ಎಎಂಯು ಮಾಜಿ ವಿದ್ಯಾರ್ಥಿ ಶರ್ಜೀಲ್ ಉಸ್ಮಾನಿ ವಿರುದ್ಧ ದಿಲ್ಲಿ ಪೊಲೀಸರಿಂದ ಪ್ರಕರಣ ದಾಖಲು
ಹೊಸದಿಲ್ಲಿ:ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ ಮುಖಂಡ ಶರ್ಜೀಲ್ ಉಸ್ಮಾನಿ ವಿರುದ್ಧ ಆಕ್ಷೇಪಾರ್ಹ ಟ್ವೀಟ್ ಗಳಿಗೆ ಸಂಬಂಧಿಸಿ ದಿಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಬಿಜೆಪಿ ಮುಖಂಡನೊಬ್ಬನ ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ 505 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೇ 20 ರಂದು ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಪೊಲೀಸರು ಮಾಜಿ ವಿದ್ಯಾರ್ಥಿ ಮುಖಂಡನ ವಿರುದ್ಧ ಕೆಲವು ಆಕ್ಷೇಪಾರ್ಹ ವಿಷಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ ಎಂಬ ಆರೋಪದ ಮೇಲೆ ಎಫ್ಐಆರ್ ದಾಖಲಿಸಿದ್ದರು. ಉಸ್ಮಾನಿ ಇತ್ತೀಚೆಗೆ ಟ್ವಿಟರ್ ನಲ್ಲಿ ಹಾಕಿರುವ ಕೆಲವು ಪೋಸ್ಟ್ ಗಳಲ್ಲಿ ಭಗವಾನ್ ರಾಮನ ಕುರಿತು ಅಗೌರವದ ಪದಗಳನ್ನು ಬಳಸಿದ್ದಾರೆ ಹಾಗೂ ಧಾರ್ಮಿಕ ಭಾವನೆಗಳನ್ನು ನೋಯಿಸಿದ್ದಾರೆ ಎಂದು ಜಲ್ನಾದ ಅಂಬಾದ್ ಮೂಲದ ಅಂಬದಾಸ್ ಅಂಬೋರ್, ಎಂಬಾತ ಆರೋಪಿಸಿದ್ದರು.
ಈ ವರ್ಷದ ಆರಂಭದಲ್ಲಿ, ಜನವರಿ 30 ರಂದು ನಡೆದ ಎಲ್ಗರ್ ಪರಿಷತ್ ಸಮಾವೇಶದ ಸಂದರ್ಭದಲ್ಲಿ ಮಾಡಿದ ಭಾಷಣದ ಕುರಿತು ಪುಣೆ ಪೊಲೀಸರು ಉಸ್ಮಾನಿ ವಿರುದ್ಧ ಐಪಿಸಿ ಸೆಕ್ಷನ್ 153 (ಎ) (ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಇತ್ಯಾದಿ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.