ದಾಸ್ತಾನು ಸ್ಥಿತಿ ಪರಿಗಣಿಸದೆ ಲಸಿಕೆ ನೀಡಿಕೆ ವಿಸ್ತರಿಸಿದ್ದ ಕೇಂದ್ರ ಸರ್ಕಾರ: ಎಸ್‌ಐಐ ವ್ಯವಸ್ಥಾಪಕ ನಿರ್ದೇಶಕ ಆರೋಪ
ಹೊಸದಿಲ್ಲಿ: ದೇಶದಲ್ಲಿ ಲಸಿಕೆ ಉತ್ಪಾದನೆಯ ಸ್ಥಿತಿಯನ್ನು ಪರಿಗಣಿಸದೇ, ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಕೇಂದ್ರ ಸರ್ಕಾರ ಲಸಿಕೆ ಅಭಿಯಾನವನ್ನು ವಿವಿಧ ವಯೋಮಾನದವರಿಗೆ ವಿಸ್ತರಿಸಿದೆ ಎಂದು ಪುಣೆ ಮೂಲದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಜಾದವ್ ಆರೋಪ ಮಾಡಿದ್ದಾರೆ.
ಹೀಲ್ ಹೆಲ್ತ್ ಎಂಬ ಆರೋಗ್ಯ ಪ್ರತಿಪಾದನೆ ಮತ್ತು ಜಾಗೃತಿ ವೇದಿಕೆ ಆಯೋಜಿಸಿದ್ದ ಇ-ಶೃಂಗದಲ್ಲಿ ಮಾತನಾಡಿದ ಅವರು, ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯನ್ನು ಪಾಲಿಸಬೇಕಿತ್ತು ಮತ್ತು ಅದಕ್ಕೆ ಅನುಗುಣವಾಗಿ ಆದ್ಯತೆ ನಿಗದಿಪಡಿಸಬೇಕಿತ್ತು ಎಂದು ಅಭಿಪ್ರಾಯಪಟ್ಟರು.
"ಆರಂಭದಲ್ಲಿ 30 ಕೋಟಿ ಜನರಿಗೆ ಲಸಿಕೆ ನೀಡಲು ಉದ್ದೇಶಿಸಲಾಗಿತ್ತು. ಇದಕ್ಕೆ 60 ಕೋಟಿ ಡೋಸ್ ಅಗತ್ಯವಿತ್ತು. ಆದರೆ ಈ ಗುರಿ ತಲುಪುವ ಮುನ್ನವೇ ಸರ್ಕಾರ 45 ವರ್ಷ ಮೇಲ್ಪಟ್ಟವರಿಗೆ ಹಾಗೂ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಿಕೆಯನ್ನು ಘೋಷಿಸಿತು. ಆದರೆ ಅಷ್ಟೊಂದು ಪ್ರಮಾಣದ ಲಸಿಕೆ ಲಭ್ಯವಿಲ್ಲ ಎನ್ನುವುದನ್ನು ಸರ್ಕಾರ ಗಣನೆಗೆ ತೆಗೆದುಕೊಂಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
"ಇದು ನಾವು ಕಲಿತ ದೊಡ್ಡ ಪಾಠ. ನಾವು ಉತ್ಪನ್ನದ ಲಭ್ಯತೆಯನ್ನು ಮೊದಲು ಪರಿಣಿಸಿ ಆ ಬಳಿಕ ನ್ಯಾಯಸಮ್ಮತವಾಗಿ ಬಳಸಬೇಕು" ಎಂದು ಜಾದವ್ ವಿವರಿಸಿದರು. ಲಸಿಕೆ ಅತೀ ಅಗತ್ಯ. ಆದರೆ ಲಸಿಕೆ ಪಡೆದ ಬಳಿಕವೂ ಸೋಂಕು ತಗುಲುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.