×
Ad

ಉತ್ತರಪ್ರದೇಶ: ಕೋವಿಡ್ ರೋಗಿಯ ಮೃತದೇಹ ನದಿಗೆ ಎಸೆಯುವ ಆಘಾತಕಾರಿ ವೀಡಿಯೊ ವೈರಲ್

Update: 2021-05-30 14:45 IST

ಲಕ್ನೊ: ಕಳೆದ ಕೆಲವು ದಿನಗಳ ಹಿಂದೆ ಗಂಗಾ ನದಿಯಲ್ಲಿ  ಸಾವಿರಾರು ಶವಗಳನ್ನು ಸಮಾಧಿ ಮಾಡಿರುವ ಸುದ್ದಿ ಎಲ್ಲರನ್ನು ಬೆಚ್ಚಿಬೀಳಿಸಿತ್ತು. ನದಿಗಳಲ್ಲಿ ಮೃತ ದೇಹಗಳನ್ನು ವಿಲೇವಾರಿ ಮಾಡದಂತೆ ನೋಡಿಕೊಳ್ಳಲು ಕೇಂದ್ರವು ಉತ್ತರದ ರಾಜ್ಯಗಳಿಗೆ ಆದೇಶಿಸಿದೆ. ಇಂತಹ ಅಭ್ಯಾಸವನ್ನು ತಡೆಯಲು ನದಿ ತೀರಗಳಲ್ಲಿ ಗಸ್ತು ಹೆಚ್ಚಿಸುವಂತೆ ಕೇಂದ್ರವು ರಾಜ್ಯಗಳಿಗೆ ಪತ್ರವೊಂದರಲ್ಲಿ ಸೂಚಿಸಿತ್ತು. ಆದಾಗ್ಯೂ ಮೃತದೇಹವನ್ನು ನದಿಗೆ ಎಸೆಯುವ ಕೃತ್ಯ ಮುಂದುವರಿದಿದೆ.

ಸರನ್ ಜಿಲ್ಲೆಯ ಬಿಹಾರ ಗಡಿ ಬಳಿಯ ಸೇತುವೆಯೊಂದರಲ್ಲಿ ಆ್ಯಂಬುಲೆನ್ಸ್‌ ಅನ್ನು ನಿಲ್ಲಿಸಿ ಶವವನ್ನು ನದಿಗೆ ಎಸೆಯುವುದನ್ನು  ತೋರಿಸುವ ಮೊಬೈಲ್  ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿದ್ದವು.

ಕೋವಿಡ್ ಮೃತದೇಹವನ್ನು ನದಿಗೆ ಎಸೆಯುತ್ತಿರುವ ದೃಶ್ಯವನ್ನು  ಮೇ 28 ರಂದು ಬಲರಾಂಪುರ್ ಜಿಲ್ಲೆಯಲ್ಲಿವಾಹನದಲ್ಲಿ ಹೋಗುತ್ತಿದ್ದ ಒಂದೆರಡು ಜನರು ಚಿತ್ರೀಕರಿಸಿದ್ದರು.

ಕ್ಯಾಮೆರಾದಲ್ಲಿ, ಇಬ್ಬರು ಪುರುಷರಲ್ಲಿ ಒಬ್ಬಾತ ಪಿಪಿಇ ಸೂಟ್‌ನಲ್ಲಿದ್ದ.  ರಾಪ್ತಿ ನದಿಯ ಮೇಲಿರುವ ಸೇತುವೆಯ ಮೇಲಿಂದ ಮೃತ ದೇಹವನ್ನು ಎತ್ತುತ್ತಿರುವುದು ಕಂಡುಬರುತ್ತದೆ. ಪಿಪಿಇ ಸೂಟ್‌ನಲ್ಲಿರುವ ವ್ಯಕ್ತಿ ಮೃತದೇಹವನ್ನು ಚೀಲದಿಂದ ಹೊರತೆಗೆಯಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ.

ಮೃತದೇಹವು ಕೋವಿಡ್ ರೋಗಿಯದ್ದೆಂದು ಬಲರಾಂಪುರದ ಮುಖ್ಯ ವೈದ್ಯಾಧಿಕಾರಿ ನಂತರ ದೃಢಪಡಿಸಿದರು ಹಾಗೂ  ಸಂಬಂಧಿಕರು ಮೃತದೇಹವನ್ನು ನದಿಗೆ ಎಸೆಯಲು ಪ್ರಯತ್ನಿಸಿದ್ದಾರೆ ಎಂದರು.

"ಮೇ 25 ರಂದು ರೋಗಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮೂರು ದಿನಗಳ ನಂತರ ಮೇ 28 ರಂದು ಅವರು ನಿಧನರಾದರು. ಕೋವಿಡ್ ಪ್ರೋಟೋಕಾಲ್ ಪ್ರಕಾರ ಶವವನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ಪ್ರಾಥಮಿಕ ತನಿಖೆಯಿಂದ ಸಂಬಂಧಿಕರು ದೇಹವನ್ನು ನದಿಗೆ ಎಸೆದಿದ್ದಾರೆ. ನಾವು ಪ್ರಕರಣ ದಾಖಲಿಸಿದ್ದೇವೆ ಹಾಗೂ  ಕಠಿಣ ಕ್ರಮ ಕೈಗೊಳ್ಳಲಾಗುವುದು "ಎಂದು ಬಲರಾಂಪುರ ಮುಖ್ಯ ವೈದ್ಯಾಧಿಕಾರಿ ವಿ.ಬಿ.ಸಿಂಗ್ ಹೇಳಿದರು.

ಈ ತಿಂಗಳ ಆರಂಭದಲ್ಲಿ, ಬಿಹಾರ ಹಾಗೂ  ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಗಂಗಾ ನದಿಯ ದಡದಲ್ಲಿ ನೂರಾರು ಶವಗಳು ತೇಲಿಬಂದಿದ್ದವು. ಬಕ್ಸಾರ್ ಜಿಲ್ಲೆಯಲ್ಲಿ 71 ಶವಗಳನ್ನು ನದಿ ತೀರದಿಂದ ವಶಪಡಿಸಿಕೊಳ್ಳಲಾಗಿದೆ.

ಗಂಗಾ ನದಿಯ ಮರಳು ದಂಡೆಯಲ್ಲಿ ಸಮಾಧಿ ಮಾಡಲಾಗಿರುವ ಸಾವಿರಾರು ಶವಗಳನ್ನು ಪತ್ತೆ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News