ಜೊತೆಗೆ ಹಲವಾರು ದ್ವಿರಾಷ್ಟ್ರೀಯ ಮತ್ತು ಬಹುರಾಷ್ಟ್ರೀಯ ಸಮರಾಭ್ಯಾಸಗಳಲ್ಲಿ ಪಾಲ್ಗೊಂಡಿದೆ.

ವಿಶಾಖಪಟ್ಟಣಂ ನೌಕಾನೆಲೆಯಲ್ಲಿ ನಡೆಯುವ ವಿಧ್ಯುಕ್ತ ಕಾರ್ಯಕ್ರಮದಲ್ಲಿ ಐಎನ್ಎಸ್ ರಜಪೂತ್ ನೌಕೆಯನ್ನು ಸೇವೆಯಿಂದ ಹಿಂದಕ್ಕೆ ಪಡೆಯಲಾಗುವುದು. ನೌಕಾಪಡೆಯ ಧ್ವಜ ಮತ್ತು ಯುದ್ಧನೌಕೆಯ ಮೇಲೆ ಹಾರುವ ಬಾವುಟವನ್ನು ಕೆಳಗಿಳಿಸುವ ಮೂಲಕ ನೌಕಾಪಡೆಯನ್ನು ಸೇವೆಯಿಂದ ಹಿಂಪಡೆಯುವ ಕಾರ್ಯವನ್ನು ವಿಧ್ಯುಕ್ತವಾಗಿ ನಡೆಸಲಾಗುವುದು ಎಂದು ರಕ್ಷಣಾ ಇಲಾಖೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News