ಮುಖ್ಯ ಕಾರ್ಯದರ್ಶಿಯನ್ನು ದಿಲ್ಲಿಗೆ ಕಳುಹಿಸುವುದಿಲ್ಲ: ಪ್ರಧಾನಿಗೆ ಬರೆದ ಪತ್ರದಲ್ಲಿ ಮಮತಾ ಬ್ಯಾನರ್ಜಿ ಸ್ಪಷ್ಟನೆ

Update: 2021-05-31 07:06 GMT

ಕೊಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯ ಕಾರ್ಯದರ್ಶಿ ಅಲಾಪನ್ ಬಂದೋಪಾಧ್ಯಾಯ ಅವರನ್ನು ದಿಲ್ಲಿಗೆ ವಾಪಸ್ ಕರೆಸುವ ಆದೇಶವನ್ನು ಕೇಂದ್ರ ಸರಕಾರ ಹೊರಡಿಸಿರುವುದಕ್ಕೆ ತಮ್ಮ ಅಸಮ್ಮತಿಯನ್ನು ಸೂಚಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮ್ಮ ರಾಜ್ಯ ಕೋವಿಡ್ ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಿರುವ  ಸಂದರ್ಭದಲ್ಲಿ ಅವರನ್ನು ದಿಲ್ಲಿಗೆ ಕಳುಹಿಸುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಚಂಡಮಾರುತ ಯಾಸ್ ಉಂಟು ಮಾಡಿದ ಹಾನಿ ಪರಿಶೀಲನೆಗೆ ಪ್ರಧಾನಿ ನೇತೃತ್ವದಲ್ಲಿ ನಡೆದ ಸಭೆಗೆ ಮಮತಾ ಗೈರಾದ ನಂತರದ ಬೆಳವಣಿಗೆಯಲ್ಲಿ ಮುಖ್ಯ ಕಾರ್ಯದರ್ಶಿಯನ್ನು ದಿಲ್ಲಿಗೆ ವಾಪಸ್ ಕರೆಸಿ ಕೇಂದ್ರ ಆದೇಶ ಹೊರಡಿಸಿತ್ತು.

ಈ ಕುರಿತು ಪ್ರಧಾನಿಗೆ ಇಂದು ಪತ್ರ ಬರೆದಿರುವ ಮಮತಾ ಬಂದೋಪಾಧ್ಯಾಯ ಅವರನ್ನು ದಿಲ್ಲಿಗೆ ವರ್ಗಾಯಿಸಿ ಹೊರಡಿಸಿರುವ 'ಏಕಪಕ್ಷೀಯ' ಆದೇಶದಿಂದ ತಮಗೆ ಆಘಾತವಾಗಿದೆ ಎಂದಿದ್ದಾರೆ.

"ಈಗಿನ ಗಂಭೀರ ಸ್ಥಿತಿಯಲ್ಲಿ ನಮ್ಮ ಸರಕಾರ ಮುಖ್ಯ ಕಾರ್ಯದರ್ಶಿಯನ್ನು ರಾಜ್ಯ ಸೇವೆಯಿಂದ ಬಿಡುಗಡೆಗೊಳಿಸುವುದು ಸಾಧ್ಯವಿಲ್ಲ ಹಾಗೂ ಬಿಡುಗಡಗೊಳಿಸುವುದೂ ಇಲ್ಲ" ಎಂದು ಮಮತಾ ತಮ್ಮ ಪತ್ರದಲ್ಲಿ ಖಡಾಖಂಡಿತವಾಗಿ ಹೇಳಿದ್ದಾರೆ.

ಬಂದೋಪಾಧ್ಯಾಯ ಅವರು ತೀರಾ ಇತ್ತೀಚೆಗೆ ತಮ್ಮ ಹತ್ತಿರದವರನ್ನು ಕಳೆದುಕೊಂಡಿದ್ದಾರೆ ಹಾಗೂ  ಈ ಹಿಂದಿನ ಆದೇಶದಲ್ಲಿ ರಾಜ್ಯದಲ್ಲಿ ಕೋವಿಡ್ ಏರಿಕೆ ಹಿನ್ನೆಲೆಯಲ್ಲಿ ಅವರ ಸೇವಾವಧಿಯನ್ನು ಮೂರು ತಿಂಗಳು ವಿಸ್ತರಿಸಲಾಗಿದೆ ಎಂಬುದನ್ನು ಮಮತಾ ತಮ್ಮ ಪತ್ರದಲ್ಲಿ ಪ್ರಧಾನಿಯನ್ನು ನೆನಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News