ಕೇಂದ್ರದ ಲಸಿಕೆ ನೀತಿ ಪ್ರಶ್ನಿಸಿದ ಕೇರಳ, ಮದ್ರಾಸ್ ಹೈಕೋರ್ಟ್

Update: 2021-05-25 14:56 GMT

ಹೊಸದಿಲ್ಲಿ,ಮೇ 25: ಕೋವಿಡ್-19 ಲಸಿಕೆ ನೀತಿಗೆ ಸಂಬಂಧಿಸಿದ ವಿವಿಧ ಅಂಶಗಳ ಬಗ್ಗೆ ಕೇಂದ್ರ ಸರಕಾರವನ್ನು ಕೇರಳ ಹಾಗೂ ಮದ್ರಾಸ್ ಉಚ್ಚ ನ್ಯಾಯಾಲಯಗಳು ಸೋಮವಾರ ಪ್ರಶ್ನಿಸಿವೆ.

ಲಸಿಕೆ ಖರೀದಿಯ ಹೊಣೆಗಾರಿಕೆಯನ್ನು ರಾಜ್ಯಗಳ ಹೆಗಲಿಗೆ ವರ್ಗಾಯಿಸುವ ಕೇಂದ್ರ ಸರಕಾರದ ಹಾಲಿ ನೀತಿಯು ವಿವಿಧ ರಾಜ್ಯ ಸರಕಾರಗಳ ನಡುವೆ ಪೈಪೋಟಿಗೆ ಕಾರಣವಾಗಬಹುದಾಗಿದೆ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ. ಅದರ ಬದಲು ಕೇಂದ್ರ ಸರಕಾರವು ಲಸಿಕೆಗಳನ್ನು ಖರೀದಿಸಿ, ಅವನ್ನು ಆಯಾ ರಾಜ್ಯಗಳ ಅವಶ್ಯಕತೆಗೆ ಅನುಗುಣವಾಗಿ ವಿತರಿಸುವುದು ಒಳಿತೆಂದು ಅಭಿಪ್ರಾಯಿಸಿದೆ.
 
ಲಸಿಕೆಯನ್ನು ಪಡೆಯುವುದಕ್ಕಾಗಿ ರಾಜ್ಯಗಳು ಪರಸ್ಪರ ಪೈಪೋಟಿಗಿಳಿಯುವುದು ಒಳ್ಳೆಯದಲ್ಲ ಎಂದು ಮುಖ್ಯನ್ಯಾಯಮೂರ್ತಿ ಸಂಜಿಬ್ ಬ್ಯಾನರ್ಜಿ ಹಾಗೂ ನ್ಯಾಯಮೂರ್ತಿ ಸೆಂತಿಲ್ ಕುಮಾರ್ ರಾಮಮೂರ್ತಿ ಅವರನ್ನೊಳಗೊಂಡ ನ್ಯಾಯಪೀಠ ತಿಳಿಸಿದೆ. ಲಸಿಕೆಗಳನ್ನು ಖರೀದಿಸುವ ಯತ್ನದಲ್ಲಿ ತಾವು ಸಂಕಷ್ಟಗಳನ್ನು ಎದುರಿಸುತ್ತಿರುವ ಬಗ್ಗೆ ಹಲವಾರು ರಾಜ್ಯಗಳು ಹೇಳುತ್ತಿರುವುದಾಗಿ ನ್ಯಾಯಪೀಠವು ಗಮನಸೆಳೆಯಿತು.
      
ಇತ್ತ ಕೇರಳದ ಹೈಕೋರ್ಟ್ ಲಸಿಕೀಕರಣಕ್ಕಾಗಿ ಮಾಡಲಾಗುತ್ತಿರುವ ವೆಚ್ಚದ ಕುರಿತು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವನ್ನು ಪ್ರಶ್ನಿಸಿದೆ. ಈ ಹಣವನ್ನು ಸರಿಯಾಗಿ ಬಳಕೆಯಾಗುತ್ತಿದೆಯೇ ಎಂಬುದನ್ನು ಅದು ತಿಳಿಯ ಬಯಸಿದೆ. ಕೇಂದ್ರ ಸರಕಾರವು ಭಾರತೀಯ ರಿಸರ್ವ್ ಬ್ಯಾಂಕ್ನಿಂದ 99 ಸಾವಿರ ಕೋಟಿ ರೂ. ಮೊತ್ತದ ಡಿವಿಡೆಂಡ್ಗಳನ್ನು ಪರುವದನ್ನು ಪ್ರಶ್ನಿಸಿದ ಕೇರಳ ಹೈಕೋರ್ಟ್ ನ್ಯಾಯಪೀಠವು, ಈ ಹಣವನ್ನು ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆಗಳ್ನು ಖರೀದಿಸುವುದಕ್ಕೆ ಬಳಸಬಹುದಾಗಿದೆ ಎಂದವರು ಹೇಳಿದರು.
 
ಆಗ ಉತ್ತರಿಸಿದ ಕೇಂದ್ರ ಸರಕಾರದ ನ್ಯಾಯವಾದಿಯವರು, ಇದು ನೀತಿಗೆ ಸಂಬಂಧಿಸಿದ ವಿಚಾರವೆಂದರು. ಆದಕ್ಕೆ ಉತ್ತರಿಸಿದ ನ್ಯಾಯಮೂರ್ತಿ ಕೆ.ವಿನೋದ್ ಚಂದ್ರನ್ ಸರಕಾರ ನೀತಿ ನಿರ್ಧಾರದ ಬಗ್ಗೆ ಪ್ರಭಾವ ಬೀರಲು ನಾನು ಯತ್ನಿಸುತ್ತಿಲ್ಲ. ನೀವು(ಸರಕಾರ) ನೀತಿ ನಿರೂಪಕರ ಬಳಿ ಇಷ್ಟೊಂದು ಹಣವಿರುವಾಗ ಯಾಕೆ ಹೀಗೆ ಮಾಡುತ್ತಿಲ್ಲ ಎಂದರು. ಕನಿಷ್ಠ ಪಕ್ಷ ಬಡವರಾದರೂ ಉಚಿತವಾಗಿ ಲಸಿಕೆಯನ್ನು ಖರೀದಿಸಬಹುದಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News