ಫೆಲೆಸ್ತೀನ್: ಮಿತ್ರರಿಂದಲೇ ಪದೇ ಪದೇ ಬೆನ್ನಿಗೆ ಇರಿಸಿಕೊಂಡ ಅನುಭವ

Update: 2021-07-07 05:21 GMT

ಭಾಗ-12

► ಇಸ್ರೇಲ್‌ನ ಜೈಲುಗಳಲ್ಲಿರುವ ಫೆಲೆಸ್ತೀನ್ ಕೈದಿಗಳು.

ಇಸ್ರೇಲ್ ಸರಕಾರವು ಬಂಧಿಸಿಟ್ಟಿರುವ ಫೆಲೆಸ್ತೀನ್ ಮೂಲದ ಬಂಧಿಗಳ ಸಮಸ್ಯೆ ಮಾನವ ಹಕ್ಕು ಹೋರಾಟಗಾರ ವಲಯಗಳಲ್ಲಿ ಬಹುಕಾಲದಿಂದ ಚರ್ಚೆಯಲ್ಲಿದೆ. ಇಸ್ರೇಲ್ ಸರಕಾರವು ತನ್ನ ಬಂಧನದಲ್ಲಿರುವ ಫೆಲೆಸ್ತೀನ್ ಕೈದಿಗಳ ಸ್ಥಿತಿಗತಿಗಳ ಕುರಿತು ಅಂತರ್‌ರಾಷ್ಟ್ರೀಯ ಮಾನವ ಹಕ್ಕು ಸಂಸ್ಥೆಗಳ ಮನವಿಗಳನ್ನು ಕಡೆಗಣಿಸುತ್ತಾ ಬಂದಿರುವುದು ಮಾತ್ರವಲ್ಲ, ಇತ್ತೀಚೆಗೆ ಅವರ ಕುರಿತು ಮಾಹಿತಿ ನೀಡುವುದನ್ನೂ ನಿಲ್ಲಿಸಿ ಬಿಟ್ಟಿದೆ. ಲಭ್ಯ ಮಾಹಿತಿಗಳ ಪ್ರಕಾರ ಸದ್ಯ ಸುಮಾರು 4,500 ಮಂದಿ ಫೆಲೆಸ್ತೀನಿಗಳು ಇಸ್ರೇಲ್‌ನ ಜೈಲುಗಳಲ್ಲಿದ್ದಾರೆ. ಇವರಲ್ಲಿ ಒಂದು ದೊಡ್ಡ ಸಂಖ್ಯೆ ರಾಜಕೀಯ ಪ್ರತಿಭಟನೆಗಳ ವೇಳೆ ಬಂಧಿಸಲ್ಪಟ್ಟವರು. ಆದರೆ ಸರಕಾರ ಅವರನ್ನು ರಾಜಕೀಯ ಕೈದಿಗಳೆಂದು ಪರಿಗಣಿಸುವ ಬದಲು ಅವರ ಮೇಲೆ ಗಂಭೀರ ಕ್ರಿಮಿನಲ್ ಆರೋಪಗಳನ್ನು ಹೊರಿಸಿದೆ.

ಇಸ್ರೇಲ್‌ನಲ್ಲಿ ಕೇವಲ ಈ ವರ್ಷವೇ ಏಪ್ರಿಲ್ ತನಕ 1,400 ಮಂದಿಯನ್ನು ಜೈಲಿಗೆ ತಳ್ಳಲಾಗಿದೆ. ಅವರಲ್ಲಿ 41 ಮಹಿಳೆಯರು ಮತ್ತು 18 ವರ್ಷಕ್ಕಿಂತ ಕೆಳಗಿನ 140 ಮಕ್ಕಳೂ ಸೇರಿದ್ದಾರೆ. 543 ಮಂದಿಗೆ ಕಠಿಣ ಜೀವಾವಧಿ ಕಾರಾವಾಸವನ್ನು ವಿಧಿಸಲಾಗಿದೆ. ಆ ಪೈಕಿ ಕೆಲವರು 40 ಕ್ಕೂ ಹೆಚ್ಚು ವರ್ಷಗಳಿಂದ ಜೈಲುಗಳಲ್ಲಿದ್ದಾರೆ. ಜೈಲುಗಳಲ್ಲಿ ಫೆಲೆಸ್ತೀನಿ ಕೈದಿಗಳನ್ನು ವಿವಿಧ ತರದಲ್ಲಿ ಹಿಂಸಿಸಲಾಗುತ್ತದೆ. 550 ಕೈದಿಗಳು ಯಾವುದಾದರೂ ಬಗೆಯ ಗಂಭೀರ ರೋಗಗಳಿಂದ ಬಳಲುತ್ತಿದ್ದಾರೆ. ಕನಿಷ್ಠ 10 ಮಂದಿ ವಿವಿಧ ಮಟ್ಟದ ಕಾನ್ಸರ್ ರೋಗದಿಂದ ಬಾಧಿತರಾಗಿದ್ದಾರೆ. ದೀರ್ಘ ಕಾಲ ಕತ್ತಲಕೋಣೆಯಲ್ಲಿ ಒಂಟಿಯಾಗಿದ್ದ ಕಾರಣ ಎಷ್ಟೋ ಮಂದಿ ಜೈಲಿನಿಂದ ಬಿಡುಗಡೆಯಾಗುವಾಗ ತಮ್ಮ ನೆನಪಿನ ಶಕ್ತಿಯನ್ನು ಸಂಪೂರ್ಣವಾಗಿ ಕಳೆದುಕೊಂಡಿರುತ್ತಾರೆ ಅಥವಾ ತೀವ್ರ ಸ್ವರೂಪದ ಇತರ ಮಾನಸಿಕ ವ್ಯಾಧಿಗಳಿಗೆ ತುತ್ತಾಗಿರುತ್ತಾರೆ.

► ಜನರಿಲ್ಲದ ಭೂಮಿ ಮತ್ತು ಭೂಮಿಯಿಲ್ಲದ ಜನ ಎಂಬ ಐತಿಹಾಸಿಕ ಸುಳ್ಳು

ಇಸ್ರೇಲ್ ಸ್ಥಾಪನೆಗೆ ಮುನ್ನ ಯುರೋಪ್ ಮತ್ತು ಅಮೆರಿಕದಲ್ಲಿ ಝಿಯೋನಿಸ್ಟರು, ಫೆಲೆಸ್ತೀನ್‌ನಲ್ಲಿ ಯಹೂದಿ ರಾಷ್ಟ್ರ ಸ್ಥಾಪನೆಯ ಪರವಾಗಿ ಜನಾಭಿಪ್ರಾಯ ರೂಪಿಸಲು ಭಾರೀ ಪ್ರಚಾರ ಅಭಿಯಾನ ನಡೆಸಿದ್ದರು. ಈ ಅವಧಿಯಲ್ಲಿ ಅವರು ಪದೇ ಪದೇ ಬಳಸಿದ ಒಂದು ತಂತ್ರ ಈ ಹೇಳಿಕೆಯ ರೂಪದಲ್ಲಿತ್ತು:

ಫೆಲೆಸ್ತೀನ್‌ನಲ್ಲಿ ಜನರೇ ಇಲ್ಲದ ಒಂದು ದೊಡ್ಡ ಭೂಭಾಗ ಇದೆ ಮತ್ತು ಇಲ್ಲಿ ಭೂಮಿಯೇ ಇಲ್ಲದ ಒಂದು ಜನವಿಭಾಗವಿದೆ.

ಭೂಮಿ ಇಲ್ಲದ ಜನರನ್ನು ಜನರಿಲ್ಲದ ಭೂಮಿಯಲ್ಲಿ ನೆಲೆಸಿದರೆ ಹೇಗೆ?

  ನಿಜವಾಗಿ ಬಾಲ್ ಫೋರ್ ಪ್ರಕಟನೆಗೆ ಮುನ್ನ ಅಂದರೆ 1914 ರಲ್ಲಿ ಫೆಲೆಸ್ತೀನ್‌ನಲ್ಲಿ 94 ಸಾವಿರ ಯಹೂದಿಗಳು, 70 ಸಾವಿರ ಕ್ರೈಸ್ತರು ಮತ್ತು 5.25 ಲಕ್ಷ ಮುಸ್ಲಿಮರು ಸೇರಿದಂತೆ ಒಟ್ಟು ಸುಮಾರು 7 ಲಕ್ಷ ಜನ ವಾಸವಾಗಿದ್ದರು.

ಆದರೆ ಪ್ರಚಾರಕ್ಕಿರುವ ಶಕ್ತಿ ಸತ್ಯಕ್ಕೆಲ್ಲಿದೆ? ಕೊನೆಗೂ ಪಶ್ಚಿಮದ ಜನರು ಪ್ರಚಾರವನ್ನೇ ನಂಬಿ ಬಿಟ್ಟರು.

► ಹಾಶಿಮೀ ದೊರೆಗಳ ಮೊದಲ ಮಹಾದ್ರೋಹ

  ಫೆಲೆಸ್ತೀನ್ ಜನತೆಯ ಇತಿಹಾಸ ನೋಡಿದರೆ, ಅವರು ಝಿಯೋನಿಸ್ಟ್ ಕೂಟ, ಇಸ್ರೇಲ್ ಸರಕಾರ, ಅಮೆರಿಕ, ಬ್ರಿಟನ್ ಮತ್ತು ಫ್ರಾನ್ಸ್‌ಗಳಂತಹ ದೇಶಗಳ ಕೈಯಲ್ಲಿ ಅನುಭವಿಸಿದ ಮೋಸ, ದ್ರೋಹ, ಹಿಂಸೆ ಮತ್ತು ಕ್ರೌರ್ಯ ಗಳಿಗೆ ಇತಿಮಿತಿ ಇಲ್ಲ. ಅದೇ ವೇಳೆ ಸ್ವತಃ ತಮ್ಮದೇ ಅರಬ್ ಬಂಧುಗಳಿಂದ ಬೆನ್ನಿಗೆ ಇರಿಸಿಕೊಂಡ ಅನುಭವವೂ ಫೆಲೆಸ್ತೀನಿಗಳಿಗೆ ಸಾಕಷ್ಟಿದೆ.

ಬಾಲ್ ಫೋರ್ ಪ್ರಕಟನೆಯ ಬಳಿಕ 1919ರಲ್ಲಿ, ಆಗ ಮಕ್ಕಾದಲ್ಲಿದ್ದ ಸೌದಿ ಅರೇಬಿಯಾ ಸರಕಾರವು ಇಂಗ್ಲೆಂಡ್ ಸರಕಾರದ ಜೊತೆ ಒಂದು ಗುಪ್ತ ಒಪ್ಪಂದ ಮಾಡಿಕೊಂಡು ಬಾಲ್ ಫೋರ್ ಪ್ರಕಟನೆಗೆ ತನ್ನ ಅಧಿಕೃತ ಮನ್ನಣೆ ನೀಡಿತು ಎಂಬೊಂದು ಆರೋಪ ಈಗಲೂ ಹಲವೆಡೆ ಚಲಾವಣೆಯಲ್ಲಿದೆ. ನಿಜವಾಗಿ, ಅಂತಹ ಅಕ್ರಮ ಒಪ್ಪಂದವೊಂದು ಆ ವರ್ಷ ನಡೆದಿತ್ತು ಮತ್ತು ಅದು ಅರಬ್ ಸರಕಾರವೊಂದು ಫೆಲೆಸ್ತೀನ್‌ಗೆ ಮಾಡಿದ ಮೊದಲ ದೊಡ್ಡ ದ್ರೋಹವಾಗಿತ್ತು ಎಂಬುದು ನಿಜ. ಆದರೆ ಸೌದಿ ರಾಜಮನೆತನಕ್ಕೆ ಅಥವಾ ಇಂದಿನ ಸೌದಿ ದೊರೆಗಳ ಪೂರ್ವಜರಿಗೆ ಅದರಲ್ಲಿ ಯಾವುದೇ ಪಾತ್ರವಿರಲಿಲ್ಲ. ಯಾಕೆಂದರೆ, ಆ ಹಂತದಲ್ಲಿ ಮಕ್ಕಾ ಪಟ್ಟಣವನ್ನೊಳಗೊಂಡ ಹಿಜಾಝ್ ಪ್ರಾಂತವು ಸೌದಿ ರಾಜಮನೆತನದ ವಶದಲ್ಲಿರಲಿಲ್ಲ.

ಉಸ್ಮಾನಿಯಾ ಸಾಮ್ರಾಟರು 1908ರಲ್ಲಿ ಹಾಶಿಮೀ ವಂಶಸ್ಥ ಹುಸೈನ್ ಬಿನ್ ಅಲಿ ಅವರನ್ನು ಮಕ್ಕಾದ ‘ಗ್ರಾಂಡ್ ಶರೀಫ್’ (ಮುಖ್ಯ ಅಧಿಕಾರಿ) ಆಗಿ ನೇಮಕ ಮಾಡಿದ್ದರು. 1916 ರ ಅಸ್ಥಿರ ಸನ್ನಿವೇಶದಲ್ಲಿ ಅವರು ಬ್ರಿಟಿಷರ ಆಶೀರ್ವಾದದೊಂದಿಗೆ ಉಸ್ಮಾನಿಯಾ ಸಾಮ್ರಾಜ್ಯದ ವಿರುದ್ಧ ಬಂಡಾಯವೆದ್ದು, ಮಕ್ಕಾದ ಸುತ್ತ ಮುತ್ತಲಿನ ಪ್ರದೇಶಗಳ ಸ್ಥಳೀಯ ಅಧಿಕಾರಿಗಳನ್ನು ಮತ್ತು ಬುಡಕಟ್ಟು ನಾಯಕರನ್ನು ಸೇರಿಸಿ ಒಂದು ಸಂಯುಕ್ತ ಅರಬ್ ಒಕ್ಕೂಟವನ್ನು ರಚಿಸಿದರು. ಆ ಬಳಿಕ ತನ್ನನ್ನು ಮಕ್ಕಾ ಸಹಿತ ಹಿಜಾಝ್ ಪ್ರದೇಶದ ದೊರೆ ಎಂದು ಘೋಷಿಸಿಕೊಂಡರು. 1924 ರ ತನಕವೂ ಅವರು ಅದೇ ಸ್ಥಾನದಲ್ಲಿದ್ದರು.

1918ರಲ್ಲಿ ಪ್ರಥಮ ಜಾಗತಿಕ ಯುದ್ಧ ಮುಗಿದಿತ್ತಾದರೂ ಅದರ ಕಾವು ಇನ್ನೂ ಆರಿರಲಿಲ್ಲ. ಯುದ್ಧದಲ್ಲಿ ಸೋಲುಂಡ ಉಸ್ಮಾನಿಯಾ ಸಾಮ್ರಾಜ್ಯದ ಅಧೀನವಿದ್ದ ಎಲ್ಲ ಪ್ರದೇಶಗಳಲ್ಲಿ ಗೊಂದಲ, ಅರಾಜಕತೆ ಮತ್ತು ಅಧಿಕಾರಕ್ಕಾಗಿ ಕಿತ್ತಾಟಗಳು ನಡೆಯುತ್ತಿದ್ದವು. ಹಿಜಾಝ್‌ನ ದೊರೆಗೆ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಬೇಕಿತ್ತು. ಅದಕ್ಕೆ ಬ್ರಿಟಿಷ್ ಸಾಮ್ರಾಜ್ಯದ ಬೆಂಬಲ ಬೇಕಿತ್ತು. 1919ರ ಜನವರಿಯಲ್ಲಿ ಅವರ ಪುತ್ರ ಅಮೀರ್ ಫೈಸಲ್ ಬಿನ್ ಹುಸೈನ್ ಲಂಡನ್ ಗೆ ಹೋಗಿ ಅಲ್ಲಿನ ಝಿಯೋನಿಸ್ಟ್ ನಾಯಕ ಶಯೀಮ್ ವೀಜ್ ಮನ್ನ್ (Chaim Weizmann) ಮತ್ತು ಬ್ರಿಟಿಷ್ ಸರಕಾರದ ಪ್ರತಿನಿಧಿ ಕರ್ನಲ್ ಟಿ.ಇ.ಲಾರೆನ್ಸ್ ಜೊತೆ ಗುಪ್ತ ಸಭೆಯೊಂದನ್ನು ನಡೆಸಿದ್ದರು. ಆ ವೇಳೆ ಅವರು ಬಾಲ್ ಫೋರ್ ಪ್ರಕಟನೆಗೆ ಹಿಜಾಝ್ ಸರಕಾರದ ಬೆಂಬಲವನ್ನು ಘೋಷಿಸುವ ಒಪ್ಪಂದವೊಂದಕ್ಕೆ ಸಹಿ ಮಾಡಿದ್ದರು. ಮಕ್ಕಾದ ಆಡಳಿತಗಾರರೆಂಬ ನೆಲೆಯಲ್ಲಿ ಹಿಜಾಝ್‌ನ ದೊರೆಗಳ ನಿರ್ಧಾರಕ್ಕೆ ಎಲ್ಲೆಡೆ ಗೌರವವಿತ್ತು. ಆದ್ದರಿಂದ ಇದು, ಫೆಲೆಸ್ತೀನ್‌ನಲ್ಲಿ ಯಹೂದಿ ರಾಷ್ಟ್ರವೊಂದನ್ನು ಕಟ್ಟಲು ಹೊರಟಿದ್ದ ಝಿಯೋನಿಸ್ಟರ ಪಾಲಿಗೆ ಒಂದು ಐತಿಹಾಸಿಕ ಮುನ್ನಡೆಯಾಗಿತ್ತು. ಇದಕ್ಕೆ ಪ್ರತಿಯಾಗಿ, ಫೆಲೆಸ್ತೀನ್ ಹೊರತು, ಉಸ್ಮಾನಿಯಾ ಸಾಮ್ರಾಜ್ಯದ ಅಧೀನವಿದ್ದ ಉಳಿದೆಲ್ಲ ಅರಬ್ ಪ್ರದೇಶಗಳನ್ನು ಸೇರಿಸಿ ಒಂದು ಅರಬ್ ರಾಷ್ಟ್ರವನ್ನು ಕಟ್ಟುವುದಕ್ಕೆ ಬ್ರಿಟನ್ ಮತ್ತು ಝಿಯೋನಿಸ್ಟ್ ಸಂಘಟನೆ ಸಂಪೂರ್ಣ ಸಹಕಾರ ನೀಡುವುದೆಂಬ ಆಶ್ವಾಸನೆಯನ್ನು ನೀಡಲಾಗಿತ್ತು.

 ಇಂದಿನ ಸೌದಿ ದೊರೆಗಳ ಪೂರ್ವಜರಾದ ‘ಆಲ್ ಸವೂದ್’ ಕುಟುಂಬದ (ಇಬ್ನು ಸೌದ್ ಎಂದೇ ಖ್ಯಾತರಾಗಿದ್ದ) ಸುಲ್ತಾನ್ ಅಬ್ದುಲ್ ಅಝೀಝ್ ಬಿನ್ ಅಬ್ದುರಹ್ಮಾನ್ ಆವರೆಗೆ ರಿಯಾದ್ ಮತ್ತು ಆಸುಪಾಸಿನ ಪ್ರದೇಶಗಳ ದೊರೆಯಾಗಿದ್ದರು. 1924-25ರ ಅವಧಿಯಲ್ಲಿ ಅವರು ಹಿಜಾಝ್ ಪ್ರದೇಶದ ಮೇಲೆ ದಾಳಿ ನಡೆಸಿ, ಅಲ್ಲಿನ ಹಾಶಿಮೀ ದೊರೆಯನ್ನು ಪದಚ್ಯುತಗೊಳಿಸಿ 1926 ರಲ್ಲಿ ತನ್ನನ್ನು ‘ಹಿಜಾಝ್‌ನ ದೊರೆ’ ಎಂದು ಘೋಷಿಸಿಕೊಂಡರು.

► ಹಾಶಿಮೀ ದೊರೆಗಳ ಎರಡನೆಯ ಮಹಾದ್ರೋಹ

1919ರಲ್ಲಿ ಹಿಜಾಝ್‌ನ ಹಾಶಿಮೀ ದೊರೆಯ ಪರವಾಗಿ, ಅವರ ಒಬ್ಬ ಪುತ್ರ ಅಮೀರ್ ಫೈಸಲ್ ಬ್ರಿಟಿಷರ ಅಪೇಕ್ಷೆಯಂತೆ ಬಾಲ್ ಫೋರ್ ಪ್ರಕಟನೆಗೆ ಮನ್ನಣೆ ನೀಡಿದ ದುರ್ಘಟನೆ ನಡೆದಿತ್ತು. ಇದಾಗಿ ಮೂರು ದಶಕಗಳ ಬಳಿಕ ಫೆಲೆಸ್ತೀನಿಗಳು ತಮ್ಮ ಅರಬ್ ಬಂಧುಗಳ ಕೈಯಲ್ಲೇ ಇನ್ನೊಂದು ಆಘಾತವನ್ನು ಅನುಭವಿಸಬೇಕಾಯಿತು. ಈ ಬಾರಿ ಅಂತಹ ಮಹಾ ದ್ರೋಹ ಎಸಗಿದವರು ಅದೇ ಹಾಶಿಮೀ ದೊರೆಯ ಇನ್ನೊಬ್ಬ ಪುತ್ರ, ಅಂದರೆ ಅಮೀರ್ ಫೈಸಲ್ ಬಿನ್ ಹುಸೈನ್‌ರ ಸಹೋದರ ಅಬ್ದುಲ್ಲಾ (ಪ್ರಥಮ).

1909 ರಿಂದ 1914ರ ತನಕ ಅವರು ಉಸ್ಮಾನಿಯಾ ಶಾಸನ ಸಭೆಯಲ್ಲಿ ಮಕ್ಕಾ ಪ್ರಾಂತದ ಪ್ರತಿನಿಧಿಯಾಗಿದ್ದರು. 1916 ರಿಂದ 1918 ರ ಅವಧಿಯಲ್ಲಿ ಉಸ್ಮಾನಿಯಾ ಸಾಮ್ರಾಜ್ಯದ ವಿರುದ್ಧ ನಡೆದ ಅರಬ್ ಬಂಡಾಯದಲ್ಲಿ ಸಕ್ರಿಯ ಪಾತ್ರವಹಿಸಿದ್ದರು. ಬ್ರಿಟಿಷರ ಕೃಪೆಯಿಂದ 1921 ರಲ್ಲಿ ಟ್ರಾನ್ಸ್ ಜೋರ್ಡನ್‌ನ ಉಸ್ತುವಾರಿ ಆಡಳಿತಗಾರರಾದರು ಮತ್ತು 1946ರ ಹೊತ್ತಿಗೆ ಜೋರ್ಡನ್‌ನ ಪೂರ್ಣಪ್ರಮಾಣದ ದೊರೆಯಾದರು. 1947ರಲ್ಲಿ, ಫೆಲೆಸ್ತೀನ್ ಅನ್ನು ವಿಭಜಿಸಿ ಒಂದು ಭಾಗವನ್ನು ಯಹೂದಿಗಳಿಗೆ ಮತ್ತು ಇನ್ನೊಂದು ಭಾಗವನ್ನು ಅರಬರಿಗೆ ನೀಡುವ ಯೋಜನೆ ಪ್ರಕಟವಾದಾಗ ಒಟ್ಟು ಅರಬ್ ಜನತೆ ಮತ್ತು ಬಹುತೇಕ ಎಲ್ಲ ಅರಬ್ ಆಡಳಿತಗಾರರು ಅದನ್ನು ವಿರೋಧಿಸಿದ್ದರು. ಆ ಹಂತದಲ್ಲಿ ಪ್ರಸ್ತುತ ಯೋಜನೆಯ ಪರ ಒಲವು ತೋರಿದ ಮೊದಲ ಅರಬ್ ಆಡಳಿತಗಾರ ಇವರೇ ಆಗಿದ್ದರು.

1948ರಲ್ಲಿ ಇಸ್ರೇಲ್ ಸರಕಾರದ ಸ್ಥಾಪನೆಯನ್ನು ಘೋಷಿಸಲಾದಾಗ ಫೆಲೆಸ್ತೀನ್ ಮತ್ತದರ ಸುತ್ತ ಮುತ್ತ ಭಾರೀ ಪ್ರತಿಭಟನೆ ವ್ಯಕ್ತವಾಯಿತು. ಏಳು ದೇಶಗಳಿದ್ದ (ಈಜಿಪ್ಟ್, ಟ್ರಾನ್ಸ್ ಜೋರ್ಡನ್, ಸಿರಿಯಾ, ಲೆಬನಾನ್, ಇರಾಕ್, ಸೌದಿ ಅರೇಬಿಯಾ ಮತ್ತು ಯಮನ್) ಅರಬ್ ಲೀಗ್ ಪಡೆಗಳು ಇಸ್ರೇಲ್ ಮೇಲೆ ದಾಳಿ ಮಾಡಿದವು. ಈ ವೇಳೆ ತನ್ನ ಸೇನೆ ವಶಪಡಿಸಿಕೊಂಡ ಫೆಲೆಸ್ತೀನ್‌ನ ಭಾಗಗಳನ್ನು ಜೋರ್ಡನ್‌ನ ದೊರೆ ಅಬ್ದುಲ್ಲಾ (ಪ್ರಥಮ), ಫೆಲೆಸ್ತೀನಿಗಳಿಗೆ ಬಿಟ್ಟು ಕೊಡುವ ಬದಲು ಜೋರ್ಡನ್ ಜೊತೆ ವಿಲೀನಗೊಳಿಸಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡರು. ಅವರ ಈ ವಿದ್ರೋಹಿ ಕೃತ್ಯವನ್ನು ಫೆಲೆಸ್ತೀನಿಗಳು ಇಂದಿಗೂ ಮರೆತಿಲ್ಲ. ಅವರು 1951ರಲ್ಲಿ ಜೆರುಸಲೇಮ್‌ನಲ್ಲಿರುವ ಅಲ್ ಅಕ್ಸಾ ಮಸೀದಿಯಲ್ಲಿ ಒಬ್ಬ ಫೆಲೆಸ್ತೀನಿ ಹೋರಾಟಗಾರನ ಕೈಯಲ್ಲಿ ಹತರಾದರು.

► ಫೆಲೆಸ್ತೀನ್ ಕುರಿತು ಸೌದಿ ಸರಕಾರದ ಧೋರಣೆಯೇನು?

ಸೌದಿ ಅರೇಬಿಯಾದ ಅತ್ಯಂತ ಆಪ್ತ ಮಿತ್ರರಾದ ಬಹರೈನ್ ಮತ್ತು ಯುಎಇ ಎಂಬೆರೆಡು ದೇಶಗಳು ಕಳೆದ ವರ್ಷ ಇಸ್ರೇಲ್ ಜೊತೆ ಔಪಚಾರಿಕ ಮೈತ್ರಿ ಘೋಷಿಸಿವೆ. ಸಹಜವಾಗಿಯೇ ಇದರಿಂದ ಆಕ್ರೋಶಿತರಾದ ಫೆಲೆಸ್ತೀನ್‌ನ ಜನತೆ ಇದೊಂದು ಅಕ್ಷಮ್ಯ ದ್ರೋಹವೆಂದು ಖಂಡಿಸಿದರು. ಸೌದಿ ಸರಕಾರದ ಆಶೀರ್ವಾದವಿಲ್ಲದೆ ಹೀಗಾಗಲು ಸಾಧ್ಯವೇ ಇಲ್ಲ. ಸದ್ಯ ಸೌದಿ ಸಾಮ್ರಾಜ್ಯವನ್ನು ನಿಯಂತ್ರಿಸುತ್ತಿರುವ ಅಲ್ಲಿನ ಘೋಷಿತ ಉತ್ತರಾಧಿಕಾರಿ (ಪತ್ರಕರ್ತ ಅದ್ನಾನ್ ಖಶೋಗಿ ಹತ್ಯೆಯ ಪ್ರಧಾನ ಆರೋಪಿ) ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ (ಎಂ.ಬಿ.ಎಸ್.) ಈಗಾಗಲೇ ಇಸ್ರೇಲ್ ಜೊತೆ ಹಲವು ಗುಪ್ತ ವ್ಯವಹಾರಗಳಲ್ಲಿ ನಿರತರಾಗಿದ್ದು, ಪೂರ್ಣ ಪ್ರಮಾಣದ ಅಧಿಕೃತ ಸೌದಿ - ಇಸ್ರೇಲ್ ಮೈತ್ರಿಯನ್ನು ಘೋಷಿಸುವ ಮುನ್ನ ಈ ರೀತಿ ತಮ್ಮ ಇಬ್ಬರು ಪೇದೆಗಳನ್ನು ಮುಂದೆ ಕಳಿಸಿದ್ದಾರೆ ಎಂಬ ಆರೋಪ ಫೆಲೆಸ್ತೀನ್ ಅನ್ನು ಪ್ರತಿನಿಧಿಸುವ ವಿವಿಧ ವಲಯಗಳಲ್ಲಿ ವ್ಯಾಪಕವಾಗಿ ಕೇಳಿ ಬಂತು. ಫೆಲೆಸ್ತೀನ್ ನ ನಾಯಕರು ಕೂಡಾ ಬಹುತೇಕ ಇದೇ ಧಾಟಿಯಲ್ಲಿ ಮಾತನಾಡಿದರು.

ಪ್ರಸ್ತುತ ಬೆಳವಣಿಗೆಗಳ ಹಿನ್ನೆಲೆಯಲ್ಲಿ, 2020ರ ಅಕ್ಟೋಬರ್‌ನಲ್ಲಿ ಸೌದಿ ರಾಜವಂಶದ ಹಿರಿಯ ಸದಸ್ಯ, ಅಲ್ಲಿಯ ಗುಪ್ತಚರ ಇಲಾಖೆಯ ಮಾಜಿ ಮುಖ್ಯಸ್ಥ ಮತ್ತು ಅಮೆರಿಕದಲ್ಲಿ ಸೌದಿಯ ರಾಯಭಾರಿಯಾಗಿದ್ದ ಪ್ರಿನ್ಸ್ ಬಂದರ್ ಬಿನ್ ಸುಲ್ತಾನ್ ‘ಅಲ್ ಅರಬಿಯ್ಯ’ ಟಿವಿ ಜಾಲಕ್ಕೆ ಒಂದು ಸಂದರ್ಶನ ನೀಡಿದರು. ಈ ವೇಳೆ ಅವರು ಹೇಳಿದ ಕೆಲವು ಆಕ್ರೋಶದ ಮಾತುಗಳು ಸೌದಿ ವಿದೇಶ ನೀತಿಯ ಮುಂದಿನ ದಿಕ್ಕು ಏನೆಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತವೆ. ಎಲ್ಲೆಡೆ ಪ್ರಸಾರವಾದ ಅವರ ಆ ಕೆಲವು ಮಾತುಗಳು ಇಲ್ಲಿವೆ:

‘‘ನಾವು ಇತ್ತೀಚೆಗೆ ಕಂಡಿರುವ ಫೆಲೆಸ್ತೀನ್‌ನ ನಾಯಕರ ಅವಿಧೇಯತೆ ಮತ್ತು ಅನಿಷ್ಠೆ, ಫೆಲೆಸ್ತೀನ್ ಜನತೆಯ ಧ್ಯೇಯದ ಬಗೆಗಿನ ನಮ್ಮ ಬದ್ಧತೆಯನ್ನು ಬಾಧಿಸಲಾರದು. ಆದರೆ ಇಂತಹ ಜನರನ್ನು ನಂಬುವುದು ಕಷ್ಟ. ಇಂತಹ ನಾಯಕರು ಇರುವ ತನಕ ನಮಗೆ ಫೆಲೆಸ್ತೀನ್‌ನ ಹಿತಕ್ಕಾಗಿ ಏನನ್ನೂ ಮಾಡಲು ಸಾಧ್ಯವಾಗದು. ಇಂದಿನ ಜಾಗತಿಕ ಸನ್ನಿವೇಶದಲ್ಲಿ ನಾವು ಫೆಲೆಸ್ತೀನ್‌ನ ಜನತೆಯ ಹಿತ ಕಾಪಾಡಲಿಕ್ಕಾಗಿ ಇಸ್ರೇಲ್ ನ ಸವಾಲನ್ನು ಹೇಗೆ ಎದುರಿಸಬೇಕೆಂಬ ಚಿಂತೆಯಲ್ಲಿ ಮಗ್ನರಾಗಿರುವ ಬದಲು ಸ್ವತಃ ನಮ್ಮದೇ ರಾಷ್ಟ್ರೀಯ ಹಿತಾಸಕ್ತಿಗಳ ರಕ್ಷಣೆಯ ಕುರಿತು ಚಿಂತಿಸಬೇಕಾಗಿದೆ..... ಇರಾನ್ ಮತ್ತು ಟರ್ಕಿಯಂತಹ ದೇಶಗಳು ತಾವು ಫೆಲೆಸ್ತೀನ್‌ನ ಜನರ ಹಿತಾಸಕ್ತಿಗಳಿಗಾಗಿ ಶ್ರಮಿಸುತ್ತಿದ್ದೇವೆ ಮತ್ತು ಫೆಲೆಸ್ತೀನ್ ಹಾಗೂ ಜೆರುಸಲೇಮ್ ತಮ್ಮ ಪ್ರಾಶಸ್ತ್ಯದ ಪಟ್ಟಿಯಲ್ಲಿವೆ ಎಂದು ಹೇಳಿಕೊಳ್ಳುತ್ತಿವೆ. ಫೆಲೆಸ್ತೀನ್ ನಾಯಕರು ಅವರನ್ನು ನಂಬಿ, ರಿಯಾದ್, ಕುವೈತ್, ಅಬುಧಾಬಿ, ಮನಾಮ, ಒಮಾನ್ ಮತ್ತು ಕೈರೋಗಳಿಗಿಂತ ಟೆಹ್ರಾನ್ ಮತ್ತು ಅಂಕಾರಾಗಳೇ ಹೆಚ್ಚು ಮುಖ್ಯ ಎಂಬಂತೆ ವರ್ತಿಸುತ್ತಿದ್ದಾರೆ. ಅದು ಸರಿಯಲ್ಲ’’.

‘‘ನಮ್ಮ ನಾಯಕರು ಈಗ ನಮ್ಮ ರಾಷ್ಟ್ರೀಯ ಭದ್ರತೆ, ನಮ್ಮ ಜನರ ಹಿತಾಸಕ್ತಿ ಮತ್ತು ಅವರ ಆರ್ಥಿಕ ಹಾಗೂ ಸಾಮಾಜಿಕ ಹಿತಾಸಕ್ತಿಗಳನ್ನು ರಕ್ಷಿಸುವ ಕುರಿತು ಚಿಂತಿಸಬೇಕು. ಇಂದು ನಮ್ಮ ಕೊಲ್ಲಿ ದೇಶಗಳ ಸ್ಥಿತಿಯು, ಅಬ್ಬರಿಸುವ ಸಾಗರದ ನಡುವೆ ಇರುವ ದ್ವೀಪದಂತಿದೆ. ಈ ಸ್ಥಿತಿಯಲ್ಲಿ ನಮ್ಮ ಜನರ ಹಿತವನ್ನು ಕಾಪಾಡುವುದೇ ನಮ್ಮ ಆದ್ಯ ಕರ್ತವ್ಯ. ಕೆಲವು ಸುಳ್ಳುಗಾರ, ವಂಚಕ, ಮೋಸಗಾರ, ಅವಿಧೇಯ ಮತ್ತು ವಿದ್ರೋಹಿಗಳ ಒಂದು ಗುಂಪು ನಮ್ಮೋಂದಿಗೆ ನಡೆದುಕೊಂಡ ರೀತಿ ನಮಗೆ ಸಹ್ಯವಲ್ಲ. ನಮಗೆ ನಮ್ಮ ಇತಿಹಾಸ ಗೊತ್ತಿದೆ ಹಾಗೆಯೇ ಅವರ ಇತಿಹಾಸವೂ ಗೊತ್ತಿದೆ’’.

ಇತ್ತೀಚೆಗೆ ಬೆಳಕಿಗೆ ಬಂದಿರುವಂತೆ ಇಸ್ರೇಲ್ ಮತ್ತು ಫೆಲೆಸ್ತೀನ್‌ನ ವಿಷಯದಲ್ಲಿ ಯಾವ ಧೋರಣೆ ಸೂಕ್ತ ಎಂಬ ವಿಷಯದಲ್ಲಿ ಸೌದಿ ರಾಜಮನೆತನದೊಳಗೆ ತೀವ್ರ ಸ್ವರೂಪದ ಅಂತಃಕಲಹ ನಡೆಯುತ್ತಿದೆ. ಸಂಪ್ರದಾಯವಾದಿ ವಯೋವೃದ್ಧ ದೊರೆ ಸಲ್ಮಾನ್, ಇಸ್ರೇಲ್ ಜೊತೆ ಬಹಿರಂಗ ಸ್ನೇಹದ ಪ್ರಕ್ರಿಯೆಯನ್ನು ಎಚ್ಚರಿಕೆಯಿಂದ, ನಿಧಾನವಾಗಿ ಮುಂದುವರಿಯಬೇಕೆನ್ನುತ್ತಾರೆ. ಅವರ ಸಾಹಸಪ್ರಿಯ ಯುವ ಪುತ್ರ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಭಾರೀ ಆವೇಶದಿಂದ ಮುನ್ನುಗ್ಗುತ್ತಿದ್ದಾರೆ. ಯುಎಇ ಮತ್ತು ಬಹರೈನ್‌ಗಳ ಮುನ್ನಡೆಯ ಬಗ್ಗೆ ತಿಳಿದಾಗ ದೊರೆಗೆ ಆಘಾತವಾಗಿದ್ದು ಅದನ್ನು ಅವರು ಗಂಭೀರವಾಗಿ ಆಕ್ಷೇಪಿಸಿದ್ದಾರೆ ಎಂಬ ಸುದ್ದಿಗಳಿವೆ. ಆದರೆ ಈ ಕಾಲದಲ್ಲಿ ಹಿರಿಯ ನಾಗರಿಕರ ಮಾತನ್ನು ಕೇಳುವವರಾರು? ಅಥವಾ ಇದು ಕೂಡ ಸ್ಕ್ರಿಪ್ಟ್‌ನ ಭಾಗ ಅಲ್ಲ ತಾನೇ?

(ಮುಂದುವರಿಯುದು)


ಒಂದು ಟ್ಟೀಟ್ ಚಾಟಿ

ಕಳೆದ ವರ್ಷ (ಆಗಸ್ಟ್ 2020) ಯುಎಇ ನಾಯಕ ಮುಹಮ್ಮದ್ ಬಿನ್ ಝಾಯಿದ್ ಮತ್ತು ಪಿಎಲ್‌ಒ ನಾಯಕಿ ಹನಾನ್ ಅಶ್ರಾವಿ ನಡುವೆ ನಡೆದ ಒಂದು ಟ್ವೀಟ್ ಸಂಭಾಷಣೆ

ಅಧ್ಯಕ್ಷ ಟ್ರಂಪ್ ಮತ್ತು ಪ್ರಧಾನಿ ನೆತನ್ಯಾಹು ಜೊತೆ ನಮ್ಮ ಮಾತುಕತೆ ನಡೆದಿದೆ. ಫೆಲೆಸ್ತೀನ್‌ನ ಮತ್ತಷ್ಟು ಪ್ರದೇಶಗಳ ಮೇಲೆ ಆಕ್ರಮಣ ನಡೆಸುವುದಿಲ್ಲ ಎಂದು ಇಸ್ರೇಲ್ ಸರಕಾರ ಒಪ್ಪಿಕೊಂಡಿದೆ. ಯುಎಇ ಮತ್ತು ಇಸ್ರೇಲ್ ಸರಕಾರಗಳು ಪರಸ್ಪರ ಸಹಕರಿಸಲು ಮತ್ತು ಪರಸ್ಪರ ಸಂಬಂಧಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಮುನ್ನಡೆಯಲು ತೀರ್ಮಾನಿಸಿವೆ.

 -ಮುಹಮ್ಮದ್ ಬಿನ್ ಝಾಯಿದ್

ನಿಮಗೆಂದೂ ನಿಮ್ಮ ದೇಶ ನಿಮ್ಮಿಂದ ಕಳವಾದ ಸಂಕಟದ ಅನುಭವ ಆಗದಿರಲಿ. ಆಕ್ರಮಿತರಾಗಿ ಬಂಧಿತ ಸ್ಥಿತಿಯಲ್ಲಿ ಬದುಕುವ ಹಿಂಸೆ ನಿಮಗೆಂದೂ ಸಿಗದಿರಲಿ. ನಿಮ್ಮ ಮನೆಯನ್ನು ಕೆಡವಲಾಗುವ ಮತ್ತು ನಿಮ್ಮ ಪ್ರೀತಿಪಾತ್ರರನ್ನು ವಧಿಸಲಾಗುವ ದೃಶ್ಯಗಳನ್ನು ನೀವೆಂದೂ ಕಾಣದಂತಾಗಲಿ. ನಿಮ್ಮ ಮಿತ್ರರು ನಿಮ್ಮನ್ನೆಂದೂ ಮಾರದಿರಲಿ.

-ಹನಾನ್ ಅಶ್ರಾವಿ



(ಮುಂದುವರಿಯುವುದು)

 

Writer - ಎ.ಎಸ್. ಪುತ್ತಿಗೆ

contributor

Editor - ಎ.ಎಸ್. ಪುತ್ತಿಗೆ

contributor

Similar News