"ನೂತನ ಐಟಿ ನಿಯಮಗಳ ಮೂಲಕ ಸರಕಾರ ಖಾಸಗಿತನದ ಮೂಲಭೂತ ಹಕ್ಕಿನ ಮೇಲೆ ಅತಿಕ್ರಮಣಗೈಯ್ಯಲು ಹೊರಟಿದೆ"

Update: 2021-05-31 12:58 GMT

ಹೊಸದಿಲ್ಲಿ,ಮೇ 31: ನೂತನ ನಿಯಮಗಳಡಿ ಸಂದೇಶಗಳ ಮೂಲವನ್ನು ಪತ್ತೆ ಹಚ್ಚುವುದನ್ನು ವಾಟ್ಸ್ಆ್ಯಪ್ ನಂತಹ ಸಾಮಾಜಿಕ ಮಾಧ್ಯಮ ಆ್ಯಪ್ ಗಳಿಗೆ ಕಡ್ಡಾಯಗೊಳಿಸುವ ಮೂಲಕ ಸರಕಾರವು ಖಾಸಗಿತನದ ಮೂಲಭೂತ ಹಕ್ಕಿನಲ್ಲಿ ನುಸುಳಲು ಯತ್ನಿಸುತ್ತಿದೆ ಎಂದು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಬಿ.ಎನ್.ಶ್ರೀಕೃಷ್ಣ ಅವರು ಹೇಳಿದ್ದಾರೆ.

ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು, ನೂತನ ಐಟಿ ನಿಯಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಮತ್ತು ಟ್ವಿಟರ್ ಹಾಗೂ ವಾಟ್ಸ್ಆ್ಯಪ್ ನಂತಹ ಜಾಗತಿಕ ಸಾಮಾಜಿಕ ಮಾಧ್ಯಮ ಆ್ಯಪ್ ಗಳ ನಡುವಿನ ಬಿಕ್ಕಟ್ಟು ಮತ್ತು ಸರಕಾರದ ವಿರುದ್ಧ ಧ್ವನಿಗಳನ್ನು ಅಡಗಿಸುವ ಇತರ ಪ್ರಯತ್ನಗಳನ್ನು ದೇಶದಲ್ಲಿಯ ‘ಅಘೋಷಿತ ತುರ್ತು ಪರಿಸ್ಥಿತಿ’ ಎಂದು ಬಣ್ಣಿಸಿದರು. ‘ಇದು ಇನ್ನೂ ಮುಕ್ತ ದೇಶವಾಗಿದೆ ಎಂದು ನಾನು ಭಾವಿಸಿದ್ದೇನೆ,ಆದರೆ ಆ ಕುರಿತು ನನ್ನ ಶಂಕೆಗಳು ಹೆಚ್ಚುತ್ತಲೇ ಇವೆ ’ಎಂದಿದ್ದಾರೆ.

ಸಂದೇಶದ ಮೂಲವನ್ನು ಪತ್ತೆ ಹಚ್ಚುವಂತೆ ವಾಟ್ಸ್ಆ್ಯಪ್ ಗೆ ತಾಕೀತು, ಬಿಜೆಪಿ ನಾಯಕರ ನಿರ್ದಿಷ್ಟ ಟ್ವೀಟ್ ಗಳ ಕುರಿತು ಟ್ಯಾಗ್ ಗಳನ್ನು ತೆಗೆಯಲು ವಿಫಲಗೊಂಡಿದ್ದಕ್ಕೆ ಟ್ವಿಟರ್ ಕಚೇರಿಗೆ ದಿಲ್ಲಿ ಪೊಲೀಸ್ ತಂಡದ ಭೇಟಿ,ಸಾಮಾಜಿಕ ಮಾಧ್ಯಮಗಳಲ್ಲಿ ಸರಕಾರವನ್ನು ಟೀಕಿಸಿದ ಜನರ ವಿರುದ್ಧ ಎಫ್ಐಆರ್ ದಾಖಲು ಸೇರಿದಂತೆ ಸರಕಾರದ ಕ್ರಮಗಳನ್ನು ನ್ಯಾ.ಶ್ರೀಕೃಷ್ಣ ಪ್ರಶ್ನಿಸಿದ್ದಾರೆ.

‘ನಾನು ಸಾಮಾಜಿಕ ಮಾಧ್ಯಮಗಳಲ್ಲಿ ಹೇಳುವ ಎಲ್ಲವೂ ನನ್ನನ್ನು ದೇಶದ್ರೋಹಿ ಅಥವಾ ದೇಶವನ್ನು ದ್ವೇಷಿಸುವ ವ್ಯಕ್ತಿಯನ್ನಾಗಿ ಮಾಡುವುದಿಲ್ಲ. ಆಮ್ಲಜನಕ ಕೊರತೆಯ ಬಗ್ಗೆ ನಾನು ಸರಕಾರವನ್ನು ಟೀಕಿಸಿದರೆ ಅದು ನನ್ನನ್ನು ದೇಶವಿರೋಧಿ ಅಥವಾ ಅಪರಾಧಿಯನ್ನಾಗಿಸುವುದಿಲ್ಲ ’ಎಂದು ಅವರು ಹೇಳಿದರು. ಶ್ರೀಕೃಷ್ಣ ಕರಡು ವೈಯಕ್ತಿಕ ಮಾಹಿತಿ ರಕ್ಷಣೆ (ಪಿಡಿಪಿ) ಮಸೂದೆಯನ್ನು ರಚಿಸಿದ್ದ ಸಮಿತಿಯ ಅಧ್ಯಕ್ಷರಾಗಿದ್ದರು. ಸಮಿತಿಯು 2018 ಜುಲೈನಲ್ಲಿ ಕರಡು ಮಸೂದೆಯನ್ನು ಸರಕಾರಕ್ಕೆ ಸಲ್ಲಿಸಿದ್ದು,ಅದಿನ್ನೂ ಕಾನೂನಾಗಿ ಪರಿವರ್ತನೆಯಾಗಿಲ್ಲ. 

ಸದೃಢ ಖಾಸಗಿತನ ನೀತಿಯ ಕೊರತೆಯು ಸರಕಾರದ ಅಸ್ತವ್ಯಸ್ತ ನೀತಿಗಳಿಗೆ ಕಾರಣವಾಗಿದೆ ಎಂದು ಬೆಟ್ಟುಮಾಡಿದ ಅವರು, ಪಿಡಿಪಿ ಮಸೂದೆಯು ಕಾನೂನಾಗಿದ್ದರೆ ಅದು ಕಂಪನಿಗಳಿಗೆ ಖಾಸಗಿತನ ಅಗತ್ಯಗಳು,ಬಳಕೆದಾರರ ಹಕ್ಕುಗಳು, ಸರಕಾರದ ನಿಗಾಕ್ಕೆ ಕಾರ್ಯವಿಧಾನ ಮತ್ತು ಕಳವಳಗಳ ನಿವಾರಣೆಗೆ ನಿಯಂತ್ರಣ ವ್ಯವಸ್ಥೆಯ ಬಗ್ಗೆ ಸ್ಪಷ್ಟ ವಿವರಗಳನ್ನು ಹೊಂದಿರುತ್ತಿತ್ತು ಎಂದರು.

ಭಾರತ ಸರಕಾರದ ಸಮಸ್ಯೆಯೆಂದರೆ ಅವರು ಬಂಡಿಯನ್ನು ಯಾವಾಗಲೂ ಕುದುರೆಯ ಮುಂದೆ ಕಟ್ಟುತ್ತಾರೆ ಮತ್ತು ಆಧಾರ್ ನಲ್ಲಿ ಆಗಿದ್ದಂತೆ ಅಧ್ವಾನಗಳನ್ನುಂಟು ಮಾಡುತ್ತಾರೆ. ಅವರು ಮೊದಲು ಖಾಸಗಿತನ ನೀತಿಯೊಂದನ್ನು ಹೊಂದಿರಬೇಕಿತ್ತು. ಇಲ್ಲಿಯೂ ಅದೇ ಸಮಸ್ಯೆ ಎಂದು ನ್ಯಾ.ಶ್ರೀಕೃಷ್ಣ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News