ಇಸ್ರೇಲ್ ಮತ್ತು ಝಿಯೋನಿಝಮ್ ಬಗ್ಗೆ ಕ್ರೈಸ್ತರ ನಿಲುವೇನು?

Update: 2021-07-07 06:10 GMT

ಭಾಗ -9 

ಜೆರುಸಲೇಮ್‌ನ ನಿವೃತ್ತ ಆರ್ಚ್ ಬಿಷಪ್‌ರ ಮನವಿ

ಮೆಖೇಲ್ ಸಬ್ಬಾಹ್ 1987 ರಿಂದ 2008ರ ತನಕ ಜೆರುಸಲೇಮ್‌ನಲ್ಲಿ ಆರ್ಚ್ ಬಿಷಪ್ ಆಗಿದ್ದವರು. ಅವರು ಮೂಲತಃ ಫೆಲೆಸ್ತೀನ್ ನವರು. ಕಳೆದ ವರ್ಷ ಡಿಸೆಂಬರ್‌ನಲ್ಲಿ ‘ಅಮೆರಿಕ ಮ್ಯಾಗಝಿನ್’ ನಲ್ಲಿ ಪ್ರಕಟವಾದ ತಮ್ಮ ಒಂದು ಲೇಖನದಲ್ಲಿ ಅವರು ಹೀಗೆ ಬರೆದಿದ್ದಾರೆ:

ಫೆಲೆಸ್ತೀನ್ ನೆಲದ ಮೇಲೆ ಇಸ್ರೇಲ್‌ನ ಆಕ್ರಮಣ ಈಗ 53ನೇ ವರ್ಷದಲ್ಲಿದೆ. ವಿಶೇಷವಾಗಿ ಗಾಝಾದಲ್ಲಿರುವ ಫೆಲೆಸ್ತೀನ್ ಜನತೆ ಭಾರೀ ಕಠಿಣ ಸ್ವರೂಪದ ದಿಗ್ಬಂಧನದಡಿಯಲ್ಲಿ ನರಳುತ್ತಿದ್ದಾರೆ. ಅಮೆರಿಕನ್ ಸರಕಾರವು ಪೂರ್ವ ಜೆರುಸಲೇಮ್‌ನಲ್ಲಿರುವ ಫೆಲೆಸ್ತೀನಿ ಆಸ್ಪತ್ರೆಗಳಿಗೆ ತನ್ನ ಧನಸಹಾಯವನ್ನು ನಿಲ್ಲಿಸಿದೆ. ಜೊತೆಗೆ ಆಕ್ರಮಿತ ಪ್ರದೇಶಗಳಲ್ಲಿ ಮಾನವೀಯ ಸೇವೆಗಳಲ್ಲಿ ತೊಡಗಿದ್ದ ವಿಶ್ವ ಸಂಸ್ಥೆಯವರಿಗೂ ಧನಸಹಾಯ ನಿಲ್ಲಿಸಿದೆ.

ಅಧ್ಯಕ್ಷ ಟ್ರಂಪ್ ಅವರ ಶಾಂತಿ ಪ್ರಸ್ತಾವವು ಇಸ್ರೇಲ್‌ನ ಆಕ್ರಮಣಕ್ಕೆ ನೀಡುವ ಮಾನ್ಯತೆಯಾಗಿದೆ. ಅವರು ಫೆಲೆಸ್ತೀನಿಗಳಿಗೆ ವಾಗ್ದಾನ ಮಾಡಿರುವ ಸಂಪನ್ನತೆಯನ್ನು ಪಡೆಯಲು ಫೆಲೆಸ್ತೀನಿಗಳು ತಮ್ಮ ಸ್ವಾತಂತ್ರವನ್ನು ಬಿಟ್ಟುಕೊಡಬೇಕಾಗುತ್ತದೆ. ಇಸ್ರೇಲ್ ಸರಕಾರವು ಯುಎಇ ಮತ್ತು ಬಹರೈನ್ ಜೊತೆ ಒಪ್ಪಂದಗಳನ್ನು ಮಾಡುವಾಗ ತಾನು ನೀಡಿದ ವಾಗ್ದಾನಗಳನ್ನು ಮುರಿದು, ಪಶ್ಚಿಮ ದಂಡೆಯಲ್ಲಿ ವಲಸಿಗರಿಗಾಗಿ 3,000 ಮನೆಗಳನ್ನು ಕಟ್ಟುವ ಯೋಜನೆಯನ್ನು ಘೋಷಿಸುವ ಮೂಲಕ ಫೆಲೆಸ್ತೀನ್‌ನ ನೆಲ ಮತ್ತು ಸಂಪನ್ಮೂಲಗಳನ್ನು ಆಕ್ರಮಿಸುವ ಪ್ರಕ್ರಿಯೆಯನ್ನು ಮುಂದುವರಿಸಿದೆ.

ಪಶ್ಚಿಮದಲ್ಲಿ ಅನೇಕರು, ಇಲ್ಲಿ ನಡೆಯುತ್ತಿರುವುದು, ಯಹೂದಿ ಮತ್ತು ಮುಸ್ಲಿಮರ ನಡುವಣ ಧಾರ್ಮಿಕ ಸಂಘರ್ಷ ಎಂಬ ಅಪಗ್ರಹಿಕೆಗೆ ತುತ್ತಾಗಿದ್ದಾರೆ. ನಿಜವಾಗಿ ಮಾನವ ಹಕ್ಕುಗಳ ಉಲ್ಲಂಸುವ ಮತ್ತು ಅಂತರ್‌ರಾಷ್ಟ್ರೀಯ ಕಾನೂನುಗಳಿಗೆ ವಿರುದ್ಧವಾದ ಬಹಳ ದೀರ್ಘ ಕಾಲದ ಮಿಲಿಟರಿ ಆಡಳಿತವೇ ಇಲ್ಲಿನ ಮೂಲ ಸಮಸ್ಯೆಯಾಗಿದೆ. ಪಶ್ಚಿಮ ಯುರೋಪ್ ಮತ್ತು ಉತ್ತರ ಅಮೆರಿಕದ ಚರ್ಚುಗಳು, ತಮ್ಮನ್ನೆಲ್ಲಿ ಯಹೂದಿ ವಿರೋಧಿಗಳೆಂದು ದೂಷಿಸಲಾಗುವುದೋ ಎಂಬ ಅಂಜಿಕೆಯಿಂದ ವೌನವಾಗಿದ್ದಾರೆ. ಅವರಿಗೆ ನಾವು ಹೇಳುವುದಿಷ್ಟೇ: ನಮ್ಮನ್ನೆಲ್ಲ ರಕ್ಷಿಸಬೇಕಿದ್ದರೆ ಮಾತ್ರವಲ್ಲ ಸ್ವತಃ ನಿಮಗೆ ರಕ್ಷಣೆ ಬೇಕಿದ್ದರೆ, ನೀವು ಕ್ರೈಸ್ತಧರ್ಮದವರಂತೆ ಮಾತನಾಡಿ, ಕ್ರೈಸ್ತರಂತೆ ವರ್ತಿಸಿ, ನಿಮ್ಮ ಪವಿತ್ರ ನೆಲದಲ್ಲಿ ಏನು ನಡೆಯುತ್ತಿದೆ ಎಂಬ ಕುರಿತು ಕಾಳಜಿ ವಹಿಸಿ.

ಇತರ ಕೆಲವು ಚರ್ಚ್‌ಗಳ ಪ್ರಮುಖರು, ‘ಸಮತೋಲನ’ ಪಾಲಿಸುವ ಹೆಸರಲ್ಲಿ ಅಪರಾಧಿಗಳನ್ನು ಮತ್ತವರ ಬಲಿಗಳನ್ನು ಒಂದೇ ಸಾಲಲ್ಲಿ ನಿಲ್ಲಿಸಿ ಬಿಡುತ್ತಾರೆ. ಅವರಿಗೆ ನಮ್ಮ ಮನವಿ ಹೀಗಿದೆ: ನಮ್ಮಿಬ್ಬರನ್ನೂ ನಾವು ಹೇಗಿದ್ದೇವೋ ಹಾಗೆಯೇ ನೋಡಿ. ಇಲ್ಲಿ ಒಬ್ಬರು ದಮನಿಸುವವರು ಇನ್ನೊಬ್ಬರು ದಮನಿತರು. ಈ ನಮ್ಮ ನೆಲದಲ್ಲಿ ಅಂದರೆ ದೇವರ ನೆಲದಲ್ಲಿ ಶಾಂತಿ ಮತ್ತು ನ್ಯಾಯವನ್ನು ಗಳಿಸಲು ನೀವು ನಮ್ಮಿಬ್ಬರಿಗೂ ನೆರವಾಗಿ. ಜಾಗತಿಕ ಮಟ್ಟದಲ್ಲಿ ಮತ್ತು ವಿಶೇಷವಾಗಿ ಕ್ರೈಸ್ತ ಜಗತ್ತಿನಲ್ಲಿ ಫೆಲೆಸ್ತೀನ್ ಸಮಸ್ಯೆಯ ಬಗ್ಗೆ ಜಾಗೃತಿ ಬೆಳೆಸುವ ನಿಟ್ಟಿನಲ್ಲಿ ‘ಕೈರೋಸ್ ಫೆಲೆಸ್ತೀನ್’ ಎಂಬ ಫೆಲೆಸ್ತೀನ್ ಮೂಲದ ಕ್ರೈಸ್ತರ ಸಂಘಟನೆ ಬಹಳ ನಿರ್ಣಾಯಕ ಪಾತ್ರ ವಹಿಸಿದೆ. ಅದರ ಜಾಗತಿಕ ಶಾಖೆಯ ಹೆಸರು ‘ಗ್ಲೋಬಲ್ ಕೈರೋಸ್ ಫಾರ್ ಜಸ್ಟಿಸ್’. ಕಳೆದ ವರ್ಷ ಜುಲೈ ತಿಂಗಳಲ್ಲಿ ಈ ಸಂಘಟನೆಯು ಜಗತ್ತಿನ ಎಲ್ಲ ಕ್ರೈಸ್ತ ಸಂಘಟನೆಗಳನ್ನುದ್ದೇಶಿಸಿ ಒಂದು ಗೊತ್ತುವಳಿಯನ್ನು ಹೊರಡಿಸಿತ್ತು. 20 ದೇಶಗಳ 350 ಪ್ರಮುಖ ಸಂಘಟನೆಗಳು ಅನುಮೋದಿಸಿದ ಮತ್ತು 12,400ಕ್ಕೂ ಹೆಚ್ಚಿನ ಪ್ರಮುಖ ವ್ಯಕ್ತಿಗಳು ಈ ಗೊತ್ತುವಳಿಗೆ ಸಹಿ ಮಾಡಿದ್ದರು. CRY FOR HOPE: A CALL TO DECISIVE ACTION ಎಂಬ ಹೆಸರಿನ ಈ ಗೊತ್ತುವಳಿಯಲ್ಲಿ ಫೆಲೆಸ್ತೀನ್‌ನಲ್ಲಿ ನಡೆಯುತ್ತಿರುವ ಮಾನವಹಕ್ಕುಗಳ ಮತ್ತು ಅಂತರ್‌ರಾಷ್ಟ್ರೀಯ ನಿಯಮಗಳ ಉಲ್ಲಂಘನೆ ಯನ್ನು ಮತ್ತು ಅಲ್ಲಿನ ನಾಗರಿಕರು ಅನುಭವಿಸುತ್ತಿರುವ ಬವಣೆಗಳನ್ನು ಪ್ರಸ್ತಾಪಿಸಿ ಕೆಲವು ಮನವಿಗಳನ್ನು ಜಾಗತಿಕ ಕ್ರೈಸ್ತ ಸಂಸ್ಥೆಗಳ ಮುಂದೆ ಇಡಲಾಗಿತ್ತು. ಆ ಪೈಕಿ ಒಂದು ಮನವಿ ಹೀಗಿತ್ತು:

‘‘ಆಕ್ರಮಣ, ಸ್ವಂತ ನೆಲದಿಂದ ಪದಚ್ಯುತಿ ಮತ್ತು ಮೂಲಭೂತ ಹಕ್ಕುಗಳ ರದ್ದತಿಯ ವಿರುದ್ಧ ಪ್ರತಿರೋಧಿಸುವುದಕ್ಕೆ ಫೆಲೆಸ್ತೀನ್ ಜನತೆಗೆ ಇರುವ ಅಧಿಕಾರಕ್ಕೆ ಮನ್ನಣೆ ನೀಡಿರಿ. ಅವರ ಸೃಜನಶೀಲ ಮತ್ತು ಶಾಂತಿಯುತ ಹೋರಾಟದಲ್ಲಿ ಭಾಗಿಯಾಗಿರಿ’’.

ಈ ಗೊತ್ತುವಳಿಗೆ ಕ್ರೈಸ್ತ ಜಗತ್ತಿನ ಹಲವು ಪ್ರಮುಖ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘಟನೆಗಳಿಂದ ಹಾಗೂ ಅನೇಕ ಪ್ರಮುಖ ವ್ಯಕ್ತಿಗಳಿಂದ ಬಹಳ ಗುಣಾತ್ಮಕ ಪ್ರಕ್ರಿಯೆ ಪ್ರಕಟವಾಗಿತ್ತು.

35 ಮಂದಿ ಖ್ಯಾತ ನಾಮ ಇಸ್ರೇಲಿಗಳ ಬಹಿರಂಗ ಪತ್ರ

2018ರ ನವೆಂಬರ್‌ನಲ್ಲಿ ವಿಯೆನ್ನಾದಲ್ಲೊಂದು ಸಮ್ಮೇಳನ ನಡೆಯಿತು. ಯುರೋಪಿನಲ್ಲಿ ಸಾಕಷ್ಟು ಪೂರ್ವಾಗ್ರಹಗಳಿಗೆ ತುತ್ತಾಗಿರುವ ಯಹೂದಿ ಸಮಾಜದ ಬಗ್ಗೆ ಸದ್ಭಾವನೆ ಮೂಡಿಸುವುದು ಈ ಸಮ್ಮೇಳನದ ಉದ್ದೇಶವಾಗಿತ್ತು. ಆಸ್ಟ್ರಿಯಾದ ಚಾನ್ಸೆಲರ್ ಸೆಬಾಶ್ಟಿಯನ್ ಕುರ್ಜ್ ಸಮ್ಮೇಳನದ ಪ್ರಧಾನ ಪ್ರಾಯೋಜಕರಾಗಿದ್ದರು. ಸಮ್ಮೇಳನ ಆರಂಭವಾಗುವಷ್ಟರಲ್ಲಿ ಯುರೋಪಿನೆಲ್ಲೆಡೆ ಒಂದು ಪತ್ರವು ವ್ಯಾಪಕವಾಗಿ ಜನರ ಗಮನ ಸೆಳೆದು ಸಮ್ಮೇಳನಕ್ಕಿಂತ ಹೆಚ್ಚು ಚರ್ಚೆಗೆ ಬಂತು. ಇಸ್ರೇಲ್ ದೇಶದ ಹಲವು ಪ್ರಶಸ್ತಿ ವಿಜೇತ ಸಾಹಿತಿಗಳು, ಕಲಾವಿದರು, ಇತಿಹಾಸ ತಜ್ಞರು, ಪ್ರತಿಷ್ಠಿತ ವಿಶ್ವ ವಿದ್ಯಾನಿಲಯಗಳ ಪ್ರೊಫೆಸರ್‌ಗಳು ಮುಂತಾದವರನ್ನು ಒಳಗೊಂಡ 35 ಮಂದಿ ಪ್ರಖ್ಯಾತ ವ್ಯಕ್ತಿಗಳು ಬರೆದ ಆ ಜಂಟಿ ಬಹಿರಂಗ ಪತ್ರದ ಕೆಲವು ಮುಖ್ಯ ಅಂಶಗಳು ಇಲ್ಲಿವೆ:

‘‘ಆಂಟಿ ಸೆಮಿಟಿಸಮ್ (Anti Semitism -ಯಹೂದಿ ದ್ವೇಷ) ವಿರುದ್ಧ ನಡೆಯುತ್ತಿರುವ ಹೋರಾಟವನ್ನು ನಾವು ಸಂಪೂರ್ಣವಾಗಿ ಅಂಗೀಕರಿಸುತ್ತೇವೆ ಮತ್ತು ಬೆಂಬಲಿಸುತ್ತೇವೆ. ಯಹೂದಿಗಳ ವಿರುದ್ಧ ಹೆಚ್ಚುತ್ತಿರುವ ದ್ವೇಷದ ಬಗ್ಗೆ ನಾವು ಚಿಂತಿತರಾಗಿದ್ದೇವೆ. ಇತಿಹಾಸದಿಂದ ನಾವು ಕಲಿತಿರುವಂತೆ, ಹೆಚ್ಚಿನ ವೇಳೆ ಅದು (ಯಹೂದಿ ದ್ವೇಷ) ಸಂಪೂರ್ಣ ಮಾನವ ಸಮಾಜವು ಎದುರಿಸಬೇಕಾಗುವ ದುರಂತದ ಮುನ್ಸೂಚನೆಯಾಗಿರುತ್ತದೆ.’’

ಅದೇ ವೇಳೆ, ಯುರೋಪಿಯನ್ ಒಕ್ಕೂಟವು (EU ) ಮಾನವೀಯ ಹಕ್ಕುಗಳನ್ನು ಪ್ರತಿಪಾದಿಸುವ ವೇದಿಕೆಯಾಗಿರುವುದರಿಂದ ಯಹೂದಿ ದ್ವೇಷದ ವಿರುದ್ಧ ಹೋರಾಡುವಷ್ಟೇ ಗಟ್ಟಿಯಾಗಿ ಮಾನವ ಹಕ್ಕುಗಳ ಸಂರಕ್ಷಣೆಗಾಗಿ ಹೋರಾಡಬೇಕಾದುದು ಒಕ್ಕೂಟದ ಕರ್ತವ್ಯವಾಗಿದೆ. ಯಹೂದಿ ದ್ವೇಷದ ವಿರುದ್ಧ ತಾನು ಆರಂಭಿಸಿರುವ ಹೋರಾಟವು, ಇಸ್ರೇಲ್ ಸರಕಾರವು ಅಕ್ರಮವಾಗಿ ವಶಪಡಿಸಿಕೊಂಡಿರುವ ಪ್ರದೇಶಗಳು ಮತ್ತು ಅದು ವ್ಯಾಪಕವಾಗಿ ನಡೆಸುತ್ತಿರುವ, ಫೆಲೆಸ್ತೀನ್ ನಾಗರಿಕರ ಮಾನವೀಯ ಹಕ್ಕುಗಳ ಉಲ್ಲಂಘನೆಯ ಕುರಿತಾದ ಟೀಕೆ ಮತ್ತು ವಿಮರ್ಶೆಗಳನ್ನು ಹತ್ತಿಕ್ಕಿ ಬಿಡುವ ಅಸ್ತ್ರವಾಗದಂತೆ ಒಕ್ಕೂಟವು ನೋಡಿಕೊಳ್ಳಬೇಕಾಗಿದೆ.

‘‘ಇಸ್ರೇಲ್ ಸರಕಾರದ ವಿರುದ್ಧ ವಿಮರ್ಶೆ ಮತ್ತು ಯಹೂದಿ ದ್ವೇಷ ಇವೆರಡೂ ಒಂದೇ ಎಂದು ಬಿಂಬಿಸಿದರೆ, ಆ ಮೂಲಕ ಇಸ್ರೇಲ್ ಸರಕಾರಕ್ಕೆ, ತಾನು ನಡೆಸುವ ಮಾನವ ಹಕ್ಕುಗಳ ಮತ್ತು ಅಂತರ್‌ರಾಷ್ಟ್ರೀಯ ನಿಯಮಗಳ ವ್ಯಾಪಕ ಉಲ್ಲಂಘನೆಯ ವಿರುದ್ಧ ಪ್ರಕಟವಾಗುವ ವಿಮರ್ಶೆಗಳನ್ನು ತಡೆಯುವುದಕ್ಕೆ ಒಂದು ಗುರಾಣಿಯನ್ನು ಒದಗಿಸಿದಂತಾಗುತ್ತದೆ’’.

‘‘20ನೇ ಶತಮಾನದ ಇತರೆಲ್ಲ ಹೊಸ ಯಹೂದಿ ಸಂಘಟನೆಗಳಂತೆ ಝಿಯೋನಿಝಮ್ ಅನ್ನು ಕೂಡಾ ಅಂದಿನ ಯಹೂದಿ ದ್ವೇಷಿಗಳಲ್ಲದ ಅನೇಕ ಯಹೂದಿಗಳು ಮತ್ತು ಯಹೂದಿಗಳಲ್ಲದ ಅನೇಕ ಜನರು ಅತ್ಯುಗ್ರವಾಗಿ ವಿರೋಧಿಸಿದ್ದರು. ಹಾಲೋಕಾಸ್ಟ್ (ಹತ್ಯಾಕಾಂಡ) ನಿಂದ ಸಂತ್ರಸ್ತರಾದ ಅನೇಕರು ಕೂಡಾ ಝಿಯೋನಿಝಮ್ ಅನ್ನು ವಿರೋಧಿಸಿದ್ದಾರೆ. ಝಿಯೋನಿಝಮ್ ವಿರುದ್ಧ ಹೋರಾಟವು ಯಹೂದಿ ದ್ವೇಷಕ್ಕೆ ಸಮಾನ ಎನ್ನುವುದು ಅಸಮರ್ಪಕ ಮಾತ್ರವಲ್ಲ, ಅವಿವೇಕವಾಗಿದೆ’’.

(ಮುಂದುವರಿಯುವುದು)

Writer - ಎ.ಎಸ್. ಪುತ್ತಿಗೆ

contributor

Editor - ಎ.ಎಸ್. ಪುತ್ತಿಗೆ

contributor

Similar News