ಲಸಿಕೆ ರಫ್ತಿನ ಮೇಲೆ ಭಾರತದ ನಿಷೇಧದಿಂದಾಗಿ ಅಭಿವೃದ್ಧಿಶೀಲ ದೇಶಗಳಿಗೆ ತೊಂದರೆ: ಐಎಂಎಫ್

Update: 2021-05-21 17:39 GMT

 ಹೊಸದಿಲ್ಲಿ,ಮೇ 21: ಮುಂದಿನ ವರ್ಷದ ಮಧ್ಯದ ವೇಳೆಗೆ ವಿಶ್ವಾದ್ಯಂತ ಜನರಿಗೆ ಕೋವಿಡ್ನಿಂದ ರಕ್ಷಣೆ ಒದಗಿಸಲು ಲಸಿಕೆ ನೀಡಿಕೆಗಾಗಿ 50 ಶತಕೋಟಿ ಡಾ.ಗಳ ಯೋಜನೆಯೊಂದನ್ನು ಶುಕ್ರವಾರ ಅನಾವರಣಗೊಳಿಸಿದ ಅಂತರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯು, ಲಸಿಕೆಗಳ ರಫ್ತನ್ನು ನಿಷೇಧಿಸುವ ಭಾರತದ ನಿರ್ಧಾರದಿಂದಾಗಿ ಹಲವಾರು ಅಭಿವೃದ್ಧಿಶೀಲ ದೇಶಗಳು ತೊಂದರೆಗೆ ಸಿಲುಕಿವೆ ಎಂದು ಹೇಳಿದೆ.

ಈಗಾಗಲೇ ಭಾರತದ ಸೀರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ಸೇರಿದಂತೆ ವಿವಿಧ ತಯಾರಕರು ಲಸಿಕೆಗಳ ಪೂರೈಕೆಯಲ್ಲಿ ಸಾಕಷ್ಟು ವಿಳಂಬ ಮಾಡಿದ್ದಾರೆ ಎಂದು ಹೇಳಿರುವ ಐಎಎಫ್ ನ ಮುಖ್ಯ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್ ಮತ್ತು ಅವರ ಸಹೋದ್ಯೋಗಿ ರುಚಿರ್ ಅಗರವಾಲ್ ಸಿದ್ಧಪಡಿಸಿರುವ ವರದಿಯು, ಸ್ವದೇಶದಲ್ಲಿ ಲಸಿಕೆ ಅಭಿಯಾನಕ್ಕೆ ಆದ್ಯತೆ ನೀಡಲು ತನ್ನ ಹೆಚ್ಚಿನ ಲಸಿಕೆ ರಫ್ತುಗಳನ್ನು ಭಾರತವು ವಿಳಂಬಿಸಿದೆ. ಇಂತಹ ವಿಳಂಬಗಳು ಅಭಿವೃದ್ಧಿಶೀಲ ದೇಶಗಳ ಮೇಲೆ ತೀವ್ರ ಪ್ರತಿಕೂಲ ಪರಿಣಾಮಗಳನ್ನಂಟು ಮಾಡುತ್ತಿವೆ. ಉದಾಹರಣೆಗೆ ಕೋವ್ಯಾಕ್ಸ್ ಉಪಕ್ರಮಕ್ಕೆ ಶೇ.85ರಷ್ಟು ಲಸಿಕೆಗಳನ್ನು ಪೂರೈಸುವುದಾಗಿ ಸೀರಮ್ ಒಪ್ಪಂದವನ್ನು ಮಾಡಿಕೊಂಡಿತ್ತು ಮತ್ತು ಕಚ್ಚಾ ವಸ್ತುಗಳ ನಿರಂತರ ಕೊರತೆ ಹಾಗೂ ರಫ್ತು ನಿರ್ಬಂಧಗಳು ಈ ಉಪಕ್ರಮವನ್ನು ನಂಬಿಕೊಂಡಿರುವ 91 ಅಭಿವೃದ್ಧಿಶೀಲ ದೇಶಗಳ ಮತ್ತು ಭಾರತದ ನಾಲ್ಕು ಶತಕೋಟಿ ಜನತೆಗೆ ಲಸಿಕೆ ಲಭ್ಯತೆಯ ಅವಕಾಶವನ್ನು ತಗ್ಗಿಸುತ್ತವೆ ಎಂದು ತಿಳಿಸಿದೆ.

ಅಭಿವೃದ್ಧಿಶೀಲ ದೇಶಗಳಿಗೆ ಲಸಿಕೆಗಳನ್ನು ಒದಗಿಸುವ ಕೋವ್ಯಾಕ್ಸ್ ಉಪಕ್ರಮವು ಲಸಿಕೆಗಳನ್ನು ದೇಣಿಗೆಗಳನ್ನಾಗಿ ಸ್ವೀಕರಿಸಲು ಒಪ್ಪಿಕೊಂಡಿರುವ 90ಕ್ಕೂ ಅಧಿಕ ಕೆಳ ಮತ್ತು ಮಧ್ಯಮ ಆದಾಯ ದೇಶಗಳ ಕನಿಷ್ಠ ಶೇ.20ರಷ್ಟು ಜನರಿಗೆ ಲಸಿಕೆಗಳನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ. ಅದು ಈವರೆಗೆ ಮುಖ್ಯವಾಗಿ ಆ್ಯಸ್ಟ್ರಾಝೆನೆಕಾ ಕೋವಿಡ್-19 ಲಸಿಕೆ ಸೇರಿದಂತೆ ಸುಮಾರು 65 ಮಿಲಿಯನ್ ಡೋಸ್ ಗಳನ್ನು ವಿತರಿಸಿದ್ದು,ಫಲಾನುಭವಿಗಳಲ್ಲಿ ಹೆಚ್ಚಿನವು ಆಫ್ರಿಕಾದ ದೇಶಗಳಾಗಿವೆ.
 
ಅಮೆರಿಕವು ತನ್ನ ಲಸಿಕೆ ಪೂರೈಕೆ ಸರಪಳಿಯ ಭದ್ರತೆಗಾಗಿ ರಕ್ಷಣಾ ಉತ್ಪಾದನೆ ಕಾಯ್ದೆಯಡಿ ಲಸಿಕೆಗಳ ರಫ್ತನ್ನು ನಿರ್ಬಂಧಿಸಿರುವುದೂ ವಿಶ್ವಾದ್ಯಂತ ಲಸಿಕೆ ಪೂರೈಕೆಯಲ್ಲಿ ವಿಳಂಬಕ್ಕೆ ಕೊಂಚ ಮಟ್ಟಿಗೆ ಕಾರಣವಾಗಿದೆ ಎಂದು ವರದಿಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News