'ರಾಮದೇವ್ ಯಾದವ್ ಅವರೇ, ನೀವು ನಿಮ್ಮ ವ್ಯಾಪಾರ ನೋಡಿಕೊಳ್ಳಿ, ಸಾಕು'

Update: 2021-05-28 16:42 GMT
(ರಾಮದೇವ್ ಯಾದವ್   PTI Photo)

ನಾನು ನಿಮ್ಮ ಹೆಸರಿನ ಮೊದಲು ಬಾಬಾ ಎಂದು ಸೇರಿಸದಿರಲು ಕಾರಣ ಬಹಳ ಸರಳ. ನನ್ನ ಪ್ರಕಾರ ಬಾಬಾ ಎಂಬುದೂ ಫರೀದ್ ಶಾ, ಬಲ್ಲೇ ಶಾ ಅಥವಾ ರಹ್ಮಾನ್ ಬಾಬಾ ಅವರಂತಹ ಮಹಾನ್ ವ್ಯಕ್ತಿಗಳಿಗೆ ಮೀಸಲಾದ ಗೌರವ ಸೂಚಕ ಪದ. ಈ ಸ್ವಯಂ ಘೋಷಿತ ಬಾಬಾಗಿರಿ ನಿಮ್ಮಂತಹ ಯಶಸ್ವೀ ಉದ್ಯಮಿಗೆ ಕೇವಲ ಅಲಂಕಾರಿಕ ಪದ ಮಾತ್ರ ಎಂಬುದು ನನ್ನ ಪ್ರಾಮಾಣಿಕ ಅನಿಸಿಕೆ. "ನಿಮಗೆ ಸಂತನ ಪದವಿ ಬೇಕು ಎಂದಾದರೆ ಸದಾ ರಾಜನ ಕುಟುಂಬದಿಂದ ದೂರವಿರಿ" ಎಂದು  ನನ್ನ ಫೇವರಿಟ್ ಬಾಬಾ ಫರೀದ್ ಗಂಜೆ ಶಕರ್ ಒಮ್ಮೆ ಹೇಳಿದ್ದರು. ಎಷ್ಟು ಸರಿಯಾದ ಮಾತಲ್ಲವೇ ?

ಅದು ಬಿಡಿ. ಅಲೋಪತಿ ಮತ್ತು ಅಲೋಪತಿ ವೈದ್ಯರ ಬಗ್ಗೆ ನೀವು ಇತ್ತೀಚಿಗೆ ಮಾಡಿದ ಅತ್ಯಂತ ಕೀಳು ಅಭಿರುಚಿಯ, ಅನಗತ್ಯ ಹೇಳಿಕೆಯ ಹಿಂದಿರುವ ನಿಮ್ಮ ಹತಾಶೆ ನನಗೆ ಅರ್ಥವಾಗುತ್ತದೆ. ಒಬ್ಬ ರೋಗಿ ಒಬ್ಬ ಚಿಕಿತ್ಸಕನ ಪಾಲಿನ ಅತ್ಯಂತ ಸುಲಭ ಸಂಪಾದನೆಯ ದಾರಿ. ಆ ಚಿಕಿತ್ಸಕ ವೈದ್ಯ ವಿಜ್ಞಾನದ ಯಾವ ವಿಭಾಗಕ್ಕೆ ಸೇರಿದವನೇ ಆಗಿರಲಿ. ಸರಕಾರ ಹೆಚ್ಚು ಕಡಿಮೆ ಕೈಬಿಟ್ಟಿರುವ ನಮ್ಮ ದೇಶದಲ್ಲಿ ಆಗಲೇ ದುರ್ಬಲರಾದ ರೋಗಿಗಳಲ್ಲಿ ಚಿಕಿತ್ಸಕರಿಗೆ ದುಡ್ಡು ದೋಚುವ ಸಾವಿರ ದಾರಿಗಳು ಕಾಣುತ್ತವೆ. ನಿಮ್ಮ ಹಾಗೆ ಸುಲಭ ಭಾಷೆಯಲ್ಲಿ ಹೇಳಬೇಕೆಂದರೆ ಬೇಟೆ ನಾಯಿಗಳು ಮಾಂಸದ ವಾಸನೆ ಹಿಡಿದ ಹಾಗೆ ಅದು.

ಈಗ ಈ ಸೋಂಕಿನ ಸಂಕಟದಲ್ಲಿ ಇಂತಹ ಎಲ್ಲ ರೀತಿಯ  ಬೇಟೆ ನಾಯಿಗಳು ಹೊರ ಬಂದು ತಿಂದು ತೇಗುವಷ್ಟು ಮಾಂಸ ಇಲ್ಲಿ ಉತ್ಪತ್ತಿಯಾಗಿದೆ. ಆದರೆ ರಾಮದೇವ್ ಜಿ, ಈ ಬೇಟೆ ನಾಯಿಗಳೂ ಒಂದನ್ನು ಇನ್ನೊಂದು ಗೌರವಿಸುತ್ತವೆ. ಅವುಗಳು ಇನ್ನೊಬ್ಬರ ಸಾಮರ್ಥ್ಯವನ್ನು ಗೌರವಿಸುತ್ತವೆ, ತಮ್ಮ ಇತಿಮಿತಿಗಳನ್ನು, ದೌರ್ಬಲ್ಯಗಳನ್ನು ಅರಿತಿರುತ್ತವೆ. ಆದರೆ ತೋಳಗಳು ಈ ಬೇಟೆ ನಾಯಿಗಳಿಗಿಂತ ಭಿನ್ನ. ಅವು ಹಸಿದಿರುವಾಗ, ಸಿಟ್ಟಿಗೆದ್ದಾಗ ಅಥವಾ ಎದುರಿಗೆ ಇನ್ನೊಬ್ಬ ಬಲಿಷ್ಠ ಪ್ರತಿಸ್ಪರ್ಧಿ ಬಂದಾಗ ಊಳಿಡುತ್ತವೆ. ಅರ್ಧ ತಿಂದು ಬಿಟ್ಟ ಶವಗಳನ್ನು ಎಳೆದುಕೊಂಡು ಹೋಗಿಬಿಡುತ್ತವೆ. ಕನಿಷ್ಠ ನಾವು ಆ ತೋಳಗಳಂತೆ ಆಗುವುದು ಬೇಡ ಎಂದು ಪ್ರತಿಜ್ಞೆ ಮಾಡೋಣ. 

ಅಲೋಪತಿ ಹಾಗು ಅದರ ವೈದ್ಯರ ಬಗ್ಗೆ ನೀವು ಅಸಭ್ಯವಾಗಿ ಮಾತನಾಡಿದಾಗ ನಿಮ್ಮ ಅಹಂಕಾರ ನಿಮ್ಮನ್ನು ಆವರಿಸಿಕೊಂಡಿತ್ತು, ಆ ಭರದಲ್ಲೇ ನೀವು ಹಾಗೆ ಮಾತಾಡಿದಿರಿ ಎಂದು ನನಗನಿಸುತ್ತದೆ. ಇಲ್ಲದಿದ್ದರೆ ನಿಮ್ಮಂತಹ ಚಾಣಾಕ್ಷ ಉದ್ಯಮಿಯೊಬ್ಬ ಅಂತಹ ಕಮೆಂಟ್ ಮಾಡಲು ಹೇಗೆ ಸಾಧ್ಯ ? ಅಥವಾ ನನ್ನ ವೃತ್ತಿ ಬಾಂಧವರಿಂದ ಇಂತಹ ಪ್ರತಿಭಟನೆ ಬರುವುದೇ ಇಲ್ಲ ಎಂದು ಗೊತ್ತಾಗದಷ್ಟು ನೀವು ದಡ್ಡರೇ ? ಯಾದವ್ ಜಿ, ನೀವು ಅಷ್ಟು ಹೆಡ್ಡ ಅಂತ ನನಗನಿಸುವುದಿಲ್ಲ.

ನಿಮ್ಮ ಹಾಗೆಯೇ ಪ್ರತಿಯೊಬ್ಬರೂ ತಮ್ಮ ಜೀವನೋಪಾಯವನ್ನು ರಕ್ಷಿಸಿಕೊಳ್ಳುತ್ತಾರೆ. ವೈದ್ಯರೂ ಇದಕ್ಕೆ ಹೊರತಲ್ಲ. ಆ ವಿಡಿಯೋದಲ್ಲಿ  ಇನ್ನು ನೀವು ಅಲೋಪತಿ ಹಾಗು ವೈದ್ಯರ ಬಗ್ಗೆ ಹೇಳಿದ್ದು ಅವೈಜ್ಞಾನಿಕ ಮಾತ್ರವಲ್ಲ ನಿಮ್ಮ ಅಜ್ಞಾನದ ಕೆಟ್ಟ ಪ್ರದರ್ಶನವಾಗಿತ್ತು. ಆ ಅಜ್ಞಾನದಲ್ಲಿ ದ್ವೇಷವೂ ಸೇರಿಕೊಂಡಿತ್ತು. ಈ ಅಜ್ಞಾನ ಮತ್ತು ದ್ವೇಷ ಸೇರಿಕೊಂಡರೆ ಅದೊಂದು ಭಯಾನಕ ವಿಷವಾಗಿ ದ್ವೇಷಿಸುವವನನ್ನೇ ಸುಟ್ಟು ಹಾಕುತ್ತದೆ. ನಿಮ್ಮಲ್ಲಿ ಅಂತಹ ಅಜ್ಞಾನವನ್ನು ನಾನು ಹಲವು ಬಾರಿ ನೋಡಿದ್ದೇನೆ. ಈಗ ಅದರ ಚರ್ಚೆ ಬೇಡ ಬಿಡಿ. ನೀವು ಈಗಾಗಲೇ ನಿಮ್ಮ ಕೆಟ್ಟ ಕಮೆಂಟ್ ಗಾಗಿ ಬಹಳ ಒತ್ತಡಕ್ಕೆ ಸಿಲುಕಿ ಬಿಟ್ಟಿದ್ದೀರಿ. ಇಲ್ಲದಿದ್ದರೆ  ಅಲೋಪತಿ ವೈದ್ಯರೇ ಆಗಿರುವ ನಮ್ಮ ಅರೋಗ್ಯ ಸಚಿವರ ಫ್ರೆಂಡ್ಲಿ ಕಚಗುಳಿಗೇ ಹೆದರಿ ನೀವು ಎಲ್ಲಿ ನನ್ನ ವೃತ್ತಿ ಬಾಂಧವರ ಕ್ಷಮೆ ಕೇಳುತ್ತಿದ್ದೀರಿ ?  ನನಗೆ ಕುತೂಹಲ ಕೆರಳಿಸಿದ್ದು ನಿಮ್ಮ ಅಜ್ಞಾನ ಅಲ್ಲ, ನಿಮ್ಮ ಬಡಾಯಿ ಕೊಚ್ಚಿಕೊಳ್ಳುವ ಸ್ವಭಾವ. ನೀವು ನಿಮ್ಮ ಆಯುರ್ವೇದ ಅದೆಷ್ಟು ಪರಿಪೂರ್ಣ ಎಂದು ವಾದಿಸುವುದನ್ನು ನೋಡಿ  ನಿಮ್ಮ ಪ್ರತಿ ನಡೆಯ ಬಗ್ಗೆ ನನಗೆ ಸಂಶಯವಾಗುತ್ತದೆ. ನಾವು ಪರಿಪೂರ್ಣ ಎನ್ನುವುದೇ ವೈಚಾರಿಕತೆಗೆ ಬಹುದೊಡ್ಡ ಶತ್ರು. ಇನ್ನು ಕ್ಯಾನ್ಸರ್ ನಂತಹ ಭಯಾನಕ ಕಾಯಿಲೆಗಳನ್ನು ಶಮನ ಮಾಡುತ್ತೇವೆ ಎಂದು ನೀವು ಹೇಳಿಕೊಳ್ಳುವುದು ದೊಡ್ಡ ಜೋಕ್ ಆಗಿದೆ ರಾಮದೇವ್ ಯಾದವ್ ಜಿ.

ನೀವು ರಕ್ತದ ಕ್ಯಾನ್ಸರ್ ಅನ್ನು ಗುಣಪಡಿಸುತ್ತೇನೆ ಎಂದು ಹೇಳಿದ ವಿಡಿಯೋಗಳನ್ನು ನೋಡಿ ವಿಶ್ವದೆಲ್ಲೆಡೆ ಜನರು ನಗುತ್ತಿದ್ದಾರೆ ಎಂಬುದು ನಿಮಗೆ ಗೊತ್ತೇ ? ಹೌದು, ಕೆಲವು ರಕ್ತದ ಕ್ಯಾನ್ಸರ್ ರೋಗಿಗಳು ನಿಮ್ಮ ಆರೈಕೆಯಲ್ಲಿರುವಾಗ ರೋಗ ಲಕ್ಷಣ ಸ್ವಲ್ಪ ಕಡಿಮೆಯಾಗಿರಬಹುದು. ಆದರೆ ಅದು ಇಡೀ ಕ್ಯಾನ್ಸರ್ ರೋಗವನ್ನೇ ಗುಣ ಮಾಡಿ ಬಿಡುತ್ತದೆ ಎಂದು ನಂಬಿ ಬಿಡುವುದು ಶುದ್ಧ ಮೂರ್ಖತನವಲ್ಲದೆ ಬೇರೇನೂ ಅಲ್ಲ. ನೀವು ನಿಮ್ಮ ದುಡ್ಡಿನ ಲಾಭಕ್ಕಾಗಿ ಹೀಗೆ ಹೇಳುತ್ತಿದ್ದೀರಿ ಎಂದು ನನಗೆ ಗೊತ್ತು. ಆದರೆ ಈ ರೀತಿ ನಾವೇ ಎಲ್ಲವನ್ನೂ ಗುಣಪಡಿಸುತ್ತೇವೆ ಎಂದು ಹೇಳುವುದು ನಿಮಗೆ ಮತ್ತು ನಿಮ್ಮ 9500 ಕೋಟಿಯ ಉದ್ಯಮಕ್ಕೆ ಹಾನಿಯುಂಟು ಮಾಡಲಿದೆ. ಹಾಗಾಗಿ ಎಚ್ಚರಿಕೆಯಿಂದಿರಿ.  

ಆಯುರ್ವೇದ, ಹೋಮಿಯೋಪತಿ ಅಥವಾ ಅಲೋಪತಿ ಯಾವುದೇ ಇರಲಿ. ಅವುಗಳ ಪರವಾಗಿ  ದೊಡ್ಡ ವಾದ ಮುಂದಿಡುವಾಗ ಅವುಗಳ ಬಗ್ಗೆ ಸಮಗ್ರ ಪರಿಶೀಲನೆ ಆಗಬೇಕು. ನಿಮ್ಮ ನಾವೇ ಪರಿಪೂರ್ಣ ಎಂಬ ವಾದ ನಿಮಗೂ ನಿಮ್ಮ ಕ್ಷೇತ್ರಕ್ಕೂ ಅಪಾಯ ತಂದೊಡ್ಡಲಿದೆ. ನಾವು ಜೀವಿಸುವುದೇ ಸಂಶಯದ ಲೋಕದಲ್ಲಿ. ವೈದ್ಯರನ್ನು ಪ್ರಶ್ನಿಸುವುದು ಸರಿ. ಆದರೆ ವೈದ್ಯರ ಕ್ರಮವನ್ನು ವೈಜ್ಞಾನಿಕವಾಗಿ ವಿಶ್ಲೇಷಿಸದೆ ತೀರ್ಮಾನಕ್ಕೆ ಬರುವುದು ಅಪರಾಧ. ಉದಾಹರಣೆಗೆ, ನಿಮ್ಮ ಕೊರೊನಿಲ್ ವಂಡರ್ ಔಷಧಿಯಲ್ಲಿ ಬಳಸಲಾಗಿದೆ ಎಂದು ಹೇಳಲಾದ  ಗಿಲೋಯ್ ಎಂಬ ರಾಸಾಯನಿಕ ಎಷ್ಟು ಅಪಾಯಕಾರಿ ಎಂದು ನನ್ನ ಹಲವು ಯಕೃತ್ ತಜ್ಞ ಮಿತ್ರರು ನನಗೆ ಹೇಳಿದ್ದಾರೆ. ಯಕೃತ್ ಮೇಲೆ ಅದು ಮಾಡುತ್ತಿರುವ ಭಾರೀ ಹಾನಿಯನ್ನು ಅವರು ನೋಡುತ್ತಿದ್ದಾರೆ. ಆದರೆ ಅವರು ಆ ಫಲಿತಾಂಶಗಳನ್ನು ಪರಿಶೀಲಿಸುತ್ತಿದ್ದಾರೆ. ಆ ಅಧ್ಯಯನದ ಫಲಿತಾಂಶದ ದೃಢೀಕರಣಕ್ಕೆ ಅವರು ಕಾಯುತ್ತಿದ್ದಾರೆ. ವಿಷಯವನ್ನು ಸಾರ್ವಜನಿಕರ ಗಮನಕ್ಕೆ ತರುವ ಮೊದಲು ಅವರು ಕಂಡುಕೊಂಡಿದ್ದು ಸರಿಯೇ ಎಂದು ಅವರೇ ಪ್ರಶ್ನಿಸಿಕೊಳ್ಳುತ್ತಿದ್ದಾರೆ. ಅಲೋಪತಿ ಕೆಲಸ ಮಾಡುವುದೇ ಹಾಗೆ, ರಾಮದೇವ್ ಜಿ. ವಿಜ್ಞಾನ ಕೆಲಸ ಮಾಡುವುದೂ ಹಾಗೆಯೇ. ನೀವೂ ಅಲೋಪತಿ ಹಾಗು ವಿಜ್ಞಾನವನ್ನೂ ಗುಟ್ಟಾಗಿ ಗೌರವಿಸುತ್ತೀರಿ ಎಂದು ನನ್ನ ಪ್ರಾಮಾಣಿಕ ಅನಿಸಿಕೆ. ಇಲ್ಲದಿದ್ದರೆ ಪ್ರತಿ ಬಾರಿ ಯಾವುದಾದರೂ ಕಾಯಿಲೆಗೆ ಔಷಧಿ ಕಂಡು ಹಿಡಿದಿದ್ದೇವೆ ಎಂದು ಹೇಳುವಾಗ ಜೊತೆಗೊಬ್ಬ ಅಲೋಪತಿ ವೈದ್ಯರನ್ನು ಯಾಕೆ ಕರೆ ತರುತ್ತೀರಿ ನೀವು ? ಅಲೋಪತಿ ವೈದ್ಯರಲ್ಲಿ ನೀವು ಹೇಳಿದ್ದನ್ನು ಸರಿ ಎಂದು ಶಿಫಾರಸು ಮಾಡಲು ನೀವು ಹೇಳುವ ಅದೆಷ್ಟೋ ವಿಡಿಯೋಗಳನ್ನು ನಾನು ನೋಡಿದ್ದೇನೆ. ಇಂತಹ ವಿಪರ್ಯಾಸ ? 

ಇದು ನನ್ನ ಕ್ಷೇತ್ರ ಮತ್ತು ನಿಮ್ಮ ಕ್ಷೇತ್ರದ ನಡುವಿನ ಯುದ್ಧವಲ್ಲ. ನಿಮ್ಮ ಹಿತಾಸಕ್ತಿ ದುಡ್ಡಿನದ್ದೇ ಆಗಿದ್ದರೂ ಕೊನೆಗೆ ವಿಜ್ಞಾನ ಮತ್ತು ವೈಚಾರಿಕತೆ ಗೆಲ್ಲಬೇಕು. ನಾನು ವಿಜ್ಞಾನದ ಪರ. ನಾನು ನಂಬಿದ್ದನ್ನು ಮೊದಲು ಸಂಶಯದಿಂದ ನೋಡಬೇಕು, ನಾನು  ಪರಿಪೂರ್ಣ ಎಂಬ ಭ್ರಮೆ ಬಿಡಬೇಕು, ವಾಸ್ತವಗಳನ್ನು ಪರಿಶೀಲನೆಗೆ ಒಡ್ಡಬೇಕು ಎಂಬುದನ್ನು ವಿಜ್ಞಾನ ನನಗೆ ಕಲಿಸಿದೆ. ಉದ್ಯಮ ರಂಗದಲ್ಲಿ ಭಾರೀ ಯಶಸ್ಸು ಗಳಿಸಿರುವ ನೀವು ನಿಮ್ಮ ಉದ್ಯಮದ ಕಡೆ ಗಮನ ಹರಿಸಬೇಕು. mind your business, Ramdev. ವಿಜ್ಞಾನ ಮತ್ತು ವೈಚಾರಿಕತೆಯನ್ನು ನಮಗೆ ಬಿಡಿ ಎಂದು ನಿಮ್ಮಲ್ಲಿ ನನ್ನ ವಿನಮ್ರ ವಿನಂತಿ. ಅದು ಅನೈತಿಕ ವೈದ್ಯನಿರಬಹುದು, ಅನ್ಯಾಯ ಮಾಡುವ ದೊರೆಯಿರಬಹುದು ಅಥವಾ ನಕಲಿ ಬಾಬಾ ಇರಬಹುದು - ಇತಿಹಾಸ ಎಲ್ಲರನ್ನೂ ಲೆಕ್ಕಕ್ಕೆ ತೆಗೆದುಕೊಳ್ಳುತ್ತದೆ. ನೆನಪಿಡಿ.

- ಡಾ. ಶಾ ಆಲಂ ಖಾನ್ , ಆಲ್ ಇಂಡಿಯಾ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್ ನ ಆರ್ಥೋಪೆಡಿಕ್ಸ್ ವಿಭಾಗದ ಪ್ರಾಧ್ಯಾಪಕ 

Writer - ಕೃಪೆ : thewire.in

contributor

Editor - ಕೃಪೆ : thewire.in

contributor

Similar News