ಅಲ್ಪಸಂಖ್ಯಾತ ವ್ಯವಹಾರ ಖಾತೆಯನ್ನು ತನ್ನಲ್ಲೇ ಉಳಿಸಿಕೊಂಡ ಕೇರಳ ಸಿಎಂ ಪಿಣರಾಯಿ ವಿಜಯನ್

Update: 2021-05-22 09:00 GMT

ತಿರುವನಂತಪುರ: ಅನಿರೀಕ್ಷಿತ ನಡೆಯೊಂದರಲ್ಲಿ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಅಲ್ಪಸಂಖ್ಯಾತ ವ್ಯವಹಾರಗಳ ಖಾತೆಯನ್ನು ವಹಿಸಿಕೊಂಡಿದ್ದಾರೆ. ಅವರ  ಈ ಹೆಜ್ಜೆಯು ಮುಸ್ಲಿಂ ಸಮುದಾಯವನ್ನು ಅಸಮಾಧಾನಗೊಳಿಸಿದೆ ಎಂದು ವರದಿಯಾಗಿದೆ. 

20 ಸಂಪುಟ ಸಚಿವರೊಂದಿಗೆ ಎರಡನೇ ಬಾರಿ ಪಿಣರಾಯಿ ವಿಜಯನ್ ಸರಕಾರವು ಮೇ 20 ರಂದು ಅಧಿಕಾರವಹಿಸಿಕೊಂಡಿದೆ. ಮಂತ್ರಿಗಳ ಖಾತೆಗಳ ಅಧಿಕೃತ ಪಟ್ಟಿಯನ್ನು ಮೇ 21 ರಂದು ಒಂದು ಅನಿರೀಕ್ಷಿತ ಬದಲಾವಣೆಯೊಂದಿಗೆ ಬಿಡುಗಡೆ ಮಾಡಲಾಯಿತು. ಅಲ್ಪಸಂಖ್ಯಾತ ಕಲ್ಯಾಣ ಖಾತೆಯನ್ನು ಮುಖ್ಯಮಂತ್ರಿ ಸ್ವತಃ ವಹಿಸಿಕೊಂಡಿದ್ದಾರೆ. ಇದನ್ನು ಸಾಮಾನ್ಯವಾಗಿ ಇತರ ಕ್ಯಾಬಿನೆಟ್ ಮಂತ್ರಿಗಳು ನಿರ್ವಹಿಸುತ್ತಾರೆ.

ಎಲ್ ಡಿ ಎಫ್ ಸರಕಾರದ ಹಿಂದಿನ ಅವಧಿಯಲ್ಲಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯನ್ನು ಉನ್ನತ ಶಿಕ್ಷಣ ಸಚಿವರಾಗಿದ್ದ ಕೆ.ಟಿ.ಜಲೀಲ್ ನಿರ್ವಹಿಸಿದ್ದರು. ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಸರಕಾರದಲ್ಲಿ, ಈ ಖಾತೆಯನ್ನು  ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ನ ಮುಸ್ಲಿಂ ಮಂತ್ರಿ ಮಂಜಲಂಕುಝಿ ಅಲಿ ನಿರ್ವಹಿಸಿದ್ದರು.  ಪ್ರಸ್ತುತ ಸರಕಾರದ ಸಂಪುಟದ ಹೆಸರುಗಳು ಹರಿದಾಡುತ್ತಿದ್ದಾಗ ವಿ. ಅಬ್ದುರಹಿಮಾನ್  ಅಲ್ಪಸಂಖ್ಯಾತ ವ್ಯವಹಾರಗಳ ಉಸ್ತುವಾರಿ ವಹಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು ಆದರೆ ಅದು ಅಂತಿಮ ಪಟ್ಟಿಯಲ್ಲಿ ಬದಲಾಯಿತು. ಕೆಲವು ಮುಸ್ಲಿಂ ಸಂಘಟನೆಗಳು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿವೆ ಹಾಗೂ ಕ್ರಿಶ್ಚಿಯನ್ ಸಮುದಾಯವನ್ನು ಸಮಾಧಾನಪಡಿಸುವ ಸಲುವಾಗಿ ಪಿಣರಾಯಿ ವಿಜಯನ್ ಹೀಗೆ ಮಾಡಿದ್ದಾರೆ ಎಂದು ಮುಸ್ಲಿಂ ಸಮುದಾಯ  ಭಾವಿಸಿದೆ.

"ಮುಸ್ಲಿಂ ಸಮುದಾಯವು ಅಲ್ಪಸಂಖ್ಯಾತವಾಗಿದೆ. ಅವರಿಗೆ ನನ್ನ ಹಾಗೂ ಎಲ್ಡಿಎಫ್ ಸರಕಾರದ ಮೇಲೆ ನಂಬಿಕೆ ಇದೆ. ಇದನ್ನು ಟೀಕಿಸುತ್ತಿರುವ ಇಂಡಿಯನ್ ಯೂನಿಯನ್ ಆಫ್ ಮುಸ್ಲಿಂ ಲೀಗ್ ಸಮುದಾಯದ ಮೇಲೆ ಏಕಸ್ವಾಮ್ಯವನ್ನು ಹೊಂದಿಲ್ಲ" ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರತಿಕ್ರಿಯಿಸಿದರು.

ಕೇರಳ ಕ್ಯಾಥೊಲಿಕ್ ಯೂತ್ ಮೂವ್ ಮೆಂಟ್  ತಮ್ಮ ಬಿಷಪ್ ಗೆ  ಈ ನಿಟ್ಟಿನಲ್ಲಿ ಬರೆದಿದ್ದಾರೆ ಎನ್ನಲಾದ ಪತ್ರವೊಂದು ಇದಕ್ಕೆ ಪುಷ್ಟಿ ನೀಡಿದೆ.  ಅಲ್ಪ ಸಂಖ್ಯಾತ ಇಲಾಖೆಯನ್ನು ಯಾವುದೇ ಕ್ರಿಶ್ಚಿಯನ್ ಸಚಿವರಿಗೆ ನೀಡದೇ ಇದ್ದರೆ ಸ್ವತಃ ಪಿಣರಾಯಿ ವಿಜಯನ್ ಅವರೇ ವಹಿಸಿಕೊಳ್ಳಬೇಕು.   ಅವರ ಮನವೊಲಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು  ತಮ್ಮ ಬಿಷಪ್ ಗೆ ಕೇರಳ ಕ್ಯಾಥೊಲಿಕ್ ಯೂತ್ ಮೂವ್ ಮೆಂಟ್ ಪತ್ರ ಬರೆದಿದೆ.  ಈ ಪತ್ರ ಈ ನಿಟ್ಟಿಯಲ್ಲಿ ಮಹತ್ವ ಪಡೆದುಕೊಂಡಿದೆ. 

ಈ ನಡುವೆ ಕೇರಳ ಕ್ಯಾಥೊಲಿಕ್ ಬಿಷಪ್ ಕೌನ್ಸಿಲ್ ಈ ಕ್ರಮವನ್ನು ಸ್ವಾಗತಿಸಿದೆ ಎಂದು ವರದಿಯಾಗಿದೆ. 

ಸೈರೋ-ಮಲಬಾರ್ ಕ್ಯಾಥೊಲಿಕ್ ಚರ್ಚಿನ ಪ್ರಮುಖ ಆರ್ಚ್ ಬಿಷಪ್ ಕಾರ್ಡಿನಲ್ ಜಾರ್ಜ್ ಅಲೆನ್ಚೆರಿ ಅವರು  ಈ ವಿಷಯದಲ್ಲಿ ಗಂಭೀರ  ಪ್ರಶ್ನೆಯನ್ನು ಎತ್ತಿದ್ದಾರೆ. ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿರುವ 80 ಶೇ. ಹಣ ಕೇವಲ ಒಂದು ನಿರ್ದಿಷ್ಟ ಸಮುದಾಯಕ್ಕೆ ಹೋಗುತ್ತಿದೆ ಹಾಗೂ  ಇಡೀ ಕ್ರಿಶ್ಚಿಯನ್ ಸಮುದಾಯಕ್ಕೆ  ಕೇವಲ 20 ಶೇ. ಸಿಗುತ್ತಿದೆ . ಇದು ಕಳವಳದ ವಿಚಾರ ಎಂದು ಆರ್ಚ್ ಬಿಷಪ್ ಹೇಳಿದ್ದಾಗಿ  ಮಿಝೋರಾಂ ಗವರ್ನರ್ ಹಾಗೂ  ಕೇರಳದ ಮಾಜಿ ಬಿಜೆಪಿ ಅಧ್ಯಕ್ಷ ಪಿ.ಎಸ್.ಶ್ರೀಧರನ್ ಪಿಳ್ಳೈ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News