"ಕೋವಿಶೀಲ್ಡ್ ಲಸಿಕೆ ಪಡೆದ ಬಳಿಕವೂ ದೇಹದಲ್ಲಿ ಪ್ರತಿಕಾಯಗಳು ಅಭಿವೃದ್ಧಿಗೊಂಡಿಲ್ಲ": ಅದಾರ್‌ ಪೂನಾವಾಲ ವಿರುದ್ಧ ದೂರು

Update: 2021-05-31 08:38 GMT

ಲಕ್ನೋ: ಕೋವಿಶೀಲ್ಡ್‌ ಲಸಿಕೆ ಪಡೆದ ಬಳಿಕವೂ ತನ್ನ ದೇಹದಲ್ಲಿ ಪ್ರತಿಕಾಯಗಳು ಅಭಿವೃದ್ಧಿಗೊಂಡಿಲ್ಲ ಎಂದು ಆರೋಪಿಸಿದ ಲಕ್ನೋದ ವ್ಯಕ್ತಿಯೋರ್ವರು ಸೀರಮ್‌ ಇನ್‌ ಸ್ಟಿಟ್ಯೂಟ್‌ ಆಫ್‌ ಇಂಡಿಯಾದ ಸಿಇಒ ಅದಾರ್‌ ಪೂನಾವಾಲ ಮತ್ತು ಇತರರ ವಿರುದ್ಧ ದೂರು ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತಾದಂತೆ ಲಕ್ನೋದ ಆಶಿಯಾನಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಪ್ರತಾಪ್‌ ಚಂದ್ರ ಎಂಬವರು ನೀಡಿರುವ ದೂರಿನಲ್ಲಿ, ಡಿಸಿಜಿಎ ನಿರ್ದೇಶಕ, ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್, ಐಸಿಎಂಆರ್ ನಿರ್ದೇಶಕ ಬಲರಾಮ್ ಭಾರ್ಗವ, ರಾಷ್ಟ್ರೀಯ ಆರೋಗ್ಯ ಮಿಷನ್ ನಿರ್ದೇಶಕಿ ಅಪರ್ಣ ಉಪಾಧ್ಯಾಯರನ್ನೂ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.

"ಎಪ್ರಿಲ್‌ 8ರಂದು ನಾನು ಪ್ರಥಮ ಡೋಸ್‌ ಕೋವಿಶೀಲ್ಡ್‌ ಲಸಿಕೆ ಸ್ವೀಕರಿಸಿದ್ದೆ. 28 ದಿನಗಳ ಬಳಿಕ ಎರಡನೇ ಡೋಸ್‌ ಲಸಿಕೆಯನ್ನು ಸ್ವೀಕರಿಸಬೇಕಾಗಿತ್ತು. ಆದರೆ ಅವಧಿಯನ್ನು 6 ವಾರಗಳವರೆಗೆ ವಿಸ್ತರಿಸಲಾಗಿದೆ ಎಂದು ಹೇಳಿದರು. ಬಳಿಕ ಮತ್ತೆ 12 ವಾರಗಳವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ನಾನು ಮೊದಲ ಡೋಸ್‌ ಸ್ವೀಕರಿಸಿದಂದಿನಿಂದ ಆರೋಗ್ಯವಾಗಿಲ್ಲ. ಐಸಿಎಮ್‌ಆರ್‌ ನಿರ್ದೇಶಕರು ಹೇಳಿದಂತೆ, ನನ್ನಲ್ಲಿ ಯಾವುದೇ ಪ್ರತಿಕಾಯಗಳು ಅಭಿವೃದ್ಧಿಯಾಗಿಲ್ಲ. ನನ್ನ ಬಿಳಿರಕ್ತ ಕಣಗಳ ಸಂಖ್ಯೆ ಕುಸಿತ ಕಾಣುತ್ತಿದೆ" ಎಂದು ದೂರು ನೀಡಿದ್ದಾರೆ.

ಪೊಲೀಸರು ದೂರು ದಾಖಲಿಸಿದ್ದಾರೆ. ಆದರೆ, ಪ್ರಕರಣದಲ್ಲಿ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ಈ ವಿಷಯದ ಸೂಕ್ಷ್ಮತೆಯನ್ನು ಪರಿಗಣಿಸಿ ಹೆಚ್ಚಿನ ಕ್ರಮ ಕೈಗೊಳ್ಳುವ ಮೊದಲು ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News