×
Ad

ಆಸ್ಪತ್ರೆಗೆ ದಾಖಲಾಗಲು ನಿರಾಕರಿಸಿದ ಸ್ಟಾನ್ ಸ್ವಾಮಿ: ಮಧ್ಯಂತರ ಜಾಮೀನು ಅರ್ಜಿ ಪರಿಗಣಿಸಲು ಕೋರಿಕೆ

Update: 2021-05-21 17:22 IST

ಮುಂಬೈ: ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧಿತ ಹಿರಿಯ ಆದಿವಾಸಿ ಹಕ್ಕುಗಳ ಹೋರಾಟಗಾರ ಸ್ಟಾನ್ ಸ್ವಾಮಿ ತಾವು ಆಸ್ಪತ್ರೆಗೆ ದಾಖಲಾಗಲು ಬಯಸುವುದಿಲ್ಲ, ಬದಲು ತಮ್ಮ ಮಧ್ಯಂತರ ಜಾಮೀನು ಅಪೀಲನ್ನು ಪರಿಗಣಿಸಬೇಕೆಂದು ಶುಕ್ರವಾರ ಬಾಂಬೆ ಹೈಕೋರ್ಟಿಗೆ ಮನವಿ ಮಾಡಿದ್ದಾರೆ.

"ನನ್ನ ಸ್ಥಿತಿ ಬಿಗಡಾಯಿಸುತ್ತಿದೆ. ನಾನು ರಾಂಚಿಯಲ್ಲಿರಲು ಬಯಸುತ್ತೇನೆ.  ಈಗ ಅದು (ಆಸ್ಪತ್ರೆಗೆ ದಾಖಲಿಸುವುದು) ಸಹಾಯವಾಗದು ಎಂದು ನನಗೆ ಅನಿಸುತ್ತದೆ" ​ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಪಾರ್ಕಿನ್ಸನ್ಸ್ ಕಾಯಿಲೆಯಿಂದ ಬಳಲುತ್ತಿರುವ 84 ವರ್ಷದ ಸ್ವಾಮಿ ಶುಕ್ರವಾರ  ತಾವಿರುವ ತಲೋಜ ಜೈಲಿನಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಮೂರ್ತಿಗಳಾದ ಎಸ್ ಜೆ ಕತವಲ್ಲ ಹಾಗೂ ಎಸ್ ಪಿ ತವಡೆ ಅವರಿರುವ ನ್ಯಾಯಪೀಠದೆದುರು ಹಾಜರಾದರು.

ಸ್ಟಾನ್ ಸ್ವಾಮಿ ಅವರನ್ನು ಸರ್ ಜೆಜೆ ಆಸ್ಪತ್ರೆಗೆ ದಾಖಲಿಸುವಂತೆ ಹಾಗೂ ಅವರ ವೈದ್ಯಕೀಯ ವರದಿಯನ್ನು ಮೇ 21ರಂದು ಸಲ್ಲಿಸುವಂತೆ ಮೇ  19ರಂದು ನಡೆದ ವಿಚಾರಣೆ ವೇಳೆ ನ್ಯಾಯಾಲಯ ಸೂಚಿಸಿತ್ತು.

ಸ್ವಾಮಿ ಅವರಿಗೆ ತೀವ್ರ ಶ್ರವಣ ದೋಷವಿದೆ ಹಾಗೂ ಅವರ ಮೈ ನಡುಗುತ್ತದೆ, ಅವರಿಗೆ ವಾಕಿಂಗ್ ಸ್ಟಿಕ್ ಅಥವಾ ಗಾಲಿಕುರ್ಚಿಯ ಅಗತ್ಯವಿದೆ ಎಂದು ವೈದ್ಯಕೀಯ ವರದಿಯಲ್ಲಿ ಹೇಳಲಾಗಿದೆ.

"ಜೈಲಿನಲ್ಲಿ ನನ್ನ  ದೇಹಸ್ಥಿತಿ ನಿಧಾನವಾಗಿ ಬಿಗಡಾಯಿಸುತ್ತಿದೆ,. ಎಂಟು ತಿಂಗಳ ಹಿಂದೆ ನಾನು ಸ್ವತಂತ್ರವಾಗಿ ಊಟ ಮಾಡಬಲ್ಲವನಾಗಿದ್ದೆ, ಸ್ವಲ್ಪ ಬರೆಯಲು ಹಾಗೂ ನಡೆದಾಡಲು ಸಾಧ್ಯವಿತ್ತು. ಯಾರ ಸಹಾಯವಿಲ್ಲದೆ ಸ್ನಾನ ಕೂಡ ಮಾಡುತ್ತಿದ್ದೆ ಆದರೆ ಎಲ್ಲವೂ ಒಂದೊಂದಾಗಿ ಇಲ್ಲವಾಗುತ್ತಿದೆ, ನನಗೆ ಬರೆಯಲು ನಡೆದಾಡಲು ಕೂಡ ಸಾಧ್ಯವಿಲ್ಲದ ಸ್ಥಿತಿಗೆ ತಲೋಜ ಜೈಲು ತಂದಿದೆ. ನನಗೆ ಯಾರಾದರೂ ಆಹಾರ ತಿನಿಸಬೇಕಿದೆ" ಎಂದು ಅವರು ಹೇಳಿದರು.

​ನಿಮ್ಮನ್ನು ಆಸ್ಪತ್ರೆಗೆ ದಾಖಲಿಸಬೇಕೇ ಎಂದು ನ್ಯಾಯಾಲಯ ಕೇಳಿದಾಗ "ಬೇಡ,  ಇದೇ ರೀತಿ ಮುಂದುವರಿದರೆ ನಾನು ಇಲ್ಲಿಯೇ ಸಾಯಬಹುದು. ಜೆಜೆ ಆಸ್ಪತ್ರೆಗೆ ದಾಖಲಾಗುವ ಬದಲು ನಾನು ಇಲ್ಲಿಯೇ ಇರುತ್ತೇನೆ" ಎಂದರು.

​ಪ್ರಕರಣದ ಮುಂದಿನ ವಿಚಾರಣೆ ಜೂನ್ 7ರಂದು ನಡೆಯಲಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News