ಪ್ರಾಜೆಕ್ಟ್ ಆಮ್ನೇಸಿಯಾ: ಮತದಾರರು ಕೋವಿಡ್ ಎರಡನೇ ಅಲೆಯನ್ನು ಮರೆಯುವಂತೆ ಮಾಡಲು ಬಿಜೆಪಿ ಹೇಗೆ ಪ್ರಯತ್ನಿಸಬಹುದು?

Update: 2021-05-23 07:04 GMT
ಸಾಂದರ್ಭಿಕ ಚಿತ್ರ

ಅಧಿಕಾರದ ವಿರುದ್ಧ ಮಾನವನ ಹೋರಾಟವು ವಿಸ್ಮತಿಯ ವಿರುದ್ಧ ಜ್ಞಾಪಕ ಶಕ್ತಿಯ ಹೋರಾಟವಾಗಿದೆ;ಇದು ಖ್ಯಾತ್ ಝೆಕ್ ಸಾಹಿತಿ ಮೀಲಾನ್ ಕುಂಡೇರಾ ಅವರ ಉಕ್ತಿ. ಇಂದಿನ ಭಾರತದಲ್ಲಿ ಈ ಉಕ್ತಿ ಹೆಚ್ಚು ಪ್ರಸ್ತುತವಾಗಿದೆ.
  
ಸಾಮಾನ್ಯವಾಗಿ ಜನರ ನೆನಪುಗಳಿಗೆ ಹೆಚ್ಚು ಆಯುಷ್ಯವಿರುವುದಿಲ್ಲ, ಅವು ಕೆಲವೇ ತಿಂಗಳುಗಳಲ್ಲಿ ಅಳಿಸಿಹೋಗುತ್ತವೆ. ತಾವೇನನ್ನು ನೆನಪಿಟ್ಟುಕೊಳ್ಳಬೇಕೆಂದು ಪಟ್ಟಭದ್ರ ಹಿತಾಸಕ್ತಿಗಳು ಬಯಸಿರುತ್ತವೆಯೋ ಅದು ಮಾತ್ರ ಹೆಚ್ಚು ಅವಧಿಗೆ ಜನರ ನೆನಪಿನಲ್ಲಿರುತ್ತದೆ. 1817ರಿಂದ 1920ರ ನಡುವಿನ ಅವಧಿಯಲ್ಲಿ ಕಾಲರಾ,ಪ್ಲೇಗ್ ಮತ್ತು ಇನ್ಫ್ಲುಯೆಂಝಾ ಸಾಂಕ್ರಾಮಿಕಗಳಿಂದ ನಾಲ್ಕು ಕೋಟಿಗೂ ಅಧಿಕ ಭಾರತೀಯರು ಸಾವನ್ನಪ್ಪಿದ್ದರ ನೆನಪು ನಮಗಿಲ್ಲ. ಶಾಲೆಯಲ್ಲಿನ ಚರಿತ್ರೆ ಪಠ್ಯಪುಸ್ತಕವು ನಮಗೆ ಇದನ್ನು ಹೇಳುವುದಿಲ್ಲವಾದ್ದರಿಂದ ಇದು ನಮ್ಮ ನೆನಪಿನಲ್ಲಿರುವುದಿಲ್ಲ.

ಕೋವಿಡ್ ಎರಡನೇ ಅಲೆಯು ಮಾಡಿರುವ ಭಾರೀ ವಿನಾಶವನ್ನು ಜನರು ತುಂಬ ಸಮಯ ನೆನಪಿಟ್ಟುಕೊಳ್ಳುವಂತೆ ಮಾಡಲು ದೇಶದಲ್ಲಿಯ ಪ್ರತಿಪಕ್ಷಗಳು ಪ್ರಯತ್ನಿಸಲಿವೆ. ವಿನಾಶದ ವ್ಯಾಪಕತೆಯನ್ನು ಪರಿಗಣಿಸಿದರೆ ಜನರು ಅದನ್ನು ಸುಲಭವಾಗಿ ಮರೆಯದಿರಬಹುದು. ಆದರೂ ಈ ನೆನಪುಗಳನ್ನು ಸುದೀರ್ಘ ಕಾಲ ಜೀವಂತವಾಗಿರಿಸುವುದು ಪ್ರತಿಪಕ್ಷಗಳಿಗೆ ತುಂಬ ಕಷ್ಟವಾಗಲಿದೆ.
  
ಹೆಚ್ಚಿನ ಪ್ರತಿಪಕ್ಷಗಳು ಜನಸಮೂಹದೊಡನೆ ಸಂವಹನಕ್ಕಾಗಿ ನೇರ ಮಾರ್ಗವನ್ನು ಹೊಂದಿಲ್ಲ. ಮಾಧ್ಯಮಗಳಲ್ಲಿ ಅವುಗಳಿಗೆ ಸಿಗುವ ಅವಕಾಶವು ಅತ್ಯಲ್ಪವಾಗಿದೆ,ಸಾಮಾಜಿಕ ಜಾಲತಾಣಗಳಲ್ಲಿಯೂ ಅವುಗಳ ಅಸ್ತಿತ್ವ ಹೆಚ್ಚಿಲ್ಲ. ಯಾವುದೇ ವಾಟ್ಸ್ಆ್ಯಪ್ ಗುಂಪುಗಳನ್ನು ಅಥವಾ ಜನರ ಗಮನವನ್ನು ಸೆಳೆಯುವಂತಹ ವರ್ಚಸ್ವಿ ನಾಯಕರನ್ನು ಈ ಪ್ರತಿಪಕ್ಷಗಳು ಹೊಂದಿರುವುದು ಸುಳ್ಳು,ಮನೆಮನೆಗಳಿಗೆ ತೆರಳಿ ಮತದಾರರನ್ನು ನೇರವಾಗಿ ಓಲೈಸುವ ಬಿಜೆಪಿಯ ಅಭಿಯಾನವನ್ನು ಎದುರಿಸುವ ಕೆಲವೇ ಕಾರ್ಯಕರ್ತರಿದ್ದಾರೆ.

ಎಲ್ಲಕ್ಕಿಂತ ಮುಖ್ಯವಾಗಿ ಪ್ರಚಾರ ಅಭಿಯಾನವೊಂದು ಜನರನ್ನು ತಲುಪುವಲ್ಲಿ ಅಗತ್ಯವಾಗಿರುವ ಸುಸಂಬಂದ್ಧ ಸಂವಹನ ವ್ಯವಸ್ಥೆಯು ಪ್ರತಿಪಕ್ಷಗಳಲ್ಲಿಲ್ಲ. ಅವು ಹೇಳುವುದನ್ನು 130 ಕೋ.ಜನರಿಗೆ ತಲುಪಿಸಲು ಟ್ವಿಟರ್ ಮತ್ತು ಸುದ್ದಿಗೋಷ್ಠಿಗಳಷ್ಟೇ ಸಾಲುವುದಿಲ್ಲ.

ಮೂರನೇ ಅಲೆಯತ್ತ ಗಮನ ತಿರುಗಿಸಿ

ನಾವೀಗ ವಿನಾಶಕಾರಿ ಎರಡನೇ ಅಲೆಯ ನಡುವಿನಲ್ಲಿದ್ದೇವೆ ಮತ್ತು ಬಿಜೆಪಿಯು ನಾವು ಈಗಲೇ ಮೂರನೇ ಅಲೆಯ ಬಗ್ಗೆ ಯೋಚಿಸುವಂತಾಗಲು ತನ್ನ ಅತ್ಯುತ್ತಮ ಪ್ರಯತ್ನಗಳನ್ನು ಮಾಡುತ್ತಿದೆ. ಎರಡನೇ ಅಲೆಗೆ ಯಾವುದೇ ಪೂರ್ವಸಿದ್ಧತೆಗಳನ್ನು ಮಾಡಿಕೊಂಡಿರದೆ ಪೆಟ್ಟು ತಿಂದಿರುವ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಹಜವಾಗಿಯೇ ಮೂರನೇ ಅಲೆಯನ್ನು ಎದುರಿಸಲು ಸಿದ್ಧತೆಗಾಗಿ ತಮ್ಮ ಅತ್ಯುತ್ತಮ ಪ್ರಯತ್ನಗಳನ್ನು ಮಾಡುತ್ತವೆ.

ಮೂರನೇ ಅಲೆಯಲ್ಲಿ ಮಕ್ಕಳು ಹೆಚ್ಚಿನ ಅಪಾಯಕ್ಕೆ ತುತ್ತಾಗಲಿದ್ದಾರೆ ಎಂಬ ಆಧಾರರಹಿತ ಪರಿಕಲ್ಪನೆಯನ್ನು ಹೇಗೆ ಹರಡಲಾಗುತ್ತಿದೆ ಎನ್ನುವುದನ್ನು ಗಮನಿಸಿ. ಹೀಗಾಗಿ ಮೂರನೇ ಅಲೆಯನ್ನು ಪೂರ್ವಭಾವಿಯಾಗಿ ತಡೆದ ಅಥವಾ ಸ್ಥಿತಿಯನ್ನು ಸೂಕ್ತವಾಗಿ ನಿಭಾಯಿಸಿದ ಸಂದರ್ಭದಲ್ಲಿ ಇದೇನೋ ಮೂರು ಪಂದ್ಯಗಳ ಟೂರ್ನಮೆಂಟ್ ಅನ್ನುವಂತೆ ಮೂರು ಅಲೆಗಳ ಪೈಕಿ ಒಂದರಲ್ಲಿ ಮಾತ್ರ ತನ್ನ ನಿರ್ವಹಣೆ ಕೆಟ್ಟದ್ದಾಗಿತ್ತು ಎಂದು ಬಿಜೆಪಿಯು ಹೇಳಿಕೊಳ್ಳಬಹುದಾಗಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಮತ್ತುಆರೆಸ್ಸೆಸ್ ವರಿಷ್ಠ ಮೋಹನ್ ಭಾಗವತ್ ಅವರು ಈ ಬಗ್ಗೆ ಈಗಾಗಲೇ ಬಹಳಷ್ಟು ಕೊರೆದಿದ್ದಾರೆ.

ತೀವ್ರ ರಾಷ್ಟ್ರವಾದದತ್ತ ಗಮನ ತಿರುಗಿಸಿ
 
ಹರ್ಯಾಣದಲ್ಲಿ ಗುಂಪಿನಿಂದ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಯೋರ್ವನ ಥಳಿಸಿ ಹತ್ಯೆ,ಕುಂಭಮೇಳವನ್ನು ಗುರಿಯಾಗಿಸಿಕೊಂಡಿದ್ದಕ್ಕಾಗಿ ಕಾಂಗ್ರೆಸ್ ವಿರುದ್ಧ ಸುಳ್ಳು ಆರೋಪಗಳು,ಇಸ್ರೇಲ್-ಫೆಲೆಸ್ತೀನ್ ಸಂಘರ್ಷ ಇವೆಲ್ಲ ಹಿಂದು ರಾಷ್ಟ್ರವಾದದತ್ತ ಜನರ ಗಮನವನ್ನು ತಿರುಗಿಸಲು ಬಿಜೆಪಿಯು ತನ್ನ ಅತ್ಯುತ್ತಮ ಪ್ರಯತ್ನಗಳನ್ನು ಮಾಡುತ್ತಿದೆ ಎನ್ನುವುದನ್ನು ಸೂಚಿಸುವ ಕೆಲವು ನಿದರ್ಶನಗಳಾಗಿವೆ.
 
ತನ್ನ ಕಟ್ಟಾ ಬೆಂಬಲಿಗರು ಭ್ರಮನಿರಸನಗೊಳ್ಳುವುದನ್ನು ತಡೆಯುವದು ಬಿಜೆಪಿಯ ಈ ಪ್ರಯತ್ನಗಳ ಹಿಂದಿನ ಮುಖ್ಯ ಉದ್ದೇಶವಾಗಿದೆ,ಆದರೆ ಪ್ರತಿಪಕ್ಷಗಳು ಮತ್ತು ಟೀಕಾಕಾರರು ಹೆಚ್ಚಿನ ಸಂದರ್ಭಗಳಲ್ಲಿ ಈ ಬಲೆಯಲ್ಲಿ ಸಿಲುಕಿಕೊಳ್ಳುತ್ತಾರೆ. ಧಾರ್ಮಿಕ ಅಲ್ಪಸಂಖ್ಯಾತರಿಗೆ ಕಿರುಕುಳವನ್ನು ಕಡೆಗಣಿಸಲು ಸಾಧ್ಯವಿಲ್ಲದ್ದರಿಂದ ಕೆಲವೊಮ್ಮೆ ಅವುಗಳಿಗೆ ಯಾವುದೇ ಇತರ ಆಯ್ಕೆಯಿರುವುದಿಲ್ಲ.

ಪ್ರತಿಪಕ್ಷಗಳನ್ನು ದೂರಿ
  
ಆಕ್ರಮಣವು ರಕ್ಷಣೆಯ ಅತ್ಯುತ್ತಮ ರೂಪವಾಗಿದೆ ಮತ್ತು ಬಿಜೆಪಿ ತಾನು ತೊಂದರೆಯಲ್ಲಿದ್ದಾಗೆಲ್ಲ ಈ ಸೂತ್ರವನ್ನು ಅನುಸರಿಸುತ್ತದೆ. ಅದು ಈಗಾಗಲೇ ಕೋವಿಡ್ ಎರಡನೇ ಅಲೆಗೆ ಪ್ರತಿಪಕ್ಷಗಳೇ ಕಾರಣವಾಗಿವೆ ಎಂಬಂತೆ ಅವುಗಳ ವಿರುದ್ಧ ದಾಳಿಯನ್ನು ಆರಂಭಿಸಿದೆ. ಉದಾಹರಣೆಗೆ ಪ್ರತಿಪಕ್ಷ ಕಾಂಗ್ರೆಸ್ ಲಸಿಕೆಗಳಿಗೆ ವಿರುದ್ಧವಾಗಿತ್ತು ಮತ್ತು ಲಸಿಕೆಯ ಬಗ್ಗೆ ಅಪನಂಬಿಕೆಯನ್ನು ಹರಡುತ್ತಿದೆ ಎಂಬ ಸುಳ್ಳನ್ನು ಬಿಜೆಪಿ ಕಾರ್ಯಕರ್ತರು ಎಲ್ಲೆಡೆಗೂ ಪ್ರಚಾರ ಮಾಡುತ್ತಿದ್ದಾರೆ.

ನೇರ ನಗದು ವರ್ಗಾವಣೆ
  
2019,ಡಿಸೆಂಬರ್ನ ಆಸುಪಾಸಿನಲ್ಲಿ ಅಸ್ಸಾಮಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಯ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೆದ್ದಿದ್ದವು. 2021ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಖಂಡಿತ ಸೋಲುತ್ತದೆ ಎಂದು ನೀವು ಭಾವಿಸಿದ್ದಿರಬೇಕು. ಆದರೆ ಅಸ್ಸಾಮಿನ ಬಿಜೆಪಿ ಸರಕಾರವು ಲಕ್ಷಾಂತರ ಜನರಿಗಾಗಿ ನಗದು ವರ್ಗಾವಣೆ ಯೋಜನೆಗಳನ್ನು ತರುವ ಮೂಲಕ ಅವರು ಸಿಎಎ ವಿರುದ್ಧ ಅಸಮಾಧಾನಗೊಂಡಿದ್ದರೂ ಬಿಜೆಪಿಗೇ ಮತ ಚಲಾಯಿಸುವಂತೆ ಮಾಡಿತ್ತು.

2019ರ ಸಾರ್ವತ್ರಿಕ ಚುನಾವಣೆಗಳಿಗೆ ಕೆಲವೇ ದಿನಗಳ ಮುನ್ನ ರೈತರಿಗೆ ನೇರ ನಗದು ವರ್ಗಾವಣೆ ಮಾಡಿದ್ದು ಬಿಜೆಪಿಯು ಹೇಗೆ ಸಾರ್ವಜನಿಕ ಅಸಮಾಧಾನವನ್ನು ತಟಸ್ಥಗೊಳಿಸುತ್ತದೆ ಮತ್ತು ಹೇಗೆ ಅವರು ತಮ್ಮ ಅತೃಪ್ತಿಗಳನ್ನು ಮರೆಯುವಂತೆ ಮಾಡುತ್ತದೆ ಎನ್ನುವುದಕ್ಕೆ ಮಾದರಿ ಉದಾಹರಣೆಯಾಗಿದೆ.

ಕೃಪೆ: gulfnews.com

Writer - ಶಿವಂ ವಿಜ್

contributor

Editor - ಶಿವಂ ವಿಜ್

contributor

Similar News