ಮಧ್ಯ ಪ್ರದೇಶ: ಉಪಚುನಾವಣೆ ಕರ್ತವ್ಯ ನಿರ್ವಹಿಸಿದ್ದ 17 ಶಿಕ್ಷಕರು ಕೋವಿಡ್‍ಗೆ ಬಲಿ
ಭೋಪಾಲ್: ಮಧ್ಯಪ್ರದೇಶದ ದಮೋಹ್ ಜಿಲ್ಲೆಯಲ್ಲಿ ಕಳೆದ ತಿಂಗಳು ನಡೆದ ಉಪಚುನಾವಣೆ ವೇಳೆ ಕರ್ತವ್ಯದಲ್ಲಿದ್ದ ಕನಿಷ್ಠ 17 ಶಿಕ್ಷಕರು ಕೋವಿಡ್‍ಗೆ ಬಲಿಯಾಗಿದ್ದಾರೆ.
"ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟ ನಂತರ ಕೋವಿಡ್ ಬಲಿಯಾಗಿದ್ದಾರೆಂದು ಹೊರನೋಟಕ್ಕೆ ತಿಳಿಯಲ್ಪಟ್ಟ 24 ಪ್ರಕರಣಗಳ ಕುರಿತಂತೆ ಪರಿಹಾರಕ್ಕೆ ಅರ್ಜಿಗಳು ಬಂದಿವೆ. ಇವರ ಪೈಕಿ ಆರು ಮಂದಿ ಚುನಾವಣಾ ಕರ್ತವ್ಯದಲ್ಲಿ ನೇರವಾಗಿ ಭಾಗಿಯಾಗಿದ್ದರೆ ಉಳಿದವರು ಇತರ ಸಂಬಂಧಿತ ಕೆಲಸದಲ್ಲಿ ತೊಡಗಿದ್ದವರು. ಇಲ್ಲಿಯ ತನಕ ಕೋವಿಡ್‍ಗೆ 17 ಶಿಕ್ಷಕರು ಬಲಿಯಾಗಿದ್ದಾರೆ" ಎಂದು ದಮೋಹ್ ಜಿಲ್ಲಾ ಕಲೆಕ್ಟರ್ ಕೃಷ್ಣ ಚೈತನ್ಯ ಹೇಳಿದ್ದಾರೆ.
ಮಧ್ಯಪ್ರದೇಶದಾದ್ಯಂತ ಎಪ್ರಿಲ್ 7ರಂದು ಕೋವಿಡ್ ನಿರ್ಬಂಧಗಳನ್ನು ಹೇರಲಾಗಿತ್ತಾದರೂ ದಮೋಹ್‍ನಲ್ಲಿ ಚುನಾವಣೆ ನಡೆದ ಎರಡು ದಿನಗಳ ತನಕ ಈ ನಿರ್ಬಂಧಗಳನ್ನು ಅನ್ವಯಿಸಲಾಗಿರಲಿಲ್ಲ.
ಹಾಲಿ ಕಾಂಗ್ರೆಸ್ ಶಾಸಕ ರಾಹುಲ್ ಲೋಧಿ ಬಿಜೆಪಿಗೆ ಪಕ್ಷಾಂತರಗೊಂಡ ನಂತರ ಈ ಉಪಚುನಾವಣೆ ನಡೆಸಲಾಗಿತ್ತು. ಚುನಾವಣಾ ಪ್ರಚಾರದ ಭಾಗವಾಗಿ ಬಿಜೆಪಿಯ ಜ್ಯೋತಿರಾದಿತ್ಯ ಸಿಂಧಿಯ ಹಾಗೂ ಕಾಂಗ್ರೆಸ್ ಪಕ್ಷದ ದಿಗ್ವಿಜಯ್ ಸಿಂಗ್ ಸಹಿತ ನಾಯಕರು ದೊಡ್ಡ ರ್ಯಾಲಿಗಳಲ್ಲಿ ಭಾಗವಹಿಸಿದ್ದರು.