ಅಲೋಪಥಿ ಔಷಧಿಯ ಅವಹೇಳನ ಮಾಡಿದ್ದ ರಾಮ್‌ ದೇವ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಭಾರತೀಯ ವೈದ್ಯ ಸಂಘ ಪತ್ರ

Update: 2021-05-22 10:05 GMT

ಹೊಸದಿಲ್ಲಿ: ಕೋವಿಡ್-19 ಸೋಂಕಿಗೆ ನೀಡಲಾಗುತ್ತಿರುವ ಅಲೋಪಥಿ ಚಿಕಿತ್ಸೆಯನ್ನು ಟೀಕಿಸಿರುವ ಯೋಗ ಗುರು ಬಾಬಾ ರಾಮದೇವ್ ಅವರು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಹಾಗೂ  ಇತರ ವೈದ್ಯ ಸಂಘಟನೆಗಳಿಂದ ಖಂಡನೆಗೊಳಗಾಗಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

"ಅಲೋಪಥಿ ಒಂದು ಅವಿವೇಕಿ ಹಾಗೂ ಅಸಮರ್ಪಕ ವಿಜ್ಞಾನ. ಮೊದಲು ಹೈಡ್ರೋಕ್ಸಿಕ್ಲೊರೊಖ್ವಿನ್ ವಿಫಲವಾಯಿತು. ನಂತರ, ರೆಮ್ಡೆಸಿವಿರ್, ಐವರ್‍ಮೆಕ್ಟಿನ್ ಹಾಗೂ ಪ್ಲಾಸ್ಮಾ ಥೆರಪಿ ವಿಫಲವಾಯಿತು. ಇತರ ಆ್ಯಂಟಿಬಯೋಟಿಕ್ಸ್ ಗಳಾದ ಫ್ಯಾಬಿಫ್ಲೂ ಮತ್ತು ಸ್ಟೆರಾಯ್ಡ್ ಕೂಡ ವಿಫಲವಾಯಿತು" ಎಂದು ಬಾಬಾ ರಾಮದೇವ್ ಇತ್ತೀಚೆಗೆ ಹೇಳಿದ್ದರು.

ಆಕ್ಸಿಜನ್ ಕೊರತೆಗಿಂತ ಹೆಚ್ಚಾಗಿ ಅಲೋಪಥಿ  ಔಷಧಿಗಳಿಂದ ಲಕ್ಷಗಟ್ಟಲೆ ಕೋವಿಡ್ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದೂ ಅವರು ಹೇಳಿಕೊಂಡಿದ್ದರು.

ಅವರ ಈ ಹೇಳಿಕೆಯನ್ನು ಖಂಡಿಸಿರುವ ಐಎಂಎ ದ್ವಾರಕಾ (ದಿಲ್ಲಿ), ಅವರು ತಮ್ಮ ಮಾತುಗಳಿಂದ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಾ ತಮ್ಮ ಜೀವವನ್ನೇ ಬಲಿದಾನಗೈದ 1200ಕ್ಕೂ ಅಧಿಕ ವೈದ್ಯರ ತ್ಯಾಗವನ್ನು ಗೌಣವಾಗಿಸಿದ್ದಾರೆ ಎಂದು ಹೇಳಿದೆ.

"ವೈದ್ಯರ ವಿರುದ್ಧ ಅವರ ಅವಮಾನಕರ ಮತ್ತು ಅಸಂಸದೀಯ ಮಾತುಗಳು ಖಂಡನಾರ್ಹ ಅವರು ಇಂತಹ ಕಷ್ಟಕರ ಕಾಲದಲ್ಲಿ ಇಡೀ ವೈದ್ಯ ಸಮುದಾಯದ ಆತ್ಮಸ್ಥೈರ್ಯ ಕುಂದುವಂತೆ ಮಾಡಿದ್ದಾರೆ. ವೈದ್ಯರು ಫ್ರಂಟ್ ಲೈನ್ ಸೇನಾನಿಗಳಾಗಿದ್ದು ಈ ಕೋವಿಡ್ ವಿರುದ್ಧದ ಹೋರಾಟದಲ್ಲಿ ಮನುಕುಲಕ್ಕೆ ನೆರವಾಗುವ ಸರ್ವ ಪ್ರಯತ್ನ ನಡೆಸುತ್ತಿದ್ದಾರೆ" ಎಂದು ಐಎಂಎ ಹೇಳಿದೆ.

"ಸ್ವಘೋಷಿತ ಉದ್ಯಮಿ ಬಾಬಾ ದ್ವೇಷ ಹಾಗೂ ವಿಜ್ಞಾನದ ಕುರಿತು ಸುಳ್ಳು ಮಾಹಿತಿ ಹರಡುತ್ತಿದ್ದಾರೆ ಹಾಗೂ ವೈದ್ಯರು-ರೋಗಿಗಳ ಸಂಬಂಧಗಳನ್ನು ಹದಗೆಡಿಸುತ್ತಿದ್ದಾರೆ" ಎಂದು ಐಎಂಎ ದ್ವಾರಕಾ ಘಟಕ ಹೇಳಿದೆಯಲ್ಲಿದೆ ಬಾಬಾ ರಾಮದೇವ್‍ಗೆ ಸದ್ಯದಲ್ಲಿಯೇ ಕಾನೂನು ನೋಟಿಸ್ ಜಾರಿಗೊಳಿಸಲಾಗುವುದಲ್ಲದೆ ಮಾನನಷ್ಟ ಮೊಕದ್ದಮೆಯನ್ನೂ ಅವರ ವಿರುದ್ಧ ದಾಖಲಿಸಲಾಗುವುದು ಎಂದು ತಿಳಿಸಿದೆ.

ಹೊಸದಿಲ್ಲಿಯ ಸಫ್ದರ್‍ಜಂಗ್ ಆಸ್ಪತ್ರೆ ಮತ್ತು ವರ್ಧಮಾನ್ ಮಹಾವೀರ್ ಮೆಡಿಕಲ್ ಕಾಲೇಜಿನ ರೆಸಿಡೆಂಟ್ ವೈದ್ಯರ ಸಂಘ ಕೂಡ ರಾಮದೇವ್ ಹೇಳಿಕೆಗಳನ್ನು ಖಂಡಿಸಿದೆಯಲ್ಲದೆ ಈ ಹೇಳಿಕೆಗಳನ್ನು ದ್ವೇಷದ ಭಾಷಣವೆಂದು ಪರಿಗಣಿಸಿ ಅವರ ವಿರುದ್ಧ ಸಾಂಕ್ರಾಮಿಕ ರೋಗಗಳ ಕಾಯಿದೆ, 1987 ಅನ್ವಯ ಪ್ರಕರಣ ದಾಖಲಿಸಬೇಕು ಎಂದು  ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News