ನಿನ್ನೆಯ ದರೋಡೆ ಆರೋಪಿ ನಾಳೆಯ ಕಾಂಗ್ರೆಸ್ ಮುಖಂಡನೇ?

Update: 2021-05-23 17:34 GMT

ಮಾನ್ಯರೇ,

ಕೊರೋನ ಸಂಕಷ್ಟದ ಕಾಲದಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿ 2,000 ರೂ. ದೇಣಿಗೆ ನಿಮ್ಮ ಪಕ್ಷದ ಮೂಲಕ ಜನರಿಗೆ ಕೊಡುತ್ತೇನೆ ಎಂದು ಹೇಳಿದರೆ ಆತನ/ಆಕೆಯ ಮನೆಬಾಗಿಲಿಗೆ ಹೋಗಿ ಅದನ್ನು ಸ್ವೀಕರಿಸಿ ಆತನಿಗೆ ಧನ್ಯವಾದ ಸಲ್ಲಿಸಬೇಕು. ಆದರೆ ತನ್ನನ್ನು ದೊಡ್ಡ ಉದ್ಯಮಿ ಎಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬ ನನ್ನ ಕಚೇರಿಗೆ ಬನ್ನಿ, ಅಲ್ಲಿ ನಾನು ಈ ಲಾಕ್‌ಡೌನ್ ಅವಧಿಯಲ್ಲೇ ಕಾರ್ಯಕ್ರಮ ಏರ್ಪಡಿಸಿ, ವೇದಿಕೆ ಹಾಕಿ, ಅದರಲ್ಲಿ ನನ್ನದೇ ಆಳೆತ್ತರದ ಫೋಟೊ ಹಾಕಿಕೊಂಡು, ರೇಷ್ಮೆ ಅಂಗಿ ಲುಂಗಿ ತೊಟ್ಟುಕೊಂಡು ನಿಮ್ಮನ್ನೆಲ್ಲ ನನ್ನ ಅಕ್ಕಪಕ್ಕ ಕೂರಿಸಿಕೊಂಡು ಫೋಟೊ, ವೀಡಿಯೊ ಮಾಡಿಸಿಕೊಂಡು 25 ಲಕ್ಷ ರೂ. ಕೊಡುತ್ತೇನೆ ಎಂದರೆ ರಾಜ್ಯದ ಪ್ರತಿಪಕ್ಷದ ಘಟಾನುಘಟಿ ನಾಯಕರು ಏನು ಮಾಡಬೇಕು ? ಏನು ಮಾಡಬಾರದೋ ಅದನ್ನೇ ಮಾಡಿದ್ದಾರೆ ರಾಜ್ಯ ಕಾಂಗ್ರೆಸ್‌ನ ಅಗ್ರಗಣ್ಯ ನಾಯಕರು.

ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರಭಾವಿ ಶಾಸಕರಾದ ಝಮೀರ್ ಅಹ್ಮದ್ ಖಾನ್, ಎನ್.ಎ.ಹಾರಿಸ್ ರಂತಹ ನಾಯಕರು ಆತನ ಕಚೇರಿಗೆ ಹೋಗಿ ಆತ ಮಧುಮಗನಂತೆ ಸಿಂಗರಿಸಿಕೊಂಡು ಬಂದು ಇವರ ಪಕ್ಕದಲ್ಲಿ ಕೂತು ಫೋಟೊ, ವೀಡಿಯೊ ತೆಗೆಸಿದ್ದೇ ತೆಗೆಸಿದ್ದು.

ಅಂದ ಹಾಗೆ ಆ ವ್ಯಕ್ತಿ ಎರಡು ವರ್ಷಗಳ ಹಿಂದೆ ದರೋಡೆ, ಕಳವು ಚಿನ್ನ ಖರೀದಿ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ ವ್ಯಕ್ತಿ. ಬಂಧಿಸಲು ಹೋದಾಗ ಆತನ ಬೆಂಬಲಿಗರು ಪೊಲೀಸರು ಹಾಗೂ ಮಾಧ್ಯಮದವರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಅಂತಹ ವ್ಯಕ್ತಿ ಈಗ ಸಂಕಷ್ಟದ ಕಾಲವನ್ನು ಬಳಸಿಕೊಂಡು ಸಮಾಜ ಸೇವಕನಾಗಲು, ಮುಖ್ಯ ವಾಹಿನಿಯ ರಾಜಕಾರಣಿ ಆಗಲು ಹೊರಟಿದ್ದಾನೆ. ಆತನ ಈ ಸಂಚಿಗೆ ಅರಿತೋ ಅರಿಯದೆಯೋ ಕಾಂಗ್ರೆಸ್ ಮುಖಂಡರು ಸಾಥ್ ನೀಡಿದ್ದಾರೆ.

ನಾಳೆ ಆತನೇ ಕಾಂಗ್ರೆಸ್ ಮುಖಂಡನಾಗಿ ಮಿಂಚಿದರೂ ಆಶ್ಚರ್ಯವಿಲ್ಲ. ಇಂತಹ ಕಾರ್ಯಕ್ರಮಗಳಿಗೆ ಹೋಗಲು ಸಿದ್ದರಾಮಯ್ಯರಂತಹ ಹಿರಿಯ ನಾಯಕರಿಗೆ ಸಲಹೆ ಕೊಡುವವರು ಯಾರು? ಇವರ ಆಪ್ತರಿಗೆ ತಮ್ಮ ಸುತ್ತಮುತ್ತ ಏನಾಗುತ್ತಿದೆ ಎಂಬುದರ ಪರಿವೆಯಾದರೂ ಇದೆಯೇ? ಈ ಕಾರ್ಯಕ್ರಮದ ಫೋಟೊ, ವೀಡಿಯೊ ಬಳಸಿಕೊಂಡು ಆತ ಜನರನ್ನು ವಂಚಿಸಿದರೆ ಅದಕ್ಕೆ ಈ ಕಾಂಗ್ರೆಸ್ ಮುಖಂಡರೇ ಹೊಣೆಯಲ್ಲವೇ? 

Writer - ಅಬ್ದುಲ್ ಜಬ್ಬಾರ್, ಮೈಸೂರು

contributor

Editor - ಅಬ್ದುಲ್ ಜಬ್ಬಾರ್, ಮೈಸೂರು

contributor

Similar News