ವೈರಲ್ ಆಡಿಯೊದಲ್ಲಿ ಸಕ್ರಿಯ ರಾಜಕೀಯಕ್ಕೆ ಮರಳುವ ಸುಳಿವು ನೀಡಿದ ಶಶಿಕಲಾ
Update: 2021-05-30 16:02 IST
ಚೆನ್ನೈ: ಕೋವಿಡ್ ಸಾಂಕ್ರಾಮಿಕ ರೋಗ ಮುಗಿದ ನಂತರ ಉಚ್ಚಾಟಿತ ಎಐಎಡಿಎಂಕೆ ನಾಯಕಿ ವಿ.ಕೆ.ಶಶಿಕಲಾ ಅವರು ಸಕ್ರಿಯ ರಾಜಕೀಯಕ್ಕೆ ಮರಳುವ ಬಗ್ಗೆ ಸಾಕಷ್ಟು ಸುಳಿವು ನೀಡಿದ್ದಾರೆ.
ಶಶಿಕಲಾ ಹಾಗೂ ಪಕ್ಷದ ಕಾರ್ಯಕರ್ತರೊಬ್ಬರ ನಡುವಿನ ಫೋನ್ ಸಂಭಾಷಣೆಯ ಆಡಿಯೊ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆಡಿಯೋದಲ್ಲಿ ರಾಜಕೀಯಕ್ಕೆ ಮರಳುವ ಯೋಜನೆಗಳನ್ನು ಶಶಿಕಲಾ ದೃಢಪಡಿಸಿದರು.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಅಧಿಕಾರ ಕಳೆದು ಕೊಂಡ ನಂತರ ಈ ಬೆಳವಣಿಗೆ ನಡೆದಿದೆ.
"ಚಿಂತಿಸಬೇಡಿ, ಖಂಡಿತವಾಗಿಯೂ ಪಕ್ಷದ ವಿಷಯಗಳನ್ನು ಇತ್ಯರ್ಥಪಡಿಸುತ್ತೇವೆ. ಎಲ್ಲರೂ ಧೈರ್ಯವಾಗಿರಿ. ಕೊರೋನ ಸಾಂಕ್ರಾಮಿಕ ರೋಗವು ಕೊನೆಗೊಂಡ ನಂತರ ನಾನು ಬರುತ್ತೇನೆ" ಎಂದು ಶಶಿಕಲಾ ಫೋನ್ ಕರೆಯಲ್ಲಿ ಹೇಳುತ್ತಾರೆ. "ನಾವು ನಿಮ್ಮ ಹಿಂದೆ ಇರುತ್ತೇವೆ ಅಮ್ಮ" ಎಂದು ಕಾರ್ಯಕರ್ತ ಉತ್ತರಿಸಿದ್ದಾರೆ.